ಶನಿವಾರ, ಡಿಸೆಂಬರ್ 30, 2023

ಉದ್ಯೋಗದಿಂದ ಉತ್ತಮ ಜೀವನ; ಪ್ರೊ. ಡಾ.ಅನಂತ್ ಝಂಡೇಕರ್

ಬಳ್ಳಾರಿ,ಡಿ.30(ಕನಾಟಕ ವಾರ್ತೆ): ಉತ್ತಮ ಜೀವನ ರೂಪಿಸಿಕೊಳ್ಳಲು ಉದ್ಯೋಗ ಎಂಬುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರೂ ಉದ್ಯೋಗ ಕಂಡುಕೊಳ್ಳುವುದು ಮುಖ್ಯ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ.ಅನಂತ್ ಝಂಡೇಕರ್ ಹೇಳಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ “ಎಸ್‍ಸಿಪಿ/ಟಿಎಸ್‍ಪಿ ಯೋಜನೆ ಅಡಿಯಲ್ಲಿ ಲಭ್ಯವಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಜನತೆಗೆ ಸ್ವಯಂ-ಉದ್ಯೋಗ ಅವಕಾಶಗಳು” ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. “ಉದ್ಯೋಗಂ ಪುರುಷ ಲಕ್ಷಣಂ” ಎಂಬ ಗಾದೆಯಂತೆ ಈಗ ಎಲ್ಲಾ ಕ್ಷೇತ್ರದಲ್ಲೂ ಅವಕಾಶದ ಬಾಗಿಲು ತೆರೆದಿರುತ್ತದೆ. ಈಗಿನ ಕಾಲದಲ್ಲಿ “ಉದ್ಯೋಗಂ ಸರ್ವ ಲಕ್ಷಣಂ” ಎಂಬಂತಾಗಿ ಹೆಣ್ಣು ಮಕ್ಕಳು ಪುರಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತೀಯ ಹಣಕಾಸು ಸಚಿವಾಲಯದ ನಿವೃತ್ತ ಪ್ರಧಾನ ಮುಖ್ಯ ಆಯುಕ್ತರಾದ ಎಚ್.ಆರ್.ಭೀಮಾಶಂಕರ್ ಮಾತನಾಡಿ, ಭಾರತದಲ್ಲಿನ ಅರ್ಧದಷ್ಟು ಕೆಲಸಗಾರರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಮಹಿಳೆಯರಲ್ಲಿ ಸ್ವಯಂ ಉದ್ಯೋಗಿಗಳ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ವಿಶ್ವವಿದ್ಯಾಲಯಗಳಲ್ಲಿ ಈ ಮಾದರಿಯ ಉದ್ಯೋಗ ಅವಕಾಶಗಳ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಯುವ ಸಮುದಾಯಗಳಿಗೆ ಹೆಚ್ಚಿನ ನೆರವು ನೀಡಿದಂತಾಗುತ್ತದೆ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಕುಲಸಚಿವರಾದ ರುದ್ರೇಶ್.ಎಸ್.ಎನ್ ಮಾತನಾಡಿ, 21ನೇ ಶತಮಾನದಲ್ಲಿ ನಮ್ಮ ಶಿಕ್ಷಣ ಮತ್ತು ಜೀವಮಾನದ ಕಲಿಕೆಯ ಮೂಲಕ ಹೊಸದನ್ನು ಪಡೆದುಕೊಂಡು ಸ್ವಯಂ-ಉದ್ಯೋಗ ಗಿಟ್ಟಿಸಿಕೊಳ್ಳಬೇಕು, ಇದರಿಂದ ಸಮಾಜದಲ್ಲಿ ವ್ಯಕ್ತಿಗೆ ಗೌರವ, ಮನ್ನಣೆ ಸಿಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಿವಿಯ ಕುಲಸಚಿವರು (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾಥಪ್ಪ, ಎಸ್‍ಸಿ ಎಸ್‍ಟಿ ಘಟಕದ ನಿರ್ದೇಶಕರಾದ ಪ್ರೊ.ಗೌರಿ ಮಾಣಿಕ ಮಾನಸ್, ಡಾ. ಶಿವಪ್ರಸಾದ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ