ಸೋಮವಾರ, ಏಪ್ರಿಲ್ 14, 2025
ಅಂಬೇಡ್ಕರ್‌ರವರ ವೈಚಾರಿಕತೆಗಳನ್ನು ಆಳವಡಿಸಿಕೊಳ್ಳಿ: ಶಿವರುದ್ರಪ್ಪ
ಬಳ್ಳಾರಿ,ಏ.14(ಕರ್ನಾಟಕ ವಾರ್ತೆ):
ಅಂಬೇಡ್ಕರ್‌ರವರ ಚಿಂತನೆಗಳು, ಜೀವನಶೈಲಿ, ವೈಚಾರಿಕತೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ಶಿವರುದ್ರಪ್ಪ ಎನ್.ಬಿ ಹೇಳಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಬಹುಶಿಸ್ತಿಯ ಅಧ್ಯಯನ ಕೇಂದ್ರ ವತಿಯಿಂದ ಸೋಮವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್‌ರವರ 134ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯ ಕನಸು ನನಸ್ಸಾಗಿಸಬೇಕು ಎಂಬುದು ಅಂಬೇಡ್ಕರ್‌ರವರ ಧ್ಯೇಯವಾಗಿತ್ತು. ಸತ್ಯ ಮಾರ್ಗದಲ್ಲಿ ನಡೆದರೆ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದು ಎಂದರು.
ನ್ಯಾಯಯುತ ಮತ್ತು ಸಮ ಸಮಾಜದ ಅವರ ದೃಷ್ಟಿಕೋನವನ್ನು ವಾಸ್ತವಗೊಳಿಸಲು ಇಂದು ನಾವೆಲ್ಲ ಶ್ರಮಿಸೋಣ. ಸಮಾನತೆ, ನ್ಯಾಯ, ಶಿಕ್ಷಣ, ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಅವರ ಕೊಡುಗೆಗಳು ಬಹು ಮುಖ್ಯವಾಗಿದೆ ಎಂದು ಹೇಳಿದರು.
ಬಾಬಾ ಸಾಹೇಬರ ಕೆಲಸ ಮತ್ತು ಆದರ್ಶಗಳು ದೇಶದ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಂದಿನ ಪ್ರಬಲ ಭಾರತವನ್ನು ರೂಪಿಸುವಲ್ಲಿ ಅಂಬೇಡ್ಕರ್‌ರವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ಮುನಿರಾಜು ಮಾತನಾಡಿ, ಭಾರತದ ಪ್ರಜೆಗಳು ಎಲ್ಲರೂ ಏಕತೆ, ಸಹೋದರತ್ವವನ್ನು ಹೊಂದಬೇಕು. ಉತ್ತಮ ಶಿಕ್ಷಣವು ಎಲ್ಲರಿಗೂ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಶ್ರಮಿಸುತ್ತಿದೆ. ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ವಿ ವ್ಯಕ್ತಿಯಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರೊ. ಎನ್ ಎಂ ಸಾಲಿ ಮಾತನಾಡಿ, ಮನುಷ್ಯನು ವ್ಯಕ್ತಿತ್ವದಲ್ಲಿ ಸಿದ್ದಾಂತಗಳನ್ನು ಆಳವಡಿಸಿಕೊಳ್ಳಬೇಕು. ಸ್ವಾಭಿಮಾನದ ಬದುಕು ಇಲ್ಲದಿದ್ದರೆ ಜೀವನ ವ್ಯರ್ಥ. ಉತ್ತಮ ಸಮಾಜ ಕಟ್ಟುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ವಿಶ್ವವಿದ್ಯಾಲಯದ ಅವರಣದಲ್ಲಿರುವ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಭೀಮ ವಂದನೆ ಸಲ್ಲಿಸಿ ಅಲ್ಲಿಂದ ಸಭಾಭವನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ನಾಗರಾಜ, ಡಾ. ಬಿ ಆರ್ ಅಂಬೇಡ್ಕರ್ ಬಹುಶಿಸ್ತಿಯ ಅಧ್ಯಯನ ಕೇಂದ್ರ ಸಂಯೋಜಕರಾದ ಡಾ. ಗೌರಿ ಮಾಣಿಕ್ ಮಾನಸ, ಶುದ್ದ ವಿಜ್ಞಾನ ನಿಕಾಯದ ಡೀನರಾದ ಪ್ರೊ. ಹನುಮೇಶ ವೈದ್ಯ , ಶಿಕ್ಷಣ ನಿಕಾಯದ ಡೀನರಾದ ಡಾ. ಸಾಹೇಬ್ ಅಲಿ, ಕಾನೂನು ನಿಕಾಯದ ಡೀನರಾದ ಡಾ. ಕೃಷ್ಣ ಭಾರದ್ವಾಜ್ ವೇದಿಕೆಯಲ್ಲಿ ಇದ್ದರು.
ಕಾರ್ಯಕ್ರಮವನ್ನು ಡಾ ಶಶಿಧರ ಕೆಲ್ಲೂರ್ ನಿರೂಪಿಸಿದರು. ಡಾ. ಸಂತೋಷ ಜಿ.ಕೆ. ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ