ಮಂಗಳವಾರ, ಡಿಸೆಂಬರ್ 12, 2023
ಆಯುಷ್ಮಾನ್ ಭವಃದಡಿ ಆರೋಗ್ಯ ಮೇಳಗಳ ಸದುಪಯೋಗ ಪಡೆದುಕೊಳ್ಳಿ: ಡಾ.ವೈ.ರಮೇಶ್ ಬಾಬು
ಬಳ್ಳಾರಿ,ಡಿ.12(ಕರ್ನಾಟಕ ವಾರ್ತೆ):
ಪ್ರತಿ ಮಂಗಳವಾರ ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಗ್ರಾಮೀಣ ಭಾಗದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಜರುಗುವ ಆಯುಷ್ಮಾನ್ ಭವಃ ಉಚಿತ ಆರೋಗ್ಯ ಮೇಳಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮನವಿ ಮಾಡಿದ್ದಾರೆ.
ಜೀವನ ಶೈಲಿಯ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಪರೀಕ್ಷಿಸಿಕೊಳ್ಳಬೇಕು. ಅದರಲ್ಲೂ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಸಹ ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಜೀವನಶೈಲಿಯ ಕಾಯಿಲೆಗಳಿಂದ ದೂರವಿರಲು ಪ್ರಯತ್ನಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರದಲ್ಲಿ ಕ್ಷಯರೋಗ ಪರೀಕ್ಷೆ ಹಾಗೂ ರೋಗ ಲಕ್ಷಣಗಳುಳ್ಳುವರ ಕಫ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತದೆ ಹಾಗೂ ಇತರ ಸಾಮಾನ್ಯ ಆರೋಗ್ಯ ಸೇವೆಗಳನ್ನು ಸಹ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವಂತಹ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್‍ಗೆ ಕಳಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶಿಬಿರದಲ್ಲಿ ಆಯುಷ್ಮಾನ್ ಭವ- ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಮುಖ್ಯಮಂತ್ರಿಯ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್, ಡಿಜಿಟಲ್ ಹೆಲ್ತ್ ಕಾರ್ಡ್‍ಗಳನ್ನು ಸೃಜಿಸಲಾಗುವುದು ಮತ್ತು ಅಂಗಾಂಗ ದಾನ ನೋಂದಣಿಯನ್ನು ಸಹ ಮಾಡಲಾಗುವುದು ಎಂದು ಹೇಳಿದ್ದಾರೆ.
ಶಿಬಿರದಲ್ಲಿ ಡೆಂಗ್ಯು ಮತ್ತು ಚಿಕುನ್ ಗುನ್ಯ ಕುಟುಂಬ ಕಲ್ಯಾಣ ವಿಧಾನಗಳು, ತಾಯಿ ಮಗುವಿನ ಆರೈಕೆ, ಟೆಲಿ ಮನಸ್ ಮಾನಸಿಕ ಆರೋಗ್ಯ ಸಹಾಯವಾಣಿ 14416 ಕುರಿತು ಮಾಹಿತಿ ನೀಡಲಾಗುತ್ತದೆ.
ಸಾರ್ವಜನಿಕರು ತಮ್ಮ ಆಧಾರ್‍ಕಾರ್ಡ್, ಮೊಬೈಲ್ ಹಾಗೂ ಈ ಹಿಂದೆ ಆಸ್ಪತ್ರೆಗೆ ತೋರಿಸಿದ ಚೀಟಿಗಳ ಮುಖಾಂತರ ಹಾಜರಾಗಿ, ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ