ಶುಕ್ರವಾರ, ಜೂನ್ 12, 2026

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಅಭಿಪ್ರಾಯ | ಬಾಲಕಾರ್ಮಿಕ ಪದ್ಧತಿ ಸಮಾಜದ ಸ್ವಾಸ್ಥö್ಯಕ್ಕೆ ಮಾರಕ

ಬಳ್ಳಾರಿ,ಜೂ.12(ಕರ್ನಾಟಕ ವಾರ್ತೆ): ದೇಶ ಹಾಗೂ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಇಂದಿಗೂ ಬಾಲಕಾರ್ಮಿಕ ಪದ್ಧತಿ ಆಚರಣೆಯಲ್ಲಿರುವುದು ಸಮಾಜದ ಸ್ವಾಸ್ಥö್ಯಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಜಿಲ್ಲಾ ವಕೀಲರ ಸಂಘ, ವಿವಿಧ ಇಲಾಖೆಗಳು ಮತ್ತು ಇತರೆ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಮಕ್ಕಳ ಕಾರ್ಮಿಕತೆಗೆ ರೆಡ್ ಕಾರ್ಡ್ ತೋರಿಸಿ, ಮಕ್ಕಳಿಗೆ ನ್ಯಾಯಯುತ gಬಾಲ್ಯ, ವಯಸ್ಕರಿಗೆ ಘನತೆಯ ಉದ್ಯೋಗ’ ಎಂಬ ಘೋಷವಾಕ್ಯದೊಂದಿಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಸಂಪನ್ಮೂಲದ ಅಗತ್ಯ ಹೆಚ್ಚಿರುವ ಕಡೆಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿ ಕಂಡುಬರುತ್ತಿದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಆಲೋಚನೆಗಳೇ ಮುಖ್ಯ ಕಾರಣವಾಗಿದೆ. ಬಾಲಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡುವ ಅಗತ್ಯವಿರುವುದಿಲ್ಲ ಮತ್ತು ಅತ್ಯಂತ ಕಡಿಮೆ ವೇತನದಲ್ಲಿ ಅವರಿಂದ ಹೆಚ್ಚಿನ ಕೆಲಸ ಮಾಡಿಸಿಕೊಳ್ಳಬಹುದು ಎನ್ನುವ ಶೋಷಣೆಯ ಮನೋಭಾವನೆ ಇಂದಿಗೂ ಜೀವಂತವಾಗಿದೆ. ಇಂತಹ ಆಲೋಚನೆಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಅವರ ವಿದ್ಯಾಭ್ಯಾಸದ ಪ್ರಗತಿಯನ್ನು ಕುಂಠಿತಗೊಳಿಸುತ್ತಿವೆ ಎಂದು ತಿಳಿಸಿದರು. ಮಕ್ಕಳು ತಮ್ಮ ಬೆಳವಣಿಗೆಯ ಹಂತದಲ್ಲಿ ವಿದ್ಯಾಭ್ಯಾಸದ ಕಡೆಗೆ ಎಷ್ಟು ಗಮನ ಹರಿಸುತ್ತಾರೋ, ಅಷ್ಟೇ ಉತ್ತಮವಾಗಿ ಅವರು ದೊಡ್ಡವರಾದ ಮೇಲೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಅವರು ಸಾಧನೆ ಮಾಡುವಂತಹ ಆರಂಭಿಕ ಹಂತದಲ್ಲೇ ಅವರ ಕೈಗೆ ಪುಸ್ತಕ ನೀಡುವ ಬದಲು ಕೆಲಸಕ್ಕೆ ದೂಡಿ, ಅವರ ಭವಿಷ್ಯವನ್ನು ಮೊಟಕುಗೊಳಿಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು. ಬಾಲಕಾರ್ಮಿಕ ಪದ್ಧತಿಯು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಹಿರಿಯರು ಮತ್ತು ಸಮಾಜದ ಪ್ರಮುಖರು ಬಾಲಕಾರ್ಮಿಕ ಪದ್ಧತಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಕ್ಕಳ ಬೆಳವಣಿಗೆಗೆ ಪೂರಕವಾದ ಮತ್ತು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ ಒಂದು 'ಸ್ವಸ್ಥ ಸಮಾಜ'ವನ್ನು ನಿರ್ಮಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಮಕ್ಕಳು ಬೇರೆ ಯಾವುದೇ ಕಡೆಗೆ ಗಮನ ಹರಿಸದೆ ಕೇವಲ ಶಿಕ್ಷಣ, ಕ್ರೀಡೆ ಹಾಗೂ ಸೃಜನಶೀಲ ಚಟುವಟಿಕೆಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಕೆಲವೊಮ್ಮೆ ನಿರಂತರ ಓದು ಬೇಸರ ತರಿಸಬಹುದು, ಆದರೆ ಶಿಕ್ಷಣವೇ ನಮ್ಮ ಭವಿಷ್ಯವನ್ನು ರೂಪಿಸುವ ಏಕೈಕ ಶಕ್ತಿ. ಓದು ಎಂದರೆ ಕೇವಲ ಪುಸ್ತಕ ಹಿಡಿದು ಕುಳಿತುಕೊಳ್ಳುವುದಲ್ಲ, ಅದು ವ್ಯಕ್ತಿತ್ವದ ಒಟ್ಟಾರೆ ಬೆಳವಣಿಗೆಗೆ ಕಾರಣವಾಗಬೇಕು. ಶಿಕ್ಷಣವು ಮನುಷ್ಯನ ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಗಮನ ಬೇರೆಡೆಗೆ ಹರಿಯದಂತೆ ಜಾಗ್ರತೆ ವಹಿಸಿ, ಶಿಕ್ಷಣದ ಮಹತ್ವವನ್ನು ಅರಿತು ಮುನ್ನಡೆಯಬೇಕು ಎಂದು ಕರೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ಕೇವಲ ಸರ್ಕಾರದ ಪ್ರಯತ್ನಗಳಿಂದ ಮಾತ್ರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು, ತರಕಾರಿ ಮಾರುಕಟ್ಟೆ, ಗ್ಯಾರೇಜ್, ಹೋಟೆಲ್, ಇಟ್ಟಂಗಿ ಭಟ್ಟಿ, ಕೋಳಿಫಾರಂ, ಹಣ್ಣಿನ ಅಂಗಡಿ ಅಥವಾ ಇತರೆಡೆಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಕೆಲಸ ಮಾಡುತ್ತಿರುವುದನ್ನು ಕಂಡರೆ ತಕ್ಷಣವೇ 1098 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಪ್ರಜೆಗಳಾದ ನಾವೆಲ್ಲರೂ ಸರ್ಕಾರದ ಒಂದು ಭಾಗವಾಗಿದ್ದು, ಈ ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ಕೈಜೋಡಿಸಬೇಕು ಎಂದು ಕರೆ ನೀಡಿದರು. ಬಾಲಕಾರ್ಮಿಕ ಪದ್ಧತಿಯು ಕೇವಲ ಒಂದು ಮಗುವಿನ ಭವಿಷ್ಯವನ್ನು ಹಾಳು ಮಾಡುವುದಷ್ಟೇ ಅಲ್ಲ, ಇಡೀ ದೇಶದ ಪ್ರಗತಿಗೆ ದೊಡ್ಡ ಮಾರಕವಾಗಿದೆ. ಬಾಲಕಾರ್ಮಿಕರನ್ನು ಹೊಂದಿರುವ ದೇಶವು ಎಂದಿಗೂ ಮುನ್ನಡೆಯಲು ಸಾಧ್ಯವಿಲ್ಲ. 130 ಕೋಟಿಗೂ ಅಧಿಕ ಜನಸಂಖ್ಯೆ, ವೈವಿಧ್ಯಮಯ ಆಚಾರ-ವಿಚಾರಗಳು ಹಾಗೂ ಸುಮಾರು 2300 ಕ್ಕೂ ಹೆಚ್ಚು ಭಾಷೆಗಳನ್ನು ಹೊಂದಿರುವ ನಮ್ಮ ದೇಶದಲ್ಲಿ, ಎಲ್ಲೆಡೆ ತಲುಪಿ ಬದಲಾವಣೆ ತರುವುದು ಸರ್ಕಾರ ಮಾತ್ರವೇ ಆಗಿದೇ ನಾಗರಿಕರ ಕರ್ತವ್ಯವೂ ಪ್ರಮುಖವಾಗಿದೆ ಎಂದರು. ನಮ್ಮ ಸಂವಿಧಾನವು 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣದ ಹಕ್ಕನ್ನು ನೀಡಿದೆ. ಅಂತಹ ಮಕ್ಕಳಿಗೆ ವಸತಿ ಶಾಲೆಗಳ ಸೌಕರ್ಯವೂ ಇದೆ. ಆದಾಗ್ಯೂ, ಪೋಷಕರಲ್ಲಿ ಅರಿವಿನ ಕೊರತೆಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪೋಷಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು. ಬಳ್ಳಾರಿ ಉಪ ವಿಭಾಗ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಜಿ. ಖೈನೂರ ಅವರು ಮಾತನಾಡಿ, 2025-26ರ ಸಾಲಿನಲ್ಲಿ ಜಿಲ್ಲೆಯಾದ್ಯಂತ ಕನಿಷ್ಠ 32 ಸಂಸ್ಥೆಗಳ ಮೇಲೆ ದಾಳಿ ನಡೆಸಿ, ಮಾಲೀಕರಿಗೆ ತಿಳಿಹೇಳುವುದರ ಜೊತೆಗೆ ದಂಡ ವಿಧಿಸಿ, ಪೊಲೀಸ್ ಇಲಾಖೆಯ ಮುಖಾಂತರ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಈ ದಾಳಿಗಳ ಸಂದರ್ಭದಲ್ಲಿ ಒಟ್ಟು 58 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಎಲ್ಲಾ 58 ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಾಗಿದೆ. ಈ ಹಿಂದೆ ಅವರು ಯಾವ ಶಾಲೆಗಳಲ್ಲಿ ಓದುತ್ತಿದ್ದರೋ, ಅಲ್ಲಿಗೇ ಮತ್ತೆ ಸೇರಿಸಿ ಅವರ ವಿದ್ಯಾಭ್ಯಾಸ ಮುಂದುವರೆಯುವAತೆ ನೋಡಿಕೊಳ್ಳಲಾಗಿದೆ. ಅಲ್ಲದೆ, ಮಕ್ಕಳ ಪೋಷಕರನ್ನು ಕರೆಸಿ ಆಪ್ತ ಸಮಾಲೋಚನೆ ನಡೆಸಿ, ಯಾವುದೇ ಕಾರಣಕ್ಕೂ ಮಕ್ಕಳನ್ನು ಮತ್ತೆ ಇಂತಹ ಅಪಾಯಕಾರಿ ಕೆಲಸಗಳಿಗೆ ಕಳುಹಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಸದಸ್ಯರು ಹಾಗೂ ವಕೀಲರಾದ ಶಿವಲೀಲ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಅನ್ಸರ್ ಬಾಷಾ ಅವರು ‘ವಿಶ್ವ ಬಾಲಕಾರ್ಮಿಕ ವಿರೋಧಿ ದಿನ’ ಅಂಗವಾಗಿ “ಬಾಲ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲ” ಎಂಬ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಚಿಗುರು ಕಲಾ ತಂಡದ ಹುಲುಗಪ್ಪ ಸಂಗಡಿಗರು ಬಾಲಕಾರ್ಮಿಕ ಪದ್ಧತಿ ವಿರೋಧಿ ಕುರಿತ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ ವಿಶ್ವಜಿತ್ ಮೆಹೆತಾ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಗೌಸಿಯಾ, ವೆಂಕಟೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧೆ ನಂದಿನಿ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್, ಕಾರ್ಮಿಕ ನಿರೀಕ್ಷಕರಾದ ರಮೇಶ್(ಬಳ್ಳಾರಿ ವೃತ್ತ-1), ಪರಶುರಾಮ್(ಬಳ್ಳಾರಿ ವೃತ್ತ-2) ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಾಲಾ- ಕಾಲೇಜು ಮಕ್ಕಳು, ಇತರರು ಉಪಸ್ಥಿತರಿದ್ದರು. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ