ಮಂಗಳವಾರ, ಜೂನ್ 24, 2025
ಅಂಚೆ ಇಲಾಖೆಯಲ್ಲಿ ಸುಧಾರಿತ ಹಾಗೂ ವೇಗದ ಸೇವೆಗೆ ಹೊಸ ತಂತ್ರಾAಶ ಜಾರಿ: ಪಿ.ಚಿದಾನಂದ
ಬಳ್ಳಾರಿ,ಜೂ.24(ಕರ್ನಾಟಕ ವಾರ್ತೆ):
ಅಂಚೆ ಇಲಾಖೆಯಲ್ಲಿ ಅಡ್ವಾನ್ಸಡ್ ಪೋಸ್ಟಲ್ ಟೆಕ್ನಾಲಜಿ (ಎಟಿಪಿ 2.0) ತಂತ್ರಾAಶ ಅಂಚೆ ಇಲಾಖೆಯ ಎಲ್ಲ ಗ್ರಾಹಕರಿಗೆ ಸುಧಾರಿತ ಹಾಗೂ ತೃಪ್ತಿದಾಯಕವಾದ ಸೇವೆಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಅಂಚೆ ಅಧೀಕ್ಷಕ ಪಿ.ಚಿದಾನಂದ ಅವರು ಹೇಳಿದರು.
ಮಂಗಳವಾರ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಬಳ್ಳಾರಿ ಅಂಚೆ ವಿಭಾಗದ ಬಳ್ಳಾರಿ ಪ್ರಧಾನ ಅಂಚೆ ಕಚೇರಿ ಹಾಗೂ ಅದರಡಿ ಬರುವ ಎಲ್ಲಾ ಉಪ ಅಂಚೆ ಕಚೇರಿಗಳು ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ಎಪಿಟಿ 2.0 ತಂತ್ರಾAಶ ಅಳವಡಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಅಂಚೆ ಇಲಾಖೆಯು 170 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಭಾರತೀಯ ಜನ ಸಮುದಾಯದ ನಾಡಿ ಮಿಡಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಆಧುನಿಕ ಯುಗದ ಸವಾಲುಗಳಿಗೆ ಒಡ್ಡಿಕೊಂಡು ತನ್ನ ಗ್ರಾಹಕರಿಗೆ ಯಾವಾಗಲೂ ಉತ್ತಮವಾದ ಸೇವೆಗಳನ್ನು ಒದಗಿಸುವಲ್ಲಿ ಇಲಾಖೆಯು ಸದಾ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಮೈಸೂರುನಲ್ಲಿರುವ ‘ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಪೋನ್ಸಲ್ ಟೆಕ್ನಾಲಜಿ’ ಎನ್ನುವ ತನ್ನದೇ ತಾಂತ್ರಿಕ ವಿಭಾಗದ ನುರಿತ ಸಿಬ್ಬಂದಿ ವರ್ಗದವರೇ ರೂಪುಗೊಳಿಸಿದ ಹೊಸದಾದ ಅತ್ಯಂತ ಸುಧಾರಿತ ಮತ್ತು ಗ್ರಾಹಕ ಸ್ನೇಹಿ ತಂತ್ರಾAಶವನ್ನು ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದರು.
ಜೂ.23 ರಿಂದ ಬಳ್ಳಾರಿ ಅಂಚೆ ವಿಭಾಗದ ವ್ಯಾಪ್ತಿಗೆ ಬರುವ ಬಳ್ಳಾರಿ ಪ್ರಧಾನ ಅಂಚೆ ಕಚೇರಿ, ಬಳ್ಳಾರಿ ನಗರದಲ್ಲಿರುವ ಇತರೆ ಎಲ್ಲಾ ಅಂಚೆ ಕಚೇರಿಗಳು, ಸಿರುಗುಪ್ಪ, ಸಿರುಗುಪ್ಪ ಸದಾಶಿವನಗರ, ಹಚ್ಚೋಳ್ಳಿ, ತೆಕ್ಕಲಕೋಟೆ, ಎಮ್ಮಿಗನೂರು, ಕುರುಗೋಡು, ಸಿರಿಗೇರಿ, ಕರೂರು, ಕೋಳೂರು, ಮೋಕಾ, ಚೆಳ್ಳಗುರ್ಕಿ, ಕುಡುತಿನಿ, ಬಿ.ಟಿ.ಪಿ.ಎಸ್, ತೋರಣಗಲ್ಲು, ವಿದ್ಯಾನಗರ, ಶಂಕರಹಿಲ್ ಟೌನ್, ಸಂಡೂರು, ಸಂಡೂರು ಲಕ್ಷಿö್ಮಪುರ, ದೇವಗಿರಿ, ದೋಣಿಮಲೈ ಟೌನ್ ಶಿಪ್, ಯಶವಂತನಗರ, ಉಪ ಅಂಚೆ ಕಚೇರಿಗಳು ಹಾಗೂ ಸಂಬAಧಿತ ಶಾಖಾ ಅಂಚೆ ಕಚೇರಿಗಳಲ್ಲಿ ಅಡ್ವಾನ್ಸಡ್ ಪೋಸ್ಟಲ್ ಟೆಕ್ನಾಲಜಿ 2.0 ನಲ್ಲಿಯೇ ಎಲ್ಲಾ ತರಹದ ವಹಿವಾಟುಗಳು ಜರುಗುತ್ತವೆ ಎಂದು ತಿಳಿಸಿದರು.
ಈ ಮೊದಲು ಬಳಸುತ್ತಿದ್ದ ತಂತ್ರಾAಶಗಳು ಅನ್ಯ ಟೆಕ್-ಕಂಪೆನಿಗಳಿAದ ಪಡೆದದ್ದರಿಂದ ಬಹಳ ತೊಂದರೆಗಳನ್ನು ಎದುರಿಸಬೇಕಾಗಿತ್ತು. ಹಾಗಾಗಿ ಅಂಚೆ ಇಲಾಖೆಯು ತನ್ನದೇ ನುರಿತ ತಂತ್ರಜ್ಞರಿAದ ಗ್ರಾಹಕರಿಗೂ ಹಾಗೂ ತಂತ್ರಾAಶವನ್ನು ಬಳಸುವ ಉದ್ಯೋಗಿಗಳಿಗೂ ಅನುಕೂಲವಾಗುವಂತೆ ಅಡ್ವಾನ್ಸಡ್ ಪೋಸ್ಟಲ್ ಟೆಕ್ನಾಲಜಿ 2.0 ಅನ್ನು ರೂಪಿಸಲಾಗಿದೆ ಎಂದರು.
ಪೋಸ್ಟ್ ಮ್ಯಾನ್ ಕಾಗದ-ಪತ್ರಗಳನ್ನು ಬಟವಾಡೆ ಮಾಡುವ ಪ್ರಕ್ರಿಯೆಯನ್ನು ಸುಧಾರಿಸಲಾಗಿದ್ದು, ಗ್ರಾಹಕರ ಮನೆಯ ಬಾಗಿಲಿನಲ್ಲಿಯೇ ಕಾಗದ ಪತ್ರ ಬಟವಾಡೆಯಾದ ಬಗ್ಗೆ ಮಾಹಿತಿಯು ಪತ್ರ ಸ್ವೀಕರಿಸಿದವರ ಮೊಬೈಲ್ ಸಂಖ್ಯೆಗೂ ಹಾಗೂ ಪತ್ರವನ್ನು ಕಳುಹಿಸಿದವರ ಮೊಬೈಲ್ ಸಂಖ್ಯೆಗೂ ರವಾನೆಯಾಗಲಿದೆ.
ಅಂಚೆ ಕಚೇರಿಯಲ್ಲಿ ಕಾಗದ ಪತ್ರಗಳನ್ನು ಬುಕ್ ಮಾಡಲು, ಮನೀ ಆರ್ಡರ್ ಕಳುಹಿಸಲು ಇನ್ನು ಮುಂದೆ ಯಾವುದೇ ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುವ ಅಗತ್ಯವಿಲ್ಲ. ಹೊಸ ತಂತ್ರಾAಶವು ಯಾವುದೇ ಪಬ್ಲಿಕ್ ನೆಟ್‌ವರ್ಕ್ ನಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಗ್ರಾಹಕರು ಇನ್ನೂ ಹೆಚ್ಚಿನ ವೇಗದಲ್ಲಿ ತಮ್ಮ ಸೇವೆಗಳನ್ನು ಅಂಚೆ ಕಚೇರಿಗಳಿಂದ ಪಡೆಯಬಹುದು ಎಂದು ತಿಳಿಸಿದರು.
ಹೊಸ ತಂತ್ರಾAಶದಲ್ಲಿ ಅಂಚೆ ಇಲಾಖೆಯ ಗ್ರಾಹಕರು ತಮ್ಮ ಮನೆಯಿಂದಲೇ ಕಾಗದ ಪತ್ರಗಳನ್ನು ಬುಕ್ ಮಾಡಿಕೊಳ್ಳಬಹುದು ಹಾಗೂ ಅವುಗಳನ್ನು ತಮ್ಮ ಮನೆಯಿಂದಲೇ ಅಂಚೆ ಕಚೇರಿಗೆ ತೆಗೆದುಕೊಂಡು ಹೋಗುವಂತೆ ಪಿಕ್-ಅಪ್ ಸೇವೆಯನ್ನು ಸಹ ಬಳಸಿಕೊಳ್ಳಬಹುದು. ಇದು ಅತ್ಯಂತ ಆಕರ್ಷಣೀಯವಾದ ಹಾಗೂ ಗ್ರಾಹಕೋಪಯೋಗಿ ಸೇವೆಯಾಗಿದೆ ಎಂದರು.
ಜೂ.24 ರಿಂದ ಬಳ್ಳಾರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ‘ಸಂಜೆ ಅಂಚೆ’ ಎನ್ನುವ ಹೊಸ ಸೇವೆಯನ್ನು ಜಾರಿಗೊಳಿಸಲಾಗುತ್ತಿದೆ. ಗ್ರಾಹಕರು ಸಂಜೆ 04 ರಿಂದ 7.30 ರ ವರೆಗೆ ತಮ್ಮ ಸ್ಪೀಡ್ ಪೋಸ್ಟ್, ರೆಜಿಸ್ಟರ್ಡ್ ಕಾಗದ ಪತ್ರಗಳು, ಪಾರ್ಸಲ್ ಗಳನ್ನು ಕಳುಹಿಸಲು ಮತ್ತು ಅಂಚೆ ಚೀಟಿಗಳನ್ನು ಖರೀದಿಸಲು ಈ ಸೇವೆಯನ್ನು ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ಅಂಚೆ ಅಧೀಕ್ಷಕ ಪಿ.ಚಿದಾನಂದ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರಾದ ಭೀಮಸೇನ ಜೋಶಿ, ಸಹಾಯಕ ಅಂಚೆ ಪಾಲಕರಾದ ರಾಜಶೇಖರ, ವಿ.ತಿಂದಪ್ಪ ಮತ್ತು ನಾಗಭೂಷಣ, ಲೆಕ್ಕಪಾಲಕರಾದ ರಾಮಪ್ರಸಾದ, ತಾಂತ್ರಿಕ ಪರಿಣಿತರಾದ ಶರತ್ ಕುಮಾರ್, ಪ್ರತಾಪ್ ರೆಡ್ಡಿ, ಪ್ರತಾಪ್ ನಾಯಕ, ಪ್ರಧಾನ ಅಂಚೆ ಕಚೇರಿಯ ಎಲ್ಲಾ ಅಂಚೆ ಸಹಾಯಕರು, ಅಂಚೆ ಪೇದೆಗಳು, ಎಂಟಿಎಸ್ ಹಾಗೂ ಜಿಡಿಎಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ