ಸೋಮವಾರ, ಫೆಬ್ರವರಿ 16, 2026

ಆರೋಗ್ಯಕರ ಜೀವನ ಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು: ಡಿಹೆಚ್ಒ ಡಾ.ಯಲ್ಲಾ ರಮೇಶ್ ಬಾಬು

ಬಳ್ಳಾರಿ,ಫೆ.11(ಕರ್ನಾಟಕ ವಾರ್ತೆ): ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ತಂಬಾಕು, ಮದ್ಯಪಾನ ತ್ಯಜಿಸುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಸರ್ವೇಕ್ಷಣ ಘಟಕ ಇವರ ಸಹಯೋಗದಲ್ಲಿ “ವೈಶಿಷ್ಟದಲ್ಲಿ ಏಕತೆ” ಎಂಬ ಘೋಷವಾಕ್ಯದಡಿ “ವಿಶ್ವ ಕ್ಯಾನ್ಸರ್ ದಿನಾಚರಣೆ” ಅಂಗವಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಕ್ಯಾನ್ಸರ್ ಜಾಗೃತಿಗಾಗಿ ನವೆಂಬರ್ 7 ರಂದು ಪ್ರತ್ಯೇಕವಾಗಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ ಎಂದರು. ಕ್ಯಾನ್ಸರ್ ಪೀಡಿತರಿಗೆ ಬೆಂಬಲ ನೀಡುವುದು, ರೋಗದ ಬಗ್ಗೆ ತಪ್ಪು ಕಲ್ಪನೆಗಳನ್ನು ತೊಡೆದುಹಾಕುವುದು ಮತ್ತು ಆರಂಭಿಕ ಪತ್ತೆಯ ಮಹತ್ವವನ್ನು ತಿಳಿಸಿದರು. ಜಿಲ್ಲಾ ಆಸಾಂಕ್ರಮಿಕ ರೋಗಗಳ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ದೊರೆಯುವಂತಹ ಎಲ್ಲಾ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಇದೇ ವೇಳೆ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ವಿವಿಧ ರೀತಿಯ ಕ್ಯಾನ್ಸರ್ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಜನರಿಗೂ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದೊತ್ತಡ, ಮಧುಮೇಹ ಪರೀಕ್ಷೆ ಕೈಗೊಳ್ಳಲಾಯಿತು ಹಾಗೂ ಕ್ಯಾನ್ಸರ್ ಸಂಬಂಧಿಸಿದ ಕಾಯಿಲೆ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಡಾ.ಬಿನೋ ಬ್ರೈಟ್ ಕ್ಯಾನ್ಸರ್ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ದಂತ ವೈದ್ಯಾಧಿಕಾರಿ ಡಾ.ವಿಶಾಲಾಕ್ಷಿ, ಸ್ತ್ರೀರೋಗ ತಜ್ಞರಾದ ಡಾ.ಪ್ರಶಾಂತ್ ಕುಮಾರ್ ಜಿ.ಎನ್., ಡಾ.ಚೇತನ್, ಜನರಲ್ ಮೆಡಿಸನ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರದ ಡಾ.ಚಂದನ, ಡಾ.ಸಾತ್ವಿಕ್, ಎನ್ ಸಿ ಡಿ ಸಲಹೆಗಾರ ಡಾ.ಜಬಿನ್ ತಾಜ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಎನ್.ಸಿ.ಡಿ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು. ========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ