ಮಂಗಳವಾರ, ಮೇ 21, 2024
ನೀರಿನ ಮೂಲಗಳನ್ನು ನಿರಂತರ ಪರೀಕ್ಷಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ
ಬಳ್ಳಾರಿ,ಮೇ 21(ಕರ್ನಾಟಕ ವ ವಾರ್ತೆ):
ಮಳೆಗಾಲ ಆರಂಭದ ಹಿನ್ನಲೆಯಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುವ ಸಂಭವವಿದ್ದು, ಇದರಿಂದ ಉಂಟಾಗಬಹುದಾದ ವಾಂತಿಭೇದಿ ಪ್ರಕರಣಗಳ ನಿಯಂತ್ರಣಕ್ಕಾಗಿ ಎಲ್ಲಾ ನೀರಿನ ಮೂಲಗಳನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸುವ ಮೂಲಕ ಯಾವುದೇ ರೀತಿಯ ಗಂಭೀರ ಪ್ರಕರಣಗಳು ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಸೂಚಿಸಿದರು.
ಅವರು ಇಂದು ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿವಿಧ ಇಲಾಖೆಗಳ ಜಂಟಿಯಾಗಿ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯೂ ಸೇರಿದಂತೆ ವಿವಿಧೆಡೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ನೀರಿನ ಎಲ್ಲ ಮೂಲಗಳನ್ನು ಸಕಾಲದಲ್ಲಿ ಗ್ರಾಮ ಪಂಚಾಯತ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಸಕಾಲದಲ್ಲಿ ನಿಯಮಾನುಸಾರ ಕ್ಲೋರಿನೇಷನ್ ಮಾಡಿಸಿ ನಿರಂತರವಾಗಿ ಪರೀಕ್ಷೆಗಳನ್ನು ಕೈಗೊಂಡು ಯಾವುದೇ ವಾಂತಿಭೇದಿ ಪ್ರಕರಣಗಳು ಉಂಟಾಗದಂತೆ ಗ್ರಾಮ ಪಂಚಾಯತ್ ಒಳಗೊಂಡಂತೆ ಎಲ್ಲ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮವಹಿಸಿ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಪ್ರಮುಖ ಜಾತ್ರೆಗಳು, ಉತ್ಸವಗಳಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡವು ಸಕಾಲದಲ್ಲಿ ಉಪಸ್ಥಿತರಿದ್ದು, ನೀರಿನ ಮೂಲಗಳು, ಆಹಾರದ ತಯಾರಿಕೆಯ ಸ್ಥಳ ಮುಂತಾದವುಗಳನ್ನು ಪರಿಶೀಲಿಸಿ ನಿಗಾ ವಹಿಸುವ ಮೂಲಕ ವಾಂತಿ-ಭೇದಿ ಪ್ರಕರಣಗಳು ಉಂಟಾಗದಂತೆ ಕ್ರಮವಹಿಸಿಲಾಗಿದೆ ಎಂದು ಸಭೆಗೆ ತಿಳಿಸಿದರು.
ಇಲ್ಲಿಯವರೆಗೆ 4027 ನೀರಿನ ಮೂಲಗಳನ್ನು ಪರೀಕ್ಷಿಸಿದ್ದು, ಅಶುದ್ಧವೆಂದು ಕಂಡು ಬಂದ ನೀರಿನ ಮೂಲಗಳನ್ನು ಸಕಾಲದಲ್ಲಿ ಪರೀಕ್ಷೆಗೊಳಪಡಿಸಿ ನೀರು ಪೂರೈಕೆಗೆ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಲಾಗಿದೆ ಎಂದು ತಿಳಿಸಿದರು.
ಕ್ಷಯರೋಗ ನಿಯಂತ್ರಣ ಕುರಿತು ಮಾತನಾಡುತ್ತಾ, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕ್ಷಯರೋಗ ಪರೀಕ್ಷೆ ಕೈಗೊಂಡ ನಂತರ ಶೇ.20ರಷ್ಟು ನೂತನ ಪ್ರಕರಣಗಳಲ್ಲಿ ಇಳಿಕೆಯಾಗಿರುವುದು ಆಶಾದಾಯಕವಾಗಿದೆ ಎಂದರು.
ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳ ತಡೆಗೆ ಲಸಿಕೆಯನ್ನು ಮಕ್ಕಳಿಗೆ ಸಕಾಲದಲ್ಲಿ ಹಾಕಿಸಲಾಗುತ್ತಿದೆ ಹಾಗೂ ಬಿಟ್ಟು ಹೋದ ಮಕ್ಕಳು ಲಸಿಕೆ ವಂಚಿತ ಮಕ್ಕಳನ್ನು ಗುರ್ತಿಸಿ ಲಸಿಕೆ ಹಾಕಲು ಮುತುರ್ವಜಿ ವಹಿಸಲಾಗಿದೆ. ಅದರಲ್ಲೂ ದಡಾರ ಮತ್ತು ರೂಬೆಲ್ಲಾ ಪ್ರಕರಣಗಳು ಕಂಡುಬರದಂತೆ ಆದ್ಯತೆ ನೀಡಿ ಯಾವುದೇ ಮಗು ಲಸಿಕೆ ವಂಚಿತವಾಗದಂತೆ ಕ್ಷೇತ್ರ ಮಟ್ಟದ ಸಿಬ್ಬಂದಿಯವರು ಅಧಿಕಾರಿಗಳು ಕ್ರಿಯಾ ಯೋಜನೆ ಹಮ್ಮಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮಳೆಯ ಆರಂಭದ ಹಿನ್ನೆಲೆಯಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕೆ ಯಾವುದೇ ನ್ಯೂನ್ಯತೆ ಉಂಟಾಗದಂತೆ ನೀರಿನ ಸಂಗ್ರಹಗಾರಗಳನ್ನು ಪ್ರತಿ ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಸೊಳ್ಳೆ ಉತ್ಪತ್ತಿ ನಿಯಂತ್ರಣಕ್ಕೆ ಅಗತ್ಯವಿದ್ದಲ್ಲಿ ಸ್ಥಳೀಯ ಪಂಚಾಯತಿಗಳೊಂದಿಗೆ ಚರ್ಚಿಸಿ ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಿದರು. ಸಭೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಹಾಗೂ ನವಜಾತ ಶಿಶುಗಳ ಆರೈಕೆ ಕಾರ್ಯಕ್ರಮದ ಕುರಿತು ವ್ಯಾಪಕವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ವಿಮ್ಸ್ ಅಧೀಕ್ಷಕ ಡಾ.ಚಿದಂಬರಂ, ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ಪ್ರತಿನಿಧಿ ಡಾ.ಆರ್.ಎಸ್.ಶ್ರೀಧರ್, ಕಾರ್ಯಕ್ರಮ ಅನುμÁ್ಠನ ಅಧಿಕಾರಿ ಡಾ.ಅಬ್ದುಲ್ಲಾ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ಮರಿಯಂಬಿ, ಡಾ.ಇಂದ್ರಾಣಿ, ಡಾ.ವೀರೇಂದ್ರ ಕುಮಾರ, ಡಾ.ಹನುಮಂತಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ್, ಡಾ.ಅರುಣ್, ಡಾ.ಮಂಜುನಾಥ ಜವಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಾ.ಜಬೀನ್ ತಾಜ್, ಡಿಎನ್‍ಓ ಗಿರೀಶ್, ವೆಂಕೋಬ್ ನಾಯ್ಕ್ ಹಾಗೂ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)






ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ