ಶುಕ್ರವಾರ, ಸೆಪ್ಟೆಂಬರ್ 19, 2025

ಕುಟುಂಬಕ್ಕೆ ವಿಮಾ ಪರಿಹಾರ ಹಸ್ತಾಂತರ

ಬಳ್ಳಾರಿ,ಸೆ.19(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾ ಪಂಚಾಯತ್ ಶಾಖೆಯ ಕೆನರಾ ಬ್ಯಾಂಕ್ ನಿಂದ ಮೃತ ಗ್ರಾಹಕ ಮನೋಜ್ ಕುಮಾರ್ ಅವರಿಗೆ ಕೆನರಾ ಹೆಚ್‌ಎಸ್‌ಬಿಸಿ ಸಂಸ್ಥೆಯು ರೂ.10,58,500 ಮೊತ್ತದ ವಿಮಾ ಪರಿಹಾರ ಚೆಕ್ ನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿದೆ. ಗ್ರಾಹಕ ಮನೋಜ್ ಕುಮಾರ್ ಅವರು ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ಶಿಕ್ಷಣ ಸಾಲವನ್ನು ಈ ಬ್ಯಾಂಕ್ ನಿಂದ ಕೆನರಾ ಹೆಚ್‌ಎಸ್‌ಬಿಸಿ ಕವಚ ವಿಮಾ ಪಾಲಿಸಿ ಅಡಿ ರೂ.1,35,021 ಏಕಕಾಲದ ಪ್ರೀಮಿಯಂ ಪಾವತಿಸಿ ವಿಮೆ ಮಾಡಲಾಗಿತ್ತು. ಗ್ರಾಹಕ ಮನೋಜ್ ಕುಮಾರ್ ಅವರು ಪ್ರವಾಸಿ ಚಟುವಟಿಕೆಯ ಟ್ರೆಕ್ಕಿಂಗ್ ಗೆ ತೆರಳಿದ್ದ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನರಾದರು. ಶಿಕ್ಷಣ ಸಾಲಕ್ಕೆ ವಿಮೆ ಹೊಂದಿದ್ದ ಕಾರಣದಿಂದ ಕುಟುಂಬಕ್ಕೆ ಆರ್ಥಿಕ ಸಹಾಯ ದೊರಕುವಂತಾಯಿತು. ಕೆನರಾ ಹೆಚ್‌ಎಸ್‌ಬಿಸಿ ಸಂಸ್ಥೆಯು ತಕ್ಷಣ ಪ್ರತಿಕ್ರಿಯಿಸಿ ರೂ.10,58,500 ಮೊತ್ತವನ್ನು ವಿಮಾ ಪರಿಹಾರವಾಗಿ ಮಂಜೂರು ಮಾಡಿದೆ. ಈ ಮೊತ್ತದ ಚೆಕ್ ನ್ನು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಬಳ್ಳಾರಿಯ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್ ಎ.ಜಿ., ಕೆನರಾ ಬ್ಯಾಂಕ್ ಆರ್‌ಎಹೆಚ್ ಬಳ್ಳಾರಿ ಮುಖ್ಯಸ್ಥ ಕಿಶೋರ್ ಕುಮಾರ್ ಅವರ ಸಮ್ಮುಖದಲ್ಲಿ ಕುಟುಂಬದವರಿಗೆ ಹಸ್ತಾಂತರಿಸಿದರು. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಬ್ಯಾಂಕ್ ನ ಧ್ಯೇಯವಾಗಿದ್ದು, ಶಿಕ್ಷಣ ಸಾಲ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದ ಭದ್ರತೆ ಕಲ್ಪಿಸುವ ಉದ್ದೇಶದಿಂದ ವಿಮಾ ಯೋಜನೆಗಳನ್ನು ಅನುಸರಿಸುತ್ತಿದ್ದೇವೆ. ಇಂತಹ ಅಕಾಲಿಕ ದುರಂತ ಸಂದರ್ಭಗಳಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವುದು ಬ್ಯಾಂಕ್ ಹಾಗೂ ವಿಮಾ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಕೆನರಾ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್ ಎ.ಜಿ ಅವರು ಹೇಳಿದರು. ಇದೇ ವೇಳೆ ಕುಟುಂಬದವರು ಕೃತಜ್ಞತೆ ಸಲ್ಲಿಸಿದರು. ಕೆನರಾ ಬ್ಯಾಂಕ್ ಅಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು ಇದ್ದರು. ----------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ