ಶುಕ್ರವಾರ, ಜನವರಿ 16, 2026

ಸಿರುಗುಪ್ಪ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶೇಷ ಛಾಯಾಚಿತ್ರ ವಸ್ತು ಪ್ರದರ್ಶನಕ್ಕೆ ಚಾಲನೆ

ಬಳ್ಳಾರಿ,ಜ.16(ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತು ಆಯೋಜಿಸಲಾಗಿದ್ದ "ಛಾಯಾಚಿತ್ರ ವಸ್ತು ಪ್ರದರ್ಶನ" ಕಾರ್ಯಕ್ರಮಕ್ಕೆ ಸಿರುಗುಪ್ಪ ತಹಶೀಲ್ದಾರರಾದ ಗೌಸಿಯಾ ಬೇಗಂ ಅವರು ಚಾಲನೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಿರ್ಮಿಸಲಾಗಿದ್ದ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಿರುಗುಪ್ಪ ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ವಿಶೇಷ ಛಾಯಾಚಿತ್ರ ವಸ್ತು ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದರು. ಈ ವೇಳೆ ಸಿರುಗುಪ್ಪ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಾರುತಿ ವರಪ್ರಸಾದ ರೆಡ್ಡಿ, ಸಿರುಗುಪ್ಪ ನಗರಸಭೆ ಪೌರಾಯುಕ್ತ ಗಂಗಾಧರ, ಕೆಕೆಆರ್ ಟಿಸಿ ಸಿರುಗುಪ್ಪ ವಿಭಾಗದ ಕೆ.ಎ.ಶೇಕ್ಷಾವಲಿ ಸೇರಿದಂತೆ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು. ಸಿರುಗುಪ್ಪ ಕೆಕೆಆರ್.ಟಿಸಿ ಬಸ್ ನಿಲ್ದಾಣದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಛಾಯಾಚಿತ್ರಗಳ ಸಮೇತ ಮಾಹಿತಿ ಇರುವ ಪ್ರದರ್ಶನ ಕಂಡು ಕಣ್ತುಂಬಿಕೊಳ್ಳಬಹುದಾಗಿದೆ. ಕಾಂಗ್ರೆಸ್ ಮುಖಂಡ ಬಿ.ಎಂ.ಸತೀಶ್ ಅವರು ಮಾತನಾಡಿ, ರಾಜ್ಯ ಸರ್ಕಾರ ಸಾರ್ವಜನಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಸರ್ಕಾರಿ ಯೋಜನೆಗಳ ಕುರಿತಾಗಿ ಸಾರ್ವಜನಿಕರಿಗೆ ವಸ್ತು ಪ್ರದರ್ಶನದ ಮೂಲಕ ಅರಿವು ಮೂಡಿಸುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಅಭಿವೃದ್ಧಿ ಯೋಜನೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ ಎಂದರು. *ಜನರ ಗಮನಸೆಳೆದ ಛಾಯಾಚಿತ್ರಗಳು:* ಸಿರುಗುಪ್ಪ ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಛಾಯಾಚಿತ್ರ ವಸ್ತು ಪ್ರದರ್ಶನ ಸಾರ್ವಜನಿಕ ಗಮನ ಸೆಳೆಯಿತು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಪ್ರತಿಮೆಯ ಎದುರು ಹಾಗೂ ವಿವಿಧ ಛಾಯಾಚಿತ್ರಗಳು ಮುಂದೆ ನಿಂತು ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿದರು. ಜ.16 ರಿಂದ 18 ರ ವರೆಗೆ ಸಿರುಗುಪ್ಪ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತ ಏರ್ಪಡಿಸಿರುವ ಛಾಯಾಚಿತ್ರ ವಸ್ತು ಪ್ರದರ್ಶನದಲ್ಲಿ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬಹುದಾಗಿದೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ