ಶುಕ್ರವಾರ, ಮೇ 8, 2026

ಬರಡಾಗಿದ್ದ ಭೂಮಿಯಲ್ಲಿ ಕೃಷಿ ಕ್ರಾಂತಿ: ಮೋಕಾ ಹೋಬಳಿಯ ರೈತ ಭೋಗಾ ರೆಡ್ಡಿಗೆ ‘ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ' ಪ್ರಶಸ್ತಿ

ಬಳ್ಳಾರಿ,ಮೇ 08(ಕರ್ನಾಟಕ ವಾರ್ತೆ): “ಛಲವಿದ್ದರೆ ಬರಡು ಭೂಮಿಯನ್ನೂ ಬಂಗಾರ ಮಾಡಬಹುದು” ಎಂಬುದನ್ನು ಬಳ್ಳಾರಿ ತಾಲ್ಲೂಕಿನ ಮೋಕಾ ಹೋಬಳಿಯ ಕೆ.ವೀರಾಪುರ ಗ್ರಾಮದ ಪ್ರಗತಿಪರ ರೈತ ಭೋಗಾ ರೆಡ್ಡಿ ಅವರು ಸಾಬೀತುಪಡಿಸಿದ್ದಾರೆ. ಮಳೆ ಕೊರತೆಯಿಂದ ಕೃಷಿಯೇ ಅಸಾಧ್ಯವೆನ್ನಲಾಗುವ ಈ ಭಾಗದಲ್ಲಿ, ತಮ್ಮ 3.5 ಎಕರೆ ಒಣಭೂಮಿಯಲ್ಲಿ ಅವರು ಕಂಡುಕೊAಡ ಕೃಷಿ ಲಾಭ ಇಂದು ಜಿಲ್ಲೆಯಾದ್ಯಂತ ಗಮನ ಸೆಳೆದಿದೆ. ಅಪ್ಪಟ ಪರಿಶ್ರಮ ಮತ್ತು ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಕೃಷಿ ಕೈಗೊಂಡಿರುವ ಭೋಗಾ ರೆಡ್ಡಿ ಅವರಿಗೆ, ಕೃಷಿ ಇಲಾಖೆಯ ವತಿಯಿಂದ ‘ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. *ಬಹುಬೆಳೆ ಪದ್ಧತಿಯೇ ಯಶಸ್ಸಿನ ಸೂತ್ರ:* ಕೇವಲ ಒಂದು ಬೆಳೆಗೆ ಸೀಮಿತವಾಗದೆ, ಅರಣ್ಯ ಕೃಷಿ ಹಾಗೂ ತೋಟಗಾರಿಕೆಯನ್ನು ಮೇಳೈಸುವ ಮೂಲಕ ಇವರು ಅಚ್ಚರಿ ಮೂಡಿಸಿದ್ದಾರೆ. ಇವರ ಜಮೀನಿನಲ್ಲಿ ಪ್ರಸ್ತುತ 650 ಮಹಾಗನಿ, 140 ಸಾಗುವಾಣಿ (ಟೀಕ್), 100 ಹೆಬ್ಬೇವು ಹಾಗೂ 18 ಶ್ರೀಗಂಧದ ಗಿಡಗಳಿವೆ. ತೋಟಗಾರಿಕೆ ಬೆಳೆಗಳಾಗಿ 150 ಸಪೋಟಾ, 50 ನಿಂಬೆ, 20 ತೆಂಗು, 4 ಮಾವು ಹಾಗೂ 20 ಕರಿಬೇವು ಗಿಡಗಳನ್ನು ಯಶಸ್ವಿಯಾಗಿ ಬೆಳೆಸುತ್ತಿದ್ದಾರೆ. ಇದರೊಂದಿಗೆ ವಾರ್ಷಿಕ ಬೆಳೆಗಳು ಹಾಗೂ ಹೈನುಗಾರಿಕೆಯನ್ನೂ (ಡೈರಿ) ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. *ಆಧುನಿಕತೆ ಮತ್ತು ಸಂಪ್ರದಾಯದ ಸಂಗಮ:* ನೀರಿನ ಕೊರತೆಯನ್ನು ನೀಗಿಸಲು ಜಮೀನಿನಲ್ಲಿ ಎರಡು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದು, ಸಮರ್ಪಕ ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ. ವಿದ್ಯುತ್ ಉಳಿತಾಯ ಹಾಗೂ ಪರಿಸರ ಸ್ನೇಹಿ ಕೃಷಿಗಾಗಿ ಸೌರ ಪಂಪ್‌ಸೆಟ್ ಬಳಸುತ್ತಿರುವುದು ವಿಶೇಷ. ಮಣ್ಣಿನ ಆರೋಗ್ಯ ಕಾಪಾಡಲು ಇವರು ಯಾವುದೇ ರಾಸಾಯನಿಕ ಗೊಬ್ಬರದ ಮೊರೆ ಹೋಗದೆ, ಹೊಲದಲ್ಲಿ ಬಿದ್ದ ಎಲೆಗಳಿಂದಲೇ ಸ್ವಯಂ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಗಿಡಗಳಿಗೆ ಬಳಸುತ್ತಿದ್ದಾರೆ. ಪ್ರಾಚೀನ ಪದ್ಧತಿ ಹಾಗೂ ಸರ್ಕಾರದ ಇಲಾಖೆಗಳ ತಜ್ಞರ ಸಲಹೆಯನ್ನು ಸರಿಯಾದ ಸಮಯದಲ್ಲಿ ಅಳವಡಿಸಿಕೊಂಡಿರುವುದೇ ಇವರ ಈ ಸಾಧನೆಯ ಗುಟ್ಟು. *ರೈತರಿಗೆ ಮಾದರಿ:* ತಂದೆಯ ಈ ಸಾಹಸಕ್ಕೆ ಪುತ್ರ ರಾಜಶೇಖರ ರೆಡ್ಡಿ ಬೆನ್ನೆಲುಬಾಗಿ ನಿಂತಿದ್ದಾರೆ. ಕೃಷಿ ಇಲಾಖೆಯ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಬೆಳೆದ ಇವರ ತೋಟ, ಇಂದು ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಒಂದು 'ಕೃಷಿ ಪಾಠಶಾಲೆ'ಯಂತಿದೆ. ಕೃಷಿ ಅಸಾಧ್ಯವೆಂದು ನಗರ ಪ್ರದೇಶಗಳತ್ತ ಮುಖ ಮಾಡುವ ಯುವಕರಿಗೆ, ಭೋಗಾ ರೆಡ್ಡಿ ಅವರ ಈ ಸಾಧನೆ ಒಂದು ಸ್ಫೂರ್ತಿಯ ಸೆಲೆಯಾಗಿದೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ