ಶನಿವಾರ, ಅಕ್ಟೋಬರ್ 5, 2024

ಚಿಕ್ಕ ಕುಟುಂಬ ಹೊಂದಲು ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನ ಅನುಸರಿಸಲು ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು ಸಲಹೆ

ಬಳ್ಳಾರಿ,ಅ.05(ಕರ್ನಾಟಕ ವಾರ್ತೆ): ಮೊದಲ ಮಗುವಿನ ಜನನ ನಂತರ ಚಿಕ್ಕ ಕುಟುಂಬ ಹೊಂದಲು ದಂಪತಿಗಳು ಸಮಾಲೋಚನೆ ಕೈಗೊಂಡು ಮುಂದಿನ 3 ವರ್ಷಗಳ ಅವಧಿಗೆ ಮಗುವಿನ ಜನನ ಅಂತರಕ್ಕಾಗಿ ಮಹಿಳೆಯು ಪ್ರತಿ 3 ತಿಂಗಳಿಗೊಮ್ಮೆ ತೆಗೆದುಕೊಳ್ಳಬಹುದಾದ ಸರಳ ಮತ್ತು ಸುಲಭವಾದ “ಅಂತರ” ಚುಚ್ಚುಮದ್ದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದ್ದು, ಚಿಕ್ಕ ಕುಟುಂಬ ಹೊಂದುವ ಮೂಲಕ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು. ಶನಿವಾರದಂದು, ಸಂಡೂರು ತಾಲ್ಲೂಕಿನ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಹೆರಿಗೆಯಾದ ಬಾಣಂತಿಯರ ಆರೋಗ್ಯ ವಿಚಾರಿಸಿ ಪಾಲಕರೊಂದಿಗೆ ಮಾತನಾಡಿದ ಅವರು, ಹೆರಿಗೆಯಾದ ತಕ್ಷಣ ಬಾಣಂತಿಗೆ ಪಿಪಿಐಯುಸಿಡಿ ಅಳವಡಿಸುವ ಮೂಲಕ ಜನನ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು. ಮಾಲಾ ಡಿ, ಛಾಯ ನುಂಗುವ ಮಾತ್ರೆಗಳು ಮತ್ತು ಕ್ರಮವಾಗಿ 5 ಮತ್ತು 10 ವರ್ಷಗಳವರೆಗೆ ಗರ್ಭ ನಿರೋಧಕ ಸಾಧನವಾಗಿರುವ ಐಯುಸಿಡಿ 375, ಐಯುಸಿಡಿ 380 ಅತ್ಯಂತ ಉಪಯುಕ್ತವಾಗಿವೆ. ವಿಶೇಷವಾಗಿ ಪುರುಷರಿಗೆ ನಿರೋಧ್ ಲಭ್ಯವಿದ್ದು, ವೈದ್ಯರ ಸಲಹೆ ಮೇರೆಗೆ ಪ್ರತಿ ತಿಂಗಳು 10 ದಿನಗಳ ಕಾಲ ಬಳಸುವ ಮೂಲಕ ಜನನ ಮಧ್ಯೆ ಅಂತರವಿಡಲು ಸಾಧ್ಯವಿದ್ದು, ಕುಟುಂಬದ ಸದಸ್ಯರು ಸಹ ದಂಪತಿಗಳಿಗೆ ಬೆಂಬಲ ನೀಡುವ ಮೂಲಕ ತಾಯಿ ಮಗುವಿನ ಆರೋಗ್ಯ ಕಾಪಾಡಲು ಸಹಕರಿಸಬೇಕು ಎಂದರು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಸಜ್ಜಿತವಾದ ಹೆರಿಗೆ ಕೋಣೆ, ಮಗುವನ್ನು ಬೆಚ್ಚಗಿಡಲು ಬೇಬಿ ವಾರ್ಮರ್, ತಾಯಿಗೆ ಪೌಷ್ಟಿಕ ಆಹಾರ, ಮಗುವಿಗೆ ತಕ್ಷಣವೇ ಎದೆ ಹಾಲು ಉಣಿಸಲು ಸಿಬ್ಬಂದಿಗಳ ಕಾಳಜಿ, ಪೋಲಿಯೋ ಹನಿ, ಕಾಮಾಲೆ ತಡೆಗಟ್ಟುವ ಲಸಿಕೆ, ಕ್ಷಯರೋಗ ತಡೆಗಟ್ಟಲು ಬಿಸಿಜಿ ಲಸಿಕೆ, ಮಗುವಿನಲ್ಲಿ ಉಂಟಾಗಿರಬಹುದಾದ ಆಂತರಿಕ ರಕ್ತಸ್ರಾವ ತಡೆಗಟ್ಟಲು ವಿಟಮಿನ್ ಕೆ ಲಸಿಕೆಗಳನ್ನು ತಕ್ಷಣವೇ ನೀಡಲಾಗುವುದು. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆರಿಗೆ ಮಾಡಿಸಲು ವಿನಂತಿಸಿದರು. ಜಿಲ್ಲಾ ಆರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, ಹಗಲು ಹೊತ್ತಿನಲ್ಲಿ ಗರ್ಭಿಣಿ, ಬಾಣಂತಿ, ನವಜಾತ ಶಿಶು ಹಾಗೂ ಕುಟುಂಬದ ಹಿರಿಯ ಸದಸ್ಯರು ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸಬೇಕು. ಈ ಮೂಲಕ ಡೆಂಗ್ಯೂ ರೋಗ ತಡೆಗಟ್ಟಲು ಕೈಜೋಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಡೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಶುಶ್ರೂಷಣಾಧಿಕಾರಿ ಪ್ರತಿಮ, ಕಾವೇರಿ, ಸಿಬ್ಬಂದಿಯವರಾದ ಕರಿಬಸಮ್ಮ, ಉಮೇಶ್ ಸೇರಿದಂತೆ ಇತರರು ಹಾಜರಿದ್ದರು. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ