ಸೋಮವಾರ, ಫೆಬ್ರವರಿ 16, 2026

ಬಳ್ಳಾರಿ: ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಹೇಳಿಕೆ | ವಸತಿ ಬೇಡಿಕೆ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸಿ

ಬಳ್ಳಾರಿ,ಫೆ.12(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ವಸತಿ ಬೇಡಿಕೆ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು. ನಗರದ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮೊದಲ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 2 ಸಾವಿರ ಮನೆಗಳು ಬೇಡಿಕೆ ಇವೆ ಎಂದು, ಯೋಜನಾ ಸಮಿತಿಯ ವರದಿಯಲ್ಲಿದ್ದು, ಇನ್ನೂ ಪೂರಕ ಸಮೀಕ್ಷೆ ನಡೆಸಬೇಕು. ಜಿಲ್ಲೆಯಲ್ಲಿ ವಿವಿಧ ಅನುದಾನ ಲಭ್ಯವಿದೆ. ಹಾಗಾಗಿ ವಸತಿ ಬೇಡಿಕೆಗನುಗುಣವಾಗಿ ಪ್ರಸ್ತಾವನೆ ಸಿದ್ಧಪಡಿಸಿ ವರದಿ ಸಲ್ಲಿಸಿ ಎಂದರು. ಜಿಲ್ಲೆಯ 5 ತಾಲ್ಲೂಕುಗಳಲ್ಲಿ ವಸತಿ, ಶಿಕ್ಷಣ, ಆರೋಗ್ಯ ಸೌಲಭ್ಯ ಸೇರಿದಂತೆ ಇದಕ್ಕಾಗಿ ರೂ.5,500 ಕೋಟಿ ಅಂದಾಜು ಮಾಡಲಾಗಿದೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬೇಕಾದಲ್ಲಿ ಸದಸ್ಯರು ತಮ್ಮ ಅಭಿಪ್ರಾಯ ಮಂಡಿಸಿದಲ್ಲಿ ಯೋಜನಾ ವರದಿಯಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್ ಅವರು ಮಾತನಾಡಿ, ಜಿಲ್ಲಾ ಯೋಜನಾ ಸಮಿತಿ ಸಭೆಯು ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿ ಯೋಜನೆಗಳನ್ನು ಕ್ರೋಢೀಕರಿಸಲು, ಅನುಮೋದಿಸಲು ಮತ್ತು ಜಿಲ್ಲಾ ಮಟ್ಟದ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವ ಸಭೆಯಾಗಿದೆ. ಜಿಲ್ಲೆಯ ಮೊದಲ ಸಭೆ ಇದಾಗಿದ್ದು, ಸದಸ್ಯರು ಸಹ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರ ರವಾನೆಯ ಮೂಲಕ ಬಳ್ಳಾರಿ ಜಿಲ್ಲೆಯ ಮಾನವ ಅಭಿವೃದ್ಧಿ ವರದಿ-2025 ಮತ್ತು ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ವರದಿ-2030 ರ ವರದಿ ತಯಾರಿಕೆಗೆ ಸಂಬAಧಿಸಿದAತೆ ಮಾಹಿತಿ ಸಲ್ಲಿಸುವಂತೆ ತಿಳಿಸಿದ್ದು, ಜಿಲ್ಲೆಯ ವರದಿ ತಯಾರಿಕೆಗೆ ತಾಂತ್ರಿಕ ಬೆಂಬಲ ಸಂಸ್ಥೆಯಾಗಿ ರಾಜ್ಯ ಸರ್ಕಾರವು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವನ್ನು ನೇಮಿಸಿ ಕಾರ್ಯಾದೇಶ ನೀಡಿದೆ ಎಂದು ಜಿಪಂ ಸಿಇಒ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನಗರದ ಏಕಶಿಲಾ ಬೆಟ್ಟ ಕೋಟೆಯನ್ನು ಅಭಿವೃದ್ಧಿ ಮತ್ತು ಎರಡು ಕಡೆಯ ಮುಖ್ಯದ್ವಾರಗಳನ್ನು 30 ಅಡಿ ಎತ್ತರದಲ್ಲಿ ಪ್ರಾಚೀನ ಕಾಲದ ದ್ವಾರಗಳಂತೆ ನಿರ್ಮಿಸಲು ಅಂದಾಜು 5-6 ಕೋಟಿ ರೂ. ವೆಚ್ಚದ ಅನುದಾನ ಕುರಿತು ಪ್ರಸ್ತಾಪಿಸಿದರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ನಗರದಲ್ಲಿನ ಹಳೆಯ ಜಿಲ್ಲಾ ನ್ಯಾಯಾಲಯ ಕಟ್ಟಡವನ್ನು ಕಾನೂನು ಕಾಲೇಜು ಮಾಡಲು ಕೋರ್ಟ್ ನಿಂದ ಅನುಮತಿ ದೊರೆತಿದ್ದು, ಇದರ ಅಭಿವೃದ್ಧಿಗಾಗಿ ಅನುದಾನ ಕುರಿತು ಪ್ರಸ್ತಾಪಿಸಿದರು. ಕುರೇಕುಪ್ಪ ಸದಸ್ಯರೊಬ್ಬರು ಮಾತನಾಡಿ, ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಸುಮಾರು 1.50 ಕಿ.ಮೀ ವ್ಯಾಪ್ತಿಯಲ್ಲಿ ಹೊಸದಾಗಿ ಶಾಲೆ ನಿರ್ಮಾಣಗೊಳ್ಳುತ್ತಿದ್ದು, ಶಾಲೆಗೆ ತೆರಳಲು ರಸ್ತೆಯ ಸಮಸ್ಯೆ ಇದ್ದು, ಇರುವ ಕಾಲುದಾರಿಯ ಸುತ್ತಲೂ ಖಾಸಗಿ ಭೂಮಿ ಇದೆ. ಒತ್ತುವರಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಭೆಗೆ ತಿಳಿಸಿದರು. ಜಿಪಂ ಸಿಇಒ ಮಹಮ್ಮದ್ ಹಾರಿಸ್ ಸುಮೇರ್ ಅವರು ಪ್ರತಿಕ್ರಿಯಿಸಿ ಈ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಲಾಗುವುದು ಎಂದರು. ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಜಿಪಂ ಆಡಳಿತಾಧಿಕಾರಿ ಡಾ.ತ್ರಿಲೋಕ ಚಂದ್ರ ಕೆ.ವಿ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಯೋಜನಾ ಸಮಿತಿಯ ಚುನಾಯಿತ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ