ಬುಧವಾರ, ಡಿಸೆಂಬರ್ 27, 2023

ಆನ್‍ಲೈನ್‍ನಲ್ಲಿ ವ್ಯವಹರಿಸುವಾಗ ಎಚ್ಚರಿಕೆ: ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ

ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ): ಸಾರ್ವಜನಿಕರು ಇಂದಿನ ಡಿಜಿಟಲ್ ಯುಗದಲ್ಲಿ ವ್ಯವಹರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಕಿವಿಮಾತು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕೋಟೆ ಮುಖ್ಯ ರಸ್ತೆಯ ಶ್ರೀಮೇದಾ ಪದವಿಪೂರ್ವ ವಿದ್ಯಾಲಯದ ಆಡಿಟೋರಿಯಮ್ ಸಭಾಂಗಣದಲ್ಲಿ “ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರ ಯುಗದಲ್ಲಿ ಗ್ರಾಹಕರ ರಕ್ಷಣೆ” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಔದ್ಯೋಗಿಕರಣದ ನಂತರ ಬಂದಿರುವ ಪ್ರಸ್ತುತ ಡಿಜಿಟಲ್ ಯುಗದಲ್ಲಿ ಜನರು ಬಹುತೇಕ ಆನ್‍ಲೈನ್‍ನಲ್ಲಿಯೇ ವ್ಯವಹರಿಸುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಮೋಸ ಕೂಡ ಹೋಗುತ್ತಿದ್ದಾರೆ. ಆದ್ದರಿಂದ ಗ್ರಾಹಕರು ಆನ್‍ಲೈನ್‍ನಲ್ಲಿ ವ್ಯವಹರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಹಿಂದೆ ಸಾಮಾನ್ಯವಾಗಿ ಜೇಬುಗಳರನ್ನು ಕೇಳಿರುತ್ತಿದ್ದೆವು ಹಾಗೂ ನೋಡಿತ್ತಿದ್ದೇವು; ಆದರೆ ಈಗ ಪ್ರಸ್ತುತ ದಿನಮಾನಗಳಲ್ಲಿ ಆನ್‍ಲೈನ್ ಕಳ್ಳರು ಹೆಚ್ಚಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಆನ್‍ಲೈನ್‍ನಲ್ಲಿ ಯಾವುದೇ ಗುರುತು ಪರಿಚಯವಿಲ್ಲದ ಅನಾಮಧೇಯ ವ್ಯಕ್ತಿಗಳಿಗೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಮಾಹಿತಿ, ಓಟಿಪಿ ಸೇರಿದಂತೆ ಇತರೆ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದರು. ಇದೇ ಸಂದರ್ಭದಲ್ಲಿ ಮೊದಲ ಬಾರಿಗೆ 1932ರಲ್ಲಿ ಗ್ರಾಹಕರ ವ್ಯಾಜ್ಯದಲ್ಲಿ ನಡೆದ ಡೊನೊಗ್ಯು ವಿ ಸ್ಟೀವನ್ಸ್‍ನ ಪ್ರಕರಣದ ಸಾರಾಂಶ ವಿವರಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ತಿಪ್ಪೇಸ್ವಾಮಿ.ಎನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಹಕರು ಯಾವುದೇ ವಸ್ತು, ಸರಕು ಮತ್ತು ಸೇವೆ ಪಡೆದ ನಂತರ ಸಮಸ್ಯೆ ಕಂಡು ಬಂದಲ್ಲಿ ಎರಡು ವರ್ಷದೊಳಗಾಗಿ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದರು. ಹೋಟೆಲ್‍ಗಳಲ್ಲಿ ತಿನ್ನುವ ಆಹಾರ ಪದಾರ್ಥ ರುಚಿ ಮತ್ತು ಗುಣಮಟ್ಟ ಇಲ್ಲದಿದ್ದಲ್ಲಿ, ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಬಹುದು. ಮಾಲ್‍ಗಳಲ್ಲಿ ಯಾವುದೇ ವಸ್ತು ಅಥವಾ ಇನ್ನಿತರೆ ಸಾಮಾಗ್ರಿಗಳನ್ನು ಖರೀದಿ ಮಾಡಿದಾಗ ಅವುಗಳನ್ನು ಕೊಂಡೊಯ್ಯಲು ನೀಡುವ ಬ್ಯಾಗ್‍ಗಳಿಗೂ ಬೆಲೆ ನಿಗದಿ ಮಾಡಿರುತ್ತಾರೆ. ಸುಪ್ರೀಂ ಕೋರ್ಟ್‍ನ ಆದೇಶದಂತೆ ಕ್ಯಾರಿ ಬ್ಯಾಗ್‍ಗಳನ್ನು ಉಚಿತವಾಗಿ ನೀಡಬೇಕು, ಇಲ್ಲದಿದ್ದಲ್ಲಿ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ದೂರು ನೀಡಬಹುದು ಎಂದು ತಿಳಿಸಿದರು. ಪ್ರತಿ ಅಂಗಡಿ, ಹೋಟೆಲ್ ಹಾಗೂ ಬಾರ್&ರೆಸ್ಟೋರೆಂಟ್‍ಗಳಲ್ಲಿ ಖರೀದಿಸುವ ಸಾಮಾಗ್ರಿಗಳ ಬೆಲೆಗಳನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಒಂದುವೇಳೆ ಇಲ್ಲದಿದ್ದಲ್ಲಿ ಗ್ರಾಹಕರಾದ ನಾವು ಪ್ರಶ್ನಿಸಲು ಅಧಿಕಾರವಿದೆ ಎಂದರು. “ಹಿಂದಿನ ಕಾಲದಲ್ಲಿ ಕೊಳ್ಳುವವನೇ ಎಚ್ಚರ..!! ಎಂದು ಹೇಳಲಾಗುತ್ತಿತ್ತು; ಆದರೆ ಈಗ ಮಾರುವವನೇ ಎಚ್ಚರ...!!” ಎಂಬಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಕಾಯ್ದೆ ಕಾನೂನುಗಳಿವೆ. ಗ್ರಾಹಕರು ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಸಕೀನ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರಾದ ಎನ್.ಪ್ರಕಾಶ್ ಅವರು “ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರ ಯುಗದಲ್ಲಿ ಗ್ರಾಹಕರ ರಕ್ಷಣೆ” ಎಂಬ ವಿಷಯ ಮತ್ತು ಹಿರಿಯ ವಕೀಲರಾದ ಬಿ.ವೆಂಕಟೇಶ್ ಪ್ರಸಾದ್ ಅವರು “ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಕಲಂ 72”ರ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ, ಕಾನೂನು ಮಾಪನ ಶಾಸ್ತ್ರದ ಸಹಾಯಕ ನಿಯಂತ್ರಕರಾದ ಅಮೃತಾ ಪಿ.ಚವ್ಹಾಣ, ಜಿಲ್ಲಾ ಪರಿವೀಕ್ಷಣಾ ಘಟಕದ ಜಿಲ್ಲಾ ಅಂಕಿತಾಧಿಕಾರಿ ಡಾ.ಪ್ರಕಾಶ್ ಎಸ್.ಪುಣ್ಯಶೆಟ್ಟಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನ, ಶ್ರೀಮೇಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮ್ ಕಿರಣ್, ಸಂಡೂರು ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಅಂಬಾದಾಸ್, ಬಳ್ಳಾರಿ ಬಾರ್ ಕೌನ್ಸಿಲ್‍ನ ಕಾರ್ಯದರ್ಶಿ ರವೀಂದ್ರ ಸೇರಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಶ್ರೀಮೇಧಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಗ್ರಾಹಕರಿಗೆ 2011ರ ಏಪ್ರೀಲ್ 1ರಿಂದ ಜಾರಿಗೆ ಬಂದಿರುವ ಲೀಗಲ್ ಮೆಟ್ರಾಲಜಿ ಕಾಯ್ದೆ -2009ರ ಹಾಗೂ ಪೆÇಟ್ಟಣ ಸಾಮಾಗ್ರಿ ನಿಯಮಗಳ 2011ರ ತಿಳುವಳಿಕೆ ಮತ್ತು ಗ್ರಾಹಕ ಜಾಗೃತಿ ನೀಡುವ ಕಾರ್ಯಾಗಾರ ಆಯೋಜಿಸಲಾಗಿತ್ತು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ