ಶನಿವಾರ, ಫೆಬ್ರವರಿ 17, 2024

ಸೈಬರ್ ವಂಚಕರಿಂದ ಎಚ್ಚರದಿಂದಿರಿ, ನಿಮ್ಮವರನ್ನು ಎಚ್ಚರಗೊಳಿಸಿ: ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್

ಬಳ್ಳಾರಿ,ಫೆ.17(ಕರ್ನಾಟಕ ವಾರ್ತೆ): ದಿನನಿತ್ಯದ ಮೊಬೈಲ್ ಬಳಕೆಯಲ್ಲಿ ವ್ಯವಹರಿಸುವಾಗ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಅದೇ ರೀತಿ ಸುತ್ತ-ಮುತ್ತಲಿನವರನ್ನು ಎಚ್ಚರಿಕೆಯಿಂದಿರಲು ತಿಳಿಸಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಅವರು ಸಲಹೆ ಮಾಡಿದರು. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಪಂ ನಜೀರ್‍ಸಾಬ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಂಚನೆ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ‘ಜಾಗ್ರತೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ವ್ಯಸನಿಗಳು. ಇದರಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುಷ್ಪರಿಣಾಮವಿದೆ. ಹೀಗಾಗಿ ಜಾಗರೂಕರಾಗಿ ಬಳಸಬೇಕು ಎಂದರು. ಸೈಬರ್ ಜಾಲಕ್ಕೆ ಪ್ರತಿಯೊಬ್ಬರು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕವಾಗಿದೆ. ಕೃತಕ ಬುದ್ದಿಮತ್ತೆ ಬಂದಾಗಿನಿಂದ ಇನ್ನಷ್ಟು ಬ್ಲಾಕ್‍ಮೇಲ್‍ಗಳು ಹೆಚ್ಚಾಗುತ್ತಿವೆ. ಯುವ ಪೀಳಿಗೆಯು ಸೈಬರ್ ವಂಚಕರಿಂದ ಎಚ್ಚರಿಕೆ ವಹಿಸಿ, ಸುತ್ತಮುತ್ತಲಿನವರನ್ನೂ ಜಾಗೃತಗೊಳಿಸಬೇಕು ಎಂದು ತಿಳಿಸಿದರು. ವಾಹನ, ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದೇಶಗಳಲ್ಲಿ ಹೇಗೆ ಸಂಚಾರಿ ನಿಯಮಗಳನ್ನು ಪಾಲಿಸುತ್ತೇವೆಯೋ, ಅದೇರೀತಿಯಾಗಿ ನಮ್ಮ ದೇಶದಲ್ಲಿಯೂ ನಿಯಮಗಳನ್ನು ಪಾಲಿಸಬೇಕು. ಸ್ವಸ್ಥ ವಾತಾವರಣ ನಿರ್ಮಾಣ ಮಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಪೊಲೀಸ್ ಇಲಾಖೆಯು ರೀಲ್ಸ್ ವಿಡಿಯೋಗಳ ಮೂಲಕ ಸೈಬರ್ ಕ್ರೈಂ ಬಗ್ಗೆ ಸಾಕಷ್ಟು ಜಾಗೃತಿ ನೀಡುತ್ತಿದ್ದರೂ ವಂಚನೆಗೊಳಗಾಗುವುದು ತಪ್ಪುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 3 ಸಾವಿರ ಅಪರಾಧ ಪ್ರಕರಣಗಳು ದಾಖಲಾದರೇ, ಅದರಲ್ಲಿ 2 ಸಾವಿರ ಪ್ರಕರಣಗಳು ಸೈಬರ್ ವಂಚನೆ ಪ್ರಕರಣಗಳಾಗಿವೆ. ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾ ಪೆÇಲೀಸ್ ಇಲಾಖೆಯು ಜಾಗೃತಿಯ ಮೂಲಕ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಪೆÇಲೀಸರು ಮತ್ತು ಸಾರ್ವಜನಿಕರು ಜೊತೆಗೂಡಿದರೆ ಆಗುವ ಸಂಭವಿಸುವ ಪ್ರಕರಣಗಳನ್ನು ತಡೆಗಟ್ಟಬಹುದು ಎಂದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ‘ಜಾಗೃತ್’ ವೆಬ್‍ಸೈಟ್‍ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ನಿಯಮಗಳು, ಮಾದಕ ವಸ್ತುಗಳ ಜಾಗೃತಿ ಮತ್ತು ಪ್ರಕರಣ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸ್ ಇಲಾಖೆಯು ‘ಜಾಗೃತ್’ ಎಂಬ ವೆಬ್‍ಸೈಟ್‍ನ್ನು ಸಿದ್ದಪಡಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು ಜಾಗೃತಿ ವಿಡಿಯೋ ಬಿಡುಗಡೆ ಮಾಡಿ, ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಮಿನೆರ ಸ್ಟೀಲ್ಸ್ ಮತ್ತು ಪವರ್ ಪ್ರೈ.ಲಿಮಿಟೆಡ್‍ನ ನಿರ್ದೇಶಕ ಹನುಮಂತ ರೆಡ್ಡಿ, ಸ್ಮಯೋರ್ ಕಂಪನಿಯ ಏಕನಾಥ ಘೋರ್ಪಡೆ, ಕಿರ್ಲೋಸ್ಕರ್ ಕಂಪನಿಯ ಪ್ರಭುದೇವ ಸೇರಿದಂತೆ ಎನ್‍ಜಿಒ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ