ಬುಧವಾರ, ಫೆಬ್ರವರಿ 21, 2024

ಸಂವಿಧಾನ ಜಾಗೃತಿ ಜಾಥಾ: ಎತ್ತಿನ ಬಂಡಿಗಳ ಮೆರವಣಿಗೆ, ಬೈಕ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ

ಬಳ್ಳಾರಿ,ಫೆ.21(ಕರ್ನಾಟಕ ವಾರ್ತೆ): ಸಂವಿಧಾನ ಜಾಗೃತಿ ಜಾಥಾವು ಇಂದು ಸಂಡೂರು ತಾಲ್ಲೂಕಿನ ಸುಶೀಲ ನಗರ, ಯಶವಂತ ನಗರ, ಬಂಡ್ರಿ ಹಾಗೂ ನಿಡಗುರ್ತಿ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲ್ಲಿ ಸಂಚರಿಸಿತು. ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು. ಜಾಥಾವನ್ನು ಪ್ರತಿ ಗ್ರಾಮಗಳಲ್ಲಿ ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ನೇತಾರರ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು, ಕೋಲಾಟದ ಮೂಲಕ ನೃತ್ಯ, ಹಲಗೆ ಮತ್ತು ಡೊಳ್ಳು ಕಲಾವಿದರು, ತಾಷಾ ರಾಂಡೋಲ್, ಕಂಸಾಳೆ ಹಾಗೂ ನಂದಿ ಕೋಲು ಕುಣಿತದ ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ಜಾಥಾಗೆ ಪ್ರಥಮವಾಗಿ ಸುಶೀಲನಗರ ಗ್ರಾಮದಲ್ಲಿ ಲಂಬಾಣಿ ನೃತ್ಯ, ಮಹನೀಯರ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ಸುಶೀಲನಗರ ಗ್ರಾಮದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶೇಖರ್ ಪಾಟೀಲ್ ಅವರು ಮಾತನಾಡಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಮಗ್ರತೆ, ಭ್ರಾತೃತ್ವ ಹಾಗೂ ಸಮಾನತೆಗಳ ಕುರಿತು ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, 2 ವರ್ಷ, 11 ತಿಂಗಳು, 18 ದಿನಗಳ ಕಾಲ ಹಗಲು-ರಾತ್ರಿ ಶ್ರದ್ಧೆಯಿಂದ ಸಂವಿಧಾನವನ್ನು ರಚಿಸಿದರು ಎಂದು ಹೇಳಿದರು. ಸಂವಿಧಾನದ ಪ್ರಸ್ತಾವನೆಯು ಮಹತ್ವದ್ದಾಗಿದ್ದು, ನಮಗೆ ಎರಡನೇ ರಾಷ್ಟ್ರಗೀತೆ ಇದ್ದಂತೆ ಎಂದು ಅಭಿಪ್ರಾಯಪಟ್ಟರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಕ್ಯಾಮಲಿಂಗ ಕರ್ಜಿಗಿ ಅವರು ಮಾತನಾಡಿ, ಸಂವಿಧಾನವು ನಮ್ಮೆಲ್ಲರಿಗೆ ಶ್ರೇಷ್ಠವಾಗಿದ್ದು, ಸಂವಿಧಾನದ ಆಶಯಗಳನ್ನು ಈಡೇರಿಸಲು ನಾವೆಲ್ಲರೂ ಬದ್ಧರಾಗಿರಬೇಕಿದೆ ಎಂದರು. ಯಶವಂತ ನಗರ ಗ್ರಾಮದಲ್ಲಿ ಅದ್ದೂರಿಯಾದ ಸ್ವಾಗತ ದೊರೆಯಿತು. ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಭಾಷಣ ಮಾಡಿದ್ದು ಆಕರ್ಷಕವಾಗಿತ್ತು. ವಿಶೇಷವಾಗಿ ಮೆರವಣಿಗೆಯಲ್ಲಿ ಭಾಗಿಯಾದ ಎಲ್ಲಾ ಸಾರ್ವಜನಿಕರಿಗೆ ಗ್ರಾಮಸ್ಥರು ಮಜ್ಜಿಗೆ ಹಂಚಿದರು. ಬಂಡ್ರಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಲೇಜಿಮ್ ನೃತ್ಯ ಗಮನ ಸೆಳೆಯಿತು. ನಿಡಗುರ್ತಿ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೆರವಣಿಗೆ ಮತ್ತು ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ