ಗುರುವಾರ, ಏಪ್ರಿಲ್ 16, 2026

ಬಳ್ಳಾರಿ: ಬೆಳಗಲ್ ತಾಂಡಾದಲ್ಲಿ “ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಸಮತೋಲಿತ ರಸಗೊಬ್ಬರ ಬಳಕೆ” ಕುರಿತು ಜಾಗೃತಿ ಅಭಿಯಾನ

ಬಳ್ಳಾರಿ,ಏ.16(ಕರ್ನಾಟಕ ವಾರ್ತೆ): ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆ, ಪ್ರಾದೇಶಿಕ ಕೇಂದ್ರ ಬಳ್ಳಾರಿ ವತಿಯಿಂದ ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ “ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಸಮತೋಲಿತ ರಸಗೊಬ್ಬರ ಬಳಕೆ” ಕುರಿತು ಬುಧವಾರ ಜಾಗೃತಿ ಅಭಿಯಾನ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ.ಸಂಜಯ್ ಟಿ. ಸತುಪ್ತೆ ಅವರು ಮಾತನಾಡಿ, ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮತೋಲಿತ ಪೋಷಕಾಂಶಗಳ ನಿರ್ವಹಣೆ ಸಾಧ್ಯ. ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಮತ್ತು ಪೋಷಕಾಂಶಗಳು ಪೋಲಾಗದಂತೆ ತಡೆಯುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಮುಖ್ಯ ವಿಜ್ಞಾನಿ ಡಾ.ಕೆ.ರಾಜನ್ ಅವರು ಮಾತನಾಡಿ, ರೈತರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಕೈಗೊಳ್ಳಬೇಕು. ಈ ಭಾಗದ ಮಣ್ಣು ಆಮ್ಲೀಯ ಗುಣ ಹೊಂದಿದ್ದು, ಲಘು ಪೋಷಕಾಂಶಗಳ ಕೊರತೆಯಿದೆ. ಕೊಟ್ಟಿಗೆ ಗೊಬ್ಬರ ಮತ್ತು ಸರಿಯಾದ ಪ್ರಮಾಣದ ರಸಗೊಬ್ಬರಗಳ ಮೂಲಕ ಸರಿಪಡಿಸಬಹುದು ಎಂದು ಅವರು ತಿಳಿಸಿದರು. ವಿಜ್ಞಾನಿ ಡಾ.ಎನ್.ಎಂ.ಅನುಷಾ ಅವರು ಮಾತನಾಡಿ, ಬೆಳಗಲ್ ತಾಂಡಾದ ಮಣ್ಣು ಕೆಂಪು ಮಣ್ಣಿನ ಮಾದರಿಯಾಗಿದ್ದು, ಇದರಲ್ಲಿ ಕ್ಯಾಲ್ಸಿಯಂ ಮತ್ತು ಗಂಧಕದ ಕೊರತೆ ಇರುವುದನ್ನು ತಿಳಿಸಿದ ಅವರು, ಸಸ್ಯಗಳ ಬೆಳವಣಿಗೆಯಲ್ಲಿ ಮಣ್ಣಿನ ಪ್ರಾಮುಖ್ಯತೆ ಮತ್ತು ಪೋಷಕಾಂಶಗಳ ಕೊರತೆಯಿಂದ ಇಳುವರಿಯ ಮೇಲಾಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಂಬರುವ ಖಾರಿಫ್ ಹಂಗಾಮಿಗಾಗಿ ರೈತರಿಗೆ ಜಿಪ್ಸಂ ಮತ್ತು ಲಘು ಪೋಷಕಾಂಶಗಳ ರಸಗೊಬ್ಬರಗಳನ್ನು ವಿತರಿಸಲಾಯಿತು. ಜಿಪ್ಸಂ ಬಳಕೆಯಿಂದ ಮಣ್ಣಿನ ಭೌತಿಕ ಗುಣಲಕ್ಷಣಗಳು ಹೇಗೆ ಸುಧಾರಿಸುತ್ತವೆ ಎಂಬುದನ್ನು ರೈತರ ಹೊಲದಲ್ಲಿ ಪ್ರಾಯೋಗಿಕವಾಗಿ ಪ್ರಸಾರ ಮಾಡುವ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಯಿತು. ಇದೇ ವೇಳೆ ಸುಮಾರು 55 ರೈತರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ