ಸೋಮವಾರ, ಫೆಬ್ರವರಿ 16, 2026

ಕುರುಗೋಡು ಉತ್ಸವ: ಹಬ್ಬದ ವಾತಾವರಣ ಸೃಷ್ಟಿ | ವಿವಿಧ ಕಾರ್ಯಕ್ರಮಗಳಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ

ಬಳ್ಳಾರಿ,ಫೆ.15(ಕರ್ನಾಟಕ ವಾರ್ತೆ): ಕುರುಗೋಡು ಉತ್ಸವದ ಅಂಗವಾಗಿ ಐತಿಹಾಸಿಕ ನಾಡು ಕುರುಗೋಡು ಪಟ್ಟಣದಲ್ಲಿ ಉತ್ಸವದ ಮೊದಲನೆಯ ದಿನವಾದ ಭಾನುವಾರ ಹಬ್ಬದ ವಾತಾವರಣ ಮನೆಮಾಡಿತ್ತು. ಚೊಚ್ಚಲ ಕುರುಗೋಡು ಉತ್ಸವ 2026 ಜನಾಕರ್ಷಿಣಿಯವಾಗಿಸಲು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುರುಗೋಡು ತಾಲ್ಲೂಕು ಆಡಳಿತ ಹಲವು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. *ಆರೋಗ್ಯಕ್ಕಾಗಿ ಓಟ:* ಸದೃಢ ಆರೋಗ್ಯಕ್ಕಾಗಿ ಓಟ ಎನ್ನುವಂತೆ ಉತ್ಸವದಲ್ಲಿ ಮ್ಯಾರಾಥಾನ್ ಓಟ ಆಯೋಜನೆ ಮಾಡಲಾಗಿತ್ತು. ಮೊದಲನೆಯ ದಿನವಾದ ಭಾನುವಾರ, ಪಟ್ಟಣದ ಹೊರವಲಯದ ವದ್ದಟ್ಟಿ ಕ್ರಾಸ್‌ನಿಂದ ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದವರೆಗೆ ಹಮ್ಮಿಕೊಂಡಿದ್ದ ಮ್ಯಾರಾಥಾನ್ ಓಟಕ್ಕೆ ಕಂಪ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್‌ಲೂಮ್ಸ್) ದ ಅಧ್ಯಕ್ಷರೂ ಆಗಿರುವ ಜೆ.ಎನ್.ಗಣೇಶ್ ಅವರು ಚಾಲನೆ ನೀಡಿದರು. ಯುವಕರ, ಯುವತಿಯರ ಹಾಗೂ 40 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಮ್ಯಾರಾಥನ್ ಓಟ ಆಯೋಜಿಸಲಾಗಿತ್ತು. ಮ್ಯಾರಾಥಾನ್ ನಲ್ಲಿ ಎಲ್ಲರೊಟ್ಟಿಗೆ ಶಾಸಕರೂ ಓಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಳಿಕ ಪಟ್ಟಣದ ಮುಖ್ಯವೃತ್ತಕ್ಕೆ ಓಟದ ಮೂಲಕ ಮೊದಲು ಆಗಮಿಸಿದವರಿಗೆ ಬಹುಮಾನ ವಿತರಿಸಲಾಗಿತ್ತು. *ಗಮನಸೆಳೆದ ಎತ್ತಿನಬಂಡಿ ಪ್ರದರ್ಶನ:* ಕುರುಗೋಡು ಹಳ್ಳಿಗಳಿಂದ ಕೂಡಿದ ತಾಲ್ಲೂಕಾಗಿದ್ದು, ರೈತನ ನಿತ್ಯದ ಕಾಯಕ ಮತ್ತು ಗ್ರಾಮೀಣ ಸೊಗಡನ್ನು ಬಿಂಬಿಸಲು ಉತ್ಸವದಲ್ಲಿ ಎತ್ತಿನಬಂಡಿ ಪ್ರದರ್ಶನ ಆಯೋಜಿಸಲಾಗಿತ್ತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ತಮ್ಮ ಜೋಡಿ ಎತ್ತುಗಳನ್ನು ಸಿಂಗರಿಸಿಕೊಂಡು ಬಂಡಿಯ ಜೊತೆಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಶಾಸಕ ಜೆ.ಎನ್.ಗಣೇಶ್ ಕುರುಗೋಡಿನ ಮಿನಿ ವಿಧಾನಸೌಧ ಬಳಿ ಚಾಲನೆ ನೀಡಿದರು. ಪ್ರದರ್ಶನದಲ್ಲಿ ಶಾಸಕರೂ ಬಂಡಿ ಸವಾರಿ ಮಾಡಿದ್ದು, ತಾವು ಸಹ ರೈತ ಕುಟುಂಬದವರೇ ಎಂಬುದನ್ನು ಸಾರಿ ಹೇಳುವಂತಿತ್ತು. ಸಾಲಾಗಿ ಸಾಗಿದ 60 ಕ್ಕೂ ಹೆಚ್ಚು ಎತ್ತಿನಬಂಡಿಗಳ ಪ್ರದರ್ಶನ ನೋಡುಗರ ಗಮನಸೆಳೆದವು. ಬಳಿಕ ಪಟ್ಟಣದ ಮುಖ್ಯವೃತ್ತದ ವರೆಗೆ ತಲುಪಿ ಅಂತ್ಯಗೊಂಡಿತು. *ಆಕರ್ಷಕ ರಂಗೋಲಿ ಸ್ಪರ್ಧೆ:* ಉತ್ಸವಕ್ಕೆ ಮೆರಗು ನೀಡಲು ಹಾಗೂ ಉತ್ಸವದಲ್ಲಿ ಮಹಿಳೆಯರು ಸಹ ಭಾಗವಹಿಸುವಿಕೆಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಬಣ್ಣ-ಬಣ್ಣದ ರಂಗೋಲಿ ಪುಡಿಯ ಮೂಲಕ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನ ಎದುರುಗಡೆಯಿಂದ ಕಂಪ್ಲಿ ರಸ್ತೆಯ ಪೆಟ್ರೋಲ್ ಪಂಪ್ ವರೆಗೂ ಬಣ್ಣ- ಬಣ್ಣದ ರಂಗೋಲಿ ಚಿತ್ತಾರದ ಮೂಲಕ ತಮ್ಮ ಕೈ ಚಮತ್ಕಾರ ಪ್ರದರ್ಶಿಸಿದರು. ರಂಗೋಲಿಯಿಂದ ಮೂಡಿಬಂದ ಪಟ್ಟಣದ ಆರಾಧ್ಯ ದೇವರಾದ ದೊಡ್ಡಬಸವೇಶ್ವರ-ನೀಲಮ್ಮಳ ಆಕೃತಿ, ಶಿವನಂದಿ, ದೊಡ್ಡಬಸವೇಶ್ವರ ದೇವಸ್ಥಾನದ ಗೋಪುರ, ಕಾಂತಾರ ಚಿತ್ರದ ಮುಖ್ಯಭೂಮಿಕೆಯ ರಂಗೋಲಿ, ‘ಬನ್ನಿ ಚೊಚ್ಚಲ ಕುರುಗೋಡು ಉತ್ಸವಕ್ಕೆ’ ಎಂದು ಆಹ್ವಾನಿಸುವ ರಂಗೋಲಿ, ‘ಸಾಮಾಜಿಕ ಜಾಲಾತಾಣಗಳಿಗೆ ವ್ಯಸನಿಗಳಾಗಬೇಡಿ’ ಎಂದು ಸಾರುವ ಸಂದೇಶದ ರಂಗೋಲಿ ಸೇರಿದಂತೆ ಹಲವು ವೈವಿಧ್ಯಮ ರಂಗೋಲಿಗಳು ಹೆಂಗಳೆಯರ ಕೈಯಿಂದ ಮೂಡಿಬಂದಿದ್ದು, ಆಕರ್ಷಣೀಯವಾಗಿದ್ದರು. ಸ್ಪರ್ಧೆಯಲ್ಲಿ ಆಕರ್ಷಕ ರಂಗೋಲಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ 130 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ರಂಗೋಲಿ ಚಿತ್ರ ಬಿಡಿಸಿದರು. *ಕೆಸರು ಗದ್ದೆ ಓಟ:* ಕುರುಗೋಡು ಪಟ್ಟಣ ಕೃಷಿ ಪ್ರಾಧಾನ್ಯ ತಾಲ್ಲೂಕಾಗಿದ್ದು, ಜನರ ಸಂಸ್ಕೃತಿ ಹೆಚ್ಚಾಗಿ ಅವರ ಕೃಷಿಭೂಮಿಯೊಂದಿಗೆ ಹೆಣೆದುಕೊಂಡಿದೆ. ಸಾಂಪ್ರದಾಯಿಕ ಕೃಷಿ ಸಂಸ್ಕೃತಿ ಬಿಂಬಿಸಲು ಕುರುಗೋಡು ಉತ್ಸವದಲ್ಲಿ ಪುರುಷರಿಗಾಗಿ ಪಟ್ಟಣದ ಬಾದನಹಟ್ಟಿ ರಸ್ತೆಯ ಪೆಟ್ರೋಲ್ ಬಂಕ್ ಎದುರುಗಡೆಯ ರಜಾಬ್ ಅಲಿಸಾಬ್ ಮತ್ತು ಸಹೋದರರ ಜಮೀನಿನಲ್ಲಿ ಕೆಸರು ಗದ್ದೆ ಓಟ ಆಯೋಜಿಸಲಾಗಿತ್ತು. ಶಾಸಕರು ಓಟಕ್ಕೆ ಚಾಲನೆ ನೀಡಿದರು. ತಾವೂ ಕೆಸರು ಗದ್ದೆಯಲ್ಲಿ ಓಡುವ ಮೂಲಕ ಉತ್ಸಾಹ ಹೆಚ್ಚಿಸಿದರು. ಬಳಿಕ ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ ನೋಡುಗರ ಮನರಂಜಿಸಿತು. ನಂತರ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಚಿತ್ರಕಲಾ ಉತ್ಸವ, ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನ ಮುಂಭಾಗ ಹವ್ಯಾಸಿ ಚಿತ್ರಕಲಾವಿದರ ಚಿತ್ರಕಲಾ ಉತ್ಸವ ಜರುಗಿದವು. ಈ ವೇಳೆ ಕುರುಗೋಡು ಪುರಸಭೆಯ ಅಧ್ಯಕ್ಷ ಟಿ.ಶೇಖಣ್ಣ, ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ, ತಹಶೀಲ್ದಾರ ನರಸಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿ- ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. =======

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ