ಶನಿವಾರ, ಡಿಸೆಂಬರ್ 30, 2023
ನಾಮ ನಿರ್ದೇಶನಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಜಿಲ್ಲಾ ಆಯ್ಕೆ ಸಮಿತಿಗೆ ನಾಮ ನಿರ್ದೇಶನರನ್ನಾಗಿ ಮಾಡಲು ಅರ್ಹ ವಿಶ್ವಕರ್ಮ ಸಮುದಾಯದ ಜನಾಂಗದವರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಒಬ್ಬ ಅಧಿಕಾರೇತರ ನಾಮ ನಿರ್ದೇಶನ ಸದಸ್ಯರನ್ನಾಗಿ 02 ವರ್ಷ ಅವಧಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಆಯ್ಕೆ ಮಾಡಲಿದ್ದು, ಅರ್ಹ ವಿಶ್ವಕರ್ಮ ಸಮುದಾಯದ ಜನಾಂಗದವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನ ಜ.08 ಆಗಿರುತ್ತದೆ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಅರ್ಹತೆ:
ನಾಮ ನಿರ್ದೇಶನ ಬಯಸುವ ವ್ಯಕ್ತಿಯು ಬಳ್ಳಾರಿ ಜಿಲ್ಲೆಯಲ್ಲಿ ಕನಿಷ್ಠ 15 ವರ್ಷ ವಾಸವಾಗಿರಬೇಕು. ಕನಿಷ್ಠ 35 ವರ್ಷ ಗರಿಷ್ಠ 65 ವರ್ಷ ವಯೋಮಿತಿಯೋಳಗಿರಬೇಕು. ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡಿರಬೇಕು. ಬಳ್ಳಾರಿ ಜಿಲ್ಲೆಯ ಸಮಗ್ರ ಮಾಹಿತಿ ವಿಶ್ವಕರ್ಮ ಜನಾಂಗದವರು ವಾಸಿಸುವ ಸ್ಥಳ, ಕೈಗೊಳ್ಳುವ ಉದ್ಯೋಗ ಇತ್ಯಾದಿ ಅಂಕಿ ಅಂಶಗಳ ಮಾಹಿತಿ ತಿಳಿದಿರಬೇಕು. ಅರ್ಜಿ ಸಲ್ಲಿಸುವ ವ್ಯಕ್ತಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಇರಬಾರದು ಹಾಗೂ ದಂಡ, ಜುಲ್ಮಾನ, ಶಿಕ್ಷೆ ಅನುಭವಿಸಿರಬಾರದು.
ಹೆಚ್ಚಿನ ಮಾಹಿತಿಗಾಗಿ ನಗರದ ಕುಮಾರಸ್ವಾಮಿ ದೇವಸ್ಥಾನ ಎದುರುಗಡೆಯ ಕ್ಲಬ್ ರೋಡ್‍ನ ವೀರನಗೌಡ ಕಾಲೋನಿಯ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ(ನಿ) ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-267038ಗೆ ಸಂಪರ್ಕಿಬಹುದು ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ(ನಿ) ಜಿಲ್ಲಾ ವ್ಯವಸ್ಥಾಪಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ವದಂತಿಗೆ ಕಿವಿಗೊಡದಿರಿ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ಅಡುಗೆ ಅನಿಲ ಸಂಪರ್ಕ ಹೊಂದಿರುವ (ಎಲ್.ಪಿ.ಜಿ ಗ್ಯಾಸ್) ಫಲಾನುಭವಿಗಳು, ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಎಂಬ ವದಂತಿಗೆ ಕಿವಿಗೊಡದಿರಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಸಕೀನ ಅವರು ತಿಳಿಸಿದ್ದಾರೆ.
ಡಿ.31ರ ಒಳಗಾಗಿ ಗ್ಯಾಸ್ ಏಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಹಾಗೂ ಸಿಲಿಂಡರ್ ಸರಬರಾಜು ಮಾಡಲಾಗುತ್ತದೆ ಎನ್ನುವ ವದಂತಿ ಮತ್ತು ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕೆಂಬ ವದಂತಿ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಠಿಗೆ ಕಾರಣವಾಗಿರುತ್ತದೆ. ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಬಯೋಮೆಟ್ರಿಕ್ ನೀಡಲು ಕೇಂದ್ರ ಸರ್ಕಾರವು ಯಾವುದೇ ರೀತಿಯ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಬಯೋಮೆಟ್ರಿಕ್ ನೀಡಬಹುದಾಗಿದೆ.
ಜಿಲ್ಲೆಯ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಅನಾವಶ್ಯಕ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ ಸಂಖ್ಯೆ ದಾಖಲಾತಿಯೊಂದಿಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಇ-ಕೆವೈಸಿ ಉಚಿತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಅಡುಗೆ ಅನಿಲ ಗ್ಯಾಸ್ ಬಳಕೆದಾರರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ಪ್ರಸ್ತಕ ಸಾಲಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಮಹಿಳಾ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆ ಹಾಗೂ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಚಲಿತ ವಿದ್ಯಮಾನಗಳಿಂದ ಮಹಿಳಾ ಕ್ಷೇತ್ರದಲ್ಲಿ ಮತ್ತು ಕಳೆದ 5 ವರ್ಷಗಳಿಂದ ಮಹಿಳಾ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅರ್ಹ ಸಂಸ್ಥೆಗಳು ಹಾಗೂ ಇತರೆ ವಿವಿಧ 5 ಕ್ಷೇತ್ರಗಳಾದ ಕ್ರೀಡೆ, ಕಲೆ, ಸಾಹಿತ್ಯ, ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಗೆ ವೀರ ಮಹಿಳೆ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು, ಅರ್ಹ ಮಹಿಳೆಯರು ನಿಗದಿತ ನಮೂನೆಯನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಸ್.ಪಿ. ಸರ್ಕಲ್, ದೇವಿನಗರ, ಬಳ್ಳಾರಿ. ಇಲ್ಲಿಗೆ 2024ರ ಜನವರಿ 10 ರೊಳಗಾಗಿ ಅರ್ಜಿ ಸಲ್ಲಿಸಬೇಕು.
*ಷರತ್ತುಗಳು:*
18 ರಿಂದ 45 ವರ್ಷ ವಯೋಮಿತಿ ಹೊಂದಿರಬೇಕು. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ವೇತನ ಪಡೆಯುತ್ತಿರುವ ವ್ಯಕ್ತಿಗಳು ಅರ್ಹರಾಗಿರುವುದಿಲ್ಲ. ವೀರ ಮಹಿಳೆ ಪ್ರಶಸ್ತಿ ಪಡೆಯುವ ಮಹಿಳೆಯು ವಿಶೇಷ ಶೌರ್ಯ ಹಾಗೂ ಸಾಧನೆಯನ್ನು ಮಾಡಿರಬೇಕು. ಈ ಸಾಧನೆಯು ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಈ ಸಾಧನೆಯು ಪ್ರಶಸ್ತಿ ಪಡೆಯುವ ಕಳೆದ ಸಾಲಿನ ಜನವರಿ 1 ರಿಂದ ಡಿಸೆಂಬರ್ 31ರ ಒಳಗೆ ಇರಬೇಕು.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ದೂ.08392-266219ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ಈಶಾನ್ಯ ಕರ್ನಾಟಕ ಪದವೀಧರ ಮತದಾರರ ಪಟ್ಟಿ ಪರಿಷ್ಕರಿಸಿ, ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
*ಅಂತಿಮ ಮತದಾರ ಪಟ್ಟಿ ವಿವರ:*
91-ಕಂಪ್ಲಿ, 92-ಸಿರುಗುಪ್ಪ, 93-ಬಳ್ಳಾರಿ ಗ್ರಾಮೀಣ, 94-ಬಳ್ಳಾರಿ ನಗರ, 95-ಸಂಡೂರು ತಾಲ್ಲೂಕು ಒಳಗೊಂಡಂತೆ 13,744 ಪುರುಷರು, 8,408 ಮಹಿಳೆಯರು ಮತ್ತು 4 ಇತರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 22,156 ಪದವೀಧರ ಮತದಾರರಿದ್ದಾರೆ.
ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ಕುರಿತು ಅಧಿಸೂಚನೆ ಹೊರಡಿಸಿದ ದಿನಾಂಕ ಸೆ.30, ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ನಿಗದಿಪಡಿಸಿದ ಅವಧಿ ನ.23 (ಗುರುವಾರ) ರಿಂದ ಡಿ.09 (ಶನಿವಾರ) ರವರೆಗೆ. ಅಂತಿಮ ಮತದಾರರ ಪಟ್ಟಿ ಪ್ರಕಟಣೆ ದಿನಾಂಕ ಡಿ.30 (ಶನಿವಾರ). ಚುನಾವಣಾ ಆಯೋಗ ನಿಗಧಿಪಡಿಸಿದಂತೆ ಅರ್ಜಿದಾರರು ದಿ:-01-11-2020 ಕ್ಕಿಂತ ಮುಂಚಿತವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿವರ ಹಾಗೂ ಸ್ಥಳಿಯ ನಿವಾಸಿಯ ದಾಖಲೆಯನ್ನು ಸಲ್ಲಿಸಿ, ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ.
ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ ದಿನಾಂಕ 01.01.2024 ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ನಮೂನೆ-18 ರಲ್ಲಿ ಚುನಾವಣಾ ಆಯೋಗವು ಸೂಚಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
-------
ಕುಡಿಯುವ ನೀರು, ಮೇವು ಕೊರತೆಯಾಗದಂತೆ ನೋಡಿಕೊಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ಬರುವ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು, ನಗರದ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ವಿಮ್ಸ್)ಯ ಆಡಳಿತ ಭವನದ ಸಭಾಂಗಣದಲ್ಲಿ ಬರ ನಿರ್ವಹಣೆಯ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೆÇೀರ್ಸ್ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬರಬಹುದಾದಂತಹ ಗ್ರಾಮಗಳನ್ನು ಗುರುತಿಸಿ, ಖಾಸಗಿ ಬೋರ್ವೆಲ್ ಮತ್ತು ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಬಳ್ಳಾರಿ ತಾಲ್ಲೂಕಿನ ಹರಗಿನದೋಣಿ, ಹಲಕುಂದಿ ಗ್ರಾಮಗಳಲ್ಲಿ ಉಲ್ಬಣವಾಗುವ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ಭಾಗಗಳಲ್ಲಿ ಆರ್‍ಓ ಘಟಕಗಳನ್ನು ಶುದ್ಧಗೊಳಿಸಿಟ್ಟುಕೊಳ್ಳಬೇಕು. ಕುಡಿಯುವ ನೀರು ಎಲ್ಲೂ ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಬಳ್ಳಾರಿ ಹೋಬಳಿ ಮತ್ತು ಸಂಡೂರು ಹೋಬಳಿಯಲ್ಲಿ ಮೇವಿನ ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ತಹಶೀಲ್ದಾರ್ ಗುರುರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
------
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50 ರಷ್ಟು ರಿಯಾಯಿತಿ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ 2024ರ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ.50ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಪುಸ್ತಕ ಪ್ರಿಯರು ಇದರ ಸದುಪಯೋಗ ಪಡೆಯಬೇಕೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ ಸಿಂಗ್ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ (ಸಂಪರ್ಕ ಸಂಖ್ಯೆ 080-22107705) ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೇ ಕನ್ನಡ ಪುಸ್ತಕ ಪ್ರಾಧಿಕಾರದ www.kannadapustakapradhikara.com (ನಮ್ಮ ಪ್ರಕಟಣೆಗಳು ವಿಭಾಗ) ನಲ್ಲಿಕೂಡ ಈ ಶೇ.50ರಷ್ಟು ರಿಯಾಯಿತಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.
-------
ಕೋವಿಡ್; ಭಯ ಬೇಡ, ಮುಂಜಾಗ್ರತೆ ಕ್ರಮವಹಿಸಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ
ಬಳ್ಳಾರಿ, ಡಿ.30(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಯಾವುದೇ ಹೊಸ ರೂಪಾಂತರಿ ಕೋವಿಡ್ ಪ್ರಕರಣಗಳು ಕಂಡುಬಂದಿಲ್ಲ, ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರದಂದು, ನಗರದ ವಿಮ್ಸ್ ಆಸ್ಪತ್ರೆಯ ಆಡಳಿತ ಭವನದ ಸಭಾಂಗಣದಲ್ಲಿ ಕೋವಿಡ್ (ಜೆಎನ್-1) ತಡೆಗಟ್ಟುವಿಕೆ ಕುರಿತು ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಕೋವಿಡ್ ಎದುರಿಸಲು ಜಿಲ್ಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿನ ಎಲ್ಲಾ ಆಸ್ಪತ್ರೆಗಳು ಸೇರಿದಂತೆ 275 ವೆಂಟಿಲೇಟರ್‍ಗಳು, 889 ಆಮ್ಲಜನಕ ಸಹಿತ ಹಾಸಿಗೆಗಳು, 356 ಐಸಿಯು ಬೆಡ್‍ಗಳು ಲಭ್ಯವಿದ್ದು, ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಪ್ರಸ್ತುತ ಕೋವಿಡ್ ರೂಪಾಂತರಿ ವೈರಸ್ ಜೆಎನ್-1 ಪ್ರಕರಣಗಳು ಹೆಚ್ಚಾಗುತ್ತಿದ್ದ ಕಾರಣ, ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿಯೂ ಸಹ ಅಗತ್ಯ ಮುಂಜಾಗೃತೆ ಕೈಗೊಳ್ಳಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ರೂಪಾಂತರಿ ಜೆಎನ್-1 ಪ್ರಕರಣಗಳು ವರದಿಯಾಗಿರುವುದಿಲ್ಲ ಎಂದು ಸಭೆಗೆ ತಿಳಿಸಿದರು.
ಶೀತ, ಜ್ವರ, ತಲೆನೋವು, ಮೂಗು ಕಟ್ಟುವುದು, ಕಫ, ಕೆಮ್ಮು, ವಾಸನೆಗೊತ್ತಾಗದೇ ಇರುವುದು ಇವು ಸಾಮಾನ್ಯ ಲಕ್ಷಣಗಳಾಗಿವೆ. ಜಿಲ್ಲೆಯಲ್ಲಿ ಡಿ.24ರಿಂದ ಮುಂಜಾಗೃತ ಕ್ರಮವಾಗಿ ಆರ್ಟಿಫಿಸಿಆರ್ ಮತ್ತು ಲ್ಯಾಟ್ ವಿಧಾನಗಳ ಕೋವಿಡ್ ಟೆಸ್ಟ್ಗಳನ್ನು ಮಾಡಲಾಗುತ್ತಿದ್ದು, ಇಲ್ಲಿಯವರೆಗೆ 906 ಟೆಸ್ಟ್ಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಕೋವಿಡ್ 17 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಗುಣಮುಖರಾದವರು 04 ಜನ ಮತ್ತು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರು 13 ಜನ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ವೈದ್ಯರು ಮತ್ತು ಎಲ್ಲಾ ಸಿಬ್ಬಂದಿಯವರಿಗೆ ಕೋವಿಡ್ ಮುಂಜಾಗ್ರತೆಯ ತರಬೇತಿ ನೀಡಲಾಗಿದ್ದು, ಸಾರ್ವಜನಿಕರಿಗೆ ವ್ಯಾಪಕ ಮಾಹಿತಿ ನೀಡಲು ಕ್ರಮ ವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ 60ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಮಧುಮೇಹಿಗಳು, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು, ಮುಂತಾದವರು ಸೋಂಕಿಗೆ ಒಳಗಾಗದಂತೆ ಸಾರ್ವಜನಿಕ ಸ್ಥಳಗಳಿಗೆ ಅಥವಾ ಆಸ್ಪತ್ರೆಗಳಿಗೆ ಬರುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅದರಲ್ಲೂ ಮಕ್ಕಳಿಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ಸೋಂಕು ಖಚಿತಪಟ್ಟಲ್ಲಿ 7 ದಿನಗಳ ಕಾಲ ಪ್ರತ್ಯೇಕವಾಗಿ ಮನೆಯಲ್ಲಿಯೇ ಆರೈಕೆ ಪಡೆಯಬಹುದು. ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ವಿಮ್ಸ್ ಆಡಳಿತಾಧಿಕಾರಿ ಸಿದ್ರಾಮೇಶ್ವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
-------
ಬಳ್ಳಾರಿ: ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜನೆ ರಾಜ್ಯ ಮಟ್ಟದ ಯುವಜನೋತ್ಸವ ಯಶಸ್ವಿಯಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಮೊದಲ ಬಾರಿಗೆ ಜ.06 ಮತ್ತು 07ರಂದು ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು, ನಗರದ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ವಿಮ್ಸ್)ಯ ಆಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಯುವಜನೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಸಚಿವ ಸಂಪುಟದ ಮಂತ್ರಿಗಳನ್ನು ಆಹ್ವಾನಿಸಲಾಗುವುದು. ಜ.06 ರಂದು ಸಂಜೆ 06 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ನಂತರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಯುವಕರನ್ನು ಪೆÇ್ರೀತ್ಸಾಹಿಸಲು ಹಾಗೂ ಅವರ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು, ರಾಜ್ಯ ವಿವಿಧ ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವಾಗಿದೆ. ಇರುವ ಕಡಿಮೆ ಕಾಲಾವಕಾಶದಲ್ಲಿ ಜನಮಾನಸದಲ್ಲಿ ಉಳಿಯುವಂತೆ, ಬಹಳ ಅದ್ದೂರಿ ಹಾಗೂ ವಿಜೃಂಭಣೆಯಿಂದ ಆಯೋಜಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಚಂದನವನದ ನಟ ನಟಿಯರನ್ನು ಆಹ್ವಾನಿಸಲಾಗುವುದು ಹಾಗೂ ವಿವಿಧ ಗಾಯಕ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, ಸುಗಮ ಸಂಗೀತ ಏರ್ಪಡಿಸಬೇಕು ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಶಶಿಕುಮಾರ್ ಅವರು ಮಾತನಾಡಿ, ರಾಜ್ಯದ ಪ್ರತಿ ಜಿಲ್ಲೆಗಳಿಂದ 30ರಿಂದ 40 ಪ್ರತಿನಿಧಿಗಳ ತಂಡದಂತೆ ಆಯಾ ಜಿಲ್ಲೆಯ ಇಲಾಖೆಯ ಸಹಾಯಕ ನಿರ್ದೇಶಕರು ಕರೆ ತರಲಿದ್ದಾರೆ. ಯುವಜನೋತ್ಸವದಲ್ಲಿ 10 ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ ಎಂದು ವಿವರಿಸಿದರು.
ಸಭೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು, ಕಾರ್ಯಕ್ರಮ ಯಶಸ್ವಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಎನ್‍ಎಸ್‍ಎಸ್ ಮತ್ತು ಟಿಆರ್‍ಐ ಸಂಸ್ಥೆಗಳ ನೂತನ ವರ್ಷದ 2024ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.
------
ಉದ್ಯೋಗದಿಂದ ಉತ್ತಮ ಜೀವನ; ಪ್ರೊ. ಡಾ.ಅನಂತ್ ಝಂಡೇಕರ್
ಬಳ್ಳಾರಿ,ಡಿ.30(ಕನಾಟಕ ವಾರ್ತೆ):
ಉತ್ತಮ ಜೀವನ ರೂಪಿಸಿಕೊಳ್ಳಲು ಉದ್ಯೋಗ ಎಂಬುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರೂ ಉದ್ಯೋಗ ಕಂಡುಕೊಳ್ಳುವುದು ಮುಖ್ಯ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ.ಅನಂತ್ ಝಂಡೇಕರ್ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ “ಎಸ್‍ಸಿಪಿ/ಟಿಎಸ್‍ಪಿ ಯೋಜನೆ ಅಡಿಯಲ್ಲಿ ಲಭ್ಯವಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಜನತೆಗೆ ಸ್ವಯಂ-ಉದ್ಯೋಗ ಅವಕಾಶಗಳು” ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ಉದ್ಯೋಗಂ ಪುರುಷ ಲಕ್ಷಣಂ” ಎಂಬ ಗಾದೆಯಂತೆ ಈಗ ಎಲ್ಲಾ ಕ್ಷೇತ್ರದಲ್ಲೂ ಅವಕಾಶದ ಬಾಗಿಲು ತೆರೆದಿರುತ್ತದೆ. ಈಗಿನ ಕಾಲದಲ್ಲಿ “ಉದ್ಯೋಗಂ ಸರ್ವ ಲಕ್ಷಣಂ” ಎಂಬಂತಾಗಿ ಹೆಣ್ಣು ಮಕ್ಕಳು ಪುರಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತೀಯ ಹಣಕಾಸು ಸಚಿವಾಲಯದ ನಿವೃತ್ತ ಪ್ರಧಾನ ಮುಖ್ಯ ಆಯುಕ್ತರಾದ ಎಚ್.ಆರ್.ಭೀಮಾಶಂಕರ್ ಮಾತನಾಡಿ, ಭಾರತದಲ್ಲಿನ ಅರ್ಧದಷ್ಟು ಕೆಲಸಗಾರರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಮಹಿಳೆಯರಲ್ಲಿ ಸ್ವಯಂ ಉದ್ಯೋಗಿಗಳ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ವಿಶ್ವವಿದ್ಯಾಲಯಗಳಲ್ಲಿ ಈ ಮಾದರಿಯ ಉದ್ಯೋಗ ಅವಕಾಶಗಳ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಯುವ ಸಮುದಾಯಗಳಿಗೆ ಹೆಚ್ಚಿನ ನೆರವು ನೀಡಿದಂತಾಗುತ್ತದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ರುದ್ರೇಶ್.ಎಸ್.ಎನ್ ಮಾತನಾಡಿ, 21ನೇ ಶತಮಾನದಲ್ಲಿ ನಮ್ಮ ಶಿಕ್ಷಣ ಮತ್ತು ಜೀವಮಾನದ ಕಲಿಕೆಯ ಮೂಲಕ ಹೊಸದನ್ನು ಪಡೆದುಕೊಂಡು ಸ್ವಯಂ-ಉದ್ಯೋಗ ಗಿಟ್ಟಿಸಿಕೊಳ್ಳಬೇಕು, ಇದರಿಂದ ಸಮಾಜದಲ್ಲಿ ವ್ಯಕ್ತಿಗೆ ಗೌರವ, ಮನ್ನಣೆ ಸಿಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವರು (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾಥಪ್ಪ, ಎಸ್‍ಸಿ ಎಸ್‍ಟಿ ಘಟಕದ ನಿರ್ದೇಶಕರಾದ ಪ್ರೊ.ಗೌರಿ ಮಾಣಿಕ ಮಾನಸ್, ಡಾ. ಶಿವಪ್ರಸಾದ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
--------
132 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ ನಗರ ಸ್ವಚ್ಛತೆಗೆ ಪೌರಕಾರ್ಮಿಕರ ಪಾತ್ರ ಅತ್ಯಗತ್ಯ: ಸಚಿವ ಬಿ.ನಾಗೇಂದ್ರ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ನಗರದಲ್ಲಿ ದಿನನಿತ್ಯದ ಸ್ವಚ್ಛತೆ ಸೇವೆ ಸೇರಿದಂತೆ ನಗರ ಸುಂದರೀಕರಣಕ್ಕೆ ಪೌರಕಾರ್ಮಿಕರ ಪಾತ್ರ ಅತ್ಯಗತ್ಯವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ಇಲ್ಲಿಯ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 132 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಳ್ಳಾರಿ ನಗರವನ್ನು ಸ್ವಚ್ಚ ಮತ್ತು ಸುಂದರವನ್ನಾಗಿ ಮಾಡಲು ಪಣ ತೊಟ್ಟಿದ್ದು, ಹಂತ ಹಂತವಾಗಿ ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಈಗಾಗಲೇ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 341 ಪೌರಕಾರ್ಮಿಕರಲ್ಲಿ ಮೊದಲ ಹಂತವಾಗಿ 132 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.
ಖಾಯಂ ಉದ್ಯೋಗದ ಜೊತೆಗೆ ಭದ್ರತಾ ಸೇವೆ ಮತ್ತು ನೇಮಕಾತಿ ಆದೇಶ ಪತ್ರ ವಿತರಿಸಲಾಗಿದೆ. ಎರಡನೇ ಹಂತವಾಗಿ ಇನ್ನುಳಿದ ಪಾಲಿಕೆಯ ವಾಹನ ಚಾಲಕರು ಮತ್ತು ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಗುವುದು ಎಂದು ಹೇಳಿದರು.
ನೇಮಕಾತಿ ಪತ್ರ ಪಡೆದ ಎಲ್ಲಾ ಪೌರಕಾರ್ಮಿಕರು ಸಹ ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕು. ಈ ದಿನ ಎಲ್ಲರ ಮುಖದಲ್ಲಿ ಮಂದಹಾಸವಿದೆ. ಬಹಳ ದಿನಗಳ ಬೇಡಿಕೆ ಈಗ ಈಡೇರಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಪೌರಕಾರ್ಮಿಕರ ನೇಮಕಕ್ಕೆ ಕ್ರಮ ವಹಿಸಲಾಗುವುದು. ಯಾರೂ ಆತಂಕ ಪಡಬಾರದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ 4 ಗ್ಯಾರಂಟಿ ಯೋಜನೆಗಳು ಸಕಾಲದಲ್ಲಿ ತಲುಪುತ್ತಿದೆಯೇ ಎಂದು ವಿಚಾರಿಸಿದರು. ನಂತರ 132 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ವಕ್ಫ್ ಮಂಡಳಿ ಅಧ್ಯಕ್ಷ ಹುಮಾಯೂನ್ ಖಾನ್, ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
-------
ಶುಕ್ರವಾರ, ಡಿಸೆಂಬರ್ 29, 2023
ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಜ.01ರಂದು
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಜ.01ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಏರ್ಪಡಿಸಲಾಗಿದೆ.
ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು.
ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಮಹಾನಗರ ಪಾಲಿಕೆಯ ಉಪಮಹಾಪೌರೆ ಬಿ.ಜಾನಕಿ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕರು ವಿಶ್ವನಾಥ್.ಡಿ ಅವರು ವಿಶೇಷ ಉಪನ್ಯಾಸ ನೀಡುವರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೊನ್ನೂರಪ್ಪ.ಟಿ ಅವರು ಉಪಸ್ಥಿತರಿರಲಿದ್ದಾರೆ.
-------
ಗರ್ಭಿಣಿಯಂದು ತಿಳಿದ ಕೂಡಲೆ ತಾಯಿ ಕಾರ್ಡ್ ಪಡೆಯಲು ಮಾಹಿತಿ ನೀಡಿ: ಡಾ.ಶಂಕ್ರಪ್ಪ ಮೈಲಾರಿ
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ಗರ್ಭಿಣಿ ಎಂದು ತಿಳಿದ ಕೂಡಲೆ, 12 ವಾರದೊಳಗೆ ಸಂಬಂಧಿತ ಗರ್ಭಿಣಿಗೆ ತಾಯಿ ಕಾರ್ಡ್ ಒದಗಿಸುವ ಜೊತೆಗೆ ಕಾರ್ಡ್‍ನಲ್ಲಿ ನಮುದಾಗಿರುವ ಮಾಹಿತಿಯನ್ನು ತಿಳಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲ್ಬುರ್ಗಿ ವಿಭಾಗೀಯ ಸಹ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗರ್ಭಿಣಿಯವರಿಗೆ ಸಕಾಲದಲ್ಲಿ ತಾಯಿ ಕಾರ್ಡ್ ಒದಗಿಸುವ ಮೂಲಕ ಅವರ ಆಧಾರ್ ಮತ್ತು ಬ್ಯಾಂಕ್ ಮಾಹಿತಿಯನ್ನು ಕ್ರೂಢೀಕರಿಸಿ ಹೆರಿಗೆ ಅಪೂರ್ವದಲ್ಲಿ ಸಿಗುವ ಎಲ್ಲಾ ಚುಚ್ಚುಮದ್ದುಗಳು ಕಬ್ಬಿಣ ಅಂಶ ಮಾತ್ರೆಗಳನ್ನು ಸಕಾಲದಲ್ಲಿ ಕೊಡಿಸುವ ಮೂಲಕ ರಕ್ತಹೀನತೆಯನ್ನು ನಿಯಂತ್ರಿಸಿ ಸಹಜ ಹೆರಿಗೆಗೆ ಅಗತ್ಯ ಇರುವ ಸಿದ್ಧತೆಯನ್ನು ಕೈಗೊಳ್ಳಲು ತಿಳಿಸಿದರು.
ಜನನದ ನಂತರ ಮಗುವಿಗೆ 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳನ್ನು ಸಂಪೂರ್ಣವಾಗಿ ಒದಗಿಸಲು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಮಾತನಾಡಿ, ನವಂಬರ್ ತಿಂಗಳಿನಿಂದ ಇಲ್ಲಿಯವರೆಗೆ ತಾಯಿ ಮರಣವಾಗಿಲ್ಲ, ಹೆರಿಗೆ ನಿರೀಕ್ಷಿತ ದಿನಾಂಕ ಇರುವುವವರಿಗೆ ಸಂಪರ್ಕ ಕೈಗೊಂಡು ಅಗತ್ಯ ಸಿದ್ಧತೆಗಳು ಮಾಡಿಕೊಳ್ಳಲು ಮತ್ತು ಆಸ್ಪತ್ರೆಗೆ ಹೆರಿಗೆಗಾಗಿ ಬಂದಾಗ ಸಂಬಂಧಿಸಿದ ವೈದ್ಯರು ಮತ್ತು ಸಿಬ್ಬಂದಿಯವರು ಮೇಲ್ವಿಚಾರಣೆ ಕೈಗೊಂಡು ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವಾಗ ಜವಾಬ್ದಾರಿಯುತ ಸಿಬ್ಬಂದಿ, ಆಶಾ ಕಾರ್ಯಕರ್ತೆಯನ್ನು ಕಳುಹಿಸಿಕೊಂಡುವುದರಿಂದ ಸಾಕಷ್ಟು ಸಹಕಾರಿಯಾಗಿದೆ. ಅಲ್ಲದೆ ಗರ್ಭಿಣಿ ಅವಧಿಯ ಆರಂಭಿಕ ತಿಂಗಳುಗಳಲ್ಲಿ ರಕ್ತಸ್ರಾವ, ಮಗುವಿನ ಚಲನೆ ಇಲ್ಲದಿದ್ದರೆ, ಇತರೆ ಯಾವುದೇ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆದು ಸ್ಕ್ಯಾನಿಂಗ್ ಮಾಡಿಸಿ ಸಮಸ್ಯೆಯನ್ನು ಗುರ್ತಿಸಲು ಸಹಕರಿಸಲು ಹೆಚ್ಚು ಮಾಹಿತಿ ಪ್ರಚಾರಕ್ಕೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
*ಕೋವಿಡ್ ನಿರ್ವಹಣೆಗೆ ಸಿದ್ದತೆ:*
ಕೋವಿಡ್ ಮುಂಜಾಗ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್‍ಗಳ ಸಿದ್ದತೆ, ಆಕ್ಸಿಜನ್ ಸಂಪರ್ಕ ಸಮರ್ಪಕವಾಗಿದ್ದು, ಪ್ರತಿ ದಿನ ಕೆಮ್ಮು ನೆಗಡಿ ಉಸಿರಾಟದ ತೊಂದರೆ ಇರುವವರನ್ನು ಗುರ್ತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಹೊರಗಡೆ ಬರುವಂತ ಸಂದರ್ಭದಲ್ಲಿ ಮಾಸ್ಕ್ ಧರಿಸಲು ಜಾಗೃತಿ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ.ರಾಮ ಶೆಟ್ಟಿ, ಡಾ.ಗುರುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ, ಡಾ.ಭರತ್, ಡಾ.ಅರುಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೇಂಕೋಬ್ ನಾಯ್ಕ್ ಸೇರಿದಂತೆ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
------
ಜ.6, 7 ರಂದು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಆಯೋಜನೆ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ಬರುವ ಜನವರಿ 6 ಮತ್ತು 7 ರಂದು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಅವರು, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಜ.6ರಂದು ನಗರದ ವಿಮ್ಸ್ ಮೈದಾನದಲ್ಲಿ ಸಂಜೆ ವೇಳೆ ಮುಖ್ಯ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದೆ. ಇನ್ನೀತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೊದಲ ಬಾರಿಗೆ ನಡೆಯುವ ಕಾರ್ಯಕ್ರಮ ವಿಭಿನ್ನವಾಗಿ ಉತ್ಸವದ ರೀತಿಯಲ್ಲಿ ಸಂಘಟಿಸಬೇಕು. ಪ್ರತಿ ಜಿಲ್ಲೆಯಿಂದ 35 ಸ್ಪರ್ಧಾಳುಗಳಂತೆ 1000 ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದು, ಜ.6, 7 ರಂದು ಎರಡು ದಿನಗಳ ಕಾಲ ಯುವಜನೋತ್ಸವವನ್ನು ವಿಭಿನ್ನ, ವರ್ಣರಂಜಿತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಭಾರತೀಯ ಶಾಸ್ತ್ರೀಯ ಕಲೆಗಳನ್ನು ಯುವಜನರಲ್ಲಿ ಪೆÇ್ರೀತ್ಸಾಹಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಯುವ ಜನೋತ್ಸವದಲ್ಲಿ ಭಾಗವಹಿಸಲು ಆಗಮಿಸುವ ಸ್ಪರ್ಧಾಳುಗಳಿಗೆ ಉತ್ತಮ ವಸತಿ, ಗುಣಮಟ್ಟದ ಆಹಾರ, ಕುಡಿಯುವ ನೀರಿನ ವ್ಯವಸ್ಥೆ, ಭದ್ರತೆ, ಸಾರಿಗೆ ಸೇರಿದಂತೆ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎರಡು ದಿನಗಳ ಕಾಲ ಬಳ್ಳಾರಿ ನಗರದಲ್ಲಿ ಹಬ್ಬದ ವಾತಾವರಣವಿರಬೇಕು. ಯುವಜನೋತ್ಸವಕ್ಕೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು. ಯುವಜನೋತ್ಸವದಲ್ಲಿ ನಡೆಯುವ ಜಾನಪದ ನೃತ್ಯ, ಹಾಡು, ಎಕಾಂಕ ನಾಟಕ, ಮತ್ತಿತರ ಸ್ಪರ್ಧೆಗಳ ಜೊತೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸುವಂತೆ ಸೂಚಿಸಿದರು.
ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುತ್ತಿದ್ದು, ವೇದಿಕೆ ಸಮಿತಿ, ಊಟ ಮತ್ತು ವಸತಿ ಸಮಿತಿ, ಸಾರಿಗೆ ಸಮಿತಿ, ಆಹ್ವಾನ ಪತ್ರಿಕೆ ಮತ್ತು ಪ್ರಶಸ್ತಿ ಪತ್ರ ವಿತರಣಾ ಸಮಿತಿ, ಪ್ರಚಾರ ಸಮಿತಿಗಳನ್ನೊಳಗೊಂಡಂತೆ ವಿವಿಧ ಸಮಿತಿಗಳಿಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಡಿಸಿ ಅವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಜಿಪಂ ಉಪ ಕಾರ್ಯದರ್ಶಿ ಗಿರಿಜಾ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
-------
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ಕಂಪ್ಲಿ ಪಟ್ಟಣದಲ್ಲಿ ವಿವಿಧೆಡೆ ವೃತ್ತ ಹಾಗೂ ಮಹನೀಯರ ಪುತ್ಥಳಿಗಳನ್ನು ಸ್ಥಾಪಿಸಿ ಅನಾವರಣಗೊಳಿಸಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಅವರು ತಿಳಿಸಿದ್ದಾರೆ.
ಕಂಪ್ಲಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ಕನಕದಾಸರ ವೃತ್ತ, ಬಸವೇಶ್ವರ ವೃತ್ತ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ವೃತ್ತಗಳನ್ನು ನಿರ್ಮಿಸಿ, ಅವರ ಪುತ್ಥಳಿಯನ್ನು ಅನಾವರಣ ಮಾಡುವ ಕುರಿತು ಕಂಪ್ಲಿ ಶಾಸಕರು ಕೋರಿರುತ್ತಾರೆ.
ಕಂಪ್ಲಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ವೃತ್ತಗಳನ್ನು ನಿರ್ಮಿಸಿ, ಮಹನೀಯರ ಪುತ್ಥಳಿಯನ್ನು ಅನಾವರಣ ಮಾಡುವ ಬಗ್ಗೆ ಯಾರಿಗಾದರೂ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ಮತ್ತು ಪೂರಕ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 30 ದಿನದೊಳಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಸಲ್ಲಿಸಬಹುದಾಗಿದೆ.
ಅವಧಿ ಮೀರಿ ಬಂದ ಮನವಿ ಹಾಗೂ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯಾಧಿಕಾರಿ ಕೆ.ದುರುಗಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಡಿ.30ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11ಕೆವಿ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬ್ಯಾಂಕ್-2ನ ಫೀಡರ್ ಆದ ಎಫ್-36 ಹಾಗು ಎಫ್-76ರ ತುರ್ತು ನಿರ್ವಾಹಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.30 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಆಶ್ರಯ ಕಾಲೋನಿ, ಈದ್ಗ ರೋಡ್, ಟೀಚರ್ಸ್ ಕಾಲೋನಿ, ಜಾಗೃತಿ ನಗರ, ಲಿಡ್ಕರ್ ಕ್ವಾಟ್ರಸ್, ಕವಾಡಿ ಸ್ಟ್ರಿಟ್, ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಯುವನಿಧಿ ಯೋಜನೆಯಡಿ ನೋಂದಣಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಪದವಿ ಪಾಸಾದವರಿಗೆ ರೂ.3000 ಮತ್ತು ಡಿಪ್ಲೋಮಾ ಪಾಸಾದವರಿಗೆ ರೂ.1500ಗಳನ್ನು ನೀಡಲಾಗುತ್ತದೆ.
ಅರ್ಹರು ಸೇವಾ ಸಿಂಧು ಪೋರ್ಟಲ್, ಅಟಲ್ ಜೀ ಕೇಂದ್ರ, ಕರ್ನಾಟಕ-1, ಬಳ್ಳಾರಿ-1 ಮತ್ತು ಇತರೆ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು.
*ಅರ್ಹರು:*
2023ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಪದವಿ, ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿಲ್ಲದವರಾಗಿರಬೇಕು. ಸ್ವಯಂ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಅರ್ಹರು. ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ, ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು).
*ದಾಖಲೆಗಳು:*
ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅಥವಾ ದೂ.08392-294230 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
‘ಮನುಜ ಮತ ವಿಶ್ವಪಥ’ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಕುವೆಂಪು: ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ, ಆದರ್ಶಗಳು ಸಾರ್ವಕಾಲಿಕ. ‘ಮನುಜ ಮತ ವಿಶ್ವಪಥ’ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನ ಅಂಗವಾಗಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. ವಿಶ್ವಮಾನವ ಧರ್ಮವನ್ನು ರೂಪಿಸಿಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ವಿಚಾರಗಳನ್ನು ಪ್ರತಿಯೊಬ್ಬರೂ ಅಳವಡಿಕೊಳ್ಳುವ ಅಗತ್ಯವಿದೆ. ಕುವೆಂಪು ಅವರ ವೈಚಾರಿಕತೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಅನನ್ಯವಾದುದು ಎಂದರು.
ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಅವರ ಕಾವ್ಯಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶೇಷ ಉಪನ್ಯಾಸದಲ್ಲಿ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಕಲಾವತಿ.ಬಿ.ಜಿ ಅವರು ಮಾತನಾಡಿ, ‘ಮಾನವ ತನ್ನ ಮನಸನ್ನು ವಿಶ್ವದಷ್ಟು ವಿಶಾಲವಾಗಿ ಇಟ್ಟುಕೊಳ್ಳಬೇಕು. ಹೃದಯವಂತಿಕೆ ಸಜ್ಜನಿಕೆ, ಅಭಿಮಾನ, ಪ್ರೀತಿ, ಸಹನೆ ಹಾಗೂ ಕರುಣೆ ಎಲ್ಲವೂ ಮುಖ್ಯ ಎನ್ನುವುದನ್ನು ತಮ್ಮ ಕಾವ್ಯಗಳ ಮೂಲಕ ಕುವೆಂಪು ಅವರು ಜಗತ್ತಿಗೆ ಪರಿಚಯಿಸಿದವರು’ ಎಂದು ಸ್ಮರಿಸಿದರು.
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯನ್ನು ಅವರು ಪರಿಚಯಿಸಿದ್ದರು. ಈ ಪಂಚಮಂತ್ರಗಳು ಮುಂದಿನ ಪೀಳಿಗೆಗೆ ದೃಷ್ಟಿಕೋನವಾಗಬೇಕು ಎಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.
ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೊನ್ನೂರಪ್ಪ.ಟಿ., ಕಲಾವಿದರಾದ ಯಲ್ಲನಗೌಡ, ಮಂಜುನಾಥ ಸೇರಿದಂತೆ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
-------
ಜ.2ರಿಂದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ನಗರದಲ್ಲಿ ಹೊಸ ವರ್ಷದ ಹಾಗೂ ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಜನವರಿ 2 ರಿಂದ ಜನವರಿ 15 ರ ವರೆಗೆ 14 ದಿನಗಳ ಕಾಲ ರಾಜ್ಯ ಮಟ್ಟದ ವಿಶೇಷ ಕೈಮಗ್ಗ ಮೇಳ ವಸ್ತ್ರಸಿರಿ-2024 `ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ’ ಹಮ್ಮಿಕೊಳ್ಳಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉತ್ತರ ವಲಯ ಜಂಟಿ ನಿರ್ದೇಶಕ ವಿರೇಶ್ ದವಳೆ ಅವರು ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರರ ಸಂಘಗಳಿಗೆ ಉತ್ತೇಜನ ನೀಡಲು ಮತ್ತು ಪ್ರೋತ್ಸಾಹಿಸಲು, ಜಿಲ್ಲಾ ಪಂಚಾಯತ್ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ಆಶ್ರಯದಲ್ಲಿ ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿಯ ಗಾಂಧಿ ಭವನದಲ್ಲಿ ಜ.2ರಿಂದ ಜ.15ರವರೆಗೆ 14 ದಿನಗಳ ಕಾಲ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜ.2ರಂದು ಸಂಜೆ 04 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಅಂದಿನಿಂದ 14 ದಿನಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ ಎಂದರು.
ಈ ಮೇಳದಲ್ಲಿ ರಾಜ್ಯದ ಹಾಗೂ ಹೊರ ರಾಜ್ಯಗಳಿಂದ ನೇಕಾರ ಸಂಘಗಳು ಭಾಗವಹಿಸಲಿದ್ದು, ಉತ್ತಮ ವಿವಿಧ ನಮೂನೆಯ ಬಣ್ಣ ಬಣ್ಣದ ಹತ್ತಿ ಮತ್ತು ರೇಷ್ಮೆ ಸೀರೆ, ಟವೆಲ್, ಗುಡಾರ, ಲುಂಗಿ, ಬೆಡ್‍ಶೀಟ್, ಬೆಡ್‍ಸ್ಪ್ರೇಡ್, ಮೊಳಕಾಲ್ಮೂರು ಸೀರೆ, ಗದ್ವಾಲ್ ಸೀರೆ, ಗುಳೆದ್‍ಗುಡ್ಡ ಕಣ, ಕೈವಸ್ತ್ರ, ಕಂಬಳಿ, ಉಣ್ಣೆ ರಗ್ಗು, ಡೋರ್ ಮ್ಯಾಟ್, ವಾಲ್ ಹ್ಯಾಂಗಿಗ್ಸ್, ಡ್ರೆಸ್ ಮೆಟಿರಿಯಲ್, ಖಾದಿ ಬಟ್ಟೆಗಳು, ಸಂಡೂರಿನ ಲಮಾಣಿ ಕಸೂತಿ ಉತ್ಪನ್ನಗಳು ಲಭ್ಯವಿರಲಿವೆ.
ಕೈಮಗ್ಗ ನೇಕಾರರಿಂದ ನೇರವಾಗಿ ಗ್ರಾಹಕರಿಗೆ ಶೇ.20 ರಷ್ಟು ರಿಯಾಯಿತಿ ದರದಲ್ಲಿ ಸಿಗಲಿವೆ. ಸಾರ್ವಜನಿಕರು ಮತ್ತು ನಗರವಾಸಿಗಳು `ಕೈ ಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ’ದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರಾದ ವಿಠಲ ರಾಜ್ ಹಾಗೂ ಸಹಾಯಕ ನಿರ್ದೇಶಕರಾದ ಮಹಾಂತೇಶ್ ಕಂಚಿನ ಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
-------
ಗುರುವಾರ, ಡಿಸೆಂಬರ್ 28, 2023
ಡಿ.30ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ ಕುಡುತಿನಿ-ಕಂಪ್ಲಿ ರಸ್ತೆಯಲ್ಲಿ ಬಿಟಿಪಿಎಸ್‍ನ 220ಕೆ.ವಿ ಹೊಸ ಮಾರ್ಗದ ನಿರ್ಮಾಣ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ 110/11ಕೆ.ವಿ ಕುಡುತಿನಿ ಉಪ-ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳಲ್ಲಿ ಡಿ.30ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಫೀಡರ್-6ರ ಕೆಐಎಡಿಬಿ 1ನೇ ಮಾರ್ಗ ವ್ಯಾಪ್ತಿಯ ಏಳುಬೆಂಚಿ, ಸಿದ್ದಮ್ಮನಹಳ್ಳಿ, ಯರ್ರಂಗಳಿ, ಬಸವಣ್ಣ ಕ್ಯಾಂಪ್, ಭೂಲಕ್ಷ್ಮಿ ಕ್ಯಾಂಪ್ ಮುಂತಾದ ಐ.ಪಿ ಸೆಟ್‍ಗಳು. ಫೀಡರ್-2ರ ತಿಮ್ಮಲಾಪುರ (ಏಳುಬೆಂಚಿ) ಎನ್.ಜೆ.ವೈ ಮಾರ್ಗದ ತಿಮ್ಮಲಾಪುರ, ಏಳುಬೆಂಚಿ ಹಾಗೂ ಬಸವಣ್ಣ ಕ್ಯಾಂಪ್‍ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಡಿ.28(ಕರ್ನಾಟಕ ವಾರ್ತೆ):
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸುಮಾರು 45ರಿಂದ 50 ವರ್ಷದ ಅನಾಮಧೇಯ ವ್ಯಕ್ತಿಯು ಡಿ.22 ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ವಿಮ್ಸ್‍ನ ಶೀಥಲೀಕೃತ ಶವಗಾರ ಕೋಣೆಯಲ್ಲಿರಿಸಲಾಗಿದೆ. ವಾರಸುದಾರರು ತಿಳಿದಿರುವುದಿಲ್ಲ.
ಚಹರೆ ಗುರುತು: ಎತ್ತರ ಸುಮಾರು 5.5 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ, ತಲೆಯಲ್ಲಿ ಒಂದೂವರೆ ಇಂಚಿನ ಬಿಳಿ ಮಿಶ್ರಿತ ಕಪ್ಪು ಕೂದಲು, ಬಿಳಿ ಮಿಶ್ರಿತ ಕಪ್ಪು ಮೀಸೆ ಮತ್ತು ಗಡ್ಡ ಇದ್ದು, ಎಡ ಮೊಣಕೈವರೆಗೆ ಕೈ ಇರುವುದಿಲ್ಲ. ಬಿಳಿ ಬಣ್ಣದ ಮಾಸಿದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಬನಿಯನ್, ನೀಲಿ ಬಣ್ಣದ ಚೌಕಳಿಯ ಲುಂಗಿ ಧರಿಸಿರುತ್ತಾನೆ.
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯ ದೂ.08392-272022, ಪಿ.ಎಸ್.ಐ ಮೊ.9480803081, ಪಿ.ಐ ಮೊ.9480803045 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ಸಹಾಯಕ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ವೃದ್ಧೆ ಕಾಣೆ; ಪತ್ತೆಗಾಗಿ ಮನವಿ
ಬಳ್ಳಾರಿ,ಡಿ.28(ಕರ್ನಾಟಕ ವಾರ್ತೆ):
ನಗರದ ಕಾರ್ಕಲತೋಟದ ಹನುಮಾನ್ ನಗರದ ಸರ್ಕಾರಿ ಶಾಲೆಯ ಹತ್ತಿರದ 05ನೇ ವಾರ್ಡ್‍ನ ನಿವಾಸಿ ನಾಗೋತಿ ವರಲಕ್ಷ್ಮಿ ಎನ್ನುವ 73 ವರ್ಷದ ವೃದ್ಧೆ ಡಿ.25ರಂದು ಕಾಣೆಯಾಗಿರುವ ಕುರಿತು ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗಾಗಿ ಸಹಕರಿಸಬೇಕು ಎಂದು ಠಾಣಾಧಿಕಾರಿಯವರು ತಿಳಿಸಿದ್ದಾರೆ.
ಕಾಣೆಯಾದ ವೃದ್ಧೆಯ ಚಹರೆ ಗುರುತು: ಅಂದಾಜು 5.6 ಅಡಿ, ಕೆಂಪನೇ ಮೈಬಣ್ಣ, ದುಂಡು ಮುಖ, ತೆಳ್ಳನೇ ಮೈಕಟ್ಟು ಹೊಂದಿರುತ್ತಾಳೆ.
ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಸೀರೆ, ತಿಳಿ ಬಿಳಿ ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ.
ಈ ಮೇಲ್ಕಂಡ ಚಹರೆಯುಳ್ಳ ವೃದ್ಧೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯ ದೂ.08392-250033, ಮೊ.9480803096 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಸ್ವಸ್ಥ್ಯ ಸಮಾಜ ನಿರ್ಮಿಸಲು ಯುವಕರು ಮುಂದಾಗಲಿ: ರುದ್ರೇಶ ಎಸ್.ಎನ್
ಬಳ್ಳಾರಿ,ಡಿ.28(ಕರ್ನಾಟಕ ವಾರ್ತೆ):
ದೇಶದ ಯುವಕರು ಸಮಾಜದ ಸ್ವಾಸ್ಥ್ಯ ಕಾಪಾಡಲು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ರುದ್ರೇಶ ಎಸ್.ಎನ್ ಅವರು ಹೇಳಿದರು.
ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಷ್ಟೀಯ ಸೇವಾ ಯೋಜನಾ ಕೋಶ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹೊರವಲಯದಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ “ಹೆಚ್.ಐ.ವಿ/ಏಡ್ಸ್, ಟಿ.ಬಿ., ಆರ್‍ಆರ್‍ಸಿ ಗುರಿ ಉದ್ದೇಶ ಮತ್ತು ರಕ್ತದಾನ” ಕುರಿತಾದ ವಿಶ್ವವಿದ್ಯಾಲಯ ವ್ಯಾಪ್ತಿಗೊಳಪಡುವ ಎಲ್ಲಾ ಪದವಿ ಮಹಾವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ಸಮಾಜ ನಿರ್ಮಿಸುವಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ಯುವಕರು ದುಶ್ಚಟಗಳಿಗೆ ಒಳಗಾಗದೆ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಪಡೆದಂತಹ ಮಾಹಿತಿಯನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಡಾ.ಅನಂತ ಎಲ್.ಝಂಡೆಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಇಲಾಖೆಯು ಹೆಚ್‍ಐವಿ ಏಡ್ಸ್ ನಿಯಂತ್ರಣ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. ಏಡ್ಸ್ ಕುರಿತಾಗಿ ಜನರಲ್ಲಿರುವ ತಪ್ಪು ಮಾಹಿತಿಯನ್ನು ಹೋಗಲಾಡಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸುತ್ತಿದ್ದು, ಇಂತಹ ಮಾರಕ ರೋಗಗಳ ಕುರಿತು ಅಧ್ಯಾಪಕರುಗಳು ಯುವಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಗಿರೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಭಾರ ಕುಲಪತಿಗಳಾದ ಪ್ರೊ. ಸಾಹೇಬ್ ಅಲಿ ಹೆಚ್.ನಿರಗುಡಿ, ರಾಷ್ಟ್ರೀಯ ಸೇವಾಯೋಜನೆ ಸಂಯೋಜನಾಧಿಕಾರಿ ಡಾ.ಕುಮಾರ ಸೇರಿದಂತೆ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು ಹಾಗೂ ವವಿಶ್ವವಿದ್ಯಾಲಯ ವ್ಯಾಪ್ತಿಗೊಳಪಡುವ ಎಲ್ಲಾ ಪದವಿ ಮಹಾವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
-------
ಬುಧವಾರ, ಡಿಸೆಂಬರ್ 27, 2023
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾ
ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ):
ನಗರದಲ್ಲಿ ಬುಧವಾರದಂದು ಅಪರಾಧ ತಡೆ ಮಾಸಾಚರಣೆ-2023ರ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಜಿಲ್ಲಾ ಪೆÇಲೀಸ್ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ಹಾರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಕ್ಕಳ ವಿಶೇಷ ಪೆÇಲೀಸ್ ಘಟಕದ ನೋಡಲ್ ಅಧಿಕಾರಿಯೂ ಆಗಿರುವ ಕೆ.ಪಿ.ರವಿಕುಮಾರ್, ಬಳ್ಳಾರಿ ನಗರ ಉಪವಿಭಾಗ ಡಿ.ಎಸ್.ಪಿ ಹಾಗೂ ಹಿರಿಯ ಮಕ್ಕಳ ಕಲ್ಯಾಣ ಪೆÇಲೀಸ್ ಅಧಿಕಾರಿ ಚಂದ್ರಕಾಂತ ನಂದಾರೆಡ್ಡಿ, ಸ್ಥಳೀಯ ಪೆÇಲೀಸ್ ಠಾಣೆಗಳ ಪೆÇಲೀಸ್ ಇನ್ಸ್‍ಪೆಕ್ಟರ್, ಪಿ.ಎಸ್.ಐ ಮಹಿಳಾ ಪೆÇಲೀಸ್ ಸಿಬ್ಬಂದಿ, ಬಳ್ಳಾರಿ ನಗರದ ವಿವಿಧ ಶಾಲೆಗಳಿಂದ ಸುಮಾರು 500 ಜನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು, ಬಳ್ಳಾರಿ ನಗರದ ಒಟ್ಟು 30 ಜನ ಪೆÇಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಜಾಥಾವು ಜಿಲ್ಲಾ ಪೆÇಲೀಸ್ ಕಚೇರಿಯಿಂದ ಆರಂಭವಾಗಿ ದುರುಗಮ್ಮ ಗುಡಿ ಮೂಲಕ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಮೀನಾಕ್ಷಿ ಸರ್ಕಲ್‍ನಿಂದ ಸಂಗಮ್ ವೃತ್ತದವರೆಗೆ ಸಾಗಿ ಬಂದಿತು.
ಜಾಗೃತಿ ಜಾಥಾದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು, ಮಾದಕ ದ್ರವ್ಯಗಳು ಹಾಗೂ ಸೈಬರ್ ಅಪರಾಧಗಳ ಕುರಿತು, ಸ್ವತ್ತಿನ ಅಪರಾಧಗಳ ಕುರಿತು, ಸಂಚಾರಿ ನಿಯಮ ಕುರಿತು ನಗರದಲ್ಲಿ ಜಾಗೃತಿ ಮೂಡಿಸಲಾಯಿತು.
------
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಪರಿಷ್ಕøತ ವೇಳಾಪಟ್ಟಿ
ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ):
ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ:01.01.2024ರ ಸಂಬಂಧ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ವೇಳಾಪಟ್ಟಿಯನ್ನು ಪರಿಷ್ಕರಿಸಿ ಅಂತಿಮ ದಿನಾಂಕ ಹೊರಡಿಸಿದ್ದು, ತಿದ್ದುಪಡಿ, ವಿಳಾಸ ಬದಲಾವಣೆ, ವಿವಿಧ ನಮೂನೆಯ ಅರ್ಜಿ ಫಾರಂ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ತಿಳಿಸಿದ್ದಾರೆ.
ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲು 2024ರ ಜ.01 ರವರೆಗೆ ಅವಧಿ ನಿಗದಿಪಡಿಸಿದೆ. ಅಂತಿಮ ಪ್ರಕಟಣೆಗಾಗಿ ಆಯೋಗದ ಅನುಮತಿ ಪಡೆಯುವುದು ಹಾಗೂ ಡೇಟಾಬೇಸ್‍ನ್ನು ನವೀಕರಿಸುವುದು, ಪೂರಕಗಳ ಮುದ್ರಣ ಅವಧಿ 2024ರ ಜ.17 ಮತ್ತು 2024 ರ ಜ.22 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದೆ.
ಅರ್ಹತಾ ದಿನಾಂಕ:01.01.2024ಕ್ಕೆ 18 ವರ್ಷ ಪೂರ್ಣಗೊಂಡ ಎಲ್ಲಾ ಅರ್ಹ ಮತದಾರರು ನಮೂನೆ-6 ಅರ್ಜಿ ಸಲ್ಲಿಸಬಹುದು. ಹೆಸರು, ವಿಳಾಸ, ಭಾವಚಿತ್ರ ತಿದ್ದುಪಡಿಗಾಗಿ ನಮೂನೆ-8 ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು (ಮರಣ ಹೊಂದಿದ ಮನೆಯ ಸಂಬಂಧಿಕರು) ನಮೂನೆ-7 ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ ದಿನಾಂಕ 27.12.2023 ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ನಮೂನೆ-6, 7 ಮತ್ತು 8 ರಲ್ಲಿ ಚುನಾವಣಾ ಆಯೋಗವು ಸೂಚಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹ ಮತದಾರರು ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು, ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ವಿಶ್ವಮಾನವ ದಿನಾಚರಣೆ ಡಿ.29ರಂದು
ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ):
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಡಿ.29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಏರ್ಪಡಿಸಲಾಗಿದೆ.
ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು.
ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಮಹಾನಗರ ಪಾಲಿಕೆಯ ಉಪಮಹಾಪೌರೆ ಬಿ.ಜಾನಕಿ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಕಲಾವತಿ.ಬಿ.ಜಿ ಅವರು ವಿಶೇಷ ಉಪನ್ಯಾಸ ನೀಡುವರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೊನ್ನೂರಪ್ಪ.ಟಿ ಅವರು ಉಪಸ್ಥಿತರಿರಲಿದ್ದಾರೆ.
-------
ಅಲ್ಪಸಂಖ್ಯಾತರ ಕಾನೂನು ಪದವಿಧರರ ವೃತ್ತಿ ತರಬೇತಿ ಶಿಷ್ಯವೇತನ; ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ
ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ):
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಕಾನೂನು ಪದವೀಧರರ ವೃತ್ತಿ ತರಬೇತಿ ಶಿಷ್ಯವೇತನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಜನವರಿ 10 ರವರೆಗೆ ವಿಸ್ತರಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಹತ್ತಿರದ ಮೌಲನಾ ಆಜಾದ್ ಭವನದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಅಥವಾ ಬಳ್ಳಾರಿ ಕಚೇರಿ ದೂ.08392-245755, ಮೊ.8310321101, ಸಿರುಗುಪ್ಪ-9148889975, ಸಂಡೂರು-9036925966 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಶೃತಿ ಬಿ.ಎಸ್ ಅವರಿಗೆ ಡಾಕ್ಟರೇಟ್ ಪದವಿ
ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ):
ತಾಲ್ಲೂಕಿನ ಬೂದಿಹಾಳ್ ಗ್ರಾಮದ ಶೃತಿ.ಬಿ.ಎಸ್ ತಂದೆ ಶಿವಲಿಂಗನಗೌಡ.ಬಿ.ಸಿ ಇವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಅರ್ಥಶಾಸ್ತ್ರ ವಿಭಾಗದಲ್ಲಿ (ಎಕನಾಮಿಕ್ಸ್) ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಸಮಾಜ ವಿಜ್ಞಾನ ನಿಕಾಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಸ್.ಶಶಿಧರ ಅವರ ಮಾರ್ಗದರ್ಶನದಲ್ಲಿ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಏರ್ ಪೊಲ್ಲ್ಯೂಷನ್ ಇಂಪ್ಯಾಕ್ಟ್ ಇನ್ ಇಂಡಿಯಾ” ಎಂಬ ವಿಷಯದಲ್ಲಿ ಪಿ.ಹೆಚ್.ಡಿ ಮಹಾ ಪ್ರಬಂಧ ಮಂಡಿಸಿದ್ದಕ್ಕೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ.
------
ದಿನ ಪತ್ರಿಕೆ ವಿತರಕರಿಂದ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ):
ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ವಲಯದಡಿ ಬರುವ ದಿನ ಪತ್ರಿಕೆ ವಿತರಿಸುವ ಕಾರ್ಮಿಕರು ಅಪಘಾತಗೊಂಡಲ್ಲಿ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಪಡೆಯಲು ಅರ್ಹ ದಿನಪತ್ರಿಕೆ ವಿತರಿಸುವ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಕಮಲ್ ಷಾ ಅಲ್ತಾಫ್ ಅಹಮದ್ ಅವರು ತಿಳಿಸಿದ್ದಾರೆ.
ಸರ್ಕಾರವು ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಎಲ್ಲಾ ಅರ್ಹ ದಿನಪತ್ರಿಕೆ ವಿತರಿಸುವ ಕಾರ್ಮಿಕರುಗಳು ಕೇಂದ್ರ ಸರ್ಕಾರದ ಇ-ಶ್ರಮ್ ಪೋರ್ಟಲ್‍ನಲ್ಲಿ (https://eshram.gov.in) “News Paper Boy” ಎಂಬ ವರ್ಗದಡಿ ನೋಂದಾಯಿಸಿಕೊಳ್ಳಬೇಕು.
ಸೌಲಭ್ಯಗಳು:
ಅಪಘಾತದಿಂದ ಮರಣ ಹೊಂದಿದಲ್ಲಿ ರೂ.2 ಲಕ್ಷ ಪರಿಹಾರ. ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2 ಲಕ್ಷಗಳವರೆಗೆ (ಶೇಕಡಾವಾರು ದುರ್ಬಲತೆ ಆಧಾರದ ಮೇಲೆ) ಪರಿಹಾರ. ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ ರೂ.1 ಲಕ್ಷಗಳವರೆಗೆ ಪರಿಹಾರ ಸಿಗಲಿದೆ.
ಅರ್ಹತೆ:
16 ರಿಂದ 59 ವಯಸ್ಸಿನವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಪಿ.ಎಫ್ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು. ಕೇಂದ್ರ ಸರ್ಕಾರದ ಇ-ಶ್ರಮ್ ಪೋರ್ಟಲ್‍ನಲ್ಲಿ “News Paper Boy” ಎಂಬ ವರ್ಗದಡಿ ನೋಂದಣಿಯಾಗಿರಬೇಕು.
ದಾಖಲೆಗಳು:
ಆಧಾರ್ ಕಾರ್ಡ್(ಆಧಾರ್ ಕಾರ್ಡ್ ಇ ಕೆವೈಸಿ ಕಡ್ಡಾಯ), ಸಕ್ರಿಯ ಬ್ಯಾಂಕ್ ಖಾತೆಯ ಪಾಸ್ ಬುಕ್, ಸಕ್ರಿಯ ಮೊಬೈಲ್ ಸಂಖ್ಯೆ. ಖಾತೆ ಹೊಂದಿರುವ ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡ್ ಇರಬೇಕು.
ಹೆಚ್ಚಿನ ಮಾಹಿತಿಗಾಗಿ ನಲ್ಲಚೇರುವು ಪ್ರದೇಶದ ಮಹಮ್ಮದಿಯ ಕಾಲೇಜ್ ಹಿಂಭಾಗದ ಬಳ್ಳಾರಿ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ಅವರ ಕಚೇರಿ ಅಥವಾ ಕಚೇರಿಯ ದೂ.08392-254875 ಹಾಗೂ ಆಯಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರುಗಳನ್ನು ಸಂಪರ್ಕಿಸಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಗಿಗ್ ಕಾರ್ಮಿಕರ ಜೀವ ವಿಮೆ ನೋಂದಣಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ):
ಕಾರ್ಮಿಕ ಇಲಾಖೆ ವತಿಯಿಂದ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತಗೊಂಡ ಕಾರ್ಮಿಕರಿಗೆ ಅಪಘಾತ ಪರಿಹಾರ ಪಡೆಯಲು “ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ” ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಎಲ್ಲಾ ಅರ್ಹ ಗಿಗ್ ಕಾರ್ಮಿಕರುಗಳಾದ ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‍ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‍ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರುಗಳು ಸೇವಾಸಿಂಧು (https://sevasindhuservices.karnataka.gov.in) ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬಹುದು.
ಸೌಲಭ್ಯಗಳು:
ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ.2 ಲಕ್ಷ ಹಾಗೂ ಜೀವ ವಿಮೆ ರೂ.2 ಲಕ್ಷ ಸೇರಿ ಒಟ್ಟು ರೂ.4 ಲಕ್ಷ ಸಿಗಲಿದೆ. ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2 ಲಕ್ಷಗಳವರೆಗೆ ಪರಿಹಾರ. ಆಸ್ಪತ್ರೆ ವೆಚ್ಚ ಮರುಪಾವತಿ ರೂ.1 ಲಕ್ಷಗಳವರೆಗೆ (ಅಪಘಾತ ಪ್ರಕರಣಗಳಿಗೆ ಮಾತ್ರ) ಪರಿಹಾರ. ಜೀವ ವಿಮಾ ರೂ.2 ಲಕ್ಷ ಪರಿಹಾರ.
ಅರ್ಹತೆ:
18 ರಿಂದ 60 ವಯೋಮಾನದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು. ಕರ್ನಾಟಕದಲ್ಲಿ ಗಿಗ್ ವೃತ್ತಿ (ಡೆಲಿವರಿ ಕಾರ್ಯ) ನಿರ್ವಹಿಸುತ್ತಿರುವವರಿಗೆ ಮಾತ್ರ.
ಬೇಕಾದ ದಾಖಲೆಗಳು:
ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯು ಆಧಾರ್ ಲಿಂಕ್ ಆಗಿರಬೇಕು, ವೃತ್ತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ/ಉದ್ಯೋಗ ಪ್ರಮಾಣ ಪತ್ರ, ಇ-ಶ್ರಮ್ ನೋಂದಣಿ ಸಂಖ್ಯೆ (ಇಲ್ಲವಾದಲ್ಲಿ eshram.gov.in ಅಲ್ಲಿ ನೋಂದಾಯಿಸಿ ಪಡೆದುಕೊಳ್ಳುವುದು), ಪಡಿತರ ಚೀಟಿ, ಪಾನ್ ಕಾರ್ಡ್ ಸಂಖ್ಯೆ ಇರುವ ದಾಖಲೆ ಇರಬೇಕು.
ಹೆಚ್ಚಿನ ಮಾಹಿತಿಗಾಗಿ ನಲ್ಲಚೇರುವು ಪ್ರದೇಶದ ಮಹಮ್ಮದಿಯ ಕಾಲೇಜ್ ಹಿಂಭಾಗದ ಬಳ್ಳಾರಿ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ಅವರ ಕಚೇರಿ ಅಥವಾ ಕಚೇರಿಯ ದೂ.08392-254875 ಹಾಗೂ ಆಯಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರುಗಳನ್ನು ಸಂಪರ್ಕಿಸಿಸಬಹುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಕಮಲ್ ಷಾ ಅಲ್ತಾಫ್ ಅಹಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳಿದ್ದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ: ಡಾ.ವೀರೇಂದ್ರ ಕುಮಾರ್
ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ):
ದೇಹದ ಮೈಮೇಲೆ ತಿಳಿಬಿಳಿ ತಾಮ್ರವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಅಥವಾ ಮುಖದಲ್ಲಿ ಗಂಟುಗಳು, ಕಿವಿಯ ಮೇಲೆ ಗಂಟುಗಳು ಕಂಡುಬಂದಲ್ಲಿ ತಪ್ಪದೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ಇವು ಕುಷ್ಠರೋಗದ ಚಿಹ್ನೆಗಳಾಗಿರಬಹುದು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಜಿ.ವೀರೇಂದ್ರ ಕುಮಾರ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೊರಚಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳಿಂದ ಸಮುದಾಯದಲ್ಲಿ ಇವತ್ತಿಗೂ ಇರುವ ಚರ್ಮ ಮತ್ತು ನರರೋಗದ ಕಾಯಿಲೆಯಾಗಿರುವ ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೈ ಎಂಬ ರೋಗಾಣುವಿನಿಂದ ಬರುತ್ತದೆ. ಚಿಕಿತ್ಸೆ ಪಡೆಯದೇ ಇರುವ ಕುಷ್ಠರೋಗಿಯು ಕೆಮ್ಮಿದಾಗ, ಸೀನಿದಾಗ ತುಂತುರು ಹನಿಗಳು ಗಾಳಿಯ ಮೂಲಕ ಇನ್ನೊಬ್ಬರ ದೇಹವನ್ನು ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವಂತಹ ರೋಗವಾಗಿದ್ದು, ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಅಂಗವಿಕಲತೆಯಾಗುವುದನ್ನು ತಪ್ಪಿಸಬಹುದು. ಪ್ರಸ್ತುತ ಜಿಲ್ಲೆಯಲ್ಲಿ 86 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಹೊಸದಾಗಿ ಕುಷ್ಠರೋಗ ಪ್ರಕರಣಗಳಿಗೆ ಉಂಟಾಗುವ ಅಂಗವಿಕಲತೆಯನ್ನು ಕಡಿಮೆ ಮಾಡಲು ಮತ್ತು ಸುಪ್ತ ಕುಷ್ಠರೋಗ ಪ್ರಕರಣಗಳನ್ನು ಅತೀ ಶೀಘ್ರವಾಗಿ ಪತ್ತೆ ಹಚ್ಚಲು ಇಂದಿನಿಂದ 11ನೇ ಜನವರಿ-2024 ರ ವರೆಗೆ ಮನೆ ಮನೆ ಭೇಟಿ ನೀಡುವ ಮೂಲಕ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಕೋರಿದರು.
ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪುರುಷ ಮತ್ತು ಮಹಿಳಾ ಸ್ವಯಂಸೇವಕರು ಮನೆ-ಮನೆ ಭೇಟಿ ಮಾಡಿ ಕುಷ್ಠರೋಗದ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಮನೆಯಲ್ಲಿರುವ 2 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ತಪಾಸಣೆ ಕೈಗೊಂಡು ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ರೆಫರಲ್ ಫಾರಂ ನೀಡಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಒಂದು ವೇಳೆ ಅಗತ್ಯವೆನಿಸಿದರೆ ಜಿಲ್ಲಾ ಆಸ್ಪತ್ರೆ ಹಾಗು ವಿಜಯನಗರ ವೈದೈಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ತಜ್ಞ ವೈದ್ಯರುಗಳ ಹತ್ತಿರ ತಪಾಸಣೆ ಮಾಡಿಸಿಕೊಳ್ಳಲು ಕಳುಹಿಸಲಾಗುವುದು, ಖಚಿತಪಟ್ಟಲ್ಲಿ ರೋಗಿಯ ಮೈಮೇಲೆ ಚಿಹ್ನೆಗಳು ಅಥವಾ ವೈದ್ಯರ ನಿರ್ಧರಿಸಿದಂತೆ 6 ತಿಂಗಳಿನಿಂದ 1 ವರ್ಷದ ಚಿಕಿತ್ಸೆಯನ್ನು ನೀಡಲಾಗುವುದು. ಚಿಕಿತ್ಸೆ ಪೂರ್ಣಗೊಂಡಲ್ಲಿ ರೋಗ ಸಂಪೂರ್ಣ ಗುಣವಾಗವುದು ಯಾವುದೇ ಆತಂಕ ಬೇಡವೆಂದು ತಿಳಿಸಿದರು.
ಪ್ರಾರಂಬಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವುದರ ಮೂಲಕ ಸಮಾಜದಲ್ಲಿ ಸೋಂಕಿನ ಮೂಲವನ್ನು ನಿರ್ಮೂಲನೆ ಮಾಡಲು ಮಹಾತ್ಮ ಗಾಂಧೀಜಿಯವರು ಕಂಡ ಕನಸು “ಕುಷ್ಠರೋಗ ಮುಕ್ತ ಭಾರತ ” ಕ್ಕಾಗಿ ಸದರಿ ತಂಡಗಳು ತಪಾಸಣೆ ಮಾಡಲು ತಮ್ಮ ಮನೆಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಸುರೇಖ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರು, ಕುಷ್ಠರೋಗ ವಿಭಾಗದ ಸುಮನ್, ಮಾನಪ್ಪ, ಎನ್.ಪಂಪಯ್ಯಸ್ವಾಮಿ, ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರ ಸಿಬ್ಬಂದಿಯವರಾದ ತುಳಸಿ, ಚೈತ್ರ, ದೀಪ, ಗಂಗಾಧರ, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು, ಪೂಜಾ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)










































