ಗುರುವಾರ, ಫೆಬ್ರವರಿ 29, 2024

ಬಳ್ಳಾರಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ, ನಗರ ಸ್ವಚ್ಛತೆಗೆ ವಿಶೇಷ ಕ್ರಮ; ಸಿಸಿ ಟಿವಿ ಅಳವಡಿಕೆಗೆ ಕ್ರಮ

ಬಳ್ಳಾರಿ,ಫೆ.29(ಕರ್ನಾಟಕ ವಾರ್ತೆ): ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್‍ಗಳಲ್ಲಿ ಸ್ವಚ್ಛತೆಯ ದೃಷ್ಟಿಯಿಂದ ಮತ್ತು ನಗರದಲ್ಲಿ ಎಲ್ಲಿ ಬೇಕೆಂದರಲ್ಲಿ ಕಸ ಹಾಕುವುದನ್ನು ಕಡಿವಾಣ ಹಾಕಲು ಪ್ರತಿ ವಾರ್ಡ್‍ಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಕ್ರಮ ವಹಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು. ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಪಂನ ನಜೀರ್‍ಸಾಬ್ ಸಭಾಂಗಣದಲ್ಲಿ ಗುರುವಾರ ನಡೆದ ಬಳ್ಳಾರಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಸ್ವಚ್ಛ ಮತ್ತು ಸ್ವಾಸ್ಥ್ಯ ಬಳ್ಳಾರಿಯನ್ನಾಗಿ ನಿರ್ಮಾಣ ಮಾಡಲು, ಎಲ್ಲಾ ಸಾರ್ವಜನಿಕರ ಪಾತ್ರ ಪ್ರಮುಖವಾಗಿದ್ದು, ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಪಾಲಿಕೆಯ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಜನ ಜಾಗೃತಿಗೆ ಆಯಾ ವಾರ್ಡ್‍ಗಳ ಯುವಕರ ಸಂಘ ಸಂಸ್ಥೆಗಳ ಸಹಕಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ನಗರದಲ್ಲಿ ವಿವಿಧೆಡೆ ಬಿಡಾಡಿ ದನಗಳ ಹಾವಳಿ ತೀವ್ರವಾಗಿದ್ದು, ವಾಹನ ಸವಾರರಿಗೆ ಅಡ್ಡಿಯನ್ನುಂಟು ಮಾಡುತ್ತಿವೆ ಎಂದು ಸದಸ್ಯರು ಸಚಿವರ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಸಚಿವರು, ಬಿಡಾಡಿ ದನಗಳ ಮಾಲೀಕರು ತಮ್ಮ ಆವರಣದಲ್ಲಿಯೇ ಕಟ್ಟಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳು ಕೇಸ್ ದಾಖಲು ಮತ್ತು ದಂಡ ವಿಧಿಸುವ ಕುರಿತು ಎಚ್ಚರಿಕೆ ನೀಡಬೇಕು. ಮಾಲೀಕತ್ವ ಇಲ್ಲದವುಗಳನ್ನು ಕೂಡಲೇ ವಶಕ್ಕೆ ಪಡೆದು, ಗೋಶಾಲೆಗಳಿಗೆ ರವಾನಿಸುವ ಕ್ರಮ ವಹಿಸಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿನ ಹಳೆಯ ತಹಶೀಲ್ದಾರರ ಕಚೇರಿ ಆವರಣವನ್ನು ಮುಂದಿನ ದಿನಗಳಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಪಡಿಸಿ ಪಾಲಿಕೆಯ ಸದಸ್ಯರ ಕೊಠಡಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯರೆಲ್ಲರೂ ಸಮ್ಮತಿ ವ್ಯಕ್ತಪಡಿಸಿದರು. ಪಾಲಿಕೆಯ ವಿವಿಧ ವಾರ್ಡ್‍ಗಳಲ್ಲಿ ರಾತ್ರಿ ಸಮಯದಲ್ಲಿ ಮನೆ ದರೋಡೆಯಂತಹ ಘಟನೆಗಳು ನಡೆಯುತ್ತಿದೆ ಎಂದು ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದರು. ರಾತ್ರಿಯ ವೇಳೆಯಲ್ಲಿ ಪೆÇಲೀಸ್ ಸಿಬ್ಬಂದಿ ಹೆಚ್ಚೆಚ್ಚು ಗಸ್ತು ಬೀಟ್ ಹಾಕುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಬೀದಿ ನಾಯಿಗಳಿಗೆ ಆಂಟಿರೇಬೀಸ್ ವ್ಯಾಕ್ಸಿನೇಷನ್ ಮತ್ತು ಸಂತಾನ ಹರಣ ಚಿಕಿತ್ಸೆಯ ಕಾರ್ಯವು ನಡೆಯುತ್ತಿದ್ದು, ಆ ಕಾರ್ಯಕ್ಕೆ ಬಾಕಿ ಉಳಿದ ಹಣವನ್ನು ಪಾಲಿಕೆಯ ಸಾಮಾನ್ಯ ನಿಧಿಯಡಿಯಲ್ಲಿ ಪಾವತಿ ಮಂಜೂರಾತಿಗೆ ಸದಸ್ಯರು ಅನುಮೋದನೆ ನೀಡಿದರು. ಸಭೆಯಲ್ಲಿ ಇನ್ನಿತರೆ ವಿಷಯಗಳ ಕುರಿತು ಸುಧೀರ್ಘ ಕಾಲ ಚರ್ಚೆ ನಡೆಯಿತು. ಈ ವೇಳೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತ, ಉಪಮೇಯರ್ ಬಿ.ಜಾನಕಿ, ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ನೂರ್ ಮೊಹಮ್ಮದ್, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಆಸೀಫ್ ಭಾಷಾ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಹನುಮಂತಪ್ಪ.ಕೆ., ಪಾಲಿಕೆಯ ಆಯುಕ್ತ ಜಿ.ಖಲೀಲ್ ಸಾಬ್ ಸೇರಿದಂತೆ ಪಾಲಿಕೆಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ---------

ಅನುಪಯುಕ್ತ ಪರಿಕರಗಳ ಬಹಿರಂಗ ಹರಾಜು

ಬಳ್ಳಾರಿ,ಫೆ.29(ಕರ್ನಾಟಕ ವಾರ್ತೆ): ಬಳ್ಳಾರಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಇರುವ ಅನುಪಯುಕ್ತ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಪರಿಕರಗಳ, ಪೀಠೋಪಕರಣಗಳ ಹಾಗೂ ಕಚೇರಿಯ ಇಲಾಖಾ ವಾಹನಗಳ ಹಳೆ ಟೈರ್‍ಗಳ, ವಾಹನಗಳ ರಿಪೇರಿ ನಂತರ ಬದಲಾಯಿಸಿದ ಅನುಪಯುಕ್ತ ಬಿಡಿಭಾಗಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮಾರ್ಚ್ 14ರಂದು ವಿಲೇವಾರಿ ಮಾಡಲಾಗುತ್ತದೆ ಎಂದು ಕರ್ನಾಟಕ ಲೋಕಯುಕ್ತ ಪೊಲೀಸ್ ಅಧೀಕ್ಷಕರಾದ ಸಿದ್ಧರಾಜು.ಸಿ ಅವರು ತಿಳಿಸಿದ್ದಾರೆ. ಅನುಪಯುಕ್ತ ಪರಿಕರಗಳನ್ನು ಖರೀದಿಸಲು ಡಿ.ಡಿ ರೂಪದಲ್ಲಿ ರೂ.1000 ಮೊತ್ತದ ಇ.ಎಂ.ಡಿ ಜೊತೆಗೆ ದಿನಾಂಕ ಮಾರ್ಚ್ 11 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಎಸ್.ಪಿ ಲೋಕಾಯುಕ್ತ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿಯ ಎಸ್.ಪಿ ಲೋಕಾಯುಕ್ತ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಮನುಷ್ಯನು ಸ್ವಾವಲಂಬಿಯಾಗಲು ಶಿಕ್ಷಣ ಬಹುಮುಖ್ಯ: ನ್ಯಾ.ರಾಜೇಶ್ ಹೊಸಮನಿ

ಬಳ್ಳಾರಿ,ಫೆ.29(ಕರ್ನಾಟಕ ವಾರ್ತೆ): ಮನುಷ್ಯನು ಸ್ವಾವಲಂಬಿಯಾಗಿ ಜೀವಿಸಲು ಶಿಕ್ಷಣ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರಾಜೇಶ್.ಎನ್.ಹೊಸಮನಿ ಅವರು ಅಭಿಪ್ರಾಯ ಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಿಮ್ಸ್‍ನ ವೈದ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಶುದ್ಧ ಮನಸುಳ್ಳ ದೇವರ ರೂಪವೇ ಮಕ್ಕಳಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಶಿಕ್ಷಣ ಒದಗಿಸುವ ಕಾರ್ಯ ಮಾಡಬೇಕು ಎಂದು ಸಲಹೆ ಮಾಡಿದರು. ಮಕ್ಕಳನ್ನು ಶಿಕ್ಷಣವಂತರಾಗಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್, ಎ.ಪಿ.ಜೆ ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ, ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ಮಹಾನ್ ಪುರುಷರ ಜೀವನ ಕಥೆಗಳನ್ನು ಮಕ್ಕಳಿಗೆ ಹೇಳಬೇಕು. ಮಕ್ಕಳಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಿ, ಸಾಮಾಜಿಕವಾಗಿ ಮಾನಸಿಕವಾಗಿ ಮಗುವನ್ನು ಸಧೃಡರನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್.ಕೆ.ಹೆಚ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇಂತಹ ವೇದಿಕೆಗಳು ಸಹಕಾರಿಯಾಗಿದ್ದು, ಮಕ್ಕಳಲ್ಲಿರುವ ಕಲೆಯನ್ನು ಅನಾವರಣಗೊಳಿಸಬೇಕು ಎಂದು ಅಭಿಪ್ರಾಯ ಪಟ್ಟರು. ಸಂಗೀತ, ನಾಟಕ ಪ್ರದರ್ಶನ, ಜನಪದ ನೃತ್ಯ, ಕಾವ್ಯ, ಕಥೆ, ಚಿತ್ರಕಥೆ, ಕ್ಲೇ ಮಾಡಲಿಂಗ್ ಸ್ಪರ್ಧೆಗಳಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಿ ಪ್ರದರ್ಶನ ನೀಡಿದರು. ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮವು ಮನರಂಜನೆ ಭರಿತವಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್‍ಷಾ ಅಲ್ತಾಪ್ ಅಹಮ್ಮದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ.ಎಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಯೋಜನಾ ಘಟಕದ ಯೋಜನಾಧಿಕಾರಿ ಮೌನೇಶ್, ಶಿಶು ಯೋಜನಾ ಅಧಿಕಾರಿ ನಾಗರಾಜ.ಪಿ, ನಾಗಪ್ಪ, ಪ್ರದೀಪ್ ಸೇರಿದಂತೆ ಇಲಾಖೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪೋಷಕರು ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು. ---------
ಬಳ್ಳಾರಿ,ಫೆ.29(ಕರ್ನಾಟಕ ವಾರ್ತೆ): ಬಳ್ಳಾರಿಯ ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ ಸಂಶೋಧನಾ ಕೇಂದ್ರ ವತಿಯಿಂದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸೋಮಲಾಪುರ ಗ್ರಾಮ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮ ಮತ್ತು ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾ ಗ್ರಾಮದಲ್ಲಿ (ಫೆ.26 ರಿಂದ 28 ರವರೆಗೆ) ಮೂರು ದಿನಗಳ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೊದಲಿಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸೋಮಲಾಪುರ ಗ್ರಾಮದ 20 ಎಕರೆ ಪ್ರದೇಶದಲ್ಲಿ ಬೆಳೆದಿರುವ ತೆಂಗು ಮತ್ತು ಮಾವು ಬೆಳೆಗಳಿಗೆ ಡ್ರೋನ್ ಪ್ರಾತ್ಯಕ್ಷಿಕ ಸಿಂಪಡಣೆಯನ್ನು ಮಾಡಲಾಯಿತು. ಮಹೋಗಾನಿ, ರೆಡ್-ಸ್ಯಾಂಡರ್ಸ್ ಮತ್ತು ಕ್ಯಾಸುರಿನಾ ಮರಗಳನ್ನು ಸಹ ಆ ಪ್ರದೇಶದಲ್ಲಿ ಬೆಳೆಯಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕರಡಿಹಳ್ಳಿಯಲ್ಲಿ 5 ಎಕರೆ ಶೇಂಗಾ ಬೆಳೆಗೆ ಸಿಂಪಡಣೆಯನ್ನು ಮಾಡಲಾಯಿತು. ಬಳಿಕ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮದಲ್ಲಿ 22 ಎಕರೆ ಶೇಂಗಾ ಬೆಳೆಗೆ ಹಾಗೂ 3 ಎಕರೆ ಮೆಕ್ಕೆಜೋಳದ ಬೆಳೆಗೆ ಪ್ರಾತ್ಯಕ್ಷಿಕ ಸಿಂಪಡಣೆಯನ್ನು ಮಾಡಲಾಯಿತು. ನಂತರದಲ್ಲಿ ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾ ಗ್ರಾಮದಲ್ಲಿ 6 ಎಕರೆ ಶೇಂಗಾ ಬೆಳೆಗೆ ಮತ್ತು 4 ಎಕರೆ ಕರಿಬೇವಿನ ಬೆಳೆಗೆ ಪ್ರಾತ್ಯಕ್ಷಿಕ ಸಿಂಪಡಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ, ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಬಿ.ಕೃಷ್ಣ ರಾವ್ ಮಾತನಾಡಿ, ಕೃಷಿ-ಡ್ರೋನ್ ಸಿಂಪಡಣೆಯು ಬೆಳೆಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಲು ಬೇಕಾಗುವ ಕಾರ್ಮಿಕರನ್ನು ಕಡಿಮೆ ಮಾಡುತ್ತದೆ. ಕೇಂದ್ರೀಕೃತ ರಾಸಾಯನಿಕವನ್ನು ನಿಖರವಾಗಿ ಸಿಂಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಹೆಚ್ಚಿನ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದರು. ಈ ಹಳ್ಳಿಗಳಲ್ಲಿ, ಡ್ರೋನ್ ಬಾಡಿಗೆಗೆ ಪಡೆದು, ಶೇಂಗಾ ಬೆಳೆಗೆ ಸೂಕ್ಷ್ಮ ಪೆÇೀಷಕಾಂಶಗಳನ್ನು ಹೆಚ್ಚಿನ ಪ್ರದೇಶಗಳಲ್ಲಿ ಸಿಂಪಡಿಸಲು ಪ್ರೇರೇಪಿತರಾಗಿದ್ದಾರೆ. ಭಾಗವಹಿಸಿದ ಅನೇಕ ರೈತರು ಡ್ರೋನ್‍ನ ಬೆಲೆಯನ್ನು ಕೇಳಿದರು ಮತ್ತು ಅವರಲ್ಲಿ ಕೆಲವರು ಮುಂಬರುವ ವರ್ಷಗಳಲ್ಲಿ ಡ್ರೋನ್ ಖರೀದಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸೋಮಲಾಪುರ, ಕರಡಿಹಳ್ಳಿ, ರಾಮಸಾಗರ, ರಾಂಪುರ, ಬೆಳಗಲ್ ತಾಂಡಾ, ಚೆಳ್ಳಗುರ್ಕಿ, ಚಾಗನೂರು ಗ್ರಾಮಗಳ ಸುಮಾರು ಎಪ್ಪತ್ನಾಲ್ಕು ರೈತರು ಭಾಗವಹಿಸಿದ್ದರು. ---------

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಚೇರಿ ಉದ್ಘಾಟನೆ

ಬಳ್ಳಾರಿ,ಫೆ.29(ಕರ್ನಾಟಕ ವಾರ್ತೆ): ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು, ಇಂದು ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ‘ಸಿ' ಬ್ಲಾಕ್ ನ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 49 ರಲ್ಲಿನ ತಮ್ಮ ನೂತನ ಕಚೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತ, ಉಪಮೇಯರ್ ಬಿ.ಜಾನಕಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್.ಎನ್., ಡಿಎಂಎಫ್ ವಿಶೇಷಾಧಿಕಾರಿ ಪಿ.ಎಸ್.ಮಂಜುನಾಥ, ತಹಶೀಲ್ದಾರ ಗುರುರಾಜ ಸೇರಿದಂತೆ ಪಾಲಿಕೆಯ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ---------

ಶ್ರೀ ಕನಕದುರ್ಗಮ್ಮ ದೇವಸ್ಥಾನ ಸಿಡಿಬಂಡಿ ಮಹೋತ್ಸವ ಅದ್ದೂರಿ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿ,ಫೆ.29(ಕರ್ನಾಟಕ ವಾರ್ತೆ): ಬರುವ ಮಾ.19 ರಂದು ನಡೆಯಲಿರುವ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಸೂಚಿಸಿದರು. ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ಮಹೋತ್ಸವ ಅಂಗವಾಗಿ ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಅಧಿದೇವತೆಯ ಮಹೋತ್ಸವವನ್ನು ಸಂಪ್ರದಾಯದಂತೆ ಆಚರಣೆಗೆ ಕ್ರಮ ವಹಿಸಬೇಕು. ಶಿಷ್ಠಾಚಾರದಂತೆ ಎಲ್ಲಾರಿಗೂ ಆಹ್ವಾನಿಸಬೇಕು. ರಥ ಚಕ್ರಗಳನ್ನು ಪರಿಶೀಲಿಸಬೇಕು. ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದೇವಸ್ಥಾನದ ನೈರ್ಮಲೀಕರಣಕ್ಕೆ ದೇವಸ್ಥಾನದ ಸುತ್ತಲು ಜಾತ್ರಾ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹಾಗೂ ಕಸದ ವಿಲೇವಾರಿಯ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು. ರಥೋತ್ಸವ ಕಾರ್ಯಕ್ರಮದಲ್ಲಿ ಸುಮಾರು 3 ರಿಂದ 4 ಲಕ್ಷ ಜನರು ಸೇರುವ ಸಾಧ್ಯತೆ ಇದೆ. ಬರುವ ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಪೆÇಲೀಸ್ ಬಂದೋಬಸ್ತ್ ನಿಯೋಜಿಸುವಂತೆ ತಿಳಿಸಿದರು. ಆರೋಗ್ಯದ ವಿಚಾರ ಸಂಬಂಧಿಸಿದಂತೆ ವೈದ್ಯಾಧಿಕಾರಿಗಳ ತಂಡವನ್ನು ರಚಿಸಿ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಸಹಾಯವಾಣಿ ಕೇಂದ್ರ ತೆರೆಯಬೇಕು ಎಂದು ಸಂಬಂಧಿಸಿದ ಆಧಿಕಾರಿಗಳಿಗೆ ಸೂಚಿಸಿದರು. ಅಗ್ನಿಶಾಮಕದಳ ಸೇವೆ, ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಸಾಲಿನಲ್ಲಿ ಬಂದು ದೇವಿಯ ದರ್ಶನ ಪಡೆಯಲು ಬ್ಯಾರಿಕೇಡ್ ಮತ್ತು ಸಿಸಿಟಿವಿ ಕ್ಯಾಮೆರಗಳನ್ನು ಆಳವಡಿಸಬೇಕು ಎಂದು ಹೇಳಿದರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಸಿಡಿಬಂಡಿ ರಥೋತ್ಸವದ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಬೇಕು. ದೇವಿಯ ದರ್ಶನಕ್ಕೆ ಬರುವ ವಿಐಪಿ ವ್ಯಕ್ತಿಗಳಿಗೆ ನಿಗದಿತ ಸಮಯ ಮೀಸಲಿರಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಸಲಹೆ ನೀಡಿದರು. ಮೋಕಾ ಮುದಿಮಲ್ಲೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ: ಬಳ್ಳಾರಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮೋಕಾ ಗ್ರಾಮದ ಮುದಿ ಮಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವೂ ಮಾ.02 ರಂದು ನಡೆಯಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇದಕ್ಕೆ ಅಗತ್ಯ ಸಿದ್ಧತೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಿದರು. ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತ, ಉಪಮೇಯರ್ ಬಿ.ಜಾನಕಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್, ತಹಶೀಲ್ದಾರ ಗುರುರಾಜ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಗಾಣಿಗ ಸಮುದಾಯದವರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರುಗಳು ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು. --------

ಬುಧವಾರ, ಫೆಬ್ರವರಿ 28, 2024

ವಿಜ್ಞಾನದಿಂದ ಜೀವನ ಸುಗಮ: ಡಾ.ಸಿ.ನಾಗಭೂಷಣ

ಬಳ್ಳಾರಿ,ಫೆ.28(ಕರ್ನಾಟಕ ವಾರ್ತೆ): ಅಸಾಧ್ಯವಾದುದೆಲ್ಲವನ್ನು ಇಂದು ಸಾಧ್ಯವಾಗಿಸಿದ್ದು ವಿಜ್ಞಾನ. ವಿಜ್ಞಾನದ ಸಹಾಯದಿಂದ ಜೀವನ ಅತ್ಯದ್ಭುತವೆನಿಸುತ್ತಿದೆ ಎಂದು ವೀರಶೈವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಸಿ.ನಾಗಭೂಷಣ ಅವರು ಹೇಳಿದರು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ ಮತ್ತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿರ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2024 ಕಾರ್ಯಕ್ರಮವನ್ನು ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಅವರು ನಡೆದು ಬಂದ ದಾರಿ, ಸಾಧನೆಗಳನ್ನು ಹಾಗೂ ಅವರು ಟಾಟಾ ಇನ್ಸಿಟ್ಯೂಟ್ ಅನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಎಷ್ಟು ದೊಡ್ಡದು ಎಂಬುದನ್ನು ನಾವು ಸ್ಮರಿಸಬೇಕು ಎಂದರು. ಕೋವಿಡ್-19 ನಲ್ಲಿ ಬಳಲುತ್ತಿದ್ದ ರೋಗಿಗಳಿಗೆ ವ್ಯಾಕ್ಸಿನೇಷನ್ ನೀಡಿ ಮತ್ತು ವಿದೇಶಗಳಿಗೆ ಸರಬರಾಜು ಮಾಡುವಲ್ಲಿ ನಮ್ಮ ದೇಶದ ವಿಜ್ಞಾನಿಗಳು ಮಹತ್ ಸಾಧನೆ ಹೊಂದಿದ್ದಾರೆ. ಅದೇರೀತಿಯಾಗಿ ಚಂದ್ರಯಾನ-3 ಉಡಾವಣೆಯಲ್ಲಿ ಇಸ್ರೋ ಮಹಿಳಾ ವಿಜ್ಞಾನಿಗಳ ಪಾತ್ರವು ಮಹತ್ವವಾಗಿದೆ ಎಂದರು. ಬಳ್ಳಾರಿಯ ವಿಜ್ಞಾನ ಕೇಂದ್ರವನ್ನು ತೆರೆಯಲು ನನ್ನ ಅಳಿಲು ಸೇವೆ ಇದೆ ಎನ್ನುವುದರ ಬಗ್ಗೆ ನೆನಪು ಮಾಡುತ್ತಾ, ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಮಾತನಾಡಿ, ವಿಜ್ಞಾನ ಒಂದು ಆಸಕ್ತಿದಾಯಕ ವಿಷಯವಾಗಿದ್ದು, ಸತತ ಪ್ರಯತ್ನವಿದ್ದರೆ ವಿಜ್ಞಾನದಲ್ಲಿ ಏನಾದರೂ ಸಾಧಿಸಬಹುದು ಮತ್ತು ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಬಹುದು ಎಂದು ಅಭಿಮತ ವ್ಯಕ್ತಪಡಿಸಿದರು. ಕಿಷ್ಕಿಂದ ವಿಶ್ವವಿದ್ಯಾಲಯದ ಡೀನ್‍ಗಳಾದ ಡಾ.ಮಂಜುನಾಥ್.ಎಸ್ ಅವರು ಮಾತನಾಡಿ, ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ತುಂಬಾ ದೊಡ್ಡದು. ವಿದ್ಯಾರ್ಥಿಗಳು ಅರ್ಥಗರ್ಭಿತ ಪ್ರಶ್ನೆಗಳನ್ನು ಹೇಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ಕಲಿಕೆಯಲ್ಲಿ ಸತತ ಪ್ರಯತ್ನವಿರಬೇಕು ಎಂದು ಕಿವಿಮಾತು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಗಿರಿಜಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನದ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಬಳಿಕ ಬೆಳಕು ಮತ್ತು ಶಬ್ದ ತರಂಗಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಆಕಾಶ ಮತ್ತು ಸಮುದ್ರ ನೀಲಿ ಯಾಗಲು ಕಾರಣವೇನು ಎನ್ನುವುದರ ಬಗ್ಗೆ ವಿವರಣೆ ನೀಡಿದರು. ಬಣ್ಣಗಳ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಈ ವೇಳೆ ಜಿಲ್ಲಾ ಪಂಚಾಯತ್‍ನ ಯೋಜನಾ ಸಂಯೋಜಕರಾದ (ಎನ್‍ಆರ್‍ಡಿಎಂಎಸ್) ರಾಮಚಂದ್ರರೆಡ್ಡಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಮತ್ತೀತರರು ಉಪಸ್ಥಿತರಿದ್ದರು. ಕುಮಾರಿ ಕೆ.ರೇಣುಕಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಭೂಮಿಕಾ ವಂದನಾರ್ಪಣೆ ಮಾಡಿದರು. ---------

ಬಹುಶಿಸ್ತೀಯ ಸಂಶೋಧನೆಯು ಹಲವಾರು ಕ್ಷೇತ್ರಗಳ ಜ್ಞಾನ: ಪ್ರೊ.ಬಟ್ಟು ಸತ್ಯನಾರಾಯಣ

ಬಳ್ಳಾರಿ,ಫೆ.28(ಕರ್ನಾಟಕ ವಾರ್ತೆ): ಬಹುಶಿಸ್ತೀಯ ಸಂಶೋಧನೆಯಲ್ಲಿ ನಿರ್ದಿಷ್ಟ ಸಮಸ್ಯೆಗೆ ಹಲವಾರು ಕ್ಷೇತ್ರಗಳ ಜ್ಞಾನವನ್ನು ಬಳಸಲಾಗುತ್ತದೆ ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಅವರು ಅಭಿಪ್ರಾಯ ಪಟ್ಟರು. ನಗರದ ಹೊರವಲಯದಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಸಮಾಜ ವಿಜ್ಞಾನ ನಿಕಾಯದ ವತಿಯಿಂದ ಏರ್ಪಡಿಸಿದ್ದ ‘ಸಮಾಜ ವಿಜ್ಞಾನದಲ್ಲಿ ಬಹುಶಿಸ್ತೀಯ ಪ್ರಚಲಿತ ಸಂಶೋಧನೆಗಳು’ ಎಂಬ ವಿಷಯದ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಸಂಶೋಧನೆಯಲ್ಲಿ ನಿರತವಾಗಿರದೇ ಬಹುಶಿಸ್ತಿಯ ಸಂಶೋಧನೆಗೆಳಿಗೆ ಒತ್ತು ನೀಡಬೇಕು. ಇದರಿಂದ ಸಮಾಜ, ಜನಾಂಗ ಹಾಗೂ ದೇಶದ ಬೆಳವಣಿಗೆಗೆ ಬಹುಶಿಸ್ತೀಯ ಸಂಶೋಧನೆಗಳು ಪೂರಕವಾಗುತ್ತದೆ. ಸಂಶೋಧನೆಯಲ್ಲಿ ವಿಶೇಷ ಕೌಶಲ್ಯಗಳನ್ನು ಬಳಸಿಕೊಂಡು ವೈಜ್ಞಾನಿಕ ರೂಪ ಕೊಡುವುದು ಮುಖ್ಯವಾಗಿದೆ ಎಂದು ಹೇಳಿದರು. ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಅಶೋಕ್ ಆಲೂರ್ ಅವರು ಮಾತನಾಡಿ, ಬಹುಶಿಸ್ತೀಯ ವಿಧಾನವು ಸಾಮಾಜಿಕ, ಆರ್ಥಿಕ, ರಾಜಕೀಯ, ಮಾನಸಿಕ, ಭೌಗೋಳಿಕ ಅಂಶಗಳನ್ನು ಒಳಗೊಂಡಿದೆ. ಸಂಶೋಧನೆÉಯೂ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಸಮಾಜದ ಬೆಳವಣಿಗೆಗಾಗಿ ಉಪಯುಕ್ತವಾಗಬೇಕು. ಸಂಶೋಧನಾ ವಿದ್ಯಾರ್ಥೀಗಳು ಬಹುಶಿಸ್ತೀಯ ಸಂಶೋಧನೆಗೆ ಹೆಚ್ಚು ಒತ್ತು ನೀಡಿ ಎಂದು ಕರೆ ನೀಡಿದರು. ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಅನಂತ ಎಲ್ ಝಂಡೇಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನಾ ವಿದ್ಯಮಾನಗಳ ಕುರಿತು ತಿಳಿದುಕೊಳ್ಳಲು ಬಹುಶಿಸ್ತೀಯ ಸಂಶೋಧನೆಯೂ ಹೆಚ್ಚು ಮಹತ್ವ ಹಾಗೂ ಪರಿಣಾಮಕಾರಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾದ ರುದ್ರೇಶ್.ಎಸ್.ಎನ್, ಕುಲಸಚಿವರು (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾತಪ್ಪ, ಸಮ್ಮೇಳನದ ಸಂಚಾಲಕರಾದ ಪ್ರೊ.ಗೌರಿ ಮಾಣಿಕ್ ಮಾನಸ ಹಾಗೂ ಪ್ರೊ.ತಿಪ್ಪೇಸ್ವಾಮಿ.ಹೆಚ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನಾ ಕುರಿತಾದ ಪ್ರಬಂಧವನ್ನು ಮಂಡಿಸಿದರು. ಕಾರ್ಯಕ್ರಮವನ್ನು ಡಾ. ಶ್ರೀದೇವಿ ಆಲೂರ ನಿರೂಪಿಸಿದರು. ಡಾ. ಹೆಚ್. ತಿಪ್ಪೇಸ್ವಾಮಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ವೀರಪ್ರಕಾಶ ವಂದಿಸಿದರು. --------

*ಇಂಡೋ ಅಮೇರಿಕನ್ ಡಿಗ್ರಿ ಕಾಲೇಜಿನಲ್ಲಿ ಸಂವಿಧಾನ ಕುರಿತು ವಿಶೇಷ ಉಪನ್ಯಾಸ*

ಬಳ್ಳಾರಿ,ಫೆ.28(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಇಂಡೋ-ಅಮೆರಿಕನ್ ಡಿಗ್ರೀ ಕಾಲೇಜ್‍ನಲ್ಲಿ “ಸಂವಿಧಾನ ಜಾಗೃತಿ ಜಾಥಾ” ಅಂಗವಾಗಿ ಸಂವಿಧಾನ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಇಂಡೋ ಅಮೇರಿಕನ್ ಡಿಗ್ರಿ ಕಾಲೇಜು ಪ್ರಾಚಾರ್ಯರಾದ ಶೇಖ್ ಸಲೀಮ್ ಬಾಷಾ ಅವರು ಅಂಬೇಡ್ಕರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಅರಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಭಾರತ ಸಂವಿಧಾನದ ಮಹತ್ವ ಮತ್ತು ಅಂಬೇಡ್ಕರ್‍ರವರನ್ನು ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸಿದರು. ವಿದ್ಯಾರ್ಥಿಗಳು ಸಂವಿಧಾನದ ಕುರಿತು ಮತ್ತು ಅಂಬೇಡ್ಕರರವರ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ವೇದಿಕೆಯ ಮೇಲೆ ಇರುವ ಅಧಿಕಾರಿಗಳು ನಂತರ ಭಾರತ ಸಂವಿಧಾನದ ಪೀಠಿಕೆಯನ್ನು ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಓದಿದರು. ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಎಲ್ಲಾ ಉಪನ್ಯಾಸಕರು, ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ---------

ಫೆ.29 ರಂದು ಮಕ್ಕಳ ಹಬ್ಬ ಕಾರ್ಯಕ್ರಮ

ಬಳ್ಳಾರಿ,ಫೆ.28(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಫೆ.29 ರಂದು ಬೆಳಿಗ್ಗೆ 10.30 ಕ್ಕೆ ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯ ಭವನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರಾಜೇಶ್.ಎನ್ ಹೊಸಮನೆ ಅವರು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಉಮಾದೇವಿ.ಬಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್‍ಷಾ ಅಲ್ತಾಪ್ ಅಹಮ್ಮದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್.ಕೆ.ಹೆಚ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ.ಎಂ ಸೇರಿದಂತೆ ಇತರರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ, ಸಂಗೀತ, ನಾಟಕ ಪ್ರದರ್ಶನ, ಜನಪದ ನೃತ್ಯ, ಕಾವ್ಯ, ಕಥೆ, ಚಿತ್ರಕಲೆ, ಕ್ಲೇ ಮಾಡೆಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. -------

ಸಂವಿಧಾನ ಪಾತ್ರ ಅರಿಯಿರಿ: ರಜನಿ ಕುಮಾರಿ

ಬಳ್ಳಾರಿ,ಫೆ.28(ಕರ್ನಾಟಕ ವಾರ್ತೆ): ಸಮಾಜದಲ್ಲಿ ಸಂವಿಧಾನವು ಬಹಳ ಮಹತ್ವ ಪೂರ್ಣವಾಗಿದ್ದು, ಎಲ್ಲರೂ ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದು ವುಂಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ರಜನಿ ಕುಮಾರಿ ಅವರು ತಿಳಿಸಿದರು. ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಅಂಗವಾಗಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮಂಗಳವಾರದಂದು ವುಂಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯ ಸಭಾಂಗಣದಲ್ಲಿ ಸಂವಿಧಾನ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂವಿಧಾನವೆಂದರೆ ಈ ದೇಶದ ಮೂಲಭೂತ ಕಾನೂನು. ಭಾರತದ ಎಲ್ಲಾ ಪ್ರಜೆಗಳು ಸಂವಿಧಾನದ ಬಗ್ಗೆ, ಪ್ರಜಾಪ್ರಭುತ್ವ, ಮತದಾನದ ಮಹತ್ವದ ಬಗ್ಗೆ ತಿಳಿದುಕೊಂಡರೆ ಮಾತ್ರ ಪ್ರಬುದ್ಧ ಭಾರತವನ್ನು ನಾವು ಕಾಣಬಹುದು. ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರೂ ಸಮಾನರು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಬಳಿಕ, ನಗರದ ಬಳ್ಳಾರಿ ಬ್ಯುಸಿನೆಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಿಧಾನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ರಾಮಚಂದ್ರ ಅವರು ಮಾತನಾಡಿ, ಸಂವಿಧಾನ ಒಂದೇ ಜಾತಿ, ಧರ್ಮಕ್ಕೆ ಸಂಬಂಧಿಸಿದಿಲ್ಲ. ಎಲ್ಲಾ ವರ್ಗದವರಿಗೂ ಸಂಬಂಧಿಸಿದ್ದು, ನಾವೆಲ್ಲರೂ ಸಂವಿಧಾನವನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯವರಾದ ಕೊಟ್ರೇಶ್, ಸ್ವಪ್ನಾ, ವೀರಾರೆಡ್ಡಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಇನ್ನೀತರರು ಪಾಲ್ಗೊಂಡಿದ್ದರು. ---------

ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ; ಇಲ್ಲದಿದ್ದರೆ ಪರವಾನಿಗೆ ರದ್ದು

ಬಳ್ಳಾರಿ,ಫೆ.28(ಕರ್ನಾಟಕ ವಾರ್ತೆ): ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರು ತಮ್ಮ ಉದ್ದಿಮೆಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು. ತಪ್ಪಿದಲ್ಲಿ ಉದ್ದಿಮೆಗಳ ಪರವಾನಿಗೆಗಳನ್ನು ರದ್ದುಪಡಿಸಿ ಉದ್ದಿಮೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಎಸ್.ಖಲೀಲ್‍ಸಾಬ್ ಅವರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದು, ಎಲ್ಲಾ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರದಿಂದ ಕಾಯ್ದೆ ಜಾರಿಯಾಗಿದೆ. ಸರ್ಕಾರದ ಆದೇಶದನ್ವಯ ಯಾವುದೇ ಉದ್ದಿಮೆಯ ನಾಮಫಲಕವು ಪ್ರಧಾನವಾಗಿ ಶೇ.60 ರಷ್ಟು ಸ್ಥಳ ಮೀಸಲಿರಿಸಿ ಕನ್ನಡದಲ್ಲಿರಬೇಕು. ನಾಮಫಲಕದಲ್ಲಿ ಕನ್ನಡ ಭಾಷೆ ಮೇಲ್ಭಾಗದಲ್ಲಿ ಪ್ರದರ್ಶಿತವಾಗುವಂತೆ ಹಾಗೂ ಅನ್ಯಭಾಷೆಯ ನಾಮಫಲಕಕ್ಕಿಂತ ಕನ್ನಡ ನಾಮಫಲಕ ಮೇಲ್ಭಾಗದಲ್ಲಿರುವಂತೆ ಮತ್ತು ದೊಡ್ಡದಾಗಿರುವಂತೆ ಅಳವಡಿಸಬೇಕು. ಮಾರ್ಚ್ 03 ರೊಳಗಾಗಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆ, ಅಂಗಡಿಗಳ ನಾಮಫಲಕಗಳು ಪ್ರಧಾನವಾಗಿ ಕನ್ನಡದಲ್ಲಿರಬೇಕು. ತಪ್ಪಿದಲ್ಲಿ ಅಂತಹ ಯಾವುದೇ ನಾಮಫಲಕಗಳು ಕಂಡುಬಂದಲ್ಲಿ ನಿಯಮಾನುಸಾರ ದಂಡವಿಧಿಸಿ ತೆರವುಗೊಳಿಸಲು ಕ್ರಮ ವಹಿಸಲಾಗುವುದು ಹಾಗೂ ಉದ್ದಿಮೆಗಳ ಉದ್ದಿಮೆ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಎಂದು ಅವರು ಪ್ರಟಣೆಯಲ್ಲಿ ತಿಳಿಸಿದ್ದಾರೆ. -------

ಮಂಗಳವಾರ, ಫೆಬ್ರವರಿ 27, 2024

ಆಯುಷ್ಮಾನ್ ಭವಃ ಆರೋಗ್ಯ ಮೇಳಗಳಲ್ಲಿ ಜಾಗೃತಿ

30 ವರ್ಷ ಮೇಲ್ಪಟ್ಟವರು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದೊತ್ತಡ, ಸಕ್ಕರೆ ಪರೀಕ್ಷಿಸಿಕೊಳ್ಳಿ: ಡಿಹೆಚ್‍ಓ ಡಾ.ವೈ ರಮೇಶ ಬಾಬು ಬಳ್ಳಾರಿ,ಫೆ.27(ಕರ್ನಾಟಕ ವಾರ್ತೆ): ಜೀವನ ಶೈಲಿಯ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಕುರಿತು ಆಯುಷ್ಮಾನ್ ಭವಃ ಉಚಿತ ಆರೋಗ್ಯ ಮೇಳಗಳಲ್ಲಿ ಜಾಗೃತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಆರೋಗ್ಯ ಇಲಾಖೆಯಿಂದ ಜೀವನಶೈಲಿಯ ಕಾಯಿಲೆಗಳಿಂದ ದೂರವಿರಲು ಹೆಚ್ಚಿನ ಜಾಗೃತಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಕಾಲ-ಕಾಲಕ್ಕೆ ಪರೀಕ್ಷಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ. ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್, ಗ್ರಾಮೀಣ ಭಾಗದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಅದೇರೀತಿಯಾಗಿ ತಜ್ಞವೈದ್ಯರು, ವೈದ್ಯರು ಕ್ಷೇತ್ರ ಸಿಬ್ಬಂದಿಯವರು ತಪಾಸಣಾ ಕಾರ್ಯ ಕೈಗೊಂಡಿದ್ದು, ಪ್ರತಿ ಮಂಗಳವಾರ ನಡೆಯುವ ಆರೋಗ್ಯ ಶಿಬಿರಗಳ ಸದುಪಯೋಗ ಎಲ್ಲರೂ ಪಡೆಯಬೇಕು ಎಂದು ವಿನಂತಿಸಿದ್ದಾರೆ. *ಬೇಸಿಗೆ ಹಿನ್ನೆಲೆಯಲ್ಲಿ ವಿಶೇಷ ಕಾಳಜಿ ವಹಿಸಿ:* ಬೇಸಿಗೆಯು ಆರಂಭವಾಗಿದ್ದು, ಹೆಚ್ಚೆಚ್ಚು ನೀರು ಕುಡಿಯಬೇಕು. ಹತ್ತಿ ಬಟ್ಟೆಗಳನ್ನು ಧರಿಸಬೇಕು. ಮಧ್ಯಾಹ್ನದ 2-4 ಗಂಟೆಯ ಅವಧಿಯಲ್ಲಿ ವಯೋವೃದ್ಧರು, ಮಕ್ಕಳು, ಗರ್ಭಿಣಿಯರು ಬಿಸಿಲಿನಲ್ಲಿ ಓಡಾಡದಂತೆ ಜಾಗೃತಿ ನೀಡಲಾಗಿದ್ದು, ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ. ಆರೋಗ್ಯ ಶಿಬಿರಗಳಲ್ಲಿ ಕ್ಷಯರೋಗ ಪರೀಕ್ಷೆ ಹಾಗೂ ರೋಗ ಲಕ್ಷಣಗಳು ಉಳ್ಳುವರ ಕಫ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಜೊತೆಯಲ್ಲಿ ಸಾಮಾನ್ಯ ಆರೋಗ್ಯ ಸೇವೆಗಳನ್ನು ಸಹ ನೀಡಲಾಗುತ್ತಿದೆ. ಶಿಬಿರದಲ್ಲಿ ಬಿಪಿಎಲ್ ಕುಟುಂಬಗಳಿಗೆ 5 ಲಕ್ಷಗಳ ವರೆಗಿನ ಉಚಿತ ಚಿಕಿತ್ಸಾ ವೆಚ್ಚದ ಆಯುಷ್ಮಾನ್ ಭಾರತ-ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್, ಡಿಜಿಟಲ್ ಹೆಲ್ತ್‍ಕಾರ್ಡ್‍ಗಳನ್ನು ಸೃಜಿಸಿ ವಿತರಿಸಲಾಗುತ್ತಿದೆ. ಅಂಗಾಂಗ ದಾನ ನೋಂದಣಿಯನ್ನೂ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ 4355 ನೋಂದಣಿ ಮಾಡಲಾಗಿದೆ. ಅಲ್ಲದೆ ಶಿಬಿರದಲ್ಲಿ ಡೆಂಗ್ಯು ಮತ್ತು ಚಿಕುನ್ ಗುನ್ಯ ಕುಟುಂಬ ಕಲ್ಯಾಣ ವಿಧಾನಗಳು, ತಾಯಿ ಮಗುವಿನ ಆರೈಕೆ, ಟೆಲಿ ಮನಸ್ ಮಾನಸಿಕ ಆರೋಗ್ಯ ಸಹಾಯವಾಣಿ14416 ಕುರಿತು ಮಾಹಿತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಸೇವೆಗಳನ್ನು ಪಡೆದುಕೊಂಡು ಆರೋಗ್ಯಯುತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಕೋರಿದ್ದಾರೆ. ---------

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಾಡೂನ್: 8ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಬಳ್ಳಾರಿ,ಫೆ.27(ಕರ್ನಾಟಕ ವಾರ್ತೆ): ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನಲ್ಲಿ 2025ನೇ ಸಾಲಿನ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2024 ರ ಜೂನ್ 01 ರಂದು ನಡೆಯಲಿದ್ದು, ಆಸಕ್ತರಿಂದ ಆರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರಬೇಕು ಅಥವಾ ಉತ್ತೀರ್ಣರಾಗಿರಬೇಕು. ದಿನಾಂಕ 01-01-2025 ರಂತೆ 111/2 ವರ್ಷದಿಂದ 13 ವರ್ಷದೊಳಗಿರುವ ಅಂದರೆ (ದಿನಾಂಕ 02-01-2012 ರಿಂದ 01-07-2013 ರೊಳಗೆ ಜನಿಸಿರುವ) ಬಾಲಕರು ಮತ್ತು ಬಾಲಕಿಯರು ಮಾತ್ರ ಈ ಪರೀಕ್ಷೆಗೆ ಅರ್ಹರಿರುತ್ತಾರೆ. ಈ ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ದಗೊಳಿಸುವುದು ಹಾಗೂ ಸರ್ವ ರೀತಿಯ ವಿದ್ಯಾಭ್ಯಾಸ, ತರಬೇತಿ ನೀಡುವುದಾಗಿದೆ. ಕಾಲೇಜಿನಲ್ಲಿ ವರ್ಷವೊಂದಕ್ಕೆ ವಿದ್ಯಾಭ್ಯಾಸದ ಶುಲ್ಕ ರೂ. 1,07,500/-ಗಳು (ಸಾಮಾನ್ಯ ವರ್ಗ) ಹಾಗೂ ರೂ. 93,900/- (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ಗಳಾಗಿರುತ್ತದೆ. ಇದು ಕಾಲಕಾಲಕ್ಕೆ ಹೆಚ್ಚಾಗಬಹುದು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯು ಪ್ರವೇಶ ಸಮಯದಲ್ಲಿ ರೂ.30,000/- ಗಳನ್ನು ಭದ್ರತಾ ಠೇವಣಿ ನೀಡಬೇಕಾಗುತ್ತದೆ (incl in annual fee). ಮೊತ್ತವನ್ನು ವಿಧ್ಯಾರ್ಥಿಯು ಪಧವೀಧರನಾದ ಮತ್ತು ವಿಧ್ಯಾರ್ಥಿನಿಯು ಪಧವೀಧರರೆಯಾದ ಬಳಿಕ ಹಿಂತಿರುಗಿಸಲಾಗುವುದು. *ಅರ್ಜಿ ನಮೂನೆ ಪಡೆಯುವ ವಿಧಾನ:* ಪ್ರಾಸ್ಪೆಕ್ಟಸ್, ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಟರಿ ಕಾಲೇಜು, ಗರಹಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ್, ಪಿನ್-248003 ಮೂಲಕ ಪಡೆಯಬಹುದು. *ಆನ್‍ಲೈನ್ ಪಾವತಿ:* ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/- ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.555/- ಇದ್ದು, ಆನ್‍ಲೈನ್ ಪಾವತಿ ಮಾಡುವ ಮೂಲಕ ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರು ಪುಸ್ತಕಗಳನ್ನು ಸಹ ಪಡೆಯಬಹುದು. ವೆಬ್‍ಸೈಟ್ www.rimc.gov.in ಪಾವತಿ ಸ್ವೀಕರಿಸಿದ ನಂತರ ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕಗಳನ್ನು ಸ್ಪೀಡ್ ಪೋಸ್ಟ್ ಮೂಲಕ ರವಾನಿಸಲಾಗುತ್ತದೆ. *ಬೇಡಿಕೆ ಕರಡು ಕಳುಹಿಸುವ ವಿಧಾನ:* ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತವನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/-ಗಳ ಬೇಡಿಕೆಯ ಕರಡು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.555/-ಗಳ ಬೇಡಿಕೆಯ ಕರಡು ಕಳುಹಿಸಿ ಲಿಖಿತ ವಿನಂತಿಯ ಪರವಾಗಿ ಜಾತಿ ಪ್ರಮಾಣ ಪತ್ರದೊಂದಿಗೆ “THE COMMANDANT RIMC FUND” PAYABLE AT HDFC BANK, BALLUPUR CHOWK, DEHRADUN (BANK CODE. 1399), UTTARAKHAND ಈ ವಿಳಾಸಕ್ಕೆ ಕಳುಹಿಸಬಹುದು. ಪಿನ್ ಕೋಡ್ ಮತ್ತು ಸಂಪರ್ಕ ಸಂಖ್ಯೆಯೊಂದಿಗೆ ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ ಬರೆಯಬೇಕು. ಕಾನೂನು ಬಾಹಿರ ಅಥವಾ ಅಪೂರ್ಣ ವಿಳಾಸದಿಂದ ಉಂಟಾಗುವ ಪ್ರಾಸ್ಪೆಕ್ಟಸ್‍ನ ಸಾಗಾಣಿಕೆಯಲ್ಲಿ ಯಾವುದೇ ಅಂಚೆ ವಿಳಂಬ ಅಥವಾ ನಷ್ಟಕ್ಕೆ RIMS ಸಂಸ್ಥೆಯು ಜವಾಬ್ದಾರರಾಗಿರುವುದಿಲ್ಲ. ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಏಪ್ರೀಲ್ 15 ರೊಳಗಾಗಿ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ಭವನ್, ನಂ, 58 ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ರಸ್ತೆ, ಬೆಂಗಳೂರು-25 ಇವರಿಗೆ ಸಲ್ಲಿಸಬೇಕು. *ಬೇಕಾದ ದಾಖಲೆಗಳು:* ಮುನ್ಸಿಪಾಲಿಟಿ, ಗ್ರಾಮ ಪಂಚಾಯತ್ ಪ್ರಾಧಿಕಾರ ವತಿಯಿಂದ ಆಂಗ್ಲ ಭಾಷೆಯಲ್ಲಿ ಪಡೆದ ಅಭ್ಯರ್ಥಿಯ ಜನ್ಮ ಪ್ರಮಾಣ ಪತ್ರದ ಧೃಢೀಕೃತ ಪ್ರತಿ. 5 ಪಾಸಪೋರ್ಟ್ ಅಳತೆಯ ಭಾವಚಿತ್ರಗಳು (ಅರ್ಜಿಯಲ್ಲಿ ಅಂಟಿಸಿದ ಭಾವಚಿತ್ರವನ್ನು ಸೇರಿಸಿ). ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ದೃಡೀಕೃತ (ಪ್ರತಿ ಆಂಗ್ಲ ಭಾಷೆಯಲ್ಲಿ ಇರುವಂತೆ). ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ ಅಂಚೆದ್ವಾರ ರವಾನಿಸಲು ರೂ.42/- ರ ಅಂಚೆ ಚೀಟಿ ಲಗತ್ತಿದ ಸ್ವವಿಳಾಸ ಲಕೋಟೆ. ಮುಖ್ಯೋಪಾಧ್ಯಾಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪತ್ರದ ಮೂಲ ಪ್ರತಿ (ದೃಡೀಕರಿಸಿದ ಅಭ್ಯರ್ಥಿಯ ಭಾವ ಚಿತ್ರದೊಂದಿಗೆ). ಈ ರಾಜ್ಯದ ವಾಸಸ್ಥಾನ ದೃಡೀಕರಣ ಪತ್ರ ತಹಶೀಲ್ದಾರರಿಂದ ಪಡೆದಿರಬೇಕು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಅಥವಾ ದೂ.0836-2440176 ಗೆ ಸಂಪರ್ಕಿಸಬಹುದು ಎಂದು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಫೆ.27(ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆಯಿಂದ 2024-25ನೇ ಸಾಲಿಗೆ 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಜಿಲ್ಲೆಯ ರೈತ ಮಕ್ಕಳ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2024ರ ಮೇ 02 ರಿಂದ 2025 ರ ಫೆ.28 ರ ವರೆಗೆ ಒಟ್ಟು 10 ತಿಂಗಳ ತರಬೇತಿಯನ್ನು ನೀಡಲಾಗುತ್ತದೆ. *ಅಭ್ಯರ್ಥಿಗಳ ಆಯ್ಕೆ ಗುರಿ:* ಮಹಿಳೆಯರು 8, ಪುರುಷರು 16, ಪರಿಶಿಷ್ಟ ಜಾತಿ 03, ಪರಿಶಿಷ್ಟ ಪಂಗಡ 01 ಮತ್ತು ಇತರೆ 20 ಅಭ್ಯರ್ಥಿಗಳು ಸೇರಿ ಒಟ್ಟು 24 ಅಭ್ಯರ್ಥಿಗಳನ್ನು ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಆಯ್ಕೆ ಮಾಡುತ್ತಾರೆ. ಅಭ್ಯರ್ಥಿಗಳ ವಯೋಮಿತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 18 ವರ್ಷದಿಂದ 33 ವರ್ಷದೊಳಗೆ ಇರಬೇಕು. ಇತರರಿಗೆ 18 ವರ್ಷದಿಂದ 30 ವರ್ಷದೊಳಗೆ ಹಾಗೂ ಮಾಜಿ ಸೈನಿಕರಿಗೆ 33 ರಿಂದ 65 ವರ್ಷದೊಳಗಿರಬೇಕು. ಅಭ್ಯರ್ಥಿಗಳು ಕನಿಷ್ಠ ಕನ್ನಡ ವಿಷಯಗಳೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತರಬೇತಿ ಹೊಂದಲು ಬಯಸುವ ಅಭ್ಯರ್ಥಿಯ ತಂದೆ-ತಾಯಿ, ಪೆÇೀಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಅರ್ಜಿಗಳನ್ನು ಮಾ.01 ರಿಂದ 30 ರ ವರೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಬಳ್ಳಾರಿ, ಕಚೇರಿಯಲ್ಲಿ ಪಡೆಯಬಹುದು ಅಥವಾ ಇಲಾಖಾ ವೆಬ್ ಸೈಟ್ https://horticulturedir.karnataka.gov.in ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಭರ್ತಿಮಾಡಿದ ಅರ್ಜಿಗಳನ್ನು ಏಪ್ರೀಲ್ 01 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು. ಏಪ್ರೀಲ್ 06 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. *ವಿಶೇಷ ಸೂಚನೆ:* ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಿತಿಯು ಸರ್ಕಾರದ ಮೀಸಲಾತಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಮೀಸಲಾತಿ ಮುಗಿದ ನಂತರ ಉಳಿಕೆ ಮೀಸಲಾತಿಗಳನ್ನು ಇತರೆ ಅಭ್ಯರ್ಥಿಗಳಿಗೆ ನೀಡಲಾಗುವುದು. ಒಂದು ವೇಳೆ ಮೀಸಲಾದ ಸ್ಥಾನಗಳಿಗೆ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಮಹಿಳಾ ಮೀಸಲಾತಿ (ಶೇ.33)ಯನ್ನು ನಿಯಮಾನುಸಾರ ಪಾಲಿಸತಕ್ಕದ್ದು. ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಸ್ಥಾನಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಮೀಸಲಾತಿ ಕುರಿತು ಸರ್ಕಾರದ ಮೀಸಲಾತಿಗಳನ್ವಯ ಆಯ್ಕೆ ಸಮಿತಿ ನಿರ್ಧರಿಸಲಾಗುತ್ತದೆ. ಮಾಜಿ ಸೈನಿಕ ಅಭ್ಯರ್ಥಿಗಳು ಆಯ್ಕೆಗೊಂಡಲ್ಲಿ ಈಗಾಗಲೇ ಇಲಾಖೆಯಲ್ಲಿ ರೈತ ಮಕ್ಕಳಿಗೆ ಕಾಯ್ದಿರಿಸಿರುವ ಗುರಿಗಳಿಗೆ ಹೆಚ್ಚುವರಿಯಾಗಿ ಸೇರ್ಪಡಿಸಲಾಗುವುದು. ಅಭ್ಯರ್ಥಿಗಳಿಗೆ ಉಚಿತವಾಗಿ ಕಲಿಕೆಯ ಎಲ್ಲಾ ತರಹದ ಅವಕಾಶಗಳನ್ನು ಕಲ್ಪಿಸಲಾಗುವುದು. ಆದರೆ, ವಸತಿ ನಿಲಯದಲ್ಲಿ ವಾಸ್ತವ್ಯದ ವ್ಯವಸ್ಥೆಯು ಕಡ್ಡಾಯ ಇರುವುದಿಲ್ಲ ಹಾಗೂ ಶಿಷ್ಯವೇತನ (ಸ್ಟೈಫಂಡ್) ಕ್ಕೆ ಅವಕಾಶವಿರುವುದಿಲ್ಲ. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ಆಯ್ಕೆಯು ತೋಟಗಾರಿಕೆ ಪ್ರಾಯೋಗಿಕ ತರಬೇತಿಯಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ಸ್ವಾವಲಂಬಿಯಾಗಿ ನಿರ್ವಹಿಸಲು ಶಕ್ತನಾಗಿರಬೇಕು ಹಾಗೂ ಚಟುವಟಿಕೆ ನಿರ್ವಹಿಸಲು ಸಾಧ್ಯವಾಗದಂತಹ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಇದಕ್ಕಾಗಿ ಪ್ರತ್ಯೇಕ ಸಂದರ್ಶನ ಪತ್ರ ಕಳುಹಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08392-278588 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ವಿಎಸ್‍ಕೆ ವಿವಿ: ಫೆ.28 ರಿಂದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ

ಬಳ್ಳಾರಿ,ಫೆ.27(ಕರ್ನಾಟಕ ವಾರ್ತೆ): ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ವತಿಯಿಂದ ‘ಸಮಾಜ ವಿಜ್ಞಾನದಲ್ಲಿ ಬಹುಶಿಸ್ತೀಯ ಪ್ರಚಲಿತ ಸಂಶೋಧನೆಗಳು’ ಎಂಬ ವಿಷಯದ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಫೆ.28 ಮತ್ತು 29 ರಂದು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ವಿಭಾಗಗಳಾದ ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ಸಮಾಜಕಾರ್ಯ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮಹಿಳಾ ಅಧ್ಯಯನ, ಕಾನೂನು ವಿಭಾಗ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳ ಜಂಟಿ ಸಹಭಾಗಿತ್ವದಲ್ಲಿ ಎರಡು ದಿನಗಳ ಸಮ್ಮೇಳನ ನಡೆಯಲಿದೆ. ಫೆ.28 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಅಶೋಕ್ ಆಲೂರ್ ಸಮ್ಮೇಳನದ ಮುಖ್ಯ ಭಾಷಣ ಮಾಡುವರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ.ಅನಂತ್ ಝಂಡೇಕರ್ ಅವರು ಅಧ್ಯಕ್ಷತೆ ವಹಿಸುವರು. ಕುಲಸಚಿವರಾದ ರುದ್ರೇಶ್.ಎಸ್.ಎನ್, ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ. ಸದ್ಯೋಜಾತಪ್ಪ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು, ಡೀನರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು. ವಿದೇಶ ಹಾಗೂ ದೇಶದ ಹಲವು ರಾಜ್ಯಗಳ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಸಂಶೋಧನಾ ಪಾಂಡಿತ್ಯದ ಕುರಿತು ಪ್ರಬಂಧ ಮಂಡಿಸುವರು. ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಸಮ್ಮೇಳನದಂದು ನೇರ ನೋಂದಣಿಗೆ ಅವಕಾಶ ಇದೆ ಎಂದು ಸಮ್ಮೇಳನದ ಸಂಚಾಲಕರಾದ ಪ್ರೊ. ಗೌರಿ ಮಾಣಿಕ್ ಮಾನಸ ಹಾಗೂ ಪ್ರೊ.ತಿಪ್ಪೇಸ್ವಾಮಿ ಹೆಚ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಸಂವಿಧಾನ ಜಾಗೃತಿ ಜಾಥಾ: ಬಳ್ಳಾರಿ ನಗರದಲ್ಲಿ ವಿವಿಧೆಡೆ ಸಂಚಾರ ಸಂವಿಧಾನ ಮೌಲ್ಯಗಳ ಸ್ಮರಣೆ

ಬಳ್ಳಾರಿ,ಫೆ.27(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವು ಮಾ.01 ರ ವರೆಗೂ ಮುಂದುವರೆದ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಜಾಗೃತಿಯನ್ನು ಮೂಡಿಸಲು ಟ್ಯಾಬ್ಲೊ ಮೂಲಕ ಜಾಥಾವು ಸೋಮವಾರದಂದು ನಗರದ ವಿವಿಧ ಕಾಲೇಜುಗಳಿಗೆ ಸಂಚರಿಸಿತು. ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನ, ಹೆಚ್.ಆರ್.ಗವಿಯಪ್ಪ ವೃತ್ತ, ಎಸ್.ಪಿ.ವೃತ್ತ, ದುರ್ಗಮ್ಮಗುಡಿ ಮಾರ್ಗದ ಮೂಲಕ ಗಾಂಧಿ ನಗರದ ಅಲ್ಲಂ ಸುಮಂಗಳಮ್ಮ ಕಾಲೇಜಿಗೆ ಆಗಮಿಸುತ್ತಿದ್ದಂತೆಯೇ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಜಾಥಾವನ್ನು ಸ್ವಾಗತಿಸಿದರು. ಕಾಲೇಜಿನ ಪಾಚಾರ್ಯರು ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಭೋಧಿಸಿದರು. ಅತಿಥಿ ಉಪನ್ಯಾಸಕರಾದ ಸುಂದರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಮಗ್ರತೆ, ಭ್ರಾತೃತ್ವ ಹಾಗೂ ಸಮಾನತೆಗಳ ಕುರಿತು ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, 2 ವರ್ಷ, 11 ತಿಂಗಳು, 18 ದಿನಗಳ ಕಾಲ ಹಗಲು-ರಾತ್ರಿ ಶ್ರದ್ಧೆಯಿಂದ ಸಂವಿಧಾನವನ್ನು ರಚಿಸಿದರು. ಸಂವಿಧಾನದ ಪ್ರಸ್ತಾವನೆಯು ಮಹತ್ವದ್ದಾಗಿದೆ. ಸಂವಿಧಾನವು ನಮ್ಮೆಲ್ಲರಿಗೆ ಶ್ರೇಷ್ಠವಾಗಿದ್ದು, ಸಂವಿಧಾನದ ಆಶಯಗಳನ್ನು ಈಡೇರಿಸಲು ನಾವೆಲ್ಲರೂ ಬದ್ಧರಾಗಿರಬೇಕಿದೆ ಎಂದರು. ಬಳಿಕ ಜಾಗೃತಿ ಜಾಥಾವು ಟ್ಯಾಬ್ಲೊ ಮೂಲಕ ಗಾಂಧಿನಗರದ ಶ್ರೀ ಗುರುತಿಪ್ಪೇರುದ್ರ ಕಾಲೇಜಿಗೆ ತೆರಳಿತು. “ಸಂವಿಧಾನ ಜಾಗೃತಿ ಜಾಥಾ”ವನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಕ್ಷರು ಸ್ವಾಗತ ಮಾಡಿಕೊಂಡರು. ಕಾಲೇಜಿನ ಪ್ರಾಂಶುಪಾಲರು ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳೊಂದಿಗೆ ಭೋಧಿಸಿದರು. ಜಿ.ನಾಗರಾಜ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಒಂದೇ ಜಾತಿ, ಧರ್ಮಕ್ಕೆ ಸಂಬಂಧಿಸಿಲ್ಲ, ಬದಲಾಗಿ ಎಲ್ಲಾ ವರ್ಗದವರಿಗೂ ಸಂಬಂಧಿಸಿದೆ. ಹೀಗಾಗಿ ನಾವೆಲ್ಲರೂ ಸಂವಿಧಾನವನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನೀತರರು ಪಾಲ್ಗೊಂಡಿದ್ದರು. ------