ಶುಕ್ರವಾರ, ಜೂನ್ 5, 2026

ಬಳ್ಳಾರಿ: ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ | ಪ್ರಕೃತಿ ಸಂರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಜವಾಬ್ದಾರಿ

ಬಳ್ಳಾರಿ,ಜೂ.05(ಕರ್ನಾಟಕ ವಾರ್ತೆ): ನಗರದ ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ‘ವನಮಹೋತ್ಸವ’ ಕಾರ್ಯಕ್ರಮವನ್ನು ಅತ್ಯಂತ ಸಡಗರ-ಸಂಭ್ರಮದಿAದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಸನ್ನ.ಜಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಪ್ರಕೃತಿಯಲ್ಲಿನ ಮರ-ಗಿಡಗಳನ್ನು ಹಾಗೂ ನದಿ-ಜಲಗಳನ್ನು ಸಂರಕ್ಷಿಸುವ ಮತ್ತು ಪೋಷಿಸುವ ಜವಾಬ್ದಾರಿಯನ್ನು ಹೊರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ‘ಮನೆಗೊಂದು ಮರ, ಊರಿಗೊಂದು ವನ’ ಎಂಬ ಜನಪ್ರಿಯ ಘೋಷವಾಕ್ಯ ಸ್ಮರಿಸುತ್ತಾ, ಪರಿಸರ ಸಂರಕ್ಷಣೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ವನಮಹೋತ್ಸವ ಅಂಗವಾಗಿ ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಉಪಯುಕ್ತ ಸಸಿಗಳನ್ನು ನೆಡಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪರಿಸರವನ್ನು ಉಳಿಸುವ ಮತ್ತು ಮರ-ಗಿಡಗಳನ್ನು ಸದಾ ಬೆಳೆಸಿ, ಪೋಷಿಸುವ ಜಾಗೃತಿಯ ‘ಹಸಿರು ಸಂಕಲ್ಪ' ತೊಟ್ಟರು. ಇದೇ ಶುಭ ಸಂದರ್ಭದಲ್ಲಿ ಮಕ್ಕಳ ದೈಹಿಕ ವಿಕಾಸಕ್ಕಾಗಿ ಶಾಲಾ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಸುಸಜ್ಜಿತ ಆಟದ ಮೈದಾನವನ್ನು ಕಾರ್ಯದರ್ಶಿ ಪ್ರಸನ್ನ ಜಿ. ಅವರು ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ