ಶುಕ್ರವಾರ, ಮೇ 3, 2024
ಹಲಕುಂದಿ ಗ್ರಾಮದಲ್ಲಿ ಮತದಾನ ಜಾಗೃತಿ | ಪ್ರತಿಯೊಬ್ಬರು ವಿವೇಚನೆಯಿಂದ ಮತ ಚಲಾಯಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ
ಬಳ್ಳಾರಿ,ಮೇ 03(ಕರ್ನಾಟಕ ವಾರ್ತೆ):
ಮೇ 07 ರಂದು ನಡೆಯುವ ಲೋಕಸಭೆ ಚುನಾವಣೆಗೆ ಪ್ರತಿಯೊಬ್ಬರೂ ವಿವೇಚನೆಯಿಂದ ಮತ ಚಲಾಯಿಸಿ, ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಆದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬಳ್ಳಾರಿ ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಇವರ ಆಶ್ರಯದಲ್ಲಿ ಹಲಕುಂದಿ ಗ್ರಾಮದ ಮನರೇಗಾ ಕಾರ್ಮಿಕರಿಗೆ ಶುಕ್ರವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲ ಹಕ್ಕು. ಉತ್ತಮ ನಾಯಕನ ಆಯ್ಕೆ ಪ್ರತಿಯೊಬ್ಬ ಮತದಾರನ ಆದ್ಯ ಕರ್ತವ್ಯ. ನಿಮ್ಮ ಅಮೂಲ್ಯವಾದ ಮತವನ್ನು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗಿ ಮಾರಿಕೊಳ್ಳಬೇಡಿ ಎಂದರು.
ಚುನಾವಣಾ ಹಬ್ಬವು, ಎಲ್ಲರ ಮನೆಯ ಹಬ್ಬವಿದ್ದಂತೆ. ಪ್ರತಿಯೊಬ್ಬರೂ ಪಾಲ್ಗೊಂಡು ಮತದಾನ ಮಾಡುವ ಮೂಲಕ ಶೇಕಡವಾರು ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಮೇ 7 ರಂದು ನಡೆಯುವ ಮತದಾನ ದಿನದಂದು ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳಲ್ಲಿ ನೆರಳು, ಕುಡಿಯವ ನೀರು, ಶೌಚಾಲಯಗಳು ವ್ಯವಸ್ಥೆ ಹಾಗೂ ವಿಶೇಷವಾಗಿ ವೃದ್ದರು, ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ವಿಶೇಷ ಲೈನ್ ವ್ಯವಸ್ಥೆ ಮಾಡಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮತದಾನ ದಿನದಂದು ಬಿಸಿಲು ಹೆಚ್ಚಿರುವುದರಿಂದ ಆದಷ್ಟು ಬೆಳಗಿನ ಅವಧಿಯಲ್ಲಿಯೇ ಮತದಾನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಮಡಗಿನ ಬಸಪ್ಪ, ಪಿಡಿಓ ಪ್ರಭಾಕರ್, ಐಇಸಿ ರಮೇಶ್, ಟಿಸಿ ಮಹಾಂತೇಶ, ಟಿಎಮ್‍ಐಸ್ ಶೇಖರ್ ರೆಡ್ಡಿ, ಬಿಲ್ ಕಲೆಕ್ಟರ್ ಕೊಟ್ರಯ್ಯ, ಡಿಇಓ ರಾಜು ಸೇರಿದಂತೆ ಸುಮಾರು 700 ನರೇಗಾ ಕಾರ್ಮಿಕರು ಭಾಗವಹಿಸಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ