ಮಂಗಳವಾರ, ಜುಲೈ 22, 2025
ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ: ಪಿಡಿಒ ಮಲ್ಲಿಕಾರ್ಜುನ
ಬಳ್ಳಾರಿ,ಜು.22(ಕರ್ನಾಟಕ ವಾರ್ತೆ):
ಗ್ರಾಮೀಣ ಭಾಗಗಳಲ್ಲಿ ಬಾಲ್ಯವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪೋಷಕರಿಗೆ ಬಾಲ್ಯವಿವಾಹ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಬಾದನಹಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಅವರು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಕೇಂದ್ರ, ಶಿಕ್ಷಣ ಇಲಾಖೆ ಹಾಗೂ ಬಾದನಹಟ್ಟಿ ಗ್ರಾಮ ಪಂಚಾಯತಿ ಇವರ ಸಹಯೋಗದಲ್ಲಿ ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ “ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಮತ್ತು ಮೂಡ ನಂಬಿಕೆಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ” ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾದನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚು ಬಾಲ್ಯವಿವಾಹ ನಡೆಯುತ್ತಿರುವುದು ವಿಷಾದಕರ ಸಂಗತಿ. ಹದಿಹರೆಯದ ಮಕ್ಕಳ ಭವಿಷ್ಯ ರೂಪಿಸಲು ಬಾಲ್ಯವಿವಾಹಗಳನ್ನು ನೆರವೇರಿಸುತ್ತಿರುವ ವ್ಯಕ್ತಿಗಳ ಮೇಲೆ ತುರ್ತಾಗಿ ಕಾನೂನು ಕ್ರಮ ಜರುಗಿಸಬೇಕು. ಜನರಲ್ಲಿ ಕಾನೂನಿನ ಅರಿವು ಮೂಡಿಸಿ ಬಾಲ್ಯವಿವಾಹದ ಪಿಡುಗನ್ನು ಕೊನೆಗೊಳಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಬಾದನಹಟ್ಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ನಿರ್ಮಲ ಅವರು ಮಾತನಾಡಿ, ಎಲ್ಲಾ ಮಕ್ಕಳು ಬಾಲ್ಯವಿವಾಹ ತಡೆಗೆ ಮುಂದಾಗಬೇಕು. ತಮ್ಮ ತಮ್ಮ ಪೋಷಕರಿಗೆ ಈ ಕುರಿತು ಅರಿವು ಮೂಡಿಸಬೇಕು. ಈ ಕುರಿತು ಯಾವುದೇ ವಿಧದಲ್ಲಿ ಭಯಪಡದೇ ಮಕ್ಕಳ ಸಹಾಯವಾಣಿ-1098 ಅಥವಾ ಪೊಲೀಸ್ ಸೇವೆ-112 ಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ನಮ್ಮ ಗ್ರಾಮವನ್ನು ಬಾಲ್ಯವಿವಾಹ ಮತ್ತು ಬಾಲಗರ್ಭಿಣಿ ಮುಕ್ತ ಗ್ರಾಮವಾಗಬೇಕು ಎಂದು ಕರೆ ನೀಡಿದರು.
ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಆನಂದ ಅವರು, ಬಾಲ್ಯವಿವಾಹಕ್ಕೆ ಒಳಪಟ್ಟ ಬಾಲಕಿಯರು ಅನುಭವಿಸುವ ಕಷ್ಟ, ಪೋಷಕರ ಮೇಲೆ ಕೈಗೊಳ್ಳಬಹುದಾದ ಕಾನೂನು ಕ್ರಮಗಳು ಹಾಗೂ ಪೋಕ್ಸೋ ಕಾಯ್ದೆಯು ಬಾಲ್ಯವಿವಾಹ ನಡೆದ ನಂತರ ಬಾಲಗರ್ಭಿಣಿಯ ಪ್ರಕರಣಗಳಲ್ಲಿ ಅನ್ವಯ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹೇಗೆ ಸಹಕಾರಿಯಾಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ್ ಅವರು ಮಕ್ಕಳ ಶಿಕ್ಷಣದ ಮಹತ್ವ, ಮಕ್ಕಳ ನಿರಂತರ ಹಾಜರಾತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಒದಗಿಸುತ್ತಿರುವ ಸೇವೆ-ಸೌಲಭ್ಯಗಳ ಕುರಿತು ತಿಳಿಸಿಕೊಟ್ಟರು.
ಕಾರ್ಯಕ್ರಮಕ್ಕೂ ಮುನ್ನ ರೀಚ್ ಸಂಸ್ಥೆಯ ಸಂಯೋಜಕ ಹನುಮಂತ ಅವರು ಬಾಲ್ಯವಿವಾಹ ತಡೆ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಬಾದನಹಟ್ಟಿ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ