ಬುಧವಾರ, ಮೇ 6, 2026

ಬಳ್ಳಾರಿ ಕೆಕೆಆರ್‌ಟಿಸಿ ವಿಭಾಗದಲ್ಲಿ ತಾಂತ್ರಿಕ ಶಿಷ್ಯವೇತನ ತರಬೇತಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಮೇ 06(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗವು ಐ.ಟಿ.ಐ ಉತ್ತೀರ್ಣರಾದ ಅಭ್ಯರ್ಥಿಗಳಿಂದ ತಾಂತ್ರಿಕ ಶಿಷ್ಯವೇತನ (ಅಪ್ರೆಂಟಿಸ್) ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಬಳ್ಳಾರಿ ವಿಭಾಗದ ಘಟಕ-1, 2, 3 ಹಾಗೂ ಕುರುಗೋಡು, ಸಿರುಗುಪ್ಪ, ಸಂಡೂರು ಘಟಕಗಳಲ್ಲಿ ಎಲೆಕ್ಟಿçಷಿಯನ್-08, ಡೀಸೆಲ್ ಮೆಕ್ಯಾನಿಕ್-20, ಮೋಟಾರ್ ವೆಹಿಕಲ್ ಮೆಕ್ಯಾನಿಕ್-15 ಸೇರಿ ಒಟ್ಟು 43 ಸ್ಥಾನಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಮೊದಲು ಕೇಂದ್ರ ಸರ್ಕಾರದ ಅಧಿಕೃತ ಪೋರ್ಟಲ್‌ಗಳಾದ www.apprenticeship.gov.in ಅಥವಾ www.ncvtmis.com ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಮಾತ್ರ ನೇರ ಸಂದರ್ಶನಕ್ಕೆ ಅರ್ಹರಾಗಿರುತ್ತಾರೆ. ಮೇ 25 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಿರುಗುಪ್ಪ ರಸ್ತೆಯ ಕೆ.ಕೆ.ಆರ್.ಟಿ.ಸಿ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಸಂದರ್ಶನದ ಮೂಲ ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. *ಅಗತ್ಯವಿರುವ ದಾಖಲೆಗಳು:* ಐ.ಟಿ.ಐ ಮೂಲ ಅಂಕಪಟ್ಟಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಇತ್ತೀಚಿನ 3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಬ್ಯಾಂಕ್ ಪಾಸ್‌ಬುಕ್ ಪ್ರತಿ (ಆಧಾರ್ ಲಿಂಕ್ ಆಗಿರಬೇಕು), ಆನ್‌ಲೈನ್ ನೋಂದಣಿ ಪ್ರತಿ, ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಳ್ಳಾರಿಯ ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಇಪಿಎಫ್‌ಓ: ಮೇ 13 ರಂದು ಪಿಂಚಣಿ ಅದಾಲತ್

ಬಳ್ಳಾರಿ,ಮೇ 06(ಕರ್ನಾಟಕ ವಾರ್ತೆ): ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಪಿಂಚಣಿದಾರರ ಕುಂದು ಕೊರತೆ ಆಲಿಸಿ, ಪರಿಹರಿಸಲು ಮೇ 13 ರಂದು ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 01 ಗಂಟೆಯವರೆಗೆ ನಗರದ ಪ್ರಾದೇಶಿಕ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಪಿಂಚಣಿದಾರರು ತಮ್ಮ ಕುಂದುಕೊರತೆಗಳಿದ್ದಲ್ಲಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಪತ್ರ ಅಥವಾ ಇ-ಮೇಲ್ ಮೂಲಕ ಪಿ.ಪಿ.ಒ ಸಂಖ್ಯೆ, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ ಮತ್ತು ಕುಂದು ಕೊರತೆಯ ಸ್ವರೂಪ ಹಾಗೂ ಇತ್ಯಾದಿಗಳನ್ನು ಅಂಚೆ ಪತ್ರದ ಮೂಲಕ ಮೇ 10 ರೊಳಗಾಗಿ ರವಾನಿಸಬಹುದಾಗಿದೆ. ಪತ್ರ ಲಕೋಟೆ ಮೇಲೆ ಪಿಂಚಣಿ ಅದಾಲತ್ ಎಂದು ಬರೆಯಬೇಕು. ಹೆಚ್ಚಿನ ಮಾಹಿತಿಗಾಗಿ ದೂ.08392-268943 ಗೆ ಸಂಪರ್ಕಿಸಬಹುದು ಎಂದು ಕ್ಷೇತ್ರಿಯ ಭವಿಷ್ಯ ನಿಧಿ ಆಯುಕ್ತ ಕೆ.ವಿ ಪ್ರವೀಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆಯ ಅವಧಿ ಮೇ 16ರವರೆಗೆ ವಿಸ್ತರಣೆ

ಬಳ್ಳಾರಿ,ಮೇ 06(ಕರ್ನಾಟಕ ವಾರ್ತೆ): 2025-26ನೇ ಸಾಲಿನ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುವ “ಶುಲ್ಕ ಮರುಪಾವತಿ” ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ. ಪೋಷಕರು, ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಮನವಿಯ ಮೇರೆಗೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಹಿಂದೆ ನಿಗದಿಪಡಿಸಿದ್ದ ದಿನಾಂಕವನ್ನು ಮೇ 16 ರವರೆಗೆ ವಿಸ್ತರಿಸಲಾಗಿದೆ. *ಅನ್ವಯವಾಗುವ ಕೋರ್ಸ್ಗಳು:* ಈ ಸೌಲಭ್ಯವು ಬಿ.ಆರ್ಕ್, ಎಂ.ಸಿ.ಎ, ಎಂ.ಸಿ.ಎಚ್ (ವೈದ್ಯಕೀಯ), ಎಂ.ಡಿ, ಎಂ.ಎಸ್ (ಮಾಸ್ಟರ್ ಆಫ್ ಸರ್ಜರಿ), ಎಂ.ಎಸ್, ಎಂ.ಎಸ್ಸಿ (ಅಲೈಡ್ ಸೈನ್ಸಸ್), ಎಂ.ಪಿ.ಟಿ (ಫಿಸಿಯೋಥೆರಪಿ), ಎಂ.ಎಚ್.ಎ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್, ಎಂ.ಪಿ.ಎಚ್ (ಅಲೈಡ್ ಸೈನ್ಸಸ್), ಎಂ.ಎಸ್ಸಿ. ನರ್ಸಿಂಗ್, ಎಂ.ಎಸ್ಸಿ, ಎಂ.ಟೆಕ್, ಎಂಬಿಎ, ಎಂಬಿಎ ಫಿನ್‌ಟೆಕ್, ಎಂಬಿಎ (ಲಾಜಿಸ್ಟಿಕ್ ಮ್ಯಾನೇಜ್‌ಮೆಂಟ್), ಎಂಬಿಬಿಎಸ್, ಎಂಎಸ್ ಆಯುರ್ವೇದ ಎಂಡಿ (ಆಯುರ್ವೇದ), ಎಂಡಿ (ಹೋಮ್), ಎಂಡಿಎಸ್, ಪಿಜಿ ಡಿಪ್ಲೊಮಾ ಇನ್ ಡೆಂಟಲ್, ಫಾರ್ಮ್.ಡಿ (ಪೋಸ್ಟ್ ಬ್ಯಾಕಲೌರಿಯೇಟ್), ಎಂ.ಫಾರ್ಮ್, ಬಿ.ಇ, ಬಿ.ಟೆಕ್, ಬಿ.ಎಸ್ಸಿ(ಆನರ್ಸ್), ಬಿ.ವಿ.ಎಸ್ಸಿ ಮತ್ತು ಎಎಚ್, ಬಿಎಎಂಎಸ್ (ಆಯುರ್ವೇದ), ಬಿಎಚ್‌ಎಂಎಸ್ (ಹೋಮಿಯೋಪತಿ), ಬಿಎನ್‌ವೈಎಸ್ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ), ಬುಲ್ವಿಎಸ್ (ಯುನಾನಿ), ಬಿಎಎಂಎಸ್, ಬಿಡಿಎಸ್, ಎಂ.ಆರ್ಕ್, ಬಿ.ಎಫ್.ಎಸ್ಸಿ, ಬಿ.ಫಾರ್ಮ್, ಫಾರ್ಮ್.ಡಿ, ಬಿ.ಎಸ್ಸಿ (ಅಲೈಡ್ ಸೈನ್ಸಸ್), ಬಿಪಿಟಿ (ಫಿಸಿಯೋಥೆರಪಿ), ಆಕ್ಯುಪೇಷನಲ್ ಥೆರಪಿಯಲ್ಲಿ ಪದವಿ, ಬಿ.ಡಿ.ಎಸ್. ಬಿ.ಎಸ್ಸಿ.(ನರ್ಸಿಂಗ್), ಬಿ.ಎಸ್ಸಿ(ಪೋಸ್ಟ್ ಈಸಿಕ್), ಬಿ.ಎಡ್, ಬಿ.ಪ್ಲಾನ್, ಡಿಎಂ (ವೈದ್ಯಕೀಯ), ಎಂ.ಫಿಲ್, ಬಿ ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿAಗ್ (ಪೂರ್ಣ ಸ್ಟಾö್ಯಕ್ ಅಭಿವೃದ್ಧಿ), ಬಿ.ಟೆಕ್ ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ಎಂಜಿನಿಯರಿAಗ್ (ಎಲೆಕ್ಟಿçಕ್ ವೆಹಿಕಲ್ ಟೆಕ್ನಾಲಜಿ), ಪಿ.ಎಚ್‌ಡಿ, ಪ್ಯಾರಾಮೆಡಿಕಲ್ ಕೋರ್ಸ್ಗಳು ಮತ್ತು ಎಲ್ಲಾ ಡಿಪ್ಲೋಮಾ ಕೋರ್ಸ್ಗಳು ಸೇರಿದಂತೆ ವಿವಿಧ ವೃತ್ತಿಪರ ಮತ್ತು ಪದವಿ/ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಥವಾ ತಾಂತ್ರಿಕ ತೊಂದರೆಗಳಿದ್ದಲ್ಲಿ ಇಲಾಖಾ ಸಹಾಯವಾಣಿ ಮೊ.8050770004 ಹಾಗೂ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾAಶ ಸಹಾಯವಾಣಿ 1902 ಗೆ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಮಣ್ಣಿನ ಆರೋಗ್ಯ ರಕ್ಷಣೆಗೆ ವೈವಿಧ್ಯಮಯ ಬೆಳೆ ಪದ್ಧತಿ ಅನಿವಾರ್ಯ: ಡಾ.ರಮೇಶ ಎಂ.ಎನ್

ಬಳ್ಳಾರಿ,ಮೇ 06(ಕರ್ನಾಟಕ ವಾರ್ತೆ): ಸುಸ್ಥಿರ ಕೃಷಿ ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ರೈತರು ಸಾಂಪ್ರದಾಯಿಕ ಏಕಬೆಳೆ ಪದ್ಧತಿಯಿಂದ ಹೊರಬಂದು ವೈವಿಧ್ಯಮಯ ಬೆಳೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಮೇಶ ಎಂ.ಎನ್ ಅವರು ಹೇಳಿದರು. ಬಳ್ಳಾರಿಯ ಪ್ರಾದೇಶಿಕ ಕೇಂದ್ರದ ಐಸಿಎಆರ್-ಐಐಎಸ್‌ಡಬ್ಲ್ಯೂಸಿ ವತಿಯಿಂದ ಬುಡಕಟ್ಟು ಉಪ ಯೋಜನೆ ಅಡಿ ಮಂಗಳವಾರ ಸಂಡೂರು ತಾಲ್ಲೂಕಿನ ಮಟ್ಟಜನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ “ಮಣ್ಣಿನ ಆರೋಗ್ಯ ಚೇತನಕ್ಕಾಗಿ ವೈವಿಧ್ಯಮಯ ಬೆಳೆ ವ್ಯವಸ್ಥೆಗಳು” ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸುವುದು ಮತ್ತು ಬೆಳೆ ಅವಶೇಷಗಳನ್ನು ಸುಡದೆ ಮಣ್ಣಿನಲ್ಲಿ ಸೇರಿಸುವುದು ಮಣ್ಣಿನ ಆರೋಗ್ಯಕ್ಕೆ ಪೂರಕ. ಪಶುಪಾಲನೆ, ಹಸಿರು ಎಲೆ ಗೊಬ್ಬರ ಮತ್ತು ಕೃಷಿ ಅರಣ್ಯ ವ್ಯವಸ್ಥೆಗಳು ರೈತರಿಗೆ ಹೆಚ್ಚುವರಿ ಆದಾಯ ನೀಡುವುದಲ್ಲದೆ, ಹವಾಮಾನ ವೈಪರೀತ್ಯ ಎದುರಿಸಲು ಶಕ್ತಿ ನೀಡುತ್ತವೆ ಎಂದು ತಿಳಿಸಿದರು. ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಾತನಾಡಿದ ಹಿರಿಯ ವಿಜ್ಞಾನಿ ಡಾ.ಮಹಿಪಾಲ್ ಚೌಧರಿ ಅವರು, ರೈತರು ಸರಿಯಾದ ಮೂಲ, ಸರಿಯಾದ ದರ, ಸರಿಯಾದ ಸಮಯ ಮತ್ತು ಸರಿಯಾದ ಸ್ಥಳ (4ಆರ್ ವಿಧಾನ) ಎಂಬ ಸೂತ್ರದಡಿ ರಸಗೊಬ್ಬರ ಬಳಸಬೇಕು. ಮಟ್ಟಜನಹಳ್ಳಿಯ ಕಬ್ಬಿಣ ಸಮೃದ್ಧ ಕೆಂಪು ಮಣ್ಣಿಗೆ ಜಿಪ್ಸಮ್ ಬಳಸುವುದರಿಂದ ಮಣ್ಣಿನ ರಚನೆ ಸುಧಾರಿಸಿ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಎಂದು ಮಾಹಿತಿ ನೀಡಿದರು. ಹಿರಿಯ ವಿಜ್ಞಾನಿ ಡಾ.ರವಿ ಡುಪ್ಡಾಲ್ ಅವರು ಮಾತನಾಡಿ, ಬೆಳೆ ವೈವಿಧ್ಯೀಕರಣ ಮತ್ತು ಎಫ್‌ವೈಎಂ, ಹಸಿರು ಗೊಬ್ಬರ, ಕಾಂಪೋಸ್ಟ್, ವರ್ಮಿಕಾಂಪೋಸ್ಟ್, ಒಳಚರಂಡಿ ಕೆಸರು ಮತ್ತು ಪ್ರೆಸ್‌ಮಡ್‌ನಂತಹ ಪರ್ಯಾಯ ಪೋಷಕಾಂಶ ಮೂಲಗಳ ಬಳಕೆಯಿಂದ ಇನ್‌ಪುಟ್ ವೆಚ್ಚವನ್ನು ಕಡಿಮೆ ಮಾಡುತ್ತದೆ, ಲಾಭದಾಯಕತೆಯನ್ನು ಸುಧಾರಿಸುತ್ತದೆ ಮತ್ತು ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವಲ್ಲಿ ಮತ್ತು ಇಳುವರಿಯನ್ನು ಸ್ಥಿರಗೊಳಿಸುವಲ್ಲಿ ಅವುಗಳ ಪಾತ್ರ ಬಹುಮುಖ್ಯವಾಗಿದೆ. ವರ್ಮಿಕಾಂಪೋಸ್ಟ್, ಕಾಂಪೋಸ್ಟ್ ಮತ್ತು ಹಸಿರು ಗೊಬ್ಬರದ ಬಳಕೆಯಿಂದ ಕೃಷಿ ವೆಚ್ಚ ತಗ್ಗಿಸಿ ಲಾಭದಾಯಕತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನಗಳನ್ನು ವಿವರಿಸಿದರು. ಇನ್ನೋರ್ವ ವಿಜ್ಞಾನಿ ಡಾ.ಕವಿತಾ ಪಿ. ಜಾಧವ್ ಅವರು ಮಾತನಾಡಿ, ಜೀವಾಮೃತ, ಬೀಜಾಮೃತ ಮತ್ತು ಮಲ್ಚಿಂಗ್ (ಹೊದಿಕೆ) ಅಳವಡಿಕೆಯಿಂದ ಪರಿಸರ ಸ್ನೇಹಿ ಕೃಷಿ ಸಾಧ್ಯ. ಸೂಕ್ಷö್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸುವ ಮೂಲಕ ಸುಸ್ಥಿರ ಇಳುವರಿ ಪಡೆಯಬಹುದು ಎಂದು ರೈತರಿಗೆ ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ರೈತರಿಗೆ ಸುಧಾರಿತ ತಳಿಯ ತೊಗರಿ ಬೀಜಗಳನ್ನು (ಪಿಆರ್‌ಜಿ-176) ವಿತರಿಸಲಾಯಿತು. ಜಿಪ್ಸಮ್ ಮತ್ತು ಸೂಕ್ಷö್ಮ ಪೋಷಕಾಂಶಗಳನ್ನು ಜಮೀನಿನಲ್ಲಿ ಬಳಸುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಈ ವೇಳೆ ಗ್ರಾಮದ ಸುಮಾರು 40ಕ್ಕೂ ಹೆಚ್ಚು ರೈತರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಾಹಿತಿ ಪಡೆದರು. ---------

ಮಂಗಳವಾರ, ಮೇ 5, 2026

ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ): ಕುರುಗೋಡು ಪಟ್ಟಣದ 17 ನೇ ವಾರ್ಡ್ ನ ಹರಿಕೃಪ ಕಾಲೋನಿಯ ನಿವಾಸಿಯಾದ ಜಗದೀಶ ಎನ್ನುವ 48 ವರ್ಷದ ವ್ಯಕ್ತಿಯು ವಾಹನ ಚಾಲಕ ಕೆಲಸ ಮಾಡಿಕೊಂಡಿದ್ದು, 2017 ರ ನ.24 ರಂದು ಮನೆಯಿಂದ ಹೊರಗಡೆ ಹೋಗಿಬರುತ್ತೇನೆ ಎಂದು ಹೇಳಿಹೋದವನು ಮರಳಿ ಬಾರದೇ ಕಾಣೆಯಾಗಿರುತ್ತಾನೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ. ವ್ಯಕ್ತಿಯ ಚಹರೆ ಗುರುತು: ಎತ್ತರ 4.8 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಕ್ರಿಮ್ ಬಣ್ಣದ ಅಂಗಿ ಮತ್ತು ಗ್ರೇ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಕುರುಗೋಡು ಪೊಲೀಸ್ ಠಾಣೆಯ ದೂ.08393-263433 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕುರುಗೋಡು: ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪ್ರವೇಶಾತಿ ಆರಂಭ

ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ): ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐಟಿಐ) 2026-27ನೇ ಸಾಲಿನ ಆಗಸ್ಟ್ ಬ್ಯಾಚ್‌ನ ವಿವಿಧ ವೃತ್ತಿ ವಿಭಾಗಗಳಿಗೆ ಪ್ರವೇಶಾತಿ ಪ್ರಕ್ರಿಯೆಯು ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮೇ 08 ರೊಳಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ www.cite.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಕುರುಗೋಡು ಸರ್ಕಾರಿ ಐಟಿಐ ಕಾಲೇಜಿಗೆ ಭೇಟಿ ನೀಡಿ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳಬಹುದು. *ಲಭ್ಯವಿರುವ ವೃತ್ತಿ ಕೋರ್ಸ್ಗಳು:* ಎಲೆಕ್ಷಿ÷್ಟçÃಷಿಯನ್(2 ವರ್ಷ), ಫಿಟ್ಟರ್(2 ವರ್ಷ), ಮೆಕ್ಯಾನಿಕ್ ಎಲೆಕ್ಟಿçಕ್ ವೆಹಿಕಲ್(2 ವರ್ಷ), ಸಿಎನ್‌ಸಿ ಮಷಿನಿಂಗ್ ಟೆಕ್ನಿಷಿಯನ್(2 ವರ್ಷ), ವರ್ಚುವಲ್ ಅನಾಲಿಸಿಸ್ ಅಂಡ್ ಡಿಸೈನರ್ (2 ವರ್ಷ), ಇಂಡಸ್ಟಿçಯಲ್ ರೋಬೋಟಿಕ್ಸ್ ಅಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್ (1 ವರ್ಷ), ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಅಂಡ್ ಆಟೋಮೇಷನ್ (1 ವರ್ಷ), ಇಂಜಿನಿಯರಿAಗ್ ಡಿಸೈನ್ ಟೆಕ್ನಿಷಿಯನ್ (1 ವರ್ಷ). ದಾಖಲಾತಿ ಹಾಗೂ ಇತರ ಮಾಹಿತಿಗಾಗಿ ವಿ.ತಿಮ್ಮರಾಜು (ಪ್ರಾಂಶುಪಾಲರು)-9980715718, ಸತೀಶ್ ಡಿ.ಜಿ-9481175925, ಮಹೇಶ್ ಟಿ-7892431265, ರಾಜಶೇಖರ್ ಪಿ.ಜೆ-7975845633 ಗೆ ಸಂಪರ್ಕಿಸಬಹುದಾಗಿದೆ ಎಂದು ಕುರುಗೋಡು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಬಿಸಿಲಿನ ಬೇಗೆಯಿಂದ ಜಾಗ್ರತೆ: ಸಾರ್ವಜನಿಕರಿಗೆ ಜಿಲ್ಲಾ ಆರೋಗ್ಯ ಇಲಾಖೆಯ ಮಹತ್ವದ ಸಲಹೆಗಳು

ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಏರುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ. ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. *ಆರೋಗ್ಯ ರಕ್ಷಣೆಗೆ ಪ್ರಮುಖ ಕ್ರಮಗಳು:* *ಸಾಕಷ್ಟು ನೀರು ಕುಡಿಯಿರಿ:* ಬಾಯಾರಿಕೆ ಇಲ್ಲದಿದ್ದರೂ ದಿನವಿಡೀ ಅತಿ ಹೆಚ್ಚು ನೀರನ್ನು ಕುಡಿಯುತ್ತಿರಬೇಕು. ನಿರ್ಜಲೀಕರಣ ತಡೆಯಲು ಇದು ಅತಿ ಮುಖ್ಯವಾಗಿದೆ. *ನೈಸರ್ಗಿಕ ಪಾನೀಯಗಳ ಬಳಕೆ:* ಅಂಗಡಿಯ ಕೃತಕ ಪಾನೀಯಗಳ ಬದಲು ಮನೆಯಲ್ಲಿ ತಯಾರಿಸಿದ ನಿಂಬೆ ಹಣ್ಣಿನ ರಸ, ಮಜ್ಜಿಗೆ ಹಾಗೂ ನೈಸರ್ಗಿಕ ಎಳೆನೀರನ್ನು ಹೆಚ್ಚಾಗಿ ಸೇವಿಸಬೇಕು. *ಆಹಾರ ಕ್ರಮ:* ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ ಹಾಗೂ ದ್ರಾಕ್ಷಿಯಂತಹ ನೀರಿನ ಅಂಶ ಹೆಚ್ಚಿರುವ ಹಣ್ಣು ಮತ್ತು ತರಕಾರಿಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. *ಉಡುಪು:* ಹಗುರವಾದ, ತಿಳಿ ಬಣ್ಣದ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಲಿದೆ. *ಹೊರಹೋಗುವಾಗ ವಹಿಸಬೇಕಾದ ಮುನ್ನೆಚ್ಚರಿಕೆ:* ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಆ ಸಮಯದಲ್ಲಿ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಅನಿವಾರ್ಯವಿದ್ದಲ್ಲಿ ಛತ್ರಿ, ಟೋಪಿ, ಕಪ್ಪು ಕನ್ನಡಕ ಹಾಗೂ ಚಪ್ಪಲಿಗಳನ್ನು ಕಡ್ಡಾಯವಾಗಿ ಬಳಸಿ. ಸಭೆ-ಸಮಾರಂಭಗಳನ್ನು ನಡೆಸುವವರು ಜನರಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. *ತುರ್ತು ಸಂದರ್ಭದಲ್ಲಿ ಏನು ಮಾಡಬೇಕು?* ಬಿಸಿಲಿನಿಂದ ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದರೆ, ಕೂಡಲೇ ಅವರನ್ನು ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆ ಬಟ್ಟೆಯಿಂದ ಮೈ ಒರೆಸಿ, ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. *ಪ್ರಾಣಿಗಳ ಬಗ್ಗೆ ನಿಗಾ ಇರಲಿ:* ಮನುಷ್ಯರಷ್ಟೇ ಅಲ್ಲದೆ ಸಾಕು ಪ್ರಾಣಿಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಅವುಗಳನ್ನು ನೆರಳಿನಲ್ಲಿರಿಸಿ, ಕುಡಿಯಲು ಸಾಕಷ್ಟು ನೀರಿನ ವ್ಯವಸ್ಥೆ ಮಾಡಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಒಂಟಿಯಾಗಿ ಬಿಟ್ಟು ಹೋಗಬಾರದು ಎಂದು ಅವರು ತಿಳಿಸಿದ್ದಾರೆ. ಆಲ್ಕೋಹಾಲ್, ಅತಿಯಾದ ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ (ತಂಪು ಪಾನೀಯ) ಪಾನೀಯಗಳು ದೇಹವನ್ನು ಶೀಘ್ರವಾಗಿ ನಿರ್ಜಲೀಕರಣಗೊಳಿಸುವುದರಿಂದ ಅವುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ವಿಶೇಷವಾಗಿ ಕೆರೆ, ಬಾವಿ ಅಥವಾ ಕಾಲುವೆಗಳ ಹತ್ತಿರ ಮಕ್ಕಳು ಹೋಗದಂತೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ----------

ವಸತಿ ರಹಿತರ ಅರ್ಹ ಫಲಾನುಭವಿಗಳ ಪಟ್ಟಿ ಸೇರ್ಪಡೆಗೆ ಮೇ 15 ಕೊನೆಯ ದಿನ

ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ): 2018ರ ವಸತಿ ರಹಿತ ಮತ್ತು ನಿವೇಶನ ರಹಿತ ಸಮೀಕ್ಷೆಯ ಪಟ್ಟಿಯಲ್ಲಿ ಬಿಟ್ಟುಹೋಗಿರುವ ಅರ್ಹ ಫಲಾನುಭವಿಗಳನ್ನು ಸೇರಿಸಲು ಹಾಗೂ ಪರಿಷ್ಕರಿಸಲು ಮೇ 15 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ. 2018ರಲ್ಲಿ ನಡೆಸಲಾದ ಸಮೀಕ್ಷಾ ಪಟ್ಟಿಯನ್ನು ಪರಿಷ್ಕರಿಸಲು ಮತ್ತು ಅರ್ಹ ಕುಟುಂಬಗಳನ್ನು ಪಟ್ಟಿಗೆ ಸೇರಿಸಲು ಈಗ ಅವಕಾಶ ಕಲ್ಪಿಸಲಾಗಿದೆ. ಅರ್ಹ ಫಲಾನುಭವಿಗಳ ಹೆಸರನ್ನು ಸೇರಿಸಲು ಮೇ 15 ರವರೆಗೆ ಅಂತಿಮ ಕಾಲಾವಕಾಶ ನೀಡಲಾಗಿದೆ. ಈ ನಿಗದಿತ ದಿನಾಂಕದ ನಂತರ ಯಾವುದೇ ಸೇರ್ಪಡೆಗೆ ಅವಕಾಶವಿರುವುದಿಲ್ಲ ಮತ್ತು ಅಂದೇ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಮೇ 15ರ ನಂತರ ಸಿದ್ಧವಾಗುವ ಪಟ್ಟಿಯನ್ನೇ ಅಂತಿಮ ‘ವಸತಿ ಮತ್ತು ನಿವೇಶನ ರಹಿತರ ಪಟ್ಟಿ' ಎಂದು ಪರಿಗಣಿಸಲಾಗುವುದು. ಅರ್ಹ ಫಲಾನುಭವಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಹೆಸರು ಸೇರ್ಪಡೆಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿ ಸಿಬ್ಬಂದಿಯನ್ನು ಕೂಡಲೇ ಸಂಪರ್ಕಿಸಬಹುದಾಗಿದೆ. ವಸತಿ ಸೌಲಭ್ಯದಿಂದ ವಂಚಿತರಾದ ಅರ್ಹ ಕುಟುಂಬಗಳು ಈ ಕೂಡಲೇ ಸಂಬAಧಪಟ್ಟ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಅರ್ಹ ಫಲಾನುಭವಿಗಳನ್ನು ಕೈ ಬಿಟ್ಟಿದ್ದಲ್ಲಿ ಸಂಬAಧಿಸಿದ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಮೇ 10 ರಂದು ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ

ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮೇ 10 ರಂದು ಸಂಜೆ 07 ಗಂಟೆಗೆÀ ನಗರದ ಪಾರ್ವತಿ ನಗರ ಬಡಾವಣೆಯ ಬಸವ ಭವನದಲ್ಲಿ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಈ.ತುಕರಾಮ್, ಕೆ.ರಾಜಶೇಖರ ಬಸವರಾಜ ಹಿಟ್ನಾಳ್, ರಾಜ್ಯಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರ ಮಹಾಮಂಡಳಿ ನಿಯಮಿತ(ಕಾವೇರಿ ಹ್ಯಾಂಡ್‌ಲೂಮ್ಸ್)ದ ಅಧ್ಯಕ್ಷರೂ ಆದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಸಂಡೂರು ಶಾಸಕಿ ಈ.ಅನ್ನಪೂರ್ಣ, ವಿಧಾನ ಪರಿಷತ್ ಶಾಸಕರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ, ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನ ಉಪಾಧ್ಯಕ್ಷ ಹೆಚ್.ಲಕ್ಷö್ಮಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಸೇರಿದಂತೆ ಇತರರು ಭಾಗವಹಿಸುವರು. ಬಳ್ಳಾರಿಯ ಇಂಡೋ ಅಮೆರಿಕನ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಬಸವರಾಜ ಅಮಾತಿ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡುವರು. ಬಳ್ಳಾರಿಯ ಎನ್.ಬಸವರಾಜ್ ತಂಡ ಹೇಮರೆಡ್ಡಿ ಮಲ್ಲಮ್ಮ ಗೀತೆಗಳ ಗಾಯನ ಕಾರ್ಯಕ್ರಮ ಇರಲಿದೆ. *ಮೆರವಣಿಗೆ:* ಜಯಂತಿ ಅಂಗವಾಗಿ ಅಂದು ಸಂಜೆ 05 ಗಂಟೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಆರಂಭಗೊAಡು ವಾಲ್ಮೀಕಿ ವೃತ್ತ(ಎಸ್‌ಪಿ ವೃತ್ತ) ಮೂಲಕ ಬಸವ ಭವನದ ಸಭಾಂಗಣದವರೆಗೆ ನಡೆಯಲಿದೆ. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ. -----------

ಯುವಕ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಮೇ 04(ಕರ್ನಾಟಕ ವಾರ್ತೆ): ಸಂಡೂರು ತಾಲ್ಲೂಕಿನ ಮಾಳಪುರ ಗ್ರಾಮದ ಕುಂಬಾರ ಕೇರಿಯ ಎಸ್.ವಿ ಶ್ರೀಕಾಂತ ಎನ್ನುವ 19 ವರ್ಷದ ಯುವಕ ತೋರಣಗಲ್ಲಿನ ಜಿಂದಾಲ್ ಕಾರ್ಖಾನೆಯ ಎಲ್‌ಎನ್‌ಟಿ ಕಂಪನಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಏ.05 ರಂದು ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಪುನಃ ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 5.6 ಅಡಿ, ಕೋಲು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಅಂಗಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ಹಿಂದಿ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಬಳ್ಳಾರಿ ಎಸ್.ಪಿ ಅವರ ಕಚೇರಿ ದೂ.08392-258300, ತೋರಣಗಲ್ಲು ಡಿವೈಎಸ್‌ಪಿ ದೂ.9480803010, ಸಂಡೂರು ವೃತ್ತ ಸಿ.ಪಿ.ಐ ದೂ.08395-260100, 9480803036, ತೋರಣಗಲ್ಲು ಪೊಲೀಸ್ ಠಾಣೆ ದೂ.08395-250100, ಮೊ.9480803062 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. -------

ಸೋಮವಾರ, ಮೇ 4, 2026

ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಡಿಪ್ಲೋಮಾ ಪ್ರವೇಶಾತಿ ಆರಂಭ

ಬಳ್ಳಾರಿ,ಮೇ 04(ಕರ್ನಾಟಕ ವಾರ್ತೆ): ನಗರದ ಹೊಸಪೇಟೆ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸ್ಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕಾಲೇಜಿನಲ್ಲಿ ಲಭ್ಯವಿರುವ ಆಟೋಮೊಬೈಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟಾçನಿಕ್ಸ್ ಅಂಡ್ ಕಮ್ಯುನಿಕೇಶನ್, ಎಲೆಕ್ಟಿçಕಲ್ ಅಂಡ್ ಎಲೆಕ್ಟಾçನಿಕ್ಸ್, ಮೆಕ್ಯಾನಿಕಲ್ ಮತ್ತು ಮೆಟಲರ್ಜಿಕಲ್ ಇಂಜಿನಿಯರಿAಗ್ ವಿಭಾಗಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. *ವೇಳಾಪಟ್ಟಿ:* ಮೇ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಂದು ಸಂಜೆ 06 ಗಂಟೆಯ ನಂತರ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು. ಮೇ 18 ರ ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಮೆರಿಟ್ ಪಟ್ಟಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಂಜೆ 06 ಗಂಟೆಯ ನಂತರ ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. ಮೇ 22 ರಂದು ಸಂಜೆ 05.30 ಗಂಟೆಯ ನಂತರ ಸೀಟು ಹಂಚಿಕೆ ವಿವರಗಳ ಪ್ರಕಟಿಸಲಾಗುವುದು. ಮೇ 23 ರಿಂದ ಮೇ 25 ರವರೆಗೆ ಪ್ರವೇಶ ಪಡೆಯಲು ನಿಗದಿಪಡಿಸಿದ ಅವಧಿ ಹಾಗೂ ಮೇ 26 ರಿಂದ ಮೇ 30 ರವರೆಗೆ ಕಾಲೇಜು ಮಟ್ಟದಲ್ಲಿ ಮೆರಿಟ್ ಮತ್ತು ರೋಸ್ಟರ್ ಆಧಾರದ ಖಾಲಿ ಉಳಿದ ಸೀಟುಗಳಿಗೆ ಆಫ್‌ಲೈನ್ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕಾಲೇಜು ಪಾಲಿಟೆಕ್ನಿಕ್ ಕಚೇರಿ ಅಥವಾ ದೂ.08392-294371 ಅನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಮೇ 08 ರಂದು ಬಳ್ಳಾರಿ ತಾಪಂ ಮಾಸಿಕ ಕೆಡಿಪಿ ಸಭೆ

ಬಳ್ಳಾರಿ,ಮೇ 04(ಕರ್ನಾಟಕ ವಾರ್ತೆ): ಬಳ್ಳಾರಿ ತಾಲ್ಲೂಕು ಪಂಚಾಯಿತಿಯ ಮೊದಲನೇ ಮಾಸಿಕ ಕೆಡಿಪಿ ಸಭೆಯನ್ನು ಮೇ 08 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೋಟೆ ಪ್ರದೇಶದ ಬಳ್ಳಾರಿ ತಾಪಂ ಕಾರ್ಯಾಲಯದ ಸಭಾಂಗಣದಲ್ಲಿ ನಿಗದಿಪಡಿಸಲಾಗಿದೆ. ಸಭೆಗೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ನಿಯೋಜಿಸದೇ, ತಾವೇ ಖುದ್ದಾಗಿ ಪೂರಕ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಬಳ್ಳಾರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ---------

ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ನೀಡಲು ಭೂ ಮಾಲೀಕರಿಂದ ಅರ್ಜಿ ಆಹ್ವಾನ

ಬಳ್ಳಾರಿ,ಮೇ 04(ಕರ್ನಾಟಕ ವಾರ್ತೆ): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಕಚೇರಿ ವತಿಯಿಂದ ‘ಭೂ ಒಡೆತನ ಯೋಜನೆ'ಯಡಿ ಪರಿಶಿಷ್ಟ ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನಿನ ಸೌಲಭ್ಯ ಕಲ್ಪಿಸಲು ಇತರ ಜನಾಂಗದವರಿAದ ಜಮೀನನ್ನು ಖರೀದಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನನ್ನು ಹೊರತುಪಡಿಸಿ, ಇತರ ಜನಾಂಗದವರಿAದ ಮಾತ್ರ ಜಮೀನನ್ನು ಖರೀದಿಸಲಾಗುತ್ತದೆ. ಜಮೀನು ನೀಡಲು ಆಸಕ್ತಿ ಇರುವ ಮಾಲೀಕರು ನಿಗಮಕ್ಕೆ ಒಪ್ಪಿಗೆ ಪತ್ರವನ್ನು ಸಲ್ಲಿಸಬಹುದಾಗಿದೆ. ಆಸಕ್ತ ಭೂ ಮಾಲೀಕರು ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್‌ಮೆAಟ್ ಪ್ರದೇಶದ ನಂದಿ ಕಾಲೋನಿಯ 1ನೇ ಕ್ರಾಸ್ ನ ನಂದಿ ಶಾಲೆ ಹಿಂಭಾಗದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-245551, ಮೊ.9886618721 ಗೆ ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಭಾನುವಾರ, ಮೇ 3, 2026

’ಶ್ರಮಿಕರೇ ದೇಶದ ನಿಜವಾದ ವಿಶ್ವಕರ್ಮರು’ | 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ಉದ್ಘಾಟಿಸಿ ಡಾ.ಮನ್ಸುಖ್ ಮಾಂಡವೀಯ ಹೇಳಿಕೆ

ಬಳ್ಳಾರಿ,ಮೇ 03(ಕರ್ನಾಟಕ ವಾರ್ತೆ): ದೇಶದ ಶ್ರಮಿಕ ವರ್ಗವು ರಾಷ್ಟ್ರ ನಿರ್ಮಾಣದ ನಿಜವಾದ ಶಿಲ್ಪಿಗಳು ಮತ್ತು ನಮ್ಮ ಪಾಲಿನ ವಿಶ್ವಕರ್ಮರು. ಅವರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ ಹಾಗೂ ಯುವಜನ ವ್ಯವಹಾರಗಳ ಸಚಿವ ಡಾ.ಮನ್ಸುಖ್ ಮಾಂಡವೀಯ ಅವರು ಹೇಳಿದರು. ಭಾನುವಾರ, ದೊಡ್ಡಬಳ್ಳಾಪುರದಲ್ಲಿ ನೂತನವಾಗಿ ನಿರ್ಮಿಸಲಾದ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಯ ಉದ್ಘಾಟನೆ ಹಾಗೂ ಇದೇ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ನಿರ್ಮಾಣವಾಗಲಿರುವ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. *ಉಚಿತ ಆರೋಗ್ಯ ತಪಾಸಣೆ ಅಭಿಯಾನ:* ಹೊಸ ಕಾರ್ಮಿಕ ಸಂಹಿತೆಯ ಅಡಿಯಲ್ಲಿ, 40 ವರ್ಷ ದಾಟಿದ ಕಾರ್ಮಿಕರಿಗಾಗಿ ಮೇ 7 ರಿಂದ ದೇಶಾದ್ಯಂತ ಉಚಿತ ಆರೋಗ್ಯ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ಘೋಷಿಸಿದರು. *ಸಾಮಾಜಿಕ ಭದ್ರತೆಯ ವಿಸ್ತರಣೆ:* 2015 ರಲ್ಲಿ ಶೇ.19 ರಷ್ಟಿದ್ದ ಸಾಮಾಜಿಕ ಭದ್ರತಾ ವ್ಯಾಪ್ತಿಯು ಇಂದು ಶೇ.64 ಕ್ಕೆ ಏರಿಕೆಯಾಗಿದೆ. ಇಎಸ್ಐ ವಿಮಾದಾರರ ಸಂಖ್ಯೆ 2 ಕೋಟಿಯಿಂದ 4 ಕೋಟಿಗೆ ದ್ವಿಗುಣಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು. *ಶಿಕ್ಷಣದಲ್ಲಿ ಮೀಸಲಾತಿ:* ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 20 ಇಎಸ್ಐ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಶೇ. 40-50 ರಷ್ಟು ಸೀಟುಗಳನ್ನು ವಿಮಾದಾರರ ಮಕ್ಕಳಿಗಾಗಿಯೇ ಮೀಸಲಿಡಲಾಗಿದೆ ಎಂದರು. ದೊಡ್ಡಬಳ್ಳಾಪುರದ ಭಾಗದಲ್ಲಿ 1.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಾರ್ಮಿಕರಿದ್ದು, ಅವರ ಕುಟುಂಬದ ಸದಸ್ಯರನ್ನೂ ಸೇರಿ ಒಟ್ಟು 5.5 ಲಕ್ಷ ಜನರಿಗೆ ಈ ಹೊಸ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ಅದೇರೀತಿಯಾಗಿ, ಬಳ್ಳಾರಿ ವಿಭಾಗದ ಸುಮಾರು 64,000 ಕಾರ್ಮಿಕರು ಮತ್ತು ಅವರ ಕುಟುಂಬದವರು ಸೇರಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲಿದೆ ಎಂದು ತಿಳಿಸಿದರು. ಕೇಂದ್ರ ಕಾರ್ಮಿಕ ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಈ ಆಸ್ಪತ್ರೆಯು ಒಪಿಡಿ, ಮಾಡ್ಯುಲರ್ ಆಪರೇಷನ್ ಥಿಯೇಟರ್, ತುರ್ತು ಚಿಕಿತ್ಸೆ, ಸ್ತ್ರೀರೋಗ, ಮಕ್ಕಳ ಆರೋಗ್ಯ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ಮಾಣದಲ್ಲಿ ಶ್ರಮಿಸಿದ ಕಾರ್ಮಿಕರನ್ನು ಸಚಿವರು ಇದೇ ಸಂದರ್ಭದಲ್ಲಿ ಗೌರವಿಸಿದರು ಮತ್ತು ಫಲಾನುಭವಿಗಳಿಗೆ ಇಎಸ್‌ಐ ಸೌಲಭ್ಯಗಳ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಸಂಸದ ಡಾ.ಕೆ.ಸುಧಾಕರ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಹಾಗೂ ವರ್ಚುವಲ್ ಮೂಲಕ ಬಳ್ಳಾರಿಯ ಇಎಸ್ಐ ಅಧಿಕಾರಿಗಳು ಉಪಸ್ಥಿತರಿದ್ದರು. *ಆಸ್ಪತ್ರೆಗಳ ವಿಶೇಷತೆ:* ದೊಡ್ಡಬಳ್ಳಾಪುರದ ಇಎಸ್ಐ ಆಸ್ಪತ್ರೆಯನ್ನು 101.14 ಕೋಟಿ ರೂ. ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಸಾಮಾನ್ಯ ಔಷಧ ವಿಭಾಗ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ವಿಭಾಗ, ಮೂಳೆಚಿಕಿತ್ಸೆ, ತುರ್ತು ಚಿಕಿತ್ಸೆ, ರೇಡಿಯಾಲಜಿ ಮತ್ತು ಸುಸಜ್ಜಿತ ಪ್ರಯೋಗಾಲಯಗಳು ಒಳಗೊಂಡಿದೆ. ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿಗಾಗಿ 32 ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಅದೇರೀತಿಯಾಗಿ, ಬಳ್ಳಾರಿಯಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆಗೆ 150 ಕೋಟಿ ರೂ. ವೆಚ್ಚವಾಗಲಿದ್ದು, 5.21 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತಲೆಯೆತ್ತಲಿದೆ. ಇದು ಉತ್ತರ ಕರ್ನಾಟಕದ ಕಾರ್ಮಿಕರಿಗೆ ವರದಾನವಾಗಲಿದೆ. ======

ಶನಿವಾರ, ಮೇ 2, 2026

ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ತೆರವು ಕಾರ್ಯಾಚರಣೆ | ಸರ್ಕಾರದ ವಶಕ್ಕೆ 15.05 ಎಕರೆ ಜಮೀನು ಸ್ವಾಧೀನ

ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಸರ್ಕಾರದ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಬಳ್ಳಾರಿ (ಗ್ರಾಮಾಂತರ) ಗ್ರಾಮದ ವ್ಯಾಪ್ತಿಯಲ್ಲಿ ಬರುವ ವಿವಿಧ ಸರ್ವೆ ನಂಬರ್‌ಗಳ ಒಟ್ಟು 15.05 ಎಕರೆ ಜಮೀನನ್ನು ಜಿಲ್ಲಾಡಳಿತ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ. ಈಗಾಗಲೇ ಸರ್ಕಾರದ ಜಾಗ ಎಂದು ಗುರುತಿಸಲಾಗಿದ್ದ ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ಸರ್ವೆ ನಂಬರ್ 977 ರ 9.20 ಎಕರೆ, ಸರ್ವೆ ನಂಬರ್ 976 ರ 4.72 ಎಕರೆ ಮತ್ತು ಸರ್ವೆ ನಂಬರ್ 813 ರ 1.13 ಎಕರೆ ಸೇರಿದಂತೆ ಒಟ್ಟು 15.05 ಎಕರೆ ಜಮೀನುಗಳನ್ನು ಶನಿವಾರ ಅಧಿಕೃತವಾಗಿ ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲಾಯಿತು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಬಳ್ಳಾರಿ ತಾಲ್ಲೂಕು ತಹಶೀಲ್ದಾರರಾದ ಟಿ.ರೇಖಾ ಸೇರಿದಂತೆ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಇತರರು ಇದ್ದರು. ----------

ಬಳ್ಳಾರಿ: ಜಿಟಿಟಿಸಿ ಕೇಂದ್ರದಲ್ಲಿ ವಿವಿಧ ಉದ್ಯೋಗಾಧಾರಿತ ತರಬೇತಿಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ವತಿಯಿಂದ ಬಳ್ಳಾರಿ ಕೇಂದ್ರದಲ್ಲಿ ವಿವಿಧ ಅಲ್ಪಾವಧಿ ತರಬೇತಿ ಕೋರ್ಸ್ಗಳನ್ನು ಪ್ರಾರಂಭಿಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಲಭ್ಯವಿರುವ ತರಬೇತಿ ಕೋರ್ಸ್ಗಳು: ಆಫೀಸ್ ಮ್ಯಾನೇಜ್‌ಮೆಂಟ್ ಇನ್ ಕಂಪ್ಯೂಟರ್ ಅಪ್ಲಿಕೇಶನ್: 2 ತಿಂಗಳು. ಮೆಕ್ಯಾನಿಕಲ್: ಬೇಸಿಕ್ ಮತ್ತು ಅಡ್ವಾನ್ಸ್÷್ಡ ಕೋರ್ಸ್ಗಳು (2 ರಿಂದ 4 ತಿಂಗಳು). ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್: ಅಡ್ವಾನ್ಸ್ ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ತರಬೇತಿ (2 ತಿಂಗಳು) ಹಾಗೂ ಪಿಎಲ್‌ಸಿ, ಎಸ್‌ಸಿಎಡಿಎ ಮತ್ತು ಹೆಚ್‌ಎಂಐ (4 ತಿಂಗಳು). ಕAಪ್ಯೂಟರ್ ಸೈನ್ಸ್: ಸಿ ಲ್ಯಾಂಗ್ವೇಜ್ (2 ತಿಂಗಳು), ಸಿ ಮತ್ತು ಸಿ++ (4 ತಿಂಗಳು) ಹಾಗೂ ಫುಲ್ ಸ್ಟಾಕ್ ವೆಬ್ ಡೆವಲಪ್‌ಮೆಂಟ್ (4 ತಿಂಗಳು). ಅರ್ಹತೆ ಮತ್ತು ಸೌಲಭ್ಯಗಳು: ಕನಿಷ್ಠ 8ನೇ ತರಗತಿ ಪಾಸಾದವರು ಅಥವಾ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ ಮತ್ತು ಪದವಿ ಪಡೆದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಕೇಂದ್ರದಲ್ಲಿ ಸುಸಜ್ಜಿತವಾದ ಉನ್ನತ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ನುರಿತ ತರಬೇತುದಾರರಿಂದ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಜಿಟಿಟಿಸಿ, ಐ.ಟಿ.ಐ ಕಾಲೇಜು ಆವರಣ, ಕಂಟೋನ್ ಮೆಂಟ್, ಬಳ್ಳಾರಿ – 583104 ಅಥವಾ ದೂ.08392-200087, ಮೊ.9620057086, 6361880236, 6363589489 ಅಥವಾ 9108143829 ಗೆ ಸಂಪರ್ಕಿಸಬಹುದು ಎಂದು ಜಿಟಿಟಿಸಿ ಪ್ರಾಂಶುಪಾಲ ಮುತ್ತಣ್ಣ ದರ್ಮಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ನಗರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 01 ರಂದು ಪಿ.ರಾಮಲಕ್ಷಿö್ಮÃ ವೈ/0 ರಾಘವೇಂದ್ರ ಇವರು ತಮ್ಮ ತಂದೆಯಾದ ರಾಮಚಂದ್ರಪ್ಪ, ವಯಸ್ಸು 65, ವಾಲ್ಮೀಕಿ ಜನಾಂಗ, ಕೋಲುಮುಖ, ಗೋಧಿ ಮೈಬಣ್ಣ, 5 ಅಡಿ ಎತ್ತರವುಳ್ಳ ವ್ಯಕ್ತಿಯಾಗಿದ್ದು, ಸದರಿ ಅವರು ಕನ್ನಡ, ತೆಲುಗು ಭಾಷೆ ಮಾತನಾಡುವವರಾಗಿದ್ದು, ಇವರು ಏ.25 ರಂದು ಮಧ್ಯಾಹ್ನ 12.30 ಗಂಟೆಯಿAದ ಕಾಣೆಯಾಗಿರುತ್ತಾರೆ ಎಂದು ವಿವರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಗಾಂಧಿನಗರ ಪೊಲೀಸ್ ಠಾಣೆಯ ದೂ.08392-272192, ಪಿಎಸ್‌ಐ ಮೊ.9480803046, ಪಿಐ ಮೊ.9480803046 ಗೆ ಸಂಪರ್ಕಿಸಲು ಸೂಚಿಸಲಾಗಿದೆ. ----------

ಬಳ್ಳಾರಿ: ಸರ್ಕಾರಿ ಕಿವುಡು ಮಕ್ಕಳ ವಸತಿಯುತ ಶಾಲೆಗೆ ಉಚಿತ ದಾಖಲಾತಿ ಪ್ರಾರಂಭ

ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ನಗರದ ಕಂಟೋನ್ಮೆAಟ್ ಪ್ರದೇಶದ ಶಾಂತಿಧಾಮ ಆವರಣದಲ್ಲಿರುವ ಸರ್ಕಾರಿ ಕಿವುಡು ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ 1ರಿಂದ 10ನೇ ತರಗತಿಯವರೆಗೆ ಶ್ರವಣದೋಷವುಳ್ಳ ಬಾಲಕರಿಗೆ ಉಚಿತ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. *ಅರ್ಹತೆ:* 6 ವರ್ಷದಿಂದ 14 ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳು ಪ್ರವೇಶ ಪಡೆಯಬಹುದು. ಕೇವಲ ಬಾಲಕರಿಗೆ ಮಾತ್ರ ಈ ಶಾಲೆಯಲ್ಲಿ ಅವಕಾಶವಿರುತ್ತದೆ. ವಸತಿ ಮತ್ತು ಊಟ, ಶಿಕ್ಷಣ, ವಿಶೇಷ ಶಿಕ್ಷಕರಿಂದ ವಿಷಯ ಬೋಧನೆ, ಪಠ್ಯಪುಸ್ತಕ ಹಾಗೂ ಸಮವಸ್ತç, ಮಾತಿನ ತರಬೇತಿ, ಶ್ರವಣ ತರಬೇತಿ, ಭಾಷಾ ಕಲಿಕೆ ಮತ್ತು ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಮತ್ತು ಸೈನ್ಸ್ ಲ್ಯಾಬ್ ಸೌಲಭ್ಯ, ಪಥಸಂಚಲನ, ಸಾಮೂಹಿಕ ನೃತ್ಯ, ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ತರಬೇತಿ ಸೇರಿದಂತೆ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಮೇಲ್ಕಂಡ ಸೌಲಭ್ಯಗಳನ್ನು ನೀಡಲಾಗುವುದು. ಅರ್ಜಿಗೆ ಬೇಕಾಗಿರುವ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜನ್ಮ ದಿನಾಂಕ ಪ್ರಮಾಣಪತ್ರ, ವಿದ್ಯಾರ್ಥಿ ಹಾಗೂ ತಂದೆ-ತಾಯಿಯ ಆಧಾರ್ ಕಾರ್ಡ್ ಪ್ರತಿ, ಅಂಗವಿಕಲ ಪ್ರಮಾಣ ಪತ್ರ ಹಾಗೂ ಯು.ಡಿ.ಐ.ಡಿ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ. ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್ಮೆAಟ್ ಪ್ರದೇಶದ ಶಾಂತಿಧಾಮ ಆವರಣದಲ್ಲಿರುವ ಸರ್ಕಾರಿ ಕಿವುಡು ಮಕ್ಕಳ ಪಾಠಶಾಲೆಯ ಅಧೀಕ್ಷಕರ ಕಚೇರಿ ಅಥವಾ ದೂ.08392-297138, ಮೊ.9008485380, 9902106670 ಗೆ ಸಂಪರ್ಕಿಸಬಹುದಾಗಿದೆ ಎಂದು ಸೂಚಿಸಿದೆ. ----------

ಬಳ್ಳಾರಿ: ಮೇ 03 ರಂದು 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಗೆ ಭೂಮಿ ಪೂಜೆ | ವರ್ಚುವಲ್ ಮೂಲಕ ಕೇಂದ್ರ ಸಚಿವರಿಂದ ಉದ್ಘಾಟನೆ

ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ಸುಸಜ್ಜಿತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಗರದ ಬೆಳಗಲ್ಲು ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಯ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭವು ಮೇ 03 ರಂದು ಬೆಳಿಗ್ಗೆ 10.30 ಗಂಟೆಗೆ ವರ್ಚುವಲ್ ಮೂಲಕ ನಡೆಯಲಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಕ್ರೀಡೆ ಹಾಗೂ ಯುವಜನ ವ್ಯವಹಾರಗಳ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಆಸ್ಪತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. --------

ಬಳ್ಳಾರಿ: ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಅಭಿಪ್ರಾಯ | ಶಾಂತಿ- ಅಹಿಂಸೆ ಸಾರಿದ ಬುದ್ಧನ ನಾಡು ಭಾರತ

ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ಭಾರತವು ಬುದ್ಧನ ನಾಡು. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟçವಲ್ಲ, ಬದಲಾಗಿ ಶಾಂತಿ ಮತ್ತು ಅಹಿಂಸೆಯನ್ನು ಸಾರಿದ ಬುದ್ಧನ ನಾಡಾಗಿದೆ ಎಂದು ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸದ ಉಲ್ಲೇಖದಂತೆ ಕ್ರಿಸ್ತಪೂರ್ವ 563ರಲ್ಲಿ ಬುದ್ಧನು ಈ ದೇಶದಲ್ಲಿ ಜನಿಸಿ ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಇಂದು ಬೌದ್ಧ ಧರ್ಮವು ವಿಶ್ವದ ಮೂರನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ ಎಂದು ಅವರು ಸ್ಮರಿಸಿದರು. ಗೌತಮ ಬುದ್ಧನು ಯುದ್ಧಕ್ಕಿಂತ ಶಾಂತಿಯೇ ಮೇಲು ಎಂಬ ತತ್ವವನ್ನು ಅಳವಡಿಸಿಕೊಂಡಿದ್ದರು. ಶಾಕ್ಯ ರಾಜ್ಯದ ಸಿದ್ಧಾರ್ಥನಾಗಿದ್ದಾಗ, ನದಿ ನೀರಿನ ವಿವಾದದ ಕುರಿತು ನಡೆದ ಸಂಘದ ಚರ್ಚೆಯಲ್ಲಿ ಯುದ್ಧದ ಬದಲು ಶಾಂತಿ ಮಾತುಕತೆಗೆ ಒತ್ತು ನೀಡಿದ್ದರು. ಅವರ ಈ ಶಾಂತಿ ಮಂತ್ರವು ಇಂದಿನ ಜಾಗತಿಕ ಯುದ್ಧಗಳ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಬೌದ್ಧಧರ್ಮದ ಜೀವಾಳವಾದ ಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು ಬಳ್ಳಾರಿ ನಗರದ ಯಾವುದಾದರೂ ಒಂದು ಪ್ರಶಾಂತವಾದ ಪ್ರದೇಶದಲ್ಲಿ ಬುದ್ಧನ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡುವ ಆಶಯ ಹೊಂದಲಾಗಿದೆ ಎಂದರು. ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಮಾತನಾಡಿ, ಗೌತಮ ಬುದ್ಧನು ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಅಹಿಂಸೆ ಮತ್ತು ಶಾಂತಿಯ ಜಾಗತಿಕ ಸಂಕೇತ. ತನ್ನ 29ನೇ ವಯಸ್ಸಿನಲ್ಲೇ ರಾಜ್ಯಭೋಗ, ಪತ್ನಿ, ಮಗು ಮತ್ತು ವೈಭವದ ಜೀವನವನ್ನು ತ್ಯಜಿಸಿ ಸಮಾಜದ ಶಾಂತಿಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ಎಂದು ತಿಳಿಸಿದರು. ಬುದ್ಧನು ಅರಮನೆಯ ಸುಖ-ಭೋಗಗಳನ್ನು ತೊರೆದು ಅಹಿಂಸೆಯ ಮಾರ್ಗವನ್ನು ಆಯ್ದುಕೊಂಡಿದ್ದು ಇಂದಿನ ತಲೆಮಾರಿಗೆ ದೊಡ್ಡ ಪ್ರೇರಣೆ. ನಮ್ಮ ದೇಶಕ್ಕೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿಯAತಹ ಮಹಾನ್ ವ್ಯಕ್ತಿಗಳು ದಾರಿದೀಪವಾಗಿದ್ದಾರೆ. ಇವರಲ್ಲಿ ಬುದ್ಧನು ಪ್ರಾಚೀನ ಕಾಲದಲ್ಲೇ ಅಹಿಂಸೆಯ ಬುನಾದಿ ಹಾಕಿದವರು. ಇಂದಿನ ಅಶಾಂತಿಯ ವಾತಾವರಣದಲ್ಲಿ ಬುದ್ಧನ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಪಾಲಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿಯವರು ಸಮಾಜದ ವಿವಿಧ ಕಾಲಘಟ್ಟಗಳಲ್ಲಿ ಶೋಷಣೆ ಮುಕ್ತ ಹಾಗೂ ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಚೇತನಗಳು. ಅವರ ವಿಚಾರಧಾರೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು. ಬುದ್ಧ ಮತ್ತು ಗಾಂಧೀಜಿ ಇಬ್ಬರೂ ಅಹಿಂಸೆಯೇ ಪರಮ ಧರ್ಮ ಎಂದು ಸಾರಿದವರು. ಸಮಾಜದಲ್ಲಿ ಶಾಂತಿ ನೆಲೆಸಲು ಸತ್ಯದ ಹಾದಿ ಅನಿವಾರ್ಯ ಎಂಬುದನ್ನು ಅವರು ಒತ್ತಿ ತಿಳಿಸಿದ್ದರು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ ಮತ್ತು ಚಾತುರ್ವರ್ಣ ಪದ್ಧತಿಯ ವಿರುದ್ಧ ಬುದ್ಧ ಮತ್ತು ಅಂಬೇಡ್ಕರ್ ಅವರು ಧ್ವನಿ ಎತ್ತಿದರು. ಬಡವರು ಮತ್ತು ಅನಕ್ಷರಸ್ಥರನ್ನು ಮೂಢನಂಬಿಕೆಗಳಿAದ ಹೊರತರಲು ಅವರು ಶ್ರಮಿಸಿದರು ಎಂದರು. ಕೇವಲ ಮದುವೆಯಾಗದಿರುವುದು ಬ್ರಹ್ಮಚರ್ಯವಲ್ಲ, ಬದಲಾಗಿ ಎಲ್ಲಾ ವಿಷಯಗಳಲ್ಲಿ ಶಿಸ್ತು ಮತ್ತು ಕಟ್ಟುನಿಟ್ಟಾದ ಜೀವನ ನಡೆಸುವುದು ನಿಜವಾದ ಬ್ರಹ್ಮಚರ್ಯ ಎಂದು ಬುದ್ಧನ ಬೋಧನೆಗಳನ್ನು ವಿಶ್ಲೇಷಿಸಿದರು. ಬಳ್ಳಾರಿಯ ಎಸ್‌ಎಸ್‌ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೋಮನಾಥ್ ಸಿ.ಹೆಚ್ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಿರುಗುಪ್ಪ ದಳವಾಯಿ ಅಂಬಣ್ಣ ತಂಡ ಬುದ್ಧ ಗೀತೆಗಳನ್ನು ಪ್ರಸ್ತುತ ಪಡಿಸಿದರು. *ಮೆರವಣಿಗೆ:* ಜಯಂತಿ ಅಂಗವಾಗಿ ಸಂಜೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯು ಬಳ್ಳಾರಿ ನಗರದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊAಡು ಗಡಿಗೆ ಚನ್ನಪ್ಪ ವೃತ್ತ, ಡಾ.ರಾಜ್ ಕುಮಾರ್ ರಸ್ತೆ, ಇಂದಿರಾ ವೃತ್ತ ಮಾರ್ಗವಾಗಿ ಸಾಂಸ್ಕೃತಿಕ ಸಮುಚ್ಚಯದ ಸಭಾಂಗಣದವರೆಗೆ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕಮಲರತ್ನ ಬಂತೇಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಬುದ್ಧ ಅನುಯಾಯಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು. -----------

ಶುಕ್ರವಾರ, ಮೇ 1, 2026

ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ 'ಸಮಾಧಾನ ಸಮಾರೋಹ್' ವಿಶೇಷ ಲೋಕ ಅದಾಲತ್‌ ಆಯೋಜನೆ: ಅನು ಶಿವರಾಮನ್

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ, ಬರುವ ಆಗಸ್ಟ್ 21, 22 ಮತ್ತು 23 ರಂದು 'ಸಮಾಧಾನ ಸಮಾರೋಹ್' ಎಂಬ ವಿಶೇಷ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹಾಗೂ ಕೆಎಎಲ್‌ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಶಿವರಾಮನ್ ಅವರು ಹೇಳಿದರು. 'ಸಮಾಧಾನ ಸಮಾರೋಹ್' ವಿಶೇಷ ಲೋಕ ಅದಾಲತ್ ಕುರಿತು, ಆನ್ ಲೈನ್ ಮೂಲಕ ಕರ್ನಾಟಕ ಹೈಕೋರ್ಟ್ ನ ಮೊದಲ ಮಹಡಿಯಲ್ಲಿರುವ ಕಾರ್ಯನಿರ್ವಾಹಕ ಅಧ್ಯಕ್ಷರ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ಪ್ರಕರಣಗಳ ಇತ್ಯರ್ಥಕ್ಕೆ ಇದು ವಿಶೇಷ ಲೋಕ್ ಅದಾಲತ್ ಆಗಿದೆ. ಸಾರ್ವಜನಿಕರಿಗೆ ಇದು ಸುವರ್ಣಾವಕಾಶವಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ದಾವೆಗಳನ್ನು ಪರಸ್ಪರ ಒಪ್ಪಿಗೆ ಮತ್ತು ಸಂಧಾನದ ಮೂಲಕ ಬಗೆಹರಿಸಿ, ದಾವೆದಾರರಿಗೆ ಶೀಘ್ರ ನ್ಯಾಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಆರ್.ದೇವದಾಸ್ ಅವರು ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಸಾವಿರಾರು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು 'ವಿಶೇಷ ಲೋಕ್ ಅದಾಲತ್' ಎಂಬ ವಿನೂತನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಎಂದೂ ನಡೆಯದ ಈ ವಿಶೇಷ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ತಮ್ಮ ಕಾನೂನು ಹೋರಾಟವನ್ನು ಸುಲಭವಾಗಿ ಮುಕ್ತಾಯಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. *ರಾಜ್ಯದ 4,328 ಪ್ರಕರಣಗಳ ಗುರುತಿಸುವಿಕೆ:* ಕರ್ನಾಟಕ ರಾಜ್ಯದ ವಿವಿಧ ತಾಲೂಕು ಮತ್ತು ಜಿಲ್ಲಾ ಮಟ್ಟಗಳಿಂದ ಸುಪ್ರೀಂ ಕೋರ್ಟ್‌ಗೆ ಹೋದ ಸುಮಾರು 4,328 ಪ್ರಕರಣಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್ ಗುರುತಿಸಿ, ಪಟ್ಟಿಯನ್ನು ಕಳುಹಿಸಿಕೊಟ್ಟಿದೆ. ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ ಪ್ರಕರಣಗಳನ್ನು ಗುರುತಿಸಿ, ಅವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದು ಈ ಲೋಕ್ ಅದಾಲತ್‌ನ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಕಾನೂನು ಪ್ರಕ್ರಿಯೆಗಳು ಜನರಿಗೆ ಹೊರೆಯಾಗಬಹುದು. ಈ ಲೋಕ್ ಅದಾಲತ್ ಮೂಲಕ ಪರಸ್ಪರ ಒಪ್ಪಿಗೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ. ತಮ್ಮ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವವರು ಕೂಡಲೇ ಸಂಬಂಧಪಟ್ಟ ತಾಲ್ಲೂಕು ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಸಂಪರ್ಕಿಸಿ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕೆಂದು ವಿನಂತಿಸಿದರು. ವಿಡಿಯೋ ಸಂವಾದ ಬಳಿಕ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು, ಸಾರ್ವಜನಿಕರು ಮತ್ತು ದಾವೆದಾರರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದರು. ಸುಪ್ರೀಂ ಕೋರ್ಟ್ ನೀಡಿರುವ ಪಟ್ಟಿಯ ಅನ್ವಯ, ಕರ್ನಾಟಕ ರಾಜ್ಯದಿಂದ ಸುಮಾರು 4,328 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಸಂಬಂಧಿಸಿದ 109 ಪ್ರಕರಣಗಳು ಇತ್ಯರ್ಥಕ್ಕೆ ಲಭ್ಯವಿವೆ. ಅವುಗಳನ್ನು ಸ್ಥಳೀಯವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವಾ ಸಮಿತಿಗಳ ಮೂಲಕವೇ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು. ಪಕ್ಷಕಾರರು ಭೌತಿಕವಾಗಿ ಹಾಜರಾಗಲು ಸಾಧ್ಯವಾಗದಿದ್ದರೆ, ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಂಧಾನದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಉದಾಹರಣೆಗೆ, ಒಬ್ಬರು ಬಳ್ಳಾರಿಯಲ್ಲಿದ್ದು ಇನ್ನೊಬ್ಬರು ಮುಂಬೈ ಅಥವಾ ವಿದೇಶದಲ್ಲಿದ್ದರೂ ತಂತ್ರಜ್ಞಾನದ ಮೂಲಕ ಸಂಧಾನ ನಡೆಸಬಹುದು. ತರಬೇತಿ ಪಡೆದ ಪರಿಣಿತ ಮಧ್ಯಸ್ಥಿಕೆದಾರರು ಮತ್ತು ವಕೀಲರು ಉಭಯ ಪಕ್ಷಗಳ ನಡುವೆ ಸಮಾಲೋಚನೆ ನಡೆಸಿ, ಇಬ್ಬರಿಗೂ ಒಪ್ಪಿಗೆಯಾಗುವಂತಹ ಪರಿಹಾರ ಕಂಡುಕೊಳ್ಳಲು ನೆರವಾಗುತ್ತಾರೆ. ಇದರಲ್ಲಿ ವೈವಾಹಿಕ ವಿವಾದಗಳು, ಅಪಘಾತ ವಿಮೆ ಪರಿಹಾರ, ಚೆಕ್ ಬೌನ್ಸ್ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ಕ್ರಿಮಿನಲ್ ರಾಜಿ ಪ್ರಕರಣಗಳು ಹಾಗೂ ಕಾರ್ಮಿಕ ವಿವಾದಗಳನ್ನು ಇಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಿದರು. ನ್ಯಾಯಾಲಯದಲ್ಲಿ ಒಬ್ಬರು ಗೆದ್ದು ಇನ್ನೊಬ್ಬರು ಸೋಲುತ್ತಾರೆ. ಆದರೆ ಸಂಧಾನದ ಮೂಲಕ ಪ್ರಕರಣ ಇತ್ಯರ್ಥವಾದರೆ ಇಬ್ಬರೂ ಗೆದ್ದಂತೆ. ಇದು ಸಮಯ ಮತ್ತು ಹಣದ ಉಳಿತಾಯ ಮಾಡುವುದಲ್ಲದೆ, ಸಮಾಜದಲ್ಲಿ ಶಾಂತಿ ಮತ್ತು ಬಾಂಧವ್ಯವನ್ನು ಕಾಪಾಡುತ್ತದೆ. ನಿಮ್ಮ ಪ್ರಕರಣವು ಸುಪ್ರೀಂ ಕೋರ್ಟ್ ಪಟ್ಟಿಯಲ್ಲಿ ಇಲ್ಲದಿದ್ದರೂ, ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಂಡು ಈ ಸೌಲಭ್ಯ ಪಡೆಯಬಹುದು ಎಂದು ಅವರು ತಿಳಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು. ======