ಭಾನುವಾರ, ಮೇ 3, 2026
’ಶ್ರಮಿಕರೇ ದೇಶದ ನಿಜವಾದ ವಿಶ್ವಕರ್ಮರು’ | 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ಉದ್ಘಾಟಿಸಿ ಡಾ.ಮನ್ಸುಖ್ ಮಾಂಡವೀಯ ಹೇಳಿಕೆ
ಬಳ್ಳಾರಿ,ಮೇ 03(ಕರ್ನಾಟಕ ವಾರ್ತೆ):
ದೇಶದ ಶ್ರಮಿಕ ವರ್ಗವು ರಾಷ್ಟ್ರ ನಿರ್ಮಾಣದ ನಿಜವಾದ ಶಿಲ್ಪಿಗಳು ಮತ್ತು ನಮ್ಮ ಪಾಲಿನ ವಿಶ್ವಕರ್ಮರು. ಅವರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ ಹಾಗೂ ಯುವಜನ ವ್ಯವಹಾರಗಳ ಸಚಿವ ಡಾ.ಮನ್ಸುಖ್ ಮಾಂಡವೀಯ ಅವರು ಹೇಳಿದರು.
ಭಾನುವಾರ, ದೊಡ್ಡಬಳ್ಳಾಪುರದಲ್ಲಿ ನೂತನವಾಗಿ ನಿರ್ಮಿಸಲಾದ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಯ ಉದ್ಘಾಟನೆ ಹಾಗೂ ಇದೇ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ನಿರ್ಮಾಣವಾಗಲಿರುವ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
*ಉಚಿತ ಆರೋಗ್ಯ ತಪಾಸಣೆ ಅಭಿಯಾನ:*
ಹೊಸ ಕಾರ್ಮಿಕ ಸಂಹಿತೆಯ ಅಡಿಯಲ್ಲಿ, 40 ವರ್ಷ ದಾಟಿದ ಕಾರ್ಮಿಕರಿಗಾಗಿ ಮೇ 7 ರಿಂದ ದೇಶಾದ್ಯಂತ ಉಚಿತ ಆರೋಗ್ಯ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ಘೋಷಿಸಿದರು.
*ಸಾಮಾಜಿಕ ಭದ್ರತೆಯ ವಿಸ್ತರಣೆ:*
2015 ರಲ್ಲಿ ಶೇ.19 ರಷ್ಟಿದ್ದ ಸಾಮಾಜಿಕ ಭದ್ರತಾ ವ್ಯಾಪ್ತಿಯು ಇಂದು ಶೇ.64 ಕ್ಕೆ ಏರಿಕೆಯಾಗಿದೆ. ಇಎಸ್ಐ ವಿಮಾದಾರರ ಸಂಖ್ಯೆ 2 ಕೋಟಿಯಿಂದ 4 ಕೋಟಿಗೆ ದ್ವಿಗುಣಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.
*ಶಿಕ್ಷಣದಲ್ಲಿ ಮೀಸಲಾತಿ:*
ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 20 ಇಎಸ್ಐ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಶೇ. 40-50 ರಷ್ಟು ಸೀಟುಗಳನ್ನು ವಿಮಾದಾರರ ಮಕ್ಕಳಿಗಾಗಿಯೇ ಮೀಸಲಿಡಲಾಗಿದೆ ಎಂದರು.
ದೊಡ್ಡಬಳ್ಳಾಪುರದ ಭಾಗದಲ್ಲಿ 1.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಾರ್ಮಿಕರಿದ್ದು, ಅವರ ಕುಟುಂಬದ ಸದಸ್ಯರನ್ನೂ ಸೇರಿ ಒಟ್ಟು 5.5 ಲಕ್ಷ ಜನರಿಗೆ ಈ ಹೊಸ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಸೇವೆ ಲಭ್ಯವಾಗಲಿದೆ.
ಅದೇರೀತಿಯಾಗಿ, ಬಳ್ಳಾರಿ ವಿಭಾಗದ ಸುಮಾರು 64,000 ಕಾರ್ಮಿಕರು ಮತ್ತು ಅವರ ಕುಟುಂಬದವರು ಸೇರಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲಿದೆ ಎಂದು ತಿಳಿಸಿದರು.
ಕೇಂದ್ರ ಕಾರ್ಮಿಕ ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಈ ಆಸ್ಪತ್ರೆಯು ಒಪಿಡಿ, ಮಾಡ್ಯುಲರ್ ಆಪರೇಷನ್ ಥಿಯೇಟರ್, ತುರ್ತು ಚಿಕಿತ್ಸೆ, ಸ್ತ್ರೀರೋಗ, ಮಕ್ಕಳ ಆರೋಗ್ಯ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ಮಾಣದಲ್ಲಿ ಶ್ರಮಿಸಿದ ಕಾರ್ಮಿಕರನ್ನು ಸಚಿವರು ಇದೇ ಸಂದರ್ಭದಲ್ಲಿ ಗೌರವಿಸಿದರು ಮತ್ತು ಫಲಾನುಭವಿಗಳಿಗೆ ಇಎಸ್‌ಐ ಸೌಲಭ್ಯಗಳ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸಂಸದ ಡಾ.ಕೆ.ಸುಧಾಕರ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಹಾಗೂ ವರ್ಚುವಲ್ ಮೂಲಕ ಬಳ್ಳಾರಿಯ ಇಎಸ್ಐ ಅಧಿಕಾರಿಗಳು ಉಪಸ್ಥಿತರಿದ್ದರು.
*ಆಸ್ಪತ್ರೆಗಳ ವಿಶೇಷತೆ:*
ದೊಡ್ಡಬಳ್ಳಾಪುರದ ಇಎಸ್ಐ ಆಸ್ಪತ್ರೆಯನ್ನು 101.14 ಕೋಟಿ ರೂ. ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಸಾಮಾನ್ಯ ಔಷಧ ವಿಭಾಗ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ವಿಭಾಗ, ಮೂಳೆಚಿಕಿತ್ಸೆ, ತುರ್ತು ಚಿಕಿತ್ಸೆ, ರೇಡಿಯಾಲಜಿ ಮತ್ತು ಸುಸಜ್ಜಿತ ಪ್ರಯೋಗಾಲಯಗಳು ಒಳಗೊಂಡಿದೆ. ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿಗಾಗಿ 32 ವಸತಿಗೃಹಗಳನ್ನು ನಿರ್ಮಿಸಲಾಗಿದೆ.
ಅದೇರೀತಿಯಾಗಿ, ಬಳ್ಳಾರಿಯಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆಗೆ 150 ಕೋಟಿ ರೂ. ವೆಚ್ಚವಾಗಲಿದ್ದು, 5.21 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತಲೆಯೆತ್ತಲಿದೆ. ಇದು ಉತ್ತರ ಕರ್ನಾಟಕದ ಕಾರ್ಮಿಕರಿಗೆ ವರದಾನವಾಗಲಿದೆ.
======
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ