ಬುಧವಾರ, ಡಿಸೆಂಬರ್ 27, 2023

ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳಿದ್ದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ,ಡಿ.27(ಕರ್ನಾಟಕ ವಾರ್ತೆ): ದೇಹದ ಮೈಮೇಲೆ ತಿಳಿಬಿಳಿ ತಾಮ್ರವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಅಥವಾ ಮುಖದಲ್ಲಿ ಗಂಟುಗಳು, ಕಿವಿಯ ಮೇಲೆ ಗಂಟುಗಳು ಕಂಡುಬಂದಲ್ಲಿ ತಪ್ಪದೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ಇವು ಕುಷ್ಠರೋಗದ ಚಿಹ್ನೆಗಳಾಗಿರಬಹುದು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಜಿ.ವೀರೇಂದ್ರ ಕುಮಾರ್ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೊರಚಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೂರಾರು ವರ್ಷಗಳಿಂದ ಸಮುದಾಯದಲ್ಲಿ ಇವತ್ತಿಗೂ ಇರುವ ಚರ್ಮ ಮತ್ತು ನರರೋಗದ ಕಾಯಿಲೆಯಾಗಿರುವ ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೈ ಎಂಬ ರೋಗಾಣುವಿನಿಂದ ಬರುತ್ತದೆ. ಚಿಕಿತ್ಸೆ ಪಡೆಯದೇ ಇರುವ ಕುಷ್ಠರೋಗಿಯು ಕೆಮ್ಮಿದಾಗ, ಸೀನಿದಾಗ ತುಂತುರು ಹನಿಗಳು ಗಾಳಿಯ ಮೂಲಕ ಇನ್ನೊಬ್ಬರ ದೇಹವನ್ನು ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವಂತಹ ರೋಗವಾಗಿದ್ದು, ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಅಂಗವಿಕಲತೆಯಾಗುವುದನ್ನು ತಪ್ಪಿಸಬಹುದು. ಪ್ರಸ್ತುತ ಜಿಲ್ಲೆಯಲ್ಲಿ 86 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಹೊಸದಾಗಿ ಕುಷ್ಠರೋಗ ಪ್ರಕರಣಗಳಿಗೆ ಉಂಟಾಗುವ ಅಂಗವಿಕಲತೆಯನ್ನು ಕಡಿಮೆ ಮಾಡಲು ಮತ್ತು ಸುಪ್ತ ಕುಷ್ಠರೋಗ ಪ್ರಕರಣಗಳನ್ನು ಅತೀ ಶೀಘ್ರವಾಗಿ ಪತ್ತೆ ಹಚ್ಚಲು ಇಂದಿನಿಂದ 11ನೇ ಜನವರಿ-2024 ರ ವರೆಗೆ ಮನೆ ಮನೆ ಭೇಟಿ ನೀಡುವ ಮೂಲಕ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಕೋರಿದರು. ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪುರುಷ ಮತ್ತು ಮಹಿಳಾ ಸ್ವಯಂಸೇವಕರು ಮನೆ-ಮನೆ ಭೇಟಿ ಮಾಡಿ ಕುಷ್ಠರೋಗದ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು. ಮನೆಯಲ್ಲಿರುವ 2 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ತಪಾಸಣೆ ಕೈಗೊಂಡು ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ರೆಫರಲ್ ಫಾರಂ ನೀಡಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಒಂದು ವೇಳೆ ಅಗತ್ಯವೆನಿಸಿದರೆ ಜಿಲ್ಲಾ ಆಸ್ಪತ್ರೆ ಹಾಗು ವಿಜಯನಗರ ವೈದೈಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ತಜ್ಞ ವೈದ್ಯರುಗಳ ಹತ್ತಿರ ತಪಾಸಣೆ ಮಾಡಿಸಿಕೊಳ್ಳಲು ಕಳುಹಿಸಲಾಗುವುದು, ಖಚಿತಪಟ್ಟಲ್ಲಿ ರೋಗಿಯ ಮೈಮೇಲೆ ಚಿಹ್ನೆಗಳು ಅಥವಾ ವೈದ್ಯರ ನಿರ್ಧರಿಸಿದಂತೆ 6 ತಿಂಗಳಿನಿಂದ 1 ವರ್ಷದ ಚಿಕಿತ್ಸೆಯನ್ನು ನೀಡಲಾಗುವುದು. ಚಿಕಿತ್ಸೆ ಪೂರ್ಣಗೊಂಡಲ್ಲಿ ರೋಗ ಸಂಪೂರ್ಣ ಗುಣವಾಗವುದು ಯಾವುದೇ ಆತಂಕ ಬೇಡವೆಂದು ತಿಳಿಸಿದರು. ಪ್ರಾರಂಬಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವುದರ ಮೂಲಕ ಸಮಾಜದಲ್ಲಿ ಸೋಂಕಿನ ಮೂಲವನ್ನು ನಿರ್ಮೂಲನೆ ಮಾಡಲು ಮಹಾತ್ಮ ಗಾಂಧೀಜಿಯವರು ಕಂಡ ಕನಸು “ಕುಷ್ಠರೋಗ ಮುಕ್ತ ಭಾರತ ” ಕ್ಕಾಗಿ ಸದರಿ ತಂಡಗಳು ತಪಾಸಣೆ ಮಾಡಲು ತಮ್ಮ ಮನೆಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಸುರೇಖ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರು, ಕುಷ್ಠರೋಗ ವಿಭಾಗದ ಸುಮನ್, ಮಾನಪ್ಪ, ಎನ್.ಪಂಪಯ್ಯಸ್ವಾಮಿ, ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರ ಸಿಬ್ಬಂದಿಯವರಾದ ತುಳಸಿ, ಚೈತ್ರ, ದೀಪ, ಗಂಗಾಧರ, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು, ಪೂಜಾ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ