ಸೋಮವಾರ, ಏಪ್ರಿಲ್ 27, 2026
2027ರ ವೇಳೆಗೆ ಬಳ್ಳಾರಿ ಜಿಲ್ಲೆಯನ್ನು ಮಲೇರಿಯಾ ಮುಕ್ತವಾಗಿಸಲು ಸಂಕಲ್ಪ ಮಾಡೋಣ: ಡಾ.ಮರಿಯಂಬಿ ವಿ.ಕೆ
ಬಳ್ಳಾರಿ,ಏ.27(ಕರ್ನಾಟಕ ವಾರ್ತೆ):
“ಮಲೇರಿಯಾ ಅಂತ್ಯಗೊಳಿಸಲು ಸಂಕಲ್ಪ ಮಾಡೋಣ; ಇದು ನಮ್ಮಿಂದ ಸಾಧ್ಯವಿದೆ” ಎಂಬ ಘೋಷವಾಕ್ಯದೊಂದಿಗೆ ಜಿಲ್ಲೆಯನ್ನು 2027ರ ವೇಳೆಗೆ ಮಲೇರಿಯಾ ಮುಕ್ತಗೊಳಿಸಲು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ವಿಬಿಡಿಸಿ ಅಧಿಕಾರಿಗಳಾದ ಡಾ.ಮರಿಯಂಬಿ ವಿ.ಕೆ ಅವರು ಹೇಳಿದರು.
ವಿಶ್ವ ಮಲೇರಿಯಾ ದಿನಾಚರಣೆ-2026ರ ಅಂಗವಾಗಿ ಸೋಮವಾರ ನಗರದ ಬಂಡಿಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಲೇರಿಯಾ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಸೂಕ್ಷö್ಮ ಜೀವಿಯಿಂದ ಉಂಟಾಗುತ್ತದೆ. ಇದು ಹೆಣ್ಣು ಅನಾಫಿಲೀಸ್ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಚಳಿ, ನಡುಕ, ಬಿಟ್ಟು ಬಿಟ್ಟು ಬರುವ ಜ್ವರ, ವಾಕರಿಕೆ ಮತ್ತು ಮೈ ಬೆವರುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಹಾಗಾಗಿ ಯಾವುದೇ ರೀತಿಯ ಜ್ವರವಿದ್ದರೂ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಮನೆಯ ಸುತ್ತಮುತ್ತ ಇಲಾಖೆ ವತಿಯಿಂದ ನಡೆಸುವ ಕೀಟನಾಶಕ ಸಿಂಪರಣೆಗೆ ಸಹಕರಿಸುವುದು. ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸುವುದು ಮತ್ತು ಕಿಟಕಿಗಳಿಗೆ ಜಾಲರಿ ಅಳವಡಿಸುವುದು. ನೀರು ನಿಲ್ಲುವ ಸ್ಥಳಗಳಲ್ಲಿ ಲಾರ್ವಹಾರಿ ಗಪ್ಪಿ ಮತ್ತು ಗಂಬೂಷಿಯಾ ಮೀನುಗಳನ್ನು ಬಿಡುವ ಮೂಲಕ ಸೊಳ್ಳೆಗಳ ಉತ್ಪತ್ತಿ ತಡೆಯುವುದು ಸೇರಿದಂತೆ ಆರೋಗ್ಯ ಇಲಾಖೆಯಿಂದ ಕೈಗೊಳ್ಳುವ ಕಾರ್ಯಗಳಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಬಿಡಿಸಿ ಸಮಾಲೋಚಕ ಪ್ರತಾಪ್.ಹೆದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಬಂಡಿಹಟ್ಟಿ ವೈದ್ಯಾಧಿಕಾರಿಗಳಾದ ಡಾ.ಯಾಸ್ಮಿನ್, ಡಾ.ಫಾಮಿದಾ ಭಾನು, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗೇಂದ್ರಪ್ಪ, ಮರಿಬಸವನಗೌಡ, ನಾಗರಾಜ್, ಬಾಬುರಾವ್ ಹಾಗೂ ಬಳ್ಳಾರಿ ತಾಲ್ಲೂಕಿನ ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ