ಬುಧವಾರ, ಮೇ 6, 2026
ಮಣ್ಣಿನ ಆರೋಗ್ಯ ರಕ್ಷಣೆಗೆ ವೈವಿಧ್ಯಮಯ ಬೆಳೆ ಪದ್ಧತಿ ಅನಿವಾರ್ಯ: ಡಾ.ರಮೇಶ ಎಂ.ಎನ್
ಬಳ್ಳಾರಿ,ಮೇ 06(ಕರ್ನಾಟಕ ವಾರ್ತೆ):
ಸುಸ್ಥಿರ ಕೃಷಿ ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ರೈತರು ಸಾಂಪ್ರದಾಯಿಕ ಏಕಬೆಳೆ ಪದ್ಧತಿಯಿಂದ ಹೊರಬಂದು ವೈವಿಧ್ಯಮಯ ಬೆಳೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಮೇಶ ಎಂ.ಎನ್ ಅವರು ಹೇಳಿದರು.
ಬಳ್ಳಾರಿಯ ಪ್ರಾದೇಶಿಕ ಕೇಂದ್ರದ ಐಸಿಎಆರ್-ಐಐಎಸ್‌ಡಬ್ಲ್ಯೂಸಿ ವತಿಯಿಂದ ಬುಡಕಟ್ಟು ಉಪ ಯೋಜನೆ ಅಡಿ ಮಂಗಳವಾರ ಸಂಡೂರು ತಾಲ್ಲೂಕಿನ ಮಟ್ಟಜನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ “ಮಣ್ಣಿನ ಆರೋಗ್ಯ ಚೇತನಕ್ಕಾಗಿ ವೈವಿಧ್ಯಮಯ ಬೆಳೆ ವ್ಯವಸ್ಥೆಗಳು” ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸುವುದು ಮತ್ತು ಬೆಳೆ ಅವಶೇಷಗಳನ್ನು ಸುಡದೆ ಮಣ್ಣಿನಲ್ಲಿ ಸೇರಿಸುವುದು ಮಣ್ಣಿನ ಆರೋಗ್ಯಕ್ಕೆ ಪೂರಕ. ಪಶುಪಾಲನೆ, ಹಸಿರು ಎಲೆ ಗೊಬ್ಬರ ಮತ್ತು ಕೃಷಿ ಅರಣ್ಯ ವ್ಯವಸ್ಥೆಗಳು ರೈತರಿಗೆ ಹೆಚ್ಚುವರಿ ಆದಾಯ ನೀಡುವುದಲ್ಲದೆ, ಹವಾಮಾನ ವೈಪರೀತ್ಯ ಎದುರಿಸಲು ಶಕ್ತಿ ನೀಡುತ್ತವೆ ಎಂದು ತಿಳಿಸಿದರು.
ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಾತನಾಡಿದ ಹಿರಿಯ ವಿಜ್ಞಾನಿ ಡಾ.ಮಹಿಪಾಲ್ ಚೌಧರಿ ಅವರು, ರೈತರು ಸರಿಯಾದ ಮೂಲ, ಸರಿಯಾದ ದರ, ಸರಿಯಾದ ಸಮಯ ಮತ್ತು ಸರಿಯಾದ ಸ್ಥಳ (4ಆರ್ ವಿಧಾನ) ಎಂಬ ಸೂತ್ರದಡಿ ರಸಗೊಬ್ಬರ ಬಳಸಬೇಕು. ಮಟ್ಟಜನಹಳ್ಳಿಯ ಕಬ್ಬಿಣ ಸಮೃದ್ಧ ಕೆಂಪು ಮಣ್ಣಿಗೆ ಜಿಪ್ಸಮ್ ಬಳಸುವುದರಿಂದ ಮಣ್ಣಿನ ರಚನೆ ಸುಧಾರಿಸಿ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಎಂದು ಮಾಹಿತಿ ನೀಡಿದರು.
ಹಿರಿಯ ವಿಜ್ಞಾನಿ ಡಾ.ರವಿ ಡುಪ್ಡಾಲ್ ಅವರು ಮಾತನಾಡಿ, ಬೆಳೆ ವೈವಿಧ್ಯೀಕರಣ ಮತ್ತು ಎಫ್‌ವೈಎಂ, ಹಸಿರು ಗೊಬ್ಬರ, ಕಾಂಪೋಸ್ಟ್, ವರ್ಮಿಕಾಂಪೋಸ್ಟ್, ಒಳಚರಂಡಿ ಕೆಸರು ಮತ್ತು ಪ್ರೆಸ್‌ಮಡ್‌ನಂತಹ ಪರ್ಯಾಯ ಪೋಷಕಾಂಶ ಮೂಲಗಳ ಬಳಕೆಯಿಂದ ಇನ್‌ಪುಟ್ ವೆಚ್ಚವನ್ನು ಕಡಿಮೆ ಮಾಡುತ್ತದೆ, ಲಾಭದಾಯಕತೆಯನ್ನು ಸುಧಾರಿಸುತ್ತದೆ ಮತ್ತು ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವಲ್ಲಿ ಮತ್ತು ಇಳುವರಿಯನ್ನು ಸ್ಥಿರಗೊಳಿಸುವಲ್ಲಿ ಅವುಗಳ ಪಾತ್ರ ಬಹುಮುಖ್ಯವಾಗಿದೆ. ವರ್ಮಿಕಾಂಪೋಸ್ಟ್, ಕಾಂಪೋಸ್ಟ್ ಮತ್ತು ಹಸಿರು ಗೊಬ್ಬರದ ಬಳಕೆಯಿಂದ ಕೃಷಿ ವೆಚ್ಚ ತಗ್ಗಿಸಿ ಲಾಭದಾಯಕತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನಗಳನ್ನು ವಿವರಿಸಿದರು.
ಇನ್ನೋರ್ವ ವಿಜ್ಞಾನಿ ಡಾ.ಕವಿತಾ ಪಿ. ಜಾಧವ್ ಅವರು ಮಾತನಾಡಿ, ಜೀವಾಮೃತ, ಬೀಜಾಮೃತ ಮತ್ತು ಮಲ್ಚಿಂಗ್ (ಹೊದಿಕೆ) ಅಳವಡಿಕೆಯಿಂದ ಪರಿಸರ ಸ್ನೇಹಿ ಕೃಷಿ ಸಾಧ್ಯ. ಸೂಕ್ಷö್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸುವ ಮೂಲಕ ಸುಸ್ಥಿರ ಇಳುವರಿ ಪಡೆಯಬಹುದು ಎಂದು ರೈತರಿಗೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ರೈತರಿಗೆ ಸುಧಾರಿತ ತಳಿಯ ತೊಗರಿ ಬೀಜಗಳನ್ನು (ಪಿಆರ್‌ಜಿ-176) ವಿತರಿಸಲಾಯಿತು. ಜಿಪ್ಸಮ್ ಮತ್ತು ಸೂಕ್ಷö್ಮ ಪೋಷಕಾಂಶಗಳನ್ನು ಜಮೀನಿನಲ್ಲಿ ಬಳಸುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಈ ವೇಳೆ ಗ್ರಾಮದ ಸುಮಾರು 40ಕ್ಕೂ ಹೆಚ್ಚು ರೈತರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಾಹಿತಿ ಪಡೆದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ