ಗುರುವಾರ, ಮಾರ್ಚ್ 5, 2026
ಡಿಎಲ್‌ಆರ್‌ಸಿ-ಡಿಸಿಸಿ ಸಭೆಯಲ್ಲಿ ಸಂಸದ ಈ.ತುಕಾರಾಮ್ ಸೂಚನೆ| ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಲು ತಾಕೀತು
ಬಳ್ಳಾರಿ,ಮಾ.05(ಕರ್ನಾಟಕ ವಾರ್ತೆ):
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬ್ಯಾಂಕ್ ವಲಯ ಯೋಜನೆಗಳನ್ನು ಜನರಿಗೆ ತಲುಪಿಸಲು ಸರ್ಕಾರಿ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ.ತುಕಾರಾಮ್ ಅವರು ಹೇಳಿದರು.
ಗುರುವಾರ ನಗರದ ಜಿಪಂ ನ ಹಳೆಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಮಟ್ಟದ ಲೀಡ್ ಬ್ಯಾಂಕ್‌ನ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ; ಇದರಿಂದ ಸರ್ಕಾರದ ಯೋಜನೆಗಳು ಸಫಲತೆ ಕಾಣುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬಡಜನರು ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸಲು ಬ್ಯಾಂಕ್‌ಗಳು ಸಹಕಾರಿಯಾಗಬೇಕು. ಜನರು ನೆರವಿಗಾಗಿ ಸಲ್ಲಿಸುವ ಲೋನ್ ಅರ್ಜಿಗಳನ್ನು ಸಕಾಲದಲ್ಲಿ ಇತ್ಯರ್ಥಗೊಳಿಸುವ ಮೂಲಕ ಬಡಜನರ ಕಣ್ಣೊರೆಸುವ ಕೆಲಸ ಮಾಡಬೇಕು ಎಂದು ಸಂಸದರು ಸೂಚಿಸಿದರು.
ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್‌ಗಳ ಮುಖಾಂತರ ನಿಗದಿತ ಕಾಲಮಿತಿಯಲ್ಲಿಯೇ ದೊರಕಿಸಿದರೆ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಬ್ಯಾAಕ್ ಅಧಿಕಾರಿಗಳು ಪರಿಣಾಮಕಾರಿ ಅಭಿವೃದ್ಧಿಗಾಗಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಿದರೆ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಂಸದ ಈ.ತುಕಾರಾಮ್ ಅವರು ಕಿವಿಮಾತು ಹೇಳಿದರು.
ಬ್ಯಾಂಕ್ ಗಳಲ್ಲಿ ಬಾಕಿ ಉಳಿಸಿಕೊಂಡAತಹ ಅರ್ಜಿಗಳನ್ನು ಇತ್ಯರ್ಥಕ್ಕೆ ಸಂಬAಧಿಸಿದAತೆ, ಸರ್ಕಾರಿ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ನಿಯಮಿತವಾಗಿ ಸಭೆ ಕೈಗೊಂಡು ಚರ್ಚಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಬ್ಯಾಂಕ್ ಗಳು ಸಾಮಾನ್ಯ ಜನರ ಬೆನ್ನೆಲುಬಾಗಬೇಕು. ಬ್ಯಾಂಕ್ ಗಳು ನೀಡುವ ಲೋನ್ ಗಳು ಉಪಕಾರ ಮತ್ತು ವ್ಯವಹಾರವೇ ಹೊರತು, ದಾನಧರ್ಮವಲ್ಲ; ಈ ಅಂಶವನ್ನು ಬ್ಯಾಂಕ್ ಅಧಿಕಾರಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲ ಯೋಜನೆಯಡಿ ಮಾರ್ಚ್ ಅಂತ್ಯದೊಳಗೆ ಕೃಷಿ, ಶಿಕ್ಷಣ, ವಸತಿ, ಕೈಗಾರಿಕೆ, ಸಾಮಾಜಿಕ ಬೆಳವಣಿಗೆ ಸೇರಿದಂತೆ ಆದ್ಯತಾ ವಲಯಕ್ಕೆ ಮಂಜೂರು ಮಾಡಿರುವ ಅನುದಾನವನ್ನು ನಿಗದಿತ ಕಾಲಾವಧಿಯೊಳಗೆ ಗುರಿ ತಲುಪಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಲೋನ್ ಮಂಜೂರು ಮಾಡದ ಬ್ಯಾಂಕ್ ಗಳಿಗೆ ನೋಟಿಸ್ ಜಾರಿ ಮಾಡುವಂತೆ ಮತ್ತು ಅತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗಳ ಕುರಿತು ಕೇಂದ್ರ ಆರ್ಥಿಕ ಇಲಾಖೆಗೆ ಪತ್ರ ಬರೆಯುವಂತೆ ಇದೇ ವೇಳೆ ಜಿಪಂ ಸಿಇಒ ಅವರಿಗೆ ಸೂಚಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತ ಜನಸಾಮಾನ್ಯರಿಗೆ ಮಾಹಿತಿ ನೀಡಲು ಸಿಎಸ್‌ಆರ್ ಅನುದಾನದಡಿ ಎಲ್‌ಇಡಿ ವಾಹನ ಖರೀದಿಸುವಂತೆ ಜಿಪಂ ಸಿಇಒ ಅವರಿಗೆ ತಿಳಿಸಿದರು.
ಇದೇ ವೇಳೆ ಉದ್ಯೊಗಿನಿ, ಪಿಎಂಇಜಿಪಿ, ಪಿಎಂ ಸ್ವನಿಧಿ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಸಭೆಗೂ ಮುನ್ನ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಿಮೆ ಹೊಂದಿದ್ದ ಇಬ್ಬರು ವಿಮಾದಾರರ ನಾಮನಿರ್ದೇಶಿತರಿಗೆ ತಲಾ 2 ಲಕ್ಷ ರೂ. ಮೌಲ್ಯದ 2 ಚೆಕ್‌ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಎಜಿಎಂ ಪ್ರಭಾಕರ್.ಆರ್, ಕೆನರಾ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್ ಎ.ಜೆ., ಲೀಡ್ ಬ್ಯಾಂಕ್ ಮ್ಯಾನೇಜರ್ ಗಿರೀಶ್ ವಿ.ಕುಲಕರ್ಣಿ, ನಬಾರ್ಡ್ ನ ಎಜಿಎಂ ಯುವರಾಜ ಕುಮಾರ್ ಆರ್.ಎಸ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕ್ ಗಳ ಆರ್‌ಎಂ ಅಧಿಕಾರಿಗಳು ಹಾಜರಿದ್ದರು.
------------
ಶೇ.20 ರಿಯಾಯಿತಿ ದರದಲ್ಲಿ ಲಿಡ್ಕರ್ ವಸ್ತುಗಳು ಮಾರಾಟ
ಬಳ್ಳಾರಿ,ಮಾ.05(ಕರ್ನಾಟಕ ವಾರ್ತೆ):
ಯುಗಾದಿ ಹಬ್ಬ ಹಾಗೂ ಆರ್ಥಿಕ ವರ್ಷಾಂತ್ಯದ ಪ್ರಯುಕ್ತ ಮಾ.06 ರಿಂದ 25 ರವರೆಗೆ ಲಿಡ್ಕರ್ ನ ಎಲ್ಲಾ ಚರ್ಮವಸ್ತುಗಳನ್ನು ಶೇ.20 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಲಿಡ್ಕರ್ ನ ಜಿಲ್ಲಾ ಸಂಯೋಜಕ ಟಿ.ಸಂಜೀವಪ್ಪ ಅವರು ತಿಳಿಸಿದ್ದಾರೆ.
ಗ್ರಾಹಕರು ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯ ಬುಡಾ ಕಾಂಪ್ಲೆಕ್ಸ್ ನ ಶಾಪ್ ನಂ.24 ಲಿಡ್‌ಕರ್ ಲೆದರ್ ಎಂಪೋರಿಯಮ್ ಇಲ್ಲಿಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.08392-271741, ಮೊ.9844667691 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)







ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ