ಮಂಗಳವಾರ, ಡಿಸೆಂಬರ್ 9, 2025
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಕಟ್ಟುನಿಟ್ಟಿನ ಸೂಚನೆ | ಬಾಲ್ಯವಿವಾಹ ತಡೆಗೆ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ
ಬಳ್ಳಾರಿ,ಡಿ.09(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಬಾಲ್ಯವಿವಾಹ ಸಂಪೂರ್ಣವಾಗಿ ತಡೆಗಟ್ಟಲು ಇರುವ ಸರ್ಕಾರದ ಕಾನೂನು ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ, ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಮರುಕಳಿಸುತ್ತಿದ್ದು, ಇದು ಕಾನೂನು ಬಾಹಿರವಾಗಿದೆ. ಬಾಲ್ಯವಿವಾಹ ಆದಲ್ಲಿ ಮತ್ತು ಮಾಡಿದಲ್ಲಿ ಅವರ ಮೇಲೆ ಜರುಗಿಸಬಹುದಾದ ಕಠಿಣ ಕಾನೂನು ಕ್ರಮಗಳ ಕುರಿತು ಸಮುದಾಯಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಸಂಡೂರು ಭಾಗದ ಚೋರನೂರು, ಬಂಡ್ರಿ, ಮೆಟ್ರಿಕಿ, ವಿಠಲಾಪುರ, ತಾರಾನಗರ ಮತ್ತು ಬಳ್ಳಾರಿ ತಾಲ್ಲೂಕಿನ ಶಿಡಗಿನಮೋಳ ಗ್ರಾಪಂ ವ್ಯಾಪ್ತಿಯಲ್ಲಿ ಸದ್ದಿಲ್ಲದೇ ಹೆಚ್ಚಾಗಿ ಬಾಲ್ಯವಿವಾಹ ಪ್ರಕರಣ ಕಂಡುಬರುತ್ತಿವೆ. ಅದರಲ್ಲೂ ಈ ಭಾಗದಲ್ಲಿ ಗರ್ಭಿಣಿ ಮಹಿಳೆಯರು ಕೇವಲ 35 ಕೆ.ಜಿ ತೂಕ ಇರುವುದು ಕಂಡುಬರುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು, ಜಿಲ್ಲೆಯ ಎಲ್ಲಾ ಉಪವಿಭಾಗಗಳ ಡಿವೈಎಸ್ಪಿ ಗಳೊಂದಿಗೆ ಸಭೆ ನಡೆಸಬೇಕು ಹಾಗೂ ಗ್ರಾಮಗಳಲ್ಲಿನ ದೇವಸ್ಥಾನ, ಚರ್ಚ್, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ನಡೆಯುವ ಮದುವೆ, ಈ ಕಾರ್ಯಕ್ರಮಕ್ಕೆ ಶ್ಯಾಮಿಯಾನ ಪರಿಕರ ವಿತರಿಸುವವರು ಒಳಗೊಂಡು ಮದುವೆ ಸಮಾರಂಭದ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರ ಆದೇಶ ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
*ಕ್ರೆöÊಸ್ ವಸತಿ ಶಾಲೆಗಳಲ್ಲಿ 1098 ಅಳವಡಿಸಿ:*
ಜಿಲ್ಲೆಯ ಎಲ್ಲಾ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳಿಗೆ ತಮ್ಮ ಪೋಷಕರೊಂದಿಗೆ ಕರೆಮಾಡಿ ಮಾತನಾಡಲು ಸ್ಮಾರ್ಟ್ ಕಾರ್ಡ್ ಬಳಸಲಾಗುತ್ತಿದ್ದು, ಅದರಲ್ಲಿ ಕೇವಲ ವಿದ್ಯಾರ್ಥಿಯ ಪೋಷಕರ ಮೊಬೈಲ್ ಸಂಖ್ಯೆ ನಮೂದಾಗಿರುತ್ತದೆ. ಇದರ ಜೊತೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸಹ ನಮೂದು ಮಾಡಬೇಕು. ಇದರಿಂದ ಪೋಷಕರ ಜೊತೆ ಹಂಚಿಕೊಳ್ಳಲಾಗದ ಕೆಲವು ಘಟನೆಗಳನ್ನು ಕರೆ ಮಾಡಿ ಮಾಹಿತಿ ನೀಡಲು ಸಹಾಯವಾಗಲಿದೆ. ಹಾಗಾಗಿ ಸಂಬAಧಿಸಿದ ಇಲಾಖಾಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
ಶಾಲಾ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಹೆಣ್ಣುಮಕ್ಕಳು ನಿರಂತರವಾಗಿ ಗೈರಾಗುತ್ತಿರುವುದು ಕಂಡುಬAದಲ್ಲಿ ಪೋಷಕರನ್ನು ಸಂಪರ್ಕಿಸಿ ಕಾರಣ ಪಡೆದುಕೊಳ್ಳಬೇಕು. ಇದರಿಂದ ಮಕ್ಕಳ ಮಾಹಿತಿ ಲಭಿಸಲಿದೆ. ಇಲ್ಲಿಯೇ ಬಾಲ್ಯವಿವಾಹ ಘಟನೆ ನಡೆಯದಂತೆ ಎಚ್ಚರವಹಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬAದಲ್ಲಿ ಹಾಗೂ ಘಟನೆ ನಡೆದಲ್ಲಿ ಸಂಬAಧಿಸಿದವರ ವಿರುದ್ಧ ಯಾವುದೇ ವಿಳಂಬವಿಲ್ಲದೇ ಎಫ್‌ಐಆರ್ ದಾಖಲಿಸಬೇಕು. ಇದರಲ್ಲಿ ಯಾವೊಬ್ಬ ಅಧಿಕಾರಿ ಉದಾಸೀನತೆ ತೋರಿಸುವಂತಿಲ್ಲ ಎಂದು ಎಚ್ಚರಿಸಿದ ಅವರು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಬಾಲ್ಯವಿವಾಹ ನಿಷೇಧಾಧಿಕಾರಿಗಳೂ ಸಹ ಆಗಿದ್ದು, ಪರಸ್ಪರ ಸಹಭಾಗಿತ್ವ ಹೊಂದಬೇಕಿದೆ ಎಂದರು.
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಪ್ರತಿ ಶಾಲೆಗಳ ಮುತುವರ್ಜಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಿದ್ದು, ಪ್ರತಿಯೊಬ್ಬ ಅಧಿಕಾರಿಯೂ ಅತ್ಯುನ್ನತ ಪದವಿ ಪಡೆದಿದ್ದಾರೆ. ತಿಂಗಳಲ್ಲಿ 2 ಬಾರಿ ಸಂಬAಧಿಸಿದ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆ ಕುರಿತು ಪರಿವೀಕ್ಷಣೆ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿಷಯಗಳ ಕುರಿತು ಹೆಚ್ಚಿನ ಆಸಕ್ತಿ ವಹಿಸಿ ಬೋಧನೆ ಮಾಡಬೇಕು. ವಾಟ್ಸ್ ಆಪ್ ಗುಂಪು ರಚಿಸಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಜಿಪಂ ಸಿಇಒ ಅವರು ತಿಳಿಸಿದರು.
ಜಿಲ್ಲಾಧಿಕಾರಿಯವರು ಮಾತನಾಡಿ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರು, ಬಾಣಂತಿ ಮಹಿಳೆಯರಿಗೆ ತಲುಪಬೇಕಾದ ಅನುದಾನ ಗುರಿ ನಿಗದಿತ ವೇಳೆಗೆ ಅವರಿಗೆ ತಲುಪಿಸಬೇಕು. ಅಧಿಕಾರಿಗಳು ತಮ್ಮಲ್ಲಿಯೇ ಇಟ್ಟುಕೊಂಡಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಡಿಪಿಒ ಅಧಿಕಾರಿಗಳಿಗೆ ಸೂಚಿಸಿದ ಅವರು, ಹಣ ಪಾವತಿ ಮಾಡಿರುವ ಕುರಿತು ವಾರದೊಳಗೆ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮಕೃಷ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರದೇವಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಪತ್ತಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎನ್ ಜಿಒ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ