ಗುರುವಾರ, ಜುಲೈ 24, 2025
ಗಯಾನ ದೇಶದಲ್ಲಿ ಮೃತಪಟ್ಟ ಅನಿವಾಸಿ ಭಾರತೀಯನ ಮೃತ ದೇಹ ಭಾರತಕ್ಕೆ ಕರೆತರಲು ರಾಜ್ಯ ಸರ್ಕಾರದಿಂದ ಆರ್ಥಿಕ ಸಹಾಯ
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ದಕ್ಷಿಣ ಅಮೆರಿಕಾದ ಗಯಾನಾ ದೇಶದ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ಸ್ಮಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ನಿವಾಸಿಯಾದ ಪಿ.ಬಿ ಗಿರೀಶ ಬಾಬು ಪಾಲೆ ಅವರ ಪಾರ್ಥಿವ ಶರೀರವನ್ನು ಕರೆ ತರಲು ರಾಜ್ಯ ಸರ್ಕಾರವು ಆರ್ಥಿಕ ಸಹಾಯ ನೀಡಿದೆ.
ಪಿ.ಬಿ ಗಿರೀಶ ಬಾಬು ಪಾಲೆ ಅವರು, ಅನಾರೋಗ್ಯದ ಕಾರಣ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಹು ಅನಿಯಮಿತ ರಕ್ತಸ್ರಾವದ ಹೃದಯಘಾತದಿಂದ ಜು.14 ರಂದು ಸಾವನ್ನಪ್ಪಿದ್ದರು. ಅನಿವಾಸಿ ಭಾರತೀಯ ಸಮಿತಿಯು ಆಸ್ಪತ್ರೆ ಹಾಗು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿತ್ತು.
ಮೃತನ ಕುಟುಂಬಸ್ಥರಿಗೆ ಪಾರ್ಥಿವ ಶರೀರ ಭಾರತಕ್ಕೆ ತರಲು ಸುಮಾರು ರೂ.12,00,000 ಆಗಬಹುದು ಎಂದು ರಾಯಭಾರಿ ಕಚೇರಿ ತಿಳಿಸಿದೆ. ಪಿ.ಬಿ ಗಿರೀಶ ಬಾಬು ಪಾಲೆ ಅವರ ಪತ್ನಿ ಜಾನಕಿ ಕೆ.ಎನ್ ಅವರು ತಮಗೆ 2 ವರ್ಷದ ಒಬ್ಬ ಮಗನಿದ್ದು, ಕುಟುಂಬವು ಆರ್ಥಿಕವಾಗಿ ಹಿಂದುಳಿದಿದೆ. ರಾಜ್ಯ ಸರ್ಕಾರದದಿಂದ ಸಹಾಯಕ್ಕಾಗಿ ಅನಿವಾಸಿ ಭಾರತೀಯ ಸಮಿತಿ ಕಚೇರಿಗೆ ಮನವಿ ಸಲ್ಲಿಸಿದ್ದರು.
ಮೃತ ದೇಹವನ್ನು ಭಾರತಕ್ಕೆ ಕರೆತರಲು ತಗಲುವ ವೆಚ್ಚವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಧನ ಸಹಾಯ ಮಾಡಲು ಅನಿವಾಸಿ ಭಾರತೀಯ ಸಮಿತಿ ಕಚೇರಿಯಿಂದ ಮುಖ್ಯಮಂತ್ರಿಗಳಿಗೆ ಕೋರಲಾಗಿತ್ತು.
ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿದ್ದು, ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವತಿಯಿಂದ ರೂ 3,60,000/- ಮಂಜೂರು ಮಾಡಿದ್ದಾರೆ.
ಉಳಿಕೆ ಹಣವನ್ನು ಪಿ.ಬಿ ಗಿರೀಶ ಬಾಬು ಪಾಲೆ ಕೆಲಸ ಮಾಡುತ್ತಿದ್ದ ಶೆರಿಫ್ ಜನರಲ್ ಆಸ್ಪತ್ರೆಯವರು ಭರಿಸುತ್ತಿದ್ದು, ಗಯಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ನವ ದೆಹಲಿಯಲ್ಲಿರುವ ನಿವಾಸಿ ಆಯುಕ್ತರು ಮೃತದೇಹವನ್ನು ಭಾರತಕ್ಕೆ ತರುವುದನ್ನು ಸಂಯೋಜಿಸುತ್ತಿದ್ದು ಶೀಘ್ರವೇ ತರಲಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ