ಸೋಮವಾರ, ಫೆಬ್ರವರಿ 12, 2024
ಕಾಯಕ ನಿಷ್ಠೆ ಕಂಡುಕೊಂಡವರು ಶಿವಶರಣರು: ಮೇಯರ್ ಬಿ.ಶ್ವೇತ
ಬಳ್ಳಾರಿ,ಫೆ.12(ಕರ್ನಾಟಕ ವಾರ್ತೆ):
12 ನೇ ಶತಮಾನದಲ್ಲಿನ ಶಿವಶರಣರು, ಯಾವುದೇ ಕಾಯಕ ಮೇಲಲ್ಲ ಮತ್ತು ಕೀಳಲ್ಲ ಎಂಬ ಮನೋಧೋರಣೆಯಿಂದ ಕಾಯಕರಾಗಿ ದೇವರನ್ನು ಒಲಿಸಿಕೊಂಡ ಶರಣರು ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ, ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಶರಣರಿದ್ದರು. ಅವರಲ್ಲಿ ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಉರಿಲಿಂಗಿಪೆದ್ದಿ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ ಎಂಬ ಐವರು ಕಾಯಕ ಶರಣರು ಪ್ರಮುಖ ಹಿರಿಯ ಶರಣರಾಗಿದ್ದರು. ಅವರ ಜೀವನ ಹಾಗೂ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತರಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿಗಳಾದ ಎನ್.ಡಿ.ವೆಂಕಮ್ಮ ಅವರು ಮಾತನಾಡಿ, ಕಾಯಕ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಕಂದಾಚಾರ, ಜಾತಿ ಪದ್ಧತಿಗಳನ್ನು ಹೋಗಲಾಡಿಸುತ್ತಿದ್ದರು. ಸಮ ಸಮಾಜ ನಿರ್ಮಾಣಕ್ಕಾಗಿ ಶರಣರ ವಚನಗಳನ್ನು ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮತ್ತೋರ್ವ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಉಪನ್ಯಾಸಕಿ ಸುಶೀಲ ಅವರು ಮಾತನಾಡಿ, 12ನೇ ಶತಮಾನದಲ್ಲಿದ್ದ ಶರಣರು ಸಮಾಜದಲ್ಲಿದ್ದ ಅಂಕುಡೊಂಕುಗಳ ಕುರಿತು ಸರಳ ಭಾಷೆಯ ಮೂಲಕ ಸಾಮಾನ್ಯ ಜನರಿಗೆ ತಿಳಿಸುವ ಕಾರ್ಯ ಮಾಡಿದರು. ವಿದ್ಯಾರ್ಥಿಗಳು ಶರಣರ ವಚನಗಳನ್ನು ಅಧ್ಯಯನ ಮಾಡಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಓದಿನ ಕಡೆ ಗಮನ ಕೊಡಬೇಕು. ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಎರ್ರೆಗೌಡ ಕೆ.ಆರ್ ಅವರ ಸಂಗಡಿಗರಿಂದ ಶರಣರ ವಚನ ಗಾಯನಗಳನ್ನು ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ್ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಇತರರು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)








ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ