ಮಂಗಳವಾರ, ಡಿಸೆಂಬರ್ 9, 2025

ವಿದ್ಯಾರ್ಥಿಗಳಿಗೆ ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಸಲಹೆ | ಪರೀಕ್ಷೆ ಎದುರಿಸಲು ಮಾನಸಿಕವಾಗಿ ಸದೃಢರಾಗಿ

ಬಳ್ಳಾರಿ,ಡಿ.09(ಕರ್ನಾಟಕ ವಾರ್ತೆ): ಪರೀಕ್ಷೆ ಎದುರಿಸಲು ಭಯಭೀತರಾಗಬಾರದು. ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. ನಗರದ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಗೆ ಸೋಮವಾರ ಭೇಟಿ ನೀಡಿ ಕಲಿಕೆಯಲ್ಲಿನ ಸಮಸ್ಯೆ ಮತ್ತು ಪರೀಕ್ಷೆ ಸುಲಭವಾಗಿ ಎದುರಿಸುವ ಕುರಿತು ಸೂಕ್ತ ಮಾರ್ಗದರ್ಶನದೊಂದಿಗೆ ಮಕ್ಕಳಿಗೆ ಪ್ರೇರಣೆದಾಯಕ ಮಾತುಗಳನ್ನಾಡಿದರು. ಪರೀಕ್ಷೆಗಳು ನಿಮ್ಮ ಸಾಮರ್ಥ್ಯ ಪರೀಕ್ಷಿಸುವುದಿಲ್ಲ; ಬದಲಾಗಿ ನಿಮ್ಮ ಸಂಕಲ್ಪ ಮತ್ತು ಶಿಸ್ತನ್ನು ಪರೀಕ್ಷಿಸುತ್ತವೆ. ಹಾಗಾಗಿ ಆತ್ಮವಿಶ್ವಾಸ ಮತ್ತು ಸಮನ್ವಿತ ಪರಿಶ್ರಮ ಅಗತ್ಯವಾಗಿದೆ ಎಂದು ತಿಳಿಸಿದರು. ಒತ್ತಡ ಸಾಮಾನ್ಯ. ಆತಂಕಕ್ಕೆ ಮನಸ್ಸನ್ನು ಕೊಡಬಾರದು. ಕಠಿಣವಾಗಿ ಪರಿಶ್ರಮಿಸಿದರೆ ಫಲಗಳು ನಿಮಗೆ ಖಂಡಿತ ಸಿಗುತ್ತವೆ. ಇದು ನಿಮ್ಮ ಜೀವನದ ಕೊನೆಯ ಪರೀಕ್ಷೆಯಲ್ಲ. ಎದರಬಾರದು, ಜಾಗೃತಿಯಿಂದ ಓದಿ, ನಿಮ್ಮ ಸಾಮರ್ಥ್ಯ ನಂಬಬೇಕು ಎಂದರು. ಪ್ರತಿದಿನ ವಿಷಯಗಳ ಪುನರಾವರ್ತನೆ ಮಾಡಿ, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ನೋಡಿ, ಮುಖ್ಯ ವಿಷಯಗಳನ್ನು ಗುರುತಿಸುವ ಮೂಲಕ ಪ್ರಗತಿ ಹೊಂದಬೇಕು. ಇದು ಯಶಸ್ಸಿನ ಸೂತ್ರ ಎಂದು ತಿಳಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ವಿ.ಇಂದ್ರಾಣಿ ಅವರು ಮಾತನಾಡಿ, ಪರಿಶ್ರಮದಿಂದ ಅಭ್ಯಸಿಸಿದರೆ ಯಶಸ್ಸು ನಿಮ್ಮದು. ಪರೀಕ್ಷೆಗಳು ಕೇವಲ ಒಂದು ಹಂತ ಆದರೆ ನೀವು ಕಟ್ಟುತ್ತಿರುವ ಭವಿಷ್ಯ ಅದಕ್ಕಿಂತ ಬಹಳ ದೊಡ್ಡದು ಎಂದು ಕಿವಿಮಾತು ಹೇಳಿದರು. ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವ, ಪ್ರಶ್ನೆಗಳಿಗೆ ಸುಲಲಿತವಾಗಿ ಉತ್ತರಿಸಿ ಹೆಚ್ಚಿನ ಅಂಕಗಳನ್ನು ಯಾವ ರೀತಿ ಪಡೆಯಬೇಕು ಎನ್ನುವ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ದೇವದಾನಮ್ಮ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಗೀರೀಶ್, ಐಸಿಟಿಸಿ ಆಪ್ತಸಮಾಲೋಚಕ ಜಗದೀಶ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ