ಶುಕ್ರವಾರ, ಡಿಸೆಂಬರ್ 19, 2025
ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಡಾ.ಹನುಮಂತಪ್ಪ ಸಲಹೆ | ರೈತರಿಗೆ ಬಹುಬೆಳೆ ಪದ್ಧತಿಯ ಮಾಹಿತಿ ತಲುಪಿಸಿ
ಬಳ್ಳಾರಿ,ಡಿ.19(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ರೈತರ ಆದಾಯ ಹೆಚ್ಚಿಸಲು ವಿಜ್ಞಾನಿಗಳು ಬಹುಬೆಳೆ ಪದ್ಧತಿಯ ತರಬೇತಿ ಕಾರ್ಯಕ್ರಮ ಆಯೋಜಿಸಿ, ರೈತರಿಗೆ ಮಾಹಿತಿ ನೀಡಬೇಕು ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಹನುಮಂತಪ್ಪ ಅವರು ಹೇಳಿದರು.
ಬಳ್ಳಾರಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ 25ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನಿಗಳು ಸ್ಥಳೀಯವಾಗಿ ಅಗತ್ಯವಿರುವ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅದರ ಆಧಾರದ ಮೇಲೆ ಮುಂದಿನ ವರ್ಷದ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಈ ಉನ್ನತ ಮಟ್ಟದ ಸಭೆಯು ಜಿಲ್ಲೆಯ ಕಳೆದ ವರ್ಷದ ಕೃಷಿ ಪ್ರಗತಿಯನ್ನು ಪರಾಮರ್ಶಿಸಲು ಮತ್ತು ಮುಂಬರುವ ಬೆಳೆ ಹಂಗಾಮುಗಳ ಕ್ರಿಯಾಯೋಜನೆಯನ್ನು ಅಂತಿಮಗೊಳಿಸಲು ಒಂದು ಕಾರ್ಯತಂತ್ರದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎ.ಆರ್ ಕುರುಬರ್ ಅವರು ಮಾತನಾಡಿ, ಪ್ರಯೋಗಾಲಯದ ಸಂಶೋಧನೆಗಳನ್ನು ಹೊಲಗದ್ದೆಗಳಿಗೆ ತಲುಪಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಒತ್ತಿ ಹೇಳಿದರು.
ಬಳ್ಳಾರಿ ಭಾಗದ ರೈತರ ಆದಾಯ ಹೆಚ್ಚಿಸಲು ವಿಜ್ಞಾನಿಗಳು ರೈತರ ಹೊಲದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 1.13 ಲಕ್ಷ ಹೆಕ್ಟೇರ್ ಪ್ರದೇಶವು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡುತ್ತದೆ. ಇಲ್ಲಿನ ರೈತರು ನಿಯಮಿತವಾಗಿ ಕೇವಲ ಭತ್ತವನ್ನು ಮಾತ್ರ ಬೆಳೆಯುತ್ತಿದ್ದಾರೆ. ಪ್ರಸ್ತುತದಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಈ ಗಂಭೀರ ಪರಿಸ್ಥಿತಿಯಲ್ಲಿ, ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಬೇಕು. ರಾಸಾಯನಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳನ್ನು ಉತ್ತೇಜಿಸುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಪಾಲಯ್ಯ ಪಿ. ಅವರು, ಪ್ರಸ್ತುತ ವರ್ಷದಲ್ಲಿ ಕೈಗೊಂಡ ಕಾರ್ಯಕ್ರಮಗಳÀ ವರದಿ ಮತ್ತು 2024-25ರ ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆಗಳನ್ನು ಮಂಡಿಸಿದರು.
ಗೃಹ ವಿಜ್ಞಾನಿ ಡಾ.ರಾಜೇಶ್ವರಿ ಅವರು ಗಣ್ಯರನ್ನು ಸ್ವಾಗತಿಸಿದರು. ಮಣ್ಣು ವಿಜ್ಞಾನಿ ಡಾ.ರವಿ ಎಸ್. ಅವರು ವಂದಿಸಿದರು.
ಸಭೆಯಲ್ಲಿ ಹಗರಿ ಕೃಷಿ ಕಾಲೇಜಿನ ಪ್ರಭಾರ ಅಧಿಕಾರಿ ಡಾ.ರವಿ ಶಂಕರ್, ಪಶು ವೈದ್ಯಕೀಯ ಪ್ರಾಧ್ಯಾಪಕ ಡಾ.ರಮೇಶ್, ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಸಹ ಸಂಶೋಧಕ ಡಾ.ಜಯಪ್ರಕಾಶ್ ನಿಡುಗುಂದಿ, ನಬಾರ್ಡ್ ಅಧಿಕಾರಿ ಯುವರಾಜ್ ಸೇರಿದಂತೆ ತೋಟಗಾರಿಕೆ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಳ ಅಧಿಕಾರಿಗಳು, ಸಭೆಯ ಸದಸ್ಯರು ಹಾಗೂ ಪ್ರಗತಿಪರ ರೈತರಾದ ಸಮುದ್ರರಾಜ್, ರವಿಕುಮಾರ್ ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು, ರೈತರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ