ಸೋಮವಾರ, ಫೆಬ್ರವರಿ 16, 2026

ಕುಡಿಯುವ ನೀರಿನ ಗುಣಮಟ್ಟ, ಸ್ವಚ್ಛತೆ ಆದ್ಯತೆಯಾಗಬೇಕು: ಡಾ.ಯಲ್ಲಾ ರಮೇಶ್ ಬಾಬು

ಬಳ್ಳಾರಿ,ಫೆ.13(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕುಡಿಯುವ ನೀರಿನ ಗುಣಮಟ್ಟ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್‍ ಬಾಬು ಅವರು ಹೇಳಿದರು. ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಗುಣಮಟ್ಟದ ಕುರಿತು ಮತ್ತು ಸ್ವಚ್ಛತೆಯ ಕುರಿತು ಡಿಹೆಚ್ಒ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಾಂತಿ, ಬೇಧಿ, ಕಾಲಾರ, ಕರಳು ಬೇನೆ ಹಾಗೂ ಅತಿಸಾರ ಬೇಧಿ ಮತ್ತು ಕಾಮಾಲೆ ಮುಂತಾದ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಎಚ್ಚರವಹಿಸುವ ಮೂಲಕ ಅಂತರ ಇಲಾಖೆಗಳ ಸಹಯೋಗದಲ್ಲಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಮುಂಜಾಗೃತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಮಾತನಾಡಿ, ನಗರ ಪ್ರದೇಶದಲ್ಲಿ ವರದಿಯಾಗುವ ಡೆಂಗ್ಯೂ ಪ್ರಕರಣಗಳಿಗೆ ನಿಯಂತ್ರಣ ಕ್ರಮ ಹಾಗೂ ಡೆಂಗ್ಯೂ ರೋಗ ನಿಯಂತ್ರಣ ಮತ್ತು ಮುಂಜಾಗೃತಾ ಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು ಎಂದರು. ಮುಖ್ಯವಾಗಿ ನಗರ ಪ್ರದೇಶದಲ್ಲಿ ನಿಂತ ನೀರಿನ ತಾಣಗಳನ್ನು ಮತ್ತು ಘನತಾಜ್ಯ ಸ್ವಚ್ಛತೆಗೊಳಿಸುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಜೊತೆಗೆ ಅವಶ್ಯಕತೆ ಇದ್ದಲ್ಲಿ ಒಳಾಂಗಣ ಮತ್ತು ಹೊರಾಂಗಣದಲ್ಲಿ ಧೂಮೀಕರಣ ಮಾಡಬೇಕು ಎಂದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಇಂದ್ರಾಣಿ.ವಿ ಅವರು ಮಾತನಾಡಿ, 2025 ರ ಅಂಕಿ-ಅಂಶ ಪ್ರಕಾರ ಜಿಲ್ಲೆಯ ನಗರಪ್ರದೇಶಗಳಲ್ಲಿ ಹೆಚ್ಚಿನ ದುರ್ಬಲ ವರ್ಗದ ಜನರ ಸಂಖ್ಯೆಯಿದ್ದು, ಇವರಲ್ಲಿ ಕ್ಷಯರೋಗದ ಪ್ರಮಾಣ ಜಾಸ್ತಿ ಕಂಡುಬಂದಿರುತ್ತದೆ. ಇದಕ್ಕೆ ಕಾರಣ ಅಪೌಷ್ಟಿಕತೆ, ಸ್ವಚ್ಛತೆಯಿಲ್ಲದಿರುವುದು, ಶುದ್ದ ಗಾಳಿ, ಬೆಳಕು ಬಾರದೇ ಇರುವಂತಹ ಮನೆಗಳಲ್ಲಿ ವಾಸ, ಕೊಳಚೆ ಪ್ರದೇಶ ಹಾಗೂ ಇತರೆ ಕಾರಣಗಳಿಂದ ಧೂಳಿನ ಪ್ರಮಾಣ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚಾಗಿ ಕಂಡುಬಂದಿದೆ ಎಂದು ತಿಳಿಸಿದ ಅವರು, ಸ್ವಚ್ಛತೆಗೆ ಮಹತ್ವ ನೀಡಲು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಹೇಳಿದರು. ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರಾದ ಮಲ್ಲನಗೌಡ ಅವರು, ಪಾಲಿಕೆಯ ವತಿಯಿಂದ ಸ್ವಚ್ಛ ಕುಡಿಯುವ ನೀರಿನ ನಿರ್ವಹಣೆ ಹಾಗೂ ತಾಣಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಕುಡಿಯಲು ಯೋಗ್ಯತೆ ಇಲ್ಲದ ನೀರಿನ ತಾಣಗಳ ಬಗ್ಗೆ ನಗರ ವೈದ್ಯಾಧಿಕಾರಿಗಳು ತಿಳಿಸಿರುವ ಸ್ಥಳಗಳಲ್ಲಿ ಹಮ್ಮಿಕೊಳ್ಳಬೇಕಾದ ಕ್ರಮಗಳ ಬಗ್ಗೆ, ಪುರಸಭೆಯ ಮುಖ್ಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆಯ ಅಭಿಯಂತರರವರೊಂದಿಗೆ ಚರ್ಚಿಸಲಾಯಿತು. ಕುಡಿಯುವ ನೀರಿನ ಕ್ಲೋರಿನೇಷನ್ ಮಾಡುವ ವಿಧಾನದ ಬಗ್ಗೆ ಮಹಾನಗರ ಪಾಲಿಕೆಯ ಸಿಬ್ಬಂದಿಯವರಿಗೆ ವಿಡಿಯೋ ಮೂಲಕ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಮಹಾನಗರ ಪಾಲಿಕೆಯ ಅಭಿಯಂತರರು, ಪುರಸಭೆ-ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾ ಘಟಕದ ಮೇಲ್ವಿಚಾರಣಾ ಸಿಬ್ಬಂದಿ, ಕಾಲಾರ ನಿಯಂತ್ರಣ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ-ಸಿಬ್ಬಂದಿ ಉಪಸ್ಥಿತರಿದ್ದರು. =====

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ