ಗುರುವಾರ, ಫೆಬ್ರವರಿ 1, 2024
ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಸಂಚಾರ: ಗ್ರಾಮಗಳಲ್ಲಿ ಸಂಭ್ರಮದ ಕಳೆ, ಅದ್ದೂರಿ ಸ್ವಾಗತ
ಬಳ್ಳಾರಿ,ಫೆ.01(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವು ಮುಂದುವರೆದಿದ್ದು, ಗುರುವಾರ ಬಳ್ಳಾರಿ ತಾಲ್ಲೂಕಿನ ಎಂ.ಗೋನಾಳು, ಯರ್ರಗುಡಿ, ಮೋಕಾ, ಬಿ.ಡಿ.ಹಳ್ಳಿ, ಕಪ್ಪಗಲ್ಲು, ಸಿರವಾರ ಹಾಗೂ ಸಂಗನಕಲ್ಲು ಮಾರ್ಗವಾಗಿ ಸಂಚರಿಸಿತು. ಮೆರವಣಿಗೆ, ಕುಣಿತ, ಕಲಾ ಪ್ರದರ್ಶನದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ ಸಂವಿಧಾನದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.
ಜಾಥಾದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು. ಸಂವಿಧಾನ ರಚನಾ ಸಭೆಯ ಕುರಿತ ವಿಡಿಯೋ ತುಣುಕುಗಳನ್ನು ಸಾರ್ವಜನಿರಿಗೆ ಪ್ರದರ್ಶಿಸಲಾಯಿತು ಮತ್ತು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.
ಸಂವಿಧಾನ ಜಾಥಾವನ್ನು ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿಯೂ ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.
ಯರ್ರಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಅವರು ಮಾತನಾಡಿ, ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಂವಿಧಾನ ಜಾಗೃತಿ ಜಾಥಾವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸುತ್ತಿರುವುದರಿಂದ ಸಂವಿಧಾನದ ಬಗ್ಗೆ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಗ್ರಾಮಗಳ ಸಾರ್ವಜನಿಕರು ತಿಳಿಯಲು ಸಹಕಾರಿಯಾಗಿದೆ. ಸರ್ಕಾರದ ಈ ನಡೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಯರ್ರಗುಡಿ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮರಿಸ್ವಾಮಿ ಪೂಜಾರಿ ಮಾತನಾಡಿ, ಸಂವಿಧಾನವನ್ನು ಅಂಗೀಕರಿಸಿಕೊಂಡು 75ನೇ ಅಮೃತ ಮಹೋತ್ಸವ ವರ್ಷದ ಸವಿನೆನಪಿಗಾಗಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂದರ್ಭೋಚಿತವಾಗಿದೆ ಎಂದರು.
ಬಿ.ಡಿ.ಹಳ್ಳಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಡ್ರಮ್ಸ್ ವಾದ್ಯಗಳ ಮೂಲಕ ಸಂವಿಧಾನಕ್ಕೆ ಸಂಬಂಧಿಸಿದ ವಿವಿಧ ಡ್ರಾಯಿಂಗ್ ಚಿತ್ರಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದ್ದು ಗಮನ ಸೆಳೆಯಿತು.
ಮೋಕಾ ಗ್ರಾಮದಲ್ಲಿ ಕಸ್ತೂರ್‍ಬಾ ಶಾಲೆಯ ವಿದ್ಯಾರ್ಥಿನಿಯರು ಸಂವಿಧಾನ ಜಾಗೃತಿ ಜಾಥಾವನ್ನು ಜಾನಪದ ಡೊಳ್ಳು ಕುಣಿತದ ಮೂಲಕ ವಿನೂತನವಾಗಿ ಸ್ವಾಗತಿಸಿದ್ದು ನೋಡುಗರ ಕಣ್ಮನ ಸೆಳೆಯಿತು. ಡೊಳ್ಳು ಕುಣಿತವನ್ನು ನೋಡಿದ ಜನಸಮೂಹವು ನಿಬ್ಬೆರಗಾಗಿ ವಿದ್ಯಾರ್ಥಿಗಳ ಡೊಳ್ಳು ಕುಣಿತವನ್ನು ಹಾಗೂ ಜಾಥಾವನ್ನು ಕಣ್ತುಂಬಿಕೊಂಡರು.
ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪಿ.ಮಮತಾ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು, ಕಳಶ ಹಿಡಿದ ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ