ಶನಿವಾರ, ಜನವರಿ 31, 2026

ಸಾಮಾಜಿಕ ಜಾಲತಾಣಗಳಿಂದ ಮಕ್ಕಳಿಗೆ ಆಪತ್ತು: ಶಶಿಧರ್ ಕೋಸಂಬೆ

ಬಳ್ಳಾರಿ,ಜ.31(ಕರ್ನಾಟಕ ವಾರ್ತೆ): ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ವ್ಯಸನದಿಂದ ಮಕ್ಕಳ ಭವಿಷ್ಯಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿವೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಹೇಳಿದರು. ಶನಿವಾರ ನಗರದ ಜಿಲ್ಲಾ ಪಂಚಾಯಿತಿಯ ಹಳೆಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳು, ಪೋಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಆಯ್ದ 5 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ.42ರಷ್ಟು ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಮಕ್ಕಳು ದಿನಕ್ಕೆ 6ರಿಂದ 7 ಗಂಟೆಗಳ ಕಾಲ ಮೊಬೈಲ್‌ನಲ್ಲಿ ಕಳೆಯುತ್ತಿರುವುದು ಅವರ ಮೆದುಳಿನ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಪೋಷಕರು ಮಕ್ಕಳೊಂದಿಗೆ ಆಪ್ತವಾಗಿ ಕಾಲ ಕಳೆಯುವ ಮೂಲಕ ಅವರನ್ನು ಈ ವ್ಯಸನದಿಂದ ದೂರವಿಡಬಹುದು ಎಂದು ಕಿವಿಮಾತು ಹೇಳಿದರು. 1989ರ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ಸಹಿ ಹಾಕಿ ಮೂರು ದಶಕಗಳೇ ಕಳೆದರೂ, ಮಕ್ಕಳ ಸುರಕ್ಷತೆ ಇಂದಿಗೂ ಸವಾಲಾಗಿದೆ. ದೇಶದ ಶೇ.41ರಷ್ಟು ಹಾಗೂ ರಾಜ್ಯದ ಸುಮಾರು 2.5 ಕೋಟಿ ಮಕ್ಕಳ ರಕ್ಷಣೆಯ ಬಗ್ಗೆ ನಮ್ಮೆದುರು ಪ್ರಶ್ನೆಗಳಿವೆ. ಇತ್ತೀಚೆಗೆ ಶಾಲೆಗಳಲ್ಲಿ ಸಂಭವಿಸುತ್ತಿರುವ ವಿದ್ಯುತ್ ಸ್ಪರ್ಶದಂತಹ ದುರಂತಗಳು ಮತ್ತು ವಾಹನ ಅಪಘಾತಗಳು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿವೆ. ಮಗು 18 ವರ್ಷ ತುಂಬುವವರೆಗೆ ಘನತೆಯಿಂದ ಬದುಕುವ ವಾತಾವರಣ ನಿರ್ಮಿಸುವುದು ಎಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸುಭದ್ರಾದೇವಿ, ಡಿಡಿಪಿಐ ಬಿ.ಉಮಾದೇವಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ಸದಸ್ಯೆ ಗೌಸಿಯಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. ------------

ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ | ಪೋಕ್ಸೋ ಪ್ರಕರಣ ದಾಖಲು ಕಡ್ಡಾಯ: ಶಶಿಧರ್ ಕೋಸಂಬೆ

ಬಳ್ಳಾರಿ,ಜ.31(ಕರ್ನಾಟಕ ವಾರ್ತೆ): ಪೋಕ್ಸೋ ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವುದು ಕಡ್ಡಾಯವಾಗಿದ್ದು, ವಿಳಂಬ ತೋರಿದಲ್ಲಿ ಸಂಬAಧಿಸಿದವರ ಮೇಲೆ ಕ್ರಮ ಜರುಗಿಸಲು ಕಾನೂನಿನಡಿ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೊಸಂಬೆ ಅವರು ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ನ ಹಳೆಯ ನಜೀರ್ ಸಾಬ್ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ತಿಳಿದಿರುವ ಯಾರೇ ವ್ಯಕ್ತಿ, ಪೋಷಕರು ಅಥವಾ ಶಾಲಾ ಸಿಬ್ಬಂದಿ ಕೂಡಲೇ ಪೊಲೀಸ್ ಠಾಣೆ ಅಥವಾ ಮಕ್ಕಳ ರಕ್ಷಣಾ ಘಟಕಕ್ಕೆ ವರದಿ ಮಾಡುವುದು ಕಡ್ಡಾಯವಾಗಿದೆ ಎಂದರು. *ಮಕ್ಕಳ ರಕ್ಷಣಾ ನೀತಿ 2016 ಕಾಯ್ದೆ ಅನುಷ್ಠಾನಗೊಳಿಸಿ:* ಜಿಲ್ಲೆಯ ಎಲ್ಲಾ ಶಾಲೆಗಳು, ವಸತಿ ನಿಲಯಗಳ ಮಕ್ಕಳಿಗೆ ಯಾವುದೇ ರೀತಿಯ ಹಿಂಸೆ, ದೌರ್ಜನ್ಯ, ಶೋಷಣೆಯಿಂದ ರಕ್ಷಣೆ ಒದಗಿಸುವ ಮೂಲಕ ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಪ್ರತಿಯೊಂದು ಶಾಲೆ ಮತ್ತು ವಸತಿ ನಿಲಯಗಳಲ್ಲಿ ಮಕ್ಕಳ ಹಕ್ಕುಗಳ ಸುರಕ್ಷಾ ಸಮಿತಿ ರಚಿಸಬೇಕು. ದೂರು ಪೆಟ್ಟಿಗೆಗಳನ್ನು ಅಳವಡಿಸಬೇಕು. ಅವುಗಳನ್ನು ನಿಯಮಿತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೊಳಗಾದ ಮಕ್ಕಳ ವೈಯಕ್ತಿಕ ಮಾಹಿತಿ ಮತ್ತು ಅವರ ಕುರಿತಾದ ದೂರುಗಳನ್ನು ಗೌಪ್ಯವಾಗಿ ಇಡಬೇಕು. ಮಕ್ಕಳ ಕಳ್ಳಸಾಗಣೆ, ಬಾಲಕಾರ್ಮಿಕ ಪದ್ಧತಿ, ಬಾಲ ವಿವಾಹದ ವಿರುದ್ಧ ಜಾಗೃತಿ ಮೂಡಿಸುವುದು. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ 2012 ರಡಿ ಕ್ರಮ ಅನುಷ್ಠಾನಗೊಳಿಸುವುದು ಒಳಗೊಂಡ ಮಕ್ಕಳ ರಕ್ಷಣಾ ನೀತಿ 2016 ಕಾಯ್ದೆಯನ್ನು ತಪ್ಪದೇ ಅನುಷ್ಠಾನಗೊಳಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಹಲವೆಡೆ ಮಕ್ಕಳು ಕಾಣೆಯಾದ ಪ್ರಕರಣಗಳು ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಇತ್ಯರ್ಥಪಡಿಸಲು ಕ್ರಮವಹಿಸಬೇಕು. ಕಾಣೆಯಾದ, ಪತ್ತೆಯಾಗದ ಮಕ್ಕಳ ಪಟ್ಟಿ ಸಿದ್ಧಪಡಿಸಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ವರದಿ ನೀಡಬೇಕು ಎಂದರು. *ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನು ಪರಿಣಾಮಕಾರಿ ಅನುಷ್ಠಾನಗೊಳಿಸಿ:* ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಎಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಕಾನೂನಿನ ಮಾದರಿ ಹಾಗೂ ಶಾಸನ ಬದ್ಧ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಲಿಂಗಾನುಪಾತದ ಅಸಮತೋಲನವು ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಇದರ ಮೂಲ ಕಾರಣಗಳಲ್ಲಿ ಪ್ರಮುಖವಾದದ್ದು ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಆಗಿದೆ. ಈ ಸಾಮಾಜಿಕ ಪಿಡುಗನ್ನು ತಡೆಯುವ ಉದ್ದೇಶದಿಂದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ, ತಂತ್ರ ವಿಧಾನಗಳ ನಿಷೇದ ಕಾಯ್ದೆ ಜಾರಿಗೆ ತಂದಿದ್ದು, 2003ರಲ್ಲಿ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲಾಗಿದೆ. ಹಾಗೂ ಭ್ರೂಣಲಿಂಗ ಪತ್ತೆಯನ್ನು ಸಂಪೂರ್ಣವಾಗಿ ನಿಷೇಧಿಸುವುದರ ಜೊತೆಗೆ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು, ಲಿಂಗಾನುಪಾತವನ್ನು ಸಮತೋಲನದಲ್ಲಿರಿಸುವುದು ಹಾಗೂ ಮಹಿಳೆಯರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸುವುದೇ ಈ ಕಾಯ್ದೆಯ ಉದ್ದೇಶವಾಗಿದೆ ಎಂದರು. ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿಯನ್ನು ಬೇರು ಸಮೇತ ಕಿತ್ತು ಹಾಕಲು ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ತಿಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. -------------

ಬಳ್ಳಾರಿ: 37ನೇ ರಾಷ್ಟಿçÃಯ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮರೋಪ | ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವವರೇ ನಿಜವಾದ ಹೀರೋ: ನ್ಯಾಯಾಧೀಶೆ ಕೆ.ಜಿ ಶಾಂತಿ

ಬಳ್ಳಾರಿ,ಜ.31(ಕರ್ನಾಟಕ ವಾರ್ತೆ): ರಸ್ತೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಾಹನ ಚಾಲನೆ ಮಾಡುವವರೇ ನಿಜವಾದ ಹೀರೋಗಳಾಗುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಜಿ ಶಾಂತಿ ಅವರು ಹೇಳಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 37 ನೇ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಿನನಿತ್ಯ ಬಳಸುವ ರಸ್ತೆಯಲ್ಲಿ ಪ್ರತಿಯೊಬ್ಬರ ಜೀವನ ಅಡಗಿದ್ದು, ಜಾಗರೂಕರಾಗಿ ವಾಹನ ಚಲಾಯಿಸಬೇಕು. ರಸ್ತೆ ನಿಯಮ ಉಲ್ಲಂಘಿಸಿ, ಸಿಗ್ನಲ್ ಜಂಪ್ ಮಾಡಿ ಪೊಲೀಸರ ಕಣ್ಣು ತಪ್ಪಿಸಿ ಚಲಾಯಿಸುವುದು ಸಾಹಸವಲ್ಲ; ಬದಲಾಗಿ ನಿಯಮ ಪಾಲಿಸಿ ವಾಹನ ಚಲಾಯಿಸಿದರೆ ಮಾತ್ರ ಸುರಕ್ಷಿತರಾಗಿ ಮನೆಗೆ ಸೇರಬಹುದು ಎಂದರು. 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡಿದಲ್ಲಿ ಮಕ್ಕಳ ಪೋಷಕರ ವಿರುದ್ಧ ಪ್ರಕರಣ ಮತ್ತು 25,000 ಸಾವಿರ ದಂಡವಿದೆ. ಚಾಲನಾ ಪರವಾನಿಗೆ ಇಲ್ಲದೇ ವಾಹನ ಚಲಾಯಿಸುವಂತಿಲ್ಲ. ಈ ಕುರಿತು ಪ್ರತಿಯೊಬ್ಬರೂ ಎಚ್ಚರವಹಿಸಬೇಕು. 5 ಬಾರಿಗಿಂತ ಪ್ರಕರಣ ದಾಖಲಾದಲ್ಲಿ ಅಂತಹವರ ಚಾಲನಾ ಪರವಾನಿಗೆ ಶ್ವಾಶತವಾಗಿ ರದ್ದುಪಡಿಸುವ ಕಾನೂನಿದೆ ಎಂದು ತಿಳಿಸಿದರು. ರಸ್ತೆ ಅಪಘಾತಗಳು ಅಪಾಯಕಾರಿಯಾಗಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಲು ಜನವರಿ ಮಾಸಾದ್ಯಂತ ಜಿಲ್ಲೆಯಲ್ಲಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದೆಯೂ ನಿರಂತರವಾಗಿ ಪಾಲಿಸಿದಲ್ಲಿ ಮಾತ್ರ ಈ ಮಾಸಾಚರಣೆಯು ಅರ್ಥಪೂರ್ಣವಾಗಲಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಸುರಕ್ಷತೆಯು ಮೊದಲ ಆದ್ಯತೆಯಾಗಬೇಕು. ಅದು ರಸ್ತೆ ಸುರಕ್ಷತೆಯಾಗಿರಬೇಕು. ಬದಲಾವಣೆ ನಮ್ಮಿಂದ ಮಾತ್ರ ಸಾಧ್ಯವಾಗಿದ್ದು, ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದರು. ಆಡುಭಾಷೆಯAತೆ ‘ಅತಿ ವೇಗ-ತಿಥಿ ಬೇಗ’ ಎನ್ನುವ ಹಾಗೆ ಅತಿವೇಗದ ಚಾಲನೆ ನಮ್ಮ ಪ್ರಾಣಕ್ಕೆ ಕುತ್ತು ತರಲಿದ್ದು, ಇದನ್ನು ಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ನಿಧಾನವಾಗಿ ಚಾಲನೆ ಮಾಡಬೇಕು. ಜೀವ ಮತ್ತು ಜೀವನ ಅಮೂಲ್ಯವಾಗಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಶಿಸ್ತು ಅಳವಡಿಸಿಕೊಂಡು ವಾಹನ ಚಲಾಯಿಸೋಣ ಎಂದು ತಿಳಿಸಿದರು. ರಸ್ತೆ ಅಪಘಾತ ಸಂದರ್ಭದಲ್ಲಿ ತಪ್ಪದೇ ಸಹಾಯ ಹಸ್ತ ನೀಡಬೇಕು. ಅಂತಹವರನ್ನು ಪ್ರಥಮವಾಗಿ ಆಸ್ಪತ್ರೆಗೆ ಸೇರಿಸಬೇಕು. ಆ ಸಂದರ್ಭದಲ್ಲಿ ಯಾವುದೇ ತಮ್ಮ ಮಾಹಿತಿಯನ್ನು ನೀಡುವುದು ಅಗತ್ಯವಿಲ್ಲ. ಆಸ್ಪತ್ರೆ ಮತ್ತು ಪೊಲೀಸ್ ಸಿಬ್ಬಂದಿ ಮಾಹಿತಿ ಪಡೆಯುವಂತಿಲ್ಲ. ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಈ ಕಾನೂನುನನ್ನು ಜಾರಿಗೊಳಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಜ್ಮಾ. ಡಿ.ಪೆನ್ನೇಕರ್ ಅವರು ಮಾತನಾಡಿ, ರಸ್ತೆ ಪಾದಾಚಾರಿಗಳು ಸಹ ಜಾಗ್ರತೆಯಿಂದ ರಸ್ತೆ ಸಂಚಾರ ನಿಮಯಗಳನ್ನು ಪಾಲಿಸಬೇಕಿದೆ. ಅವಘಡ ಯಾವ ರೀತಿಯಲ್ಲಾದರೂ ಸಂಭವಿಸಬಹುದಾಗಿದೆ. ರಸ್ತೆ ನಿಮಯ, ಸಂಚಾರಿ ಚಿಹ್ನೆಗಳನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ. ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಬೆಲ್ಟ್ ಕಟ್ಟಿಕೊಳ್ಳಬೇಕು. ಚಾಲನೆ ವೇಳೆ ಮೊಬೈಲ್ ಫೋನ್ ಬಳಸಬಾರದು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಮುಖ್ಯ ರಸ್ತೆ ಸಂಚಾರ ನಿಯಮಗಳನ್ನು ಕೈ ಸನ್ನೆಯ ಮೂಲಕ ಸಾರ್ವಜನಿಕರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಕುರಿತಾದ ಭಿತ್ತಿಪತ್ರ ಅನಾವರಣಗೊಳಿಸಿದರು. ರಸ್ತೆ ಸುರಕ್ಷತೆ ಜಾಗೃತಿಯ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ, ಪ್ರಭಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ನಿಜಾಮುದ್ದೀನ್ ಶರೀಫ್, ಬಳ್ಳಾರಿ ತಾಲ್ಲೂಕು ತಹಶೀಲ್ದಾರರಾದ ಟಿ.ರೇಖಾ ಸೇರಿದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಅಧಿಕಾರಿಗಳು, ಸಂಚಾರಿ ಪೊಲೀಸ್ ಅಧಿಕಾರಿಗಳು ಹಾಗೂ ಆಟೋ, ಲಾರಿ ಸಂಘದ ಪದಾಧಿಕಾರಿಗಳು, ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು. --------------

ಯಶಸ್ವಿನಿ ಯೋಜನೆಯಡಿ ಸಹಕಾರಿಗಳಿಂದ ನೋಂದಣಿಗೆ ಆಹ್ವಾನ

ಬಳ್ಳಾರಿ,ಜ.31(ಕರ್ನಾಟಕ ವಾರ್ತೆ): 2025-26 ನೇ ಸಾಲಿಗೆ ಯಶಸ್ವಿನಿ ರಕ್ಷಣಾ ಯೋಜನೆಯನ್ನು ಸಹಕಾರಿಗಳಿಗಾಗಿ ಮರು ಜಾರಿಗೊಳಿಸಿದ್ದು, ಈ ಯೋಜನೆಯಡಿ ಹೊಸ ಸದಸ್ಯರು ನೋಂದಾಯಿಸಿಕೊಳ್ಳಬಹುದು ಎಂದು ಸಹಕಾರ ಸಂಘಗಳ ಉಪ ನಿಂಬAಧಕರು ತಿಳಿಸಿದ್ದಾರೆ. ನೋಂದಣಿಗೆ ಮಾ.31 ಕೊನೆ ದಿನವಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಜಾರಿಯಲ್ಲಿರುತ್ತದೆ. ಹಾಗಾಗಿ ಯಶಸ್ವಿನಿ ಯೊಜನೆಯ ಸೌಲಭ್ಯವನ್ನು ಜಿಲ್ಲೆಯ ಎಲ್ಲಾ ಸಹಕಾರಿಗಳು ಸದುಪಯೋಗ ಪಡೆದುಕೊಳ್ಳಬೇಕು. *ತಾಲ್ಲೂಕುವಾರು ಸಹಕಾರ ಅಭಿವೃದ್ಧಿ ಅಧಿಕಾರಿ:* ಮಾಹಿತಿಗಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಬಳ್ಳಾರಿ: 7353457313, ಸಹಕಾರ ಅಭಿವೃದ್ದಿ ಅಧಿಕಾರಿ ಸಿರುಗುಪ್ಪ: 9449984818, ಸಹಕಾರ ಅಭಿವೃದ್ಧಿ ಅಧಿಕಾರಿ ಸಂಡೂರು: 9483633225, ಸಹಕಾರ ಅಭಿವೃದ್ಧಿ ಅಧಿಕಾರಿ ಕುರುಗೋಡು: 8073013396, ಸಹಕಾರ ಅಭಿವೃದ್ಧಿ ಅಧಿಕಾರಿ ಕಂಪ್ಲಿ: 9110412232. ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯ, ಜನತಾ ಬಜಾರ್ ಕಟ್ಟಡ, ರೈಲ್ವೇ ಸ್ಟೇಷನ್ ರಸ್ತೆ, ಬಳ್ಳಾರಿ ಅಥವಾ ದೂ.08392-272635 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬಳ್ಳಾರಿ,ಜ.31(ಕರ್ನಾಟಕ ವಾರ್ತೆ): ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2025-26ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಶುಲ್ಕ ಮರುಪಾವತಿ” ಕಾರ್ಯಕ್ರಮದ ಸೌಲಭ್ಯಕ್ಕಾಗಿ ಈಗಾಗಲೇ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಫೆ.15 ರವರೆಗೆ ಪೋಷಕರು, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮನವಿಯ ಮೇರೆಗೆ ವಿಸ್ತರಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಬಳ್ಳಾರಿ: ರಾಜ್ಯದಲ್ಲಿಯೇ ಮೊದಲ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆ | ಗ್ರಾಹಕರ ವ್ಯಾಜ್ಯಗಳ ಇತ್ಯರ್ಥದಲ್ಲಿ ಕರ್ನಾಟಕ 2ನೇ ಸ್ಥಾನ: ಟಿ.ಜಿ.ಶಿವಶಂಕರೇಗೌಡ

ಬಳ್ಳಾರಿ,ಜ.31(ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿಯಾದ ಪ್ರಕರಣಗಳ ಇತ್ಯರ್ಥದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಟಿ.ಜಿ ಶಿವಶಂಕರೇಗೌಡ ಅವರು ಹೇಳಿದರು. ಶನಿವಾರದಂದು ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ರೈಲ್ವೇ ನಿಲ್ದಾಣ ಎದುರುಗಡೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಹಕರ ಕುಂದುಕೊರತೆಗಳನ್ನು ನಿಗದಿತ ಅವಧಿಯೊಳಗೆ ಮತ್ತು ಸಾರಾಂಶ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಉಚಿತವಾಗಿ ಪರಿಹಾರ ಒದಗಿಸುವುದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ಮುಖ್ಯ ಉದ್ದೇಶ ಮತ್ತು ಕರ್ತವ್ಯವಾಗಿದೆ ಎಂದು ತಿಳಿಸಿದರು. ಭಾರತ ದೇಶವು ಜಾಗತೀಕರಣ ಹೊಂದುತ್ತಿದೆ. ಅಭಿವೃದ್ಧಿಯತ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿಯಾಗದಂತೆ ಅವರ ಹಿತಾಸಕ್ತಿ ಕಾಪಾಡಲು ದೇಶದಲ್ಲಿ ರಾಷ್ಟಿçÃಯ ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಜಾರಿಗೆ ತರಲಾಯಿತು. ಸಾರ್ವಜನಿಕರು ಗ್ರಾಹಕ ಕಾಯ್ದೆ, ಹಕ್ಕುಗಳ ಕುರಿತು ಜಾಗೃತಿ ಹೊಂದಬೇಕು ಎಂದರು. ರಾಜ್ಯದಲ್ಲಿ 34 ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಿದ್ದು, ಗ್ರಾಹಕರ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕಾಗಿ ಹಂತ-ಹAತವಾಗಿ ಎಲ್ಲಾ ಜಿಲ್ಲೆಗಳಲ್ಲೂ ಮಧ್ಯಸ್ಥಿಕೆ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಸಮಾಜದಲ್ಲಿ ಡಿಜಿಟಲ್ ಖರೀದಿ ಹೆಚ್ಚಾಗಿದ್ದು, ಆನ್‌ಲೈನ್ ಮೂಲಕ ಅತಿ ಹೆಚ್ಚು ವಂಚನೆಗಳು ಆಗುತ್ತಿವೆ. ಈ ಕುರಿತು ಎಚ್ಚರಿಕೆಯಿಂದ ವ್ಯವಹರಿಸಬೇಕು. ಪ್ರಸ್ತುತದಲ್ಲಿ ಗ್ರಾಹಕರಿಗಿರುವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದ ಅಧ್ಯಕ್ಷರು, ಗ್ರಾಹಕರ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ತರಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ. ಶಾಂತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರ ಆರಂಭಗೊAಡಿರುವುದು ಸಂತಸದ ವಿಷಯವಾಗಿದ್ದು, ನಮ್ಮ ಕಲ್ಯಾಣ ಕರ್ನಾಟಕ ಭಾಗವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸಿದರು. ಜಿಲ್ಲಾ ನ್ಯಾಯಾಲಯದಲ್ಲಿ ನುರಿತ ಮಧ್ಯಸ್ಥಿಕೆದಾರರು ಇದ್ದು, ಮಧ್ಯಸ್ಥಿಕೆ ಕೇಂದ್ರಕ್ಕೆ ಬೇಕಾದ ಅಗತ್ಯ ಸಹಕಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಒದಗಿಸಲಾಗುವುದು ಎಂದು ಹೇಳಿದರು. ‘ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು’ ಎನ್ನುವಂತೆ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವುದು. ಕಕ್ಷಿದಾರರಿಗೆ ಸಕಾಲದಲ್ಲಿ ನ್ಯಾಯ ದೊರಕಿಸಿಕೊಡುವುದು ಆದ್ಯತೆಯಾಗುವುದರಿಂದ ನೂತನ ಕೇಂದ್ರಗಳಿಗೆ ಮನ್ನಣೆ ಬರಲಿದೆ ಎಂದರು. ವ್ಯಾಜ್ಯಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸುವುದರ ಮೂಲಕ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೇಶಕ್ಕೆ ಮಾದರಿಯಾಗಬೇಕು. ಅಂತರಾಷ್ಟಿçÃಯ ಮಟ್ಟದಲ್ಲಿ ಬೆಳೆಯಬೇಕು ಎಂದು ಶುಭ ಹಾರೈಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧ್ಯಸ್ಥಿಕೆಯ ಮೂಲಕ ಗ್ರಾಹಕರ ವ್ಯಾಜ್ಯಗಳ ಇತ್ಯರ್ಥ ಪಡಿಸುವಲ್ಲಿ ಬಳ್ಳಾರಿ ಜಿಲ್ಲೆಯು ಎರಡನೆ ಸ್ಥಾನದಲ್ಲಿದೆ. ಇದಕ್ಕೆ ವಕೀಲರ ಸಹಕಾರವು ಒಳಗೊಂಡಿದೆ ಎಂದು ತಿಳಿಸಿದ ಅವರು, ಮಧ್ಯಸ್ಥಿಕೆ ಕೇಂದ್ರ ಆರಂಭಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದವರೆಲ್ಲರಿಗೂ ಇದೇ ಸಂದರ್ಭದಲ್ಲಿ ಅಭಿನಂದಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಶಿರಸ್ತೇದಾರ ತೋಟದ ರವಿಕುಮಾರ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನಡೆದುಬಂದ ಹಾದಿಯ ಬಗ್ಗೆ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ರಾಜಿಯಾದಂತಹ ಕಕ್ಷಿದಾರರಿಗೆ ಪರಿಹಾರವಾಗಿ ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟಾçರ್ ಮತ್ತು ಆಡಳಿತಾಧಿಕಾರಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಕೆ.ಕೋಟೇಶ್ವರ ರಾವ್, ಜೆ.ಎಂ. ಅನಿಲ್ ಕುಮಾರ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ ಸೇರಿದಂತೆ ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು, ವಕೀಲರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧಿಕಾರಿ-ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ----------

ಶುಕ್ರವಾರ, ಜನವರಿ 30, 2026

ವಿವಿಧೆಡೆ ದಾಳಿ: ಇಬ್ಬರು ಬಾಲಕಾರ್ಮಿಕ ಮಕ್ಕಳ ರಕ್ಷಣೆ

ಬಳ್ಳಾರಿ,ಜ.30(ಕರ್ನಾಟಕ ವಾರ್ತೆ): ನಗರದ ವಿವಿಧೆಡೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಕಾರದೊಂದಿಗೆ ಶುಕ್ರವಾರ ದಾಳಿ ನಡೆಸಿ ಇಬ್ಬರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ಅವರು ತಿಳಿಸಿದ್ದಾರೆ. ಪ್ಯಾನ್-ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನೆ ಅವರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ಪೋರ್ಸ್ ಸಮಿತಿ ಸಭೆ ನಡೆಸಿ ಈ ದಾಳಿ ಕೈಗೊಳ್ಳಲಾಗಿದೆ. ನಗರದ ದುರ್ಗಮ್ಮ ದೇವಸ್ಥಾನದ ಹತ್ತಿರದ ಕಪ್ಪಗಲ್ಲು ರಸ್ತೆ, ತಾಳೂರು ರಸ್ತೆ, ರೇಣುಕ ನಗರ, ದುರ್ಗಮ್ಮ ಗುಡಿ ಹತ್ತಿರದ ವಿವಿಧ ಸ್ಥಳಗಳಲ್ಲಿರುವ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ ಇತ್ಯಾದಿ ಉದ್ದಿಮೆಗಳ ಮೇಲೆ ಟಾಸ್ಕ್ ಪೋರ್ಸ್ ಸಮಿತಿ ಮುಖಾಂತರ ಭೇಟಿ ನೀಡಿದ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ವಶಕ್ಕೆ ಪಡೆದುಕೊಂಡು ಮಕ್ಕಳ ಹೇಳಿಕೆಗಳನ್ನು ಸ್ಥಳದಲ್ಲಿಯೇ ಪಡೆದುಕೊಂಡು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದೆ. ಉದ್ದಿಮೆಗಳ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್ ವಿತರಿಸಿ ಜಾಗೃತಿ ಮೂಡಿಸಲಾಯಿತು. ಈ ಟಾಸ್ಕ್ಪೋರ್ಸ್ ಸಮಿತಿಯಲ್ಲಿ ಬಳ್ಳಾರಿ ತಾಲ್ಲೂಕು ಗ್ರೇಡ್-2 ತಹಶೀಲ್ದಾರ ವಿನಾಯಕ, ಕಾರ್ಮಿಕ ನಿರೀಕ್ಷಕರಾದ 1ನೇ ವೃತ್ತದ ರಮೇಶ್, 2 ನೇ ವೃತ್ತದ ಪರಶುರಾಮ್, ಆರೋಗ್ಯ ಇಲಾಖೆಯ ಮುಸ್ತಾಕ್ ಅಹಮದ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರಶಾಂತ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನೂರಪ್ಪ ಮತ್ತು ಉಮೇಶ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಚಂದ್ರಕಲಾ ಮತ್ತು ರೀಚ್ ಸಂಸ್ಥೆಯ ಸಂಯೋಜಿಕಿ ಬಸಮ್ಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ------------

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ಭಾರತೀಯರಲ್ಲಿ ಭ್ರಾತೃತ್ವತೆ ಮುಖ್ಯ: ಮೋಹನ್ ಕುಮಾರ್

ಬಳ್ಳಾರಿ,ಜ.30(ಕರ್ನಾಟಕ ವಾರ್ತೆ): ಭಾರತೀಯರಲ್ಲಿ ಪರಸ್ಪರ ಭ್ರಾತೃತ್ವ ಸಂಬAಧವಿರದಿದ್ದರೆ ದೇಶವು ಪ್ರಜಾಸತ್ತಾತ್ಮಕವಾಗಿ ಉಳಿಯುವುದಿಲ್ಲ ಎಂಬುದು ಬಾಬಾ ಸಾಹೇಬ ಅಂಬೇಡ್ಕರ್ ಅವರ ನಿಲುವಾಗಿತ್ತು ಎಂದು ಹೈಕೋರ್ಟ್ ವಕೀಲರಾದ ಎಚ್.ಮೋಹನ್ ಕುಮಾರ್ ಹೇಳಿದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ವಿವಿಯ ಡಾ.ಬಿ.ಆರ್ ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಮೈಸೂರಿನ ಸಮಾಜ ಕಾರ್ಯಕರ್ತರ ಕ್ರಿಯಾ ಸಂಶೋಧನೆ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಅಂಬೇಡ್ಕರ ಅವರ ಬರಹಗಳು ಮತ್ತು ಭಾಷಣಗಳ ಮೂಲಕ ಭಾರತೀಯರನ್ನು ಅರ್ಥಮಾಡಿಕೊಳ್ಳುವಿಕೆ’ ಎಂಬುದರ ಕುರಿತಾದ ಮೂರು ದಿನಗಳ ಕಾರ್ಯಾಗಾರವನ್ನು ಅಂಬೇಡ್ಕರ್ ಹಾಗೂ ಬುದ್ಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಪ್ರಸ್ತುತವಾಗಿ ಅಂಬೇಡ್ಕರ ಅವರ ಕುರಿತು ಚಿಂತನೆಗಳು ಬಹಳ ಕ್ರಿಯಾಶೀಲವಾಗಿವೆ. ಮನುಷ್ಯನು ಇನ್ನೊಬ್ಬರ ಘನತೆಯನ್ನು ಅಳೆಯುವುದರಲ್ಲಿ ತಲ್ಲೀನನಾಗಿದ್ದಾನೆ. ಪ್ರಜಾಪ್ರಭುತ್ವ ಕೇವಲ ಹೊಗಳಿಕೆಯಾಗಿ ಉಳಿದಿದೆ. ಇವತ್ತು ಪ್ರಾಣಿಗಳ ಮೇಲೆ ಕಾಣುವ ಪ್ರೀತಿ, ಸಹೋದರತೆ, ವಿಶ್ವಾಸವನ್ನು ಮನುಷ್ಯರಲ್ಲಿ ಕಾಣಲಾರೆವು ಎಂದು ಅಭಿಪ್ರಾಯಪಟ್ಟರು. ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ಡಿ.ಮನಗಳ್ಳಿ ಅವರು ಮಾತನಾಡಿ, ಅಂಬೇಡ್ಕರ ಅವರ ಅಧ್ಯಯನ ಕೇಂದ್ರಗಳು ತರಬೇತಿ ಕೇಂದ್ರಗಳಾಗಬೇಕಾಗಿದೆ. ಸಮಾಜದಲ್ಲಿನ ಜಾತಿ ವ್ಯವಸ್ಥೆ ಭಾರತದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಸಂಯೋಜಕರು ಮತ್ತು ಡಾ.ಬಿ.ಆರ್ ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಪ್ರೊ.ಗೌರಿ ಮಾಣಿಕ್ ಮಾನಸ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬಾ ಸಾಹೇಬರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಮುಂಬರುವ ದಿನಗಳಲ್ಲಿ ವಿವಿಯಲ್ಲಿ ಎಸ್ಸಿ-ಎಸ್ಟಿ ಕೋಶ ಹಾಗೂ ಅಂಬೇಡ್ಕರ ತರಬೇತಿ ಕೇಂದ್ರ ಸಹಭಾಗಿತ್ವದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಲಂಡನ್‌ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಮನೋವಿಜ್ಞಾನ ಚಿಂತಕರಾದ ಚಾರುಮತಿ.ಎಂ ವೇದಿಕೆಯಲ್ಲಿದ್ದರು. ಎಸ್ಸಿ-ಎಸ್ಟಿ ಕೋಶದ ನಿರ್ದೇಶಕ ಡಾ.ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಅನಿಲ ವಂದಿಸಿದರು. ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರುಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಇದ್ದರು. --------------

ಬಳ್ಳಾರಿ: ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ಸ್ವಚ್ಛತೆ, ನೈರ್ಮಲ್ಯ ಕುರಿತು ಅರಿವು ಇರಲಿ: ನ್ಯಾ.ಬಿ.ಜಿ.ಪ್ರಮೋದ

ಬಳ್ಳಾರಿ,ಜ.30(ಕರ್ನಾಟಕ ವಾರ್ತೆ): ನಾಗರಿಕರು ಸ್ವಚ್ಛತೆ, ನೈರ್ಮಲ್ಯ ಹಾಗೂ ತ್ಯಾಜ್ಯ ವಿಲೇವಾರಿ ಕುರಿತು ಅರಿವು ಹೊಂದಬೇಕು ಎಂದು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ಪ್ರಮೋದ ಅವರು ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ‘ರಾಷ್ಟಿçÃಯ ಸ್ವಚ್ಛತಾ ದಿನಾಚರಣೆ’ ಅಂಗವಾಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿಯವರ ಹುತಾತ್ಮರಾದ ದಿನದ ನೆನಪಿಗಾಗಿ ರಾಷ್ಟಿçÃಯ ಸ್ವಚ್ಛತಾ ದಿನ ಆಚರಿಸಲಾಗುತ್ತದೆ. ಎಲ್ಲರೂ ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ಪ್ರಾಮುಖ್ಯತೆ ನೀಡೋಣ ಎಂದು ಹೇಳಿದರು. ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಹೊಂದಬೇಕು. ತ್ಯಾಜ್ಯವನ್ನು ವಿಂಗಡಿಸುವ ಮೂಲಕ ನಗರ ಸ್ಥಳೀಯ-ಸಂಸ್ಥೆಗಳ ವ್ಯಾಪ್ತಿಯ ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು. ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಪ್ರಿನ್ಸಿಪಲ್ ಹಿರಿಯ ಸಿವಿಲ್ ನ್ಯಾಯಾಧೀಶರಾದ ಇಬ್ರಾಹಿಂ ಮುಜಾವರ್ ಅವರು ಮಾತನಾಡಿ, ಎಲ್ಲಿ ಶುಚಿತ್ವ ಅಡಗಿರುತ್ತದೆಯೋ; ಅಲ್ಲಿ ದೈಹಿಕ, ಮಾನಸಿಕ ಆರೋಗ್ಯ ಸದೃಢವಾಗಿರುತ್ತದೆ. ಅದೇರೀತಿಯಾಗಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವ ಸಂಭವವಿದ್ದು, ಪ್ರತಿಯೊಬ್ಬರೂ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲ್ ಗಳ ಬಳಕೆ ಕಡಿಮೆಗೊಳಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಕೊಡುಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್.ಹೊಸಮನೆ ಅವರು ಮಾತನಾಡಿ, ಸ್ವಚ್ಛತೆಯು ಆರೋಗ್ಯಕರ ಜೀವನದ ಅವಿಭಾಜ್ಯ ಅಂಗವಾಗಿದ್ದು, ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಂತೆ ಸುಂದರ-ಸ್ವಚ್ಛ ಭಾರತ ನಿರ್ಮಿಸೋಣ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಈ ವೇಳೆ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಘವೇಂದ್ರ ಗೌಡ.ಬಿ.ಜಿ., 3ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಿ.ಪಿ ಕುಮಾರ ಸ್ವಾಮಿ, 4ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಾಸುದೇವ ರಾಧಕಾಂತ್ ಗುಡಿ, ಪ್ರಿನ್ಸಿಪಲ್ ಕೌಟುಂಬಿಕ ನ್ಯಾಯಾಧೀಶರಾದ ವೆಂಕಟೇಶ್, ಒಂದನೇ ಅಪರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ನಸ್ರತ್ ಮುಖ್ತಾರ್ ಅಹ್ಮದ್ ಖಾನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್.ಎನ್.ಹೊಸಮನೆ, ಪ್ರಿನ್ಸಿಪಲ್ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ನಾಗೇಶ್ ನಾಯ್ಕ, 1ನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಸಿದ್ದಲಿಂಗಯ್ಯ ಗಂಗಾಧರ ಮಠ, 2ನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ವಿನುತಾ ಬಿ.ಎಸ್., 3ನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಮುದುಕಪ್ಪ ಒಡನ್ ಸೇರಿದಂತೆ ಜಿಲ್ಲಾ ನ್ಯಾಯಾಲಯದ ಅಧಿಕಾರಿ-ಸಿಬ್ಬಂದಿ ವರ್ಗ ಭಾಗವಹಿಸಿದ್ದರು. -----------

ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ನಿರ್ದೇಶನ | ನಾಯಿ ಕಡಿತ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ

ಬಳ್ಳಾರಿ,ಜ.30(ಕರ್ನಾಟಕ ವಾರ್ತೆ): ಸಮುದಾಯಗಳಲ್ಲಿ ಹೆಚ್ಚಾಗಿ ನಾಯಿ ಕಡಿತ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. ನಗರದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ವಿಸಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಬೇಕಾದ ಜಾಗೃತಿ ಕಾರ್ಯಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಯಿ, ಬೆಕ್ಕು, ಇತರೆ ಯಾವುದೇ ಪ್ರಾಣಿಗಳು ಕಚ್ಚಿದಾಗ ರೇಬೀಸ್ ಕಾಯಿಲೆ ಬರುವ ಸಾಧ್ಯತೆಯಿದ್ದು, ಪ್ರಮುಖವಾಗಿ ನಾಯಿಗಳ ಕಡಿತದಿಂದ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುವುದರಿಂದ ನಿರ್ಲಕ್ಷö್ಯ ಮಾಡದೇ, ಕಚ್ಚಿದ ಅಥವಾ ಪರಚಿದ ಜಾಗವನ್ನು ಸೋಪು, ನೀರಿನಿಂದ ತೊಳೆದು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೇಬೀಸ್ ಚುಚ್ಚುಮದ್ದು ಪಡೆಯಲು ಸೂಚಿಸಬೇಕು ಎಂದು ನಿರ್ದೇಶನ ನೀಡಿದರು. ಸಾರ್ವಜನಿಕರು ಸಹ ಸಾಕಿದ ಅಥವಾ ಯಾವುದೇ ಅಪರಿಚಿತ ನಾಯಿ, ಯಾವುದೇ ಪ್ರಾಣಿ ಕಚ್ಚಿದಲ್ಲಿ ನಿರ್ಲಕ್ಷö್ಯ ಮಾಡದೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಅಗತ್ಯ ಚುಚ್ಚುಮದ್ದು ಪಡೆಯಬೇಕು. ಇದರಿಂದ ಸಂಭಾವ್ಯ ರೇಬಿಸ್ ಖಾಯಿಲೆಯನ್ನು ತಡೆಯುವುದರ ಜೊತೆಗೆ ವ್ಯಕ್ತಿಯ ಜೀವವನ್ನು ಕಾಪಾಡುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು. ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆ ಭೇಟಿ ನೀಡುವ ಸಮಯದಲ್ಲಿ ಅಥವಾ ಯಾವುದೇ ಸಮೀಕ್ಷೆಯ ಸಂದರ್ಭದಲ್ಲಿ ನಾಯಿ ಕಡಿತ ಪ್ರಕರಣಗಳ ಕುರಿತು ಕುಟುಂಬ ಸದಸ್ಯರಿಂದ ಮಾಹಿತಿ ಪಡೆಯುವುದರ ಜೊತೆಗೆ ನಾಯಿ ಕಡಿತದ ಕುರಿತು ಮುನ್ನೆಚ್ಚರಿಕೆ ಕ್ರಮವಹಿಸಲು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತ ಕುರಿತು ಜಾಗೃತಿ, ಮಾಹಿತಿ ಬಿಂಬಿಸುವ ಫ್ಲೆಕ್ಸ್ ಪ್ರದರ್ಶನ ಮಾಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಗ್ರಾಮ ಪಂಚಾಯಿತಿ ಒಳಗೊಂಡು ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ವಾಹನಗಳಲ್ಲಿ ನಾಯಿ ಕಡಿತದ ಕುರಿತು ಜಾಗೃತಿ ಮಾಹಿತಿ ಇರುವ ಆಡಿಯೋ ಜಿಂಗಲ್ ಪ್ರತಿನಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸಾರ ಮಾಡಲು ತಿಳಿಸಬೇಕು. ಪ್ರತಿ ಶನಿವಾರ ನಡೆಯುವ ವಾರದ ಸಭೆಯಲ್ಲಿ ಕ್ಷೇತ್ರ ಸಿಬ್ಬಂದಿಯವರಿಗೆ ನಾಯಿ ಕಡಿತದ ಕುರಿತು ಕ್ಷೇತ್ರ ವರದಿ ಮಾಹಿತಿಯ ಬಗ್ಗೆ ಚರ್ಚಿಸಬೇಕು ಎಂದರು. ಸಾರ್ವಜನಿಕರು ಮನೆಯ ಸುತ್ತ-ಮುತ್ತ ಓಣಿ-ಬೀದಿಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಚೆಲ್ಲಬಾರದು. ಇದರಿಂದ ಬೀದಿ ನಾಯಿ ಹಾವಳಿ ಜಾಸ್ತಿಯಾಗುತ್ತದೆ ಹಾಗೂ ಚಿಕ್ಕ ಮಕ್ಕಳು ಮನೆಯ ಹೊರಗಡೆ ಇರುವಾಗ ತಂದೆ-ತಾಯಿ ಗಮನಹರಿಸಬೇಕು. ಮಕ್ಕಳ ಕೈಯಲ್ಲಿ ಆಹಾರ ಪದಾರ್ಥಗಳನ್ನು ಕಸಿದುಕೊಳ್ಳಲು ಬಂದು ನಾಯಿ ಕಚ್ಚುವ ಅಪಾಯ ಹೆಚ್ಚಾಗಿರುತ್ತದೆ. ಮುಖ್ಯವಾಗಿ ನಾಯಿ ಕಚ್ಚಿದ ಸಂದರ್ಭದಲ್ಲಿ ಮನೆ ಮದ್ದು ಅಥವಾ ನಾಟಿ ವೈದ್ಯರ ಹತ್ತಿರ ಹೋಗದೇ ಹತ್ತಿರದ ಆರೋಗ್ಯ ಕೇಂದ್ರಗಳ ಬಳಿ ತೆರಳಿ ಲಸಿಕೆ ಪಡೆಯಲು ತಿಳಿಸಿದರು. ಶೇ.100 ರಷ್ಟು ತಡೆಗಟ್ಟಬಹುದಾದ ಖಾಯಿಲೆಯಾಗಿರುವ ರೇಬೀಸ್ ತಡೆಗೆ ನಾಯಿ ಕಚ್ಚಿದ ನಂತರ ಗಾಯವನ್ನು ಹರಿಯುವ ಸ್ವಚ್ಚ ನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ.50 ರಿಂದ 70 ರಷ್ಟು ರೇಬಿಸ್‌ಗೆ ತುತ್ತಾಗುವುದನ್ನು ತಡೆಯಬಹುದಾಗಿದೆ. ವೈದ್ಯರ ಸಲಹೆ ಮೇರೆಗೆ 1ನೇ ದಿವಸ, 3ನೇ ದಿವಸ, 7ನೇ ದಿವಸ, 14ನೇ ದಿವಸ ಮತ್ತು 28ನೇ ದಿವಸ ಸಂಪೂರ್ಣವಾಗಿ ಎಲ್ಲಾ 5 ಡೋಸ್‌ಗಳನ್ನು ಪಡೆಯುವುದರ ಮೂಲಕ ರೇಬಿಸ್ ತಡೆಗಟ್ಟಬಹುದು ಎಂದರು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎ.ಆರ್.ವಿ ಲಸಿಕೆ ಲಭ್ಯತೆ ಇಟ್ಟುಕೊಳ್ಳಬೇಕು. ಪ್ರಸ್ತುತ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣಕ್ಕೆ ಲಸಿಕೆ ಲಭ್ಯವಾಗುವ ನಿಟ್ಟಿನಲ್ಲಿ ಆ್ಯಂಟಿ ರೇಬಿಸ್ ಲಸಿಕೆ ಲಭ್ಯವಿದ್ದು, ಆರೋಗ್ಯ ಸಿಬ್ಬಂದಿ ರೋಗಿಯ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಬಳಿಕ ಅಗತ್ಯ ದಾಖಲೆ ಪಡೆಯಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾದಿಕಾರಿ ಡಾ.ಮರಿಯಂಬಿ ವಿ.ಕೆ., ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಸದಾಶಿವ ಉಪ್ಪಾರ, ವೈದ್ಯಾಧಿಕಾರಿಗಳಾದ ಡಾ.ಶ್ರೀಧರ್, ಡಾ.ದುರುಗಪ್ಪ, ಡಾ.ಕೊಟ್ರೇಶ್, ಡಾ.ಅನಿಲ್ ಕುಮಾರ್, ಡಾ.ಗೋಪಾಲ್‌ರಾವ್, ಡಾ.ಜೆಷನ್ ವಾಸಿಫ್, ಡಾ.ವಿಶಾಲಾಕ್ಷಿ ಹಾಗೂ ಸರ್ವೇಕ್ಷಣಾಧಿಕಾರಿ ಘಟಕದ ಅಧಿಕಾರಿ-ಸಿಬ್ಬಂದಿ ಹಾಜರಿದ್ದರು. ---------------

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ತಾತ್ಕಾಲಿಕ ಹುದ್ದೆ ನೇಮಕಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಜ.30(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2025-26ನೇ ಸಾಲಿನ ಪೋಷಣ್ ಅಭಿಯಾನ 2.0 ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನೆ ಸಂಡೂರು ತಾಲ್ಲೂಕಿನಲ್ಲಿ ಖಾಲಿಯಿರುವ 01-ಸಂಯೋಜಕರ ಹುದ್ದೆಗೆ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಡೂರು ಪಟ್ಟಣದ ಪಶು ಸಂಗೋಪನಾ ಆಸ್ಪತ್ರೆ ಮುಂಭಾಗದ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಫೆ.19 ರೊಳಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಇದೇ ಕಚೇರಿಗೆ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. *ಅರ್ಹತೆ:* ವಯೋಮಿತಿ 35 ವರ್ಷ ವಯಸ್ಸು ಮೀರಿರಬಾರದು. ಸ್ಥಳೀಯರಾಗಿರಬೇಕು, ಪದವಿಧರರಾಗಿರಬೇಕು, ತಂತ್ರಜ್ಞಾನ ಮತ್ತು ಸಾಫ್ಟ್ ವೇರ್ ಅಪ್ಲಿಕೇಶನ್‌ನಲ್ಲಿ ಕಾರ್ಯ ನಿರ್ವಹಿಸಿದ 02 ವರ್ಷದ ಅನುಭವ ಹೊಂದಿರಬೇಕು. ಗಣಕಯಂತ್ರದಲ್ಲಿ ಡಿಟಿಪಿ, ಎಮ್.ಎಸ್.ಆಫೀಸ್, ಡಾಟಾ ಎಂಟ್ರಿ (ಕನ್ನಡ ಮತ್ತು ಇಂಗ್ಲೀಷ) ಪರಿಣಿತಿ ಹೊಂದಿರಬೇಕು. ಕ್ಷೇತ್ರ ಭೇಟಿಗೆ ಸಿದ್ಧರಿರಬೇಕು. ಗೌರವಧನ ರೂ.20,000 ಇರಲಿದೆ. *ನಿಬಂಧನೆಗಳು:* ಬಳ್ಳಾರಿ ಜಿಲ್ಲೆಯ ಸ್ಥಳೀಯರಿಗೆ ಆದ್ಯತೆ. ಇಂಗ್ಲೀಷ್ ಮತ್ತು ಕನ್ನಡ ಕಂಪ್ಯೂಟರ್ ಜ್ಞಾನ ಹಾಗೂ ಕೆಲಸ ಮಾಡುವ ಕೌಶಲ್ಯ ಹೊಂದಿರಬೇಕು. ಅಭ್ಯರ್ಥಿಯ ಆಯ್ಕೆಯನ್ನು ಮೆರಿಟ್ ಆಧಾರದ ಮೇಲೆ ಮಾಡಲಾಗುವುದು. ಕಂಪ್ಯೂಟರ್ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು ಹಾಗೂ ಅದರ ಅಂಕಗಳನ್ನು ಪರಿಗಣಿಸಲಾಗುವುದು. ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯಿಂದ ಆಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ಅಪ್ಲಿಕೇಶನ್ ಕ್ಷೇತ್ರದಲ್ಲಿ ಅನುಭವ ಹೊಂದಿದವರಿಗೆ ಪ್ರಾಮುಖ್ಯತೆ ನೀಡಲಾಗುವುದು. ವಯೋಮಿತಿ 35 ವರ್ಷ ವಯಸ್ಸು ಮೀರಿರಬಾರದು (ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ). ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಹಾಗೂ ಸ್ಥಳೀಯ ಭಾಷೆಗಳಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ನಿಪುಣರಾಗಿರಬೇಕು. ಈ ಹುದ್ದೆಯು ತಾತ್ಕಾಲಿಕ ಹುದ್ದೆ ಆಗಿರುವುದರಿಂದ ತಮ್ಮ ಸೇವೆಯು ತೃಪ್ತಿಕರವಾಗಿಲ್ಲವೆಂದು ಕಂಡುಬAದಲ್ಲಿ, ಯಾವುದೇ ಮುನ್ನೆಚ್ಚರಿಕೆ, ನೊಟೀಸ್ ನೀಡದೇ ತೆಗೆದು ಹಾಕುವ ಅಧಿಕಾರವು ಜಿಲ್ಲಾಧಿಕಾರಿಯವರಿಗಿರುತ್ತದೆ. ಕಾರ್ಯಗಾರ, ತರಬೇತಿಗಳಿಗಾಗಿ ಜಿಲ್ಲೆಯಾದ್ಯಂತ ಪ್ರಯಾಣ ಕೈಗೊಳ್ಳಲು ಸಿದ್ದರಿರಬೇಕು. ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಗೌರವಧನವನ್ನು ಹೊರತುಪಡಿಸಿ, ಬೇರೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.08395-261156 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಗುರುವಾರ, ಜನವರಿ 29, 2026

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ: ಚರ್ಚಾಸ್ಫರ್ಧೆ ಕಾರ್ಯಕ್ರಮದಲ್ಲಿ ಪ್ರೊ.ಜೋಸ್ ಅಭಿಪ್ರಾಯ

ವೈಯಕ್ತಿಕ ಮಾಹಿತಿ ಸಂರಕ್ಷಣೆ ಸವಾಲು ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಇಂದಿನ ತಂತ್ರಜ್ಞಾನ ಯುಗದಲ್ಲಿ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ರಾಬರ್ಟ್ ಜೋಸ್ ಅವರು ಹೇಳಿದರು. ಗುರುವಾರ, ವಿವಿ ಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ವಿವಿಯ ಆಂತರಿಕ ದೂರು ಸಮಿತಿ (ಐಸಿಸಿ) ಯಿಂದ ಆಯೋಜಿಸಿದ್ದ ಚರ್ಚಾಸ್ಫರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಐ ತಂತ್ರಜ್ಞಾನದ ಮೂಲಕ ಅನೇಕ ತೊಂದರೆ ಅನುಭವಿಸುವ ಪರಿಸ್ಥಿತಿ ಮಾನವನಿಗೆ ಎದುರಾಗಿದೆ. ಸ್ತಿçà ಸಮಾನತೆಯಿಂದ ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತವಾಗಿ ಪುರುಷ ಕ್ರಾಂತಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ವಿವಿಯ ರಸಾಯನಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಅರುಣ್ ಕುಮಾರ ಲಗಶೆಟ್ಟಿ ಅವರು ಮಾತನಾಡಿ, ದೇಶದಲ್ಲಿ ಮಹಿಳಾ ಕಾನೂನುಗಳು ಬಲಿಷ್ಠವಾಗಿದ್ದು, ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ಸಂಯೋಜಕರು ಮತ್ತು ಐಸಿಸಿ ನಿರ್ದೇಶಕರಾದ ಪ್ರೊ.ಗೌರಿ ಮಾಣಿಕ್ ಮಾನಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ‘ಸೈಬರ್ ಭದ್ರತಾ ವ್ಯವಸ್ಥೆಗಳು ಸೇವಾ ಸ್ಥಳದಲ್ಲಿ ಪೋಶ್ ಕಾಯ್ದೆಯ ಅನುಷ್ಠಾನ ಮತ್ತು ಬಲಪಡಿಸುವಿಕೆಯಲ್ಲಿ ಪರಿಣಾಮಕಾರಿಯಾಗಿವೆಯೆ?” ಎಂಬ ವಿಷಯದ ಕುರಿತು ಚರ್ಚಾಸ್ಪರ್ಧೆ ಜರುಗಿತು. ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕುರಿತು ಪ್ರಮಾಣವಚನವನ್ನು ಪ್ರೊ.ಮೇಧಾವಿನಿ ಕಟ್ಟಿ ಅವರು ಬೋಧಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭೌತಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ಉದಯಕುಮಾರ್ ಖಡ್ಕೆ ವೇದಿಕೆಯಲ್ಲಿದ್ದರು. ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರುಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ------------

ಕುರೇಕುಪ್ಪ ಪುರಸಭೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಕುರೇಕುಪ್ಪ ಪುರಸಭೆ ವತಿಯಿಂದ ಎಸ್‌ಸಿಎಸ್‌ಪಿ ಯೋಜನೆಯಡಿ 2019-2020 ನೇ ಸಾಲಿನ ಬಾಕಿ ಉಳಿದ ಮೊತ್ತದಲ್ಲಿ ಪಕ್ಕಾ ಮನೆ ನಿರ್ಮಾಣ, ಶೌಚಾಲಯ ನಿರ್ಮಾಣಕ್ಕಾಗಿ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. *ಬೇಕಾದ ದಾಖಲೆ:* ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ, ಮನೆ/ನಿವೇಶನಕ್ಕೆ ಸಂಬAಧಿಸಿದ ತೆರಿಗೆ ರಶೀದಿ, ನಮೂನೆ-03, ಹಕ್ಕು ಪತ್ರ, ನೋಂದಾಯಿತ ದಾಖಲೆ ಪತ್ರಗಳ ಜೆರಾಕ್ಸ್ ಪ್ರತಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಫೆ.18 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಕುರೇಕುಪ್ಪ ಪುರಸಭೆ ಕಾರ್ಯಾಲಯ ಅಥವಾ ದೂ.08395-295601 ಗೆ ಸಂಪರ್ಕಿಸಬಹುದು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಇಎಸ್‌ಐಸಿ: ಜ.31 ರ ವರೆಗೆ ನೋಂದಣಿಗೆ ಅವಕಾಶ

ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆಯಡಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ನೋಂದಾಯಿಕೊಳ್ಳಲು ಜ.31 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಯುವರಾಜ ಎಸ್.ವಿ ಅವರು ತಿಳಿಸಿದ್ದಾರೆ. ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆಯು ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದ್ದು, ಇದರಡಿ ನೋಂದಾಯಿಸಿಕೊಳ್ಳಲು 31ನೇ ಡಿಸೆಂಬರ್ 2025 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಗುತ್ತಿಗೆ ಹಾಗೂ ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್‌ಇ ಅಡಿ ಇನ್ನು ನೋಂದಣಿಯಾಗದ ಉದ್ಯೋಗದಾತರು ಮತ್ತು ಉದ್ಯೋಗಿಗಳು ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಯಾವುದೇ ಬಾಕಿಯ ಬೇಡಿಕೆ ಇಲ್ಲದೇ ನೋಂದಾಯಿಸಿಕೊಳ್ಳಲು ಇರುವ ಅವಧಿಯನ್ನು ಜ.31 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉದ್ಯೋಗದಾತರು ತಮ್ಮ ಘಟಕಗಳು ಮತ್ತು ಉದ್ಯೋಗಿಗಳನ್ನು ಇಎಸ್‌ಐಸಿ ಪೋರ್ಟಲ್, ಶ್ರಮ್ ಸುವಿಧಾ ಮತ್ತು ಎಂಸಿಎ ಪೋರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯಿಂದ ಕಾರ್ಮಿಕರ ರಾಜ್ಯ ವಿಮಾ ನಿಗಮದ ಒಂದು ಪ್ರಗತಿಪರ ಹೆಜ್ಜೆಯಾಗಿದ್ದು, ಸರಳ ಮತ್ತು ಹಿಂದಿನ ಅವಧಿಯ ಬಾಕಿಯ ಬೇಡಿಕೆಯಿಲ್ಲದೆ ನೋಂದಣಿಗೆ ಸುಲಭವಾಗಿ ಸಾಮಾಜಿಕ ಭದ್ರತೆಗೆ ಒಳಪಡುವ ಯೋಜನೆಯಾಗಿದೆ. ಉದ್ಯೋಗದಾತರು ಕೇವಲ ತಮ್ಮ ಕಾರ್ಯಪಡೆಯ ಕ್ರಮಬದ್ಧಗೊಳಿಸುವಿಕೆಯನ್ನು ಪ್ರೋತ್ಸಾಹಿಸುವುದಲ್ಲದೇ, ಇನ್ನೂ ಹೆಚ್ಚಿನ ಕಾರ್ಮಿಕರನ್ನು ವಿಶೇಷವಾಗಿ ಗುತ್ತಿಗೆ ವಲಯದ ಕಾರ್ಮಿಕರು ಇಎಸ್‌ಐ ಕಾಯ್ದೆಯಡಿ ದೊರೆಯುವ ಅಗತ್ಯ ಆರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವುದನ್ನು ಉತ್ತೇಜಿಸುತ್ತದೆ. ಇದರೊಂದಿಗೆ ಇಎಸ್‌ಐಸಿಯು ಅಗತ್ಯ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ತಲುಪಿಸುವ ತನ್ನ ಬದ್ಧತೆಯನ್ನು ಉಳಿಸಿಕೊಂಡು ಭಾರತದ ಕಾರ್ಮಿಕ ಕಲ್ಯಾಣ ಕೇಂದ್ರಿತ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ -------------

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಜಿಲ್ಲಾ ಪ್ರವಾಸ

ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಜ.31 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜ.31 ರಂದು ಬೆಳಿಗ್ಗೆ 09 ರಿಂದ 11 ಗಂಟೆಯವರೆಗೆ ಸಂಡೂರು ಪಟ್ಟಣದ ಗುರುಭವನದಲ್ಲಿ ಸಂಡೂರು ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸುವರು. ಅದೇ ದಿನ ಬಳ್ಳಾರಿ ನಗರಕ್ಕೆ ಆಗಮಿಸಿ, ಮಧ್ಯಾಹ್ನ 01 ರಿಂದ 03 ಗಂಟೆಯವರೆಗೆ ಜಿಲ್ಲಾ ಪಂಚಾಯತ್ ನ ಹಳೆಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶಾಲಾ ಮಕ್ಕಳು, ಪೋಷಕರು ಹಾಗೂ ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿಯ ಸದಸ್ಯರೊಂದಿಗೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಮಧ್ಯಾಹ್ನ 03 ರಿಂದ ಸಂಜೆ 04 ಗಂಟೆಯ ವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಅಧಿನಿಯಮ-1994 ರ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಸಂಜೆ 04 ರಿಂದ 05 ಗಂಟೆಯವರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯ ವೈಖರಿಗಳ ಕುರಿತು ಪ್ರಗರಿ ಪರಿಶೀಲನಾ ಸಭೆ ನಡೆಸುವರು. ಬಳಿಕ ವಾಸ್ತವ್ಯ ಮಾಡುವರು. ಫೆ.01 ರಂದು ವಿಜಯನಗರ ಜಿಲ್ಲೆಗೆ ಪ್ರಯಾಣಿಸುವರು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ. ---------------

ಫೆ.01 ರಂದು ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ

ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಫೆ.01 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಈ.ತುಕರಾಮ್, ಕೆ.ರಾಜಶೇಖರ ಬಸವರಾಜ ಹಿಟ್ನಾಳ್, ರಾಜ್ಯ ಸಭೆ ಸಂಸದ ಡಾ.ಸೈಯದ್ ನಾಸೀರ್ ಹುಸೇನ್, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ್, ಸಂಡೂರು ಶಾಸಕ ಈ.ಅನ್ನಪೂರ್ಣ, ವಿಧಾನ ಪರಿಷತ್ ಶಾಸಕರಾದ ಡಾ.ಚಂದ್ರಶೇಖರ ಬಿ.ಪಾಟಿಲ, ಶಶೀಲ್ ಜಿ ನಮೋಶಿ, ವೈ.ಎಂ.ಸತೀಶ್, ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್, ಮಹಾಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಕರ್ನಾಟಕ ಸ್ಟೇಟ್ ಮಿನಿರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನ ಉಪಾಧ್ಯಕ್ಷ ಹೆಚ್.ಲಕ್ಷö್ಮಣ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಎನ್.ಧನುಂಜಯ ಹಮಲ್ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ತಿಪ್ಪೇರುದ್ರ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ದೊಡ್ಡಯ್ಯ ವಿ.ಕಲ್ಲೂರು ತಂಡದಿAದ ವಚನ ಸಂಗೀತ ಕಾರ್ಯಕ್ರಮ ಇರಲಿದೆ. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪೆನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪಿ.ಎಸ್ ಸೇರಿದಂತೆ ಇತರರು ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಅವರು ತಿಳಿಸಿದ್ದಾರೆ. ---------------