ಸೋಮವಾರ, ಫೆಬ್ರವರಿ 5, 2024

ಆಯುಷ್ಮಾನ್ ಭವಃ ಮೇಳಗಳಲ್ಲಿ ತಾಯಿಕಾರ್ಡ್ ಮಹತ್ವ ಜಾಗೃತಿ

ಬಳ್ಳಾರಿ,ಫೆ.05(ಕರ್ನಾಟಕ ವಾರ್ತೆ): ಪ್ರತಿ ಮಂಗಳವಾರ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನಡೆಯುವ ಆಯುಷ್ಮಾನ್ ಭವಃ ಮೇಳಗಳಲ್ಲಿ ತಾಯಿಕಾರ್ಡ್‍ಗಳ ಬಗ್ಗೆ ಮಹತ್ವ ತಿಳಿಸಿಕೊಡಲಾಗುತ್ತಿದ್ದು, ಗರ್ಭಿಣಿ ಮಹಿಳೆಯರು ಇದರ ಬಗ್ಗೆ ಅರಿವು ಹೊಂದಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್ ಬಾಬು ಅವರು ತಿಳಿಸಿದ್ದಾರೆ. ಗರ್ಭಿಣಿ ಎಂದು ತಿಳಿದ ಕೂಡಲೇ, 12 ವಾರದೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಸಂಬಂಧಿತ ಗರ್ಭಿಣಿಗೆ ತಾಯಿಕಾರ್ಡ್ ಒದಗಿಸುವ ಜೊತೆಗೆ ಕಾರ್ಡ್‍ನಲ್ಲಿ ನಮೂದಾಗಿರುವ ಮಾಹಿತಿಯನ್ನು ಎಲ್ಲರಿಗೂ ತಿಳಿಸುವ ಕಾರ್ಯವನ್ನು ಆಯುಷ್ಮಾನ್ ಭವಃ ಮೇಳದಲ್ಲಿ ಮಾಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಯುಷ್ಮಾನ್ ಭವಃ ಮೇಳಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು, ವೈದ್ಯರು, ತಜ್ಞ ವೈದ್ಯರ ಮೂಲಕ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಗರ್ಭಿಣಿಯೆಂದು ತಿಳಿದ ಕೂಡಲೇ ಗರ್ಭಿಣಿಯರಿಗೆ ಸಕಾಲದಲ್ಲಿ ತಾಯಿ ಕಾರ್ಡ್ ಒದಗಿಸಲಾಗುತ್ತಿದೆ. ಅವರ ಆಧಾರ್‍ಕಾರ್ಡ್ ಮತ್ತು ಬ್ಯಾಂಕ್ ಮಾಹಿತಿಯನ್ನು ಕ್ರೂಢೀಕರಿಸಿ ಹೆರಿಗೆ ಪೂರ್ವದಲ್ಲಿ ಸಿಗುವ ಎಲ್ಲಾ ಚುಚ್ಚುಮದ್ದುಗಳನ್ನು ಸಕಾಲದಲ್ಲಿ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. ಗರ್ಭಿಣಿ ಸಮಯದಲ್ಲಿ ಕನಿಷ್ಠ 180 ಕಬ್ಬಿಣಾಂಶ ಮಾತ್ರೆಗಳನ್ನು ಕೊಡಿಸುವ ಮೂಲಕ ರಕ್ತಹೀನತೆಯನ್ನು ನಿಯಂತ್ರಿಸಿ ಸಹಜ ಹೆರಿಗೆಗೆ ಅಗತ್ಯ ಇರುವ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ ಜನನದ ನಂತರ ಮಗುವಿಗೆ 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳನ್ನು ವಯಸ್ಸಿಗನುಸಾರ ಸಂಪೂರ್ಣವಾಗಿ ಪಡೆಯುವ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಜೀವನ ಶೈಲಿ ಕಾಯಿಲೆಗಳ ನಿರ್ವಹಣೆ: ಜೀವನ ಶೈಲಿಯ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಪರೀಕ್ಷೆ ಕೈಗೊಳ್ಳಲಾಗುತ್ತದೆ. ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇದ್ದಲ್ಲಿ ಕ್ಷಯರೋಗ ಪರೀಕ್ಷೆ ಹಾಗೂ ರೋಗ ಲಕ್ಷಣಗಳು ಉಳ್ಳುವರ ಕಫ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಸೃಜನೆ: ಬಿಪಿಎಲ್ ಕುಟುಂಬಗಳಿಗೆ 05 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚ ಭರಿಸಲು ಅನುಕೂಲವಾಗುವ ಆಯುಷ್ಮಾನ್ ಭವ- ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡುಗಳನ್ನು ಡಿಜಿಟಲ್ ಹೆಲ್ತ್ ಅಕೌಂಟ್ ಸಂಖ್ಯೆಯೊಂದಿಗೆ ಕಾರ್ಡ್‍ಗಳನ್ನು ಮೊಬೈಲ್‍ಗಳ ಮೂಲಕ ಸೃಜಿಸಲಾಗುವುದು. ಅಂಗಾಂಗ ದಾನ ನೋಂದಣಿ: ಜಿಲ್ಲೆಯಲ್ಲಿ ಈಗಾಗಲೇ 4010 ಅಂಗಾಂಗ ದಾನ ನೋಂದಣಿಯನ್ನು ಮಾಡಿ ರಾಷ್ಟ್ರ ಮಟ್ಟದಲ್ಲಿ ಮುಂಚುಣಿಯಲ್ಲಿದ್ದು, ನೋಂದಣಿಯನ್ನು ಸಹ ಮಾಡಲಾಗುವುದು. ಶಿಬಿರದಲ್ಲಿ ಡೆಂಗ್ಯು ಮತ್ತು ಚಿಕುನ್‍ಗುನ್ಯ ಕುಟುಂಬ ಕಲ್ಯಾಣ ವಿಧಾನಗಳು, ತಾಯಿ ಮಗುವಿನ ಆರೈಕೆ, ಮಾನಸಿಕ ಆರೋಗ್ಯ ಸಲಹೆಗಾಗಿ ಟೆಲಿ ಮನಸ್ ಮಾನಸಿಕ ಆರೋಗ್ಯ ಸಹಾಯವಾಣಿ14416 ಕುರಿತು ಸಹ ಮಾಹಿತಿ ನೀಡಲಾಗುತ್ತಿದೆ ಮತ್ತು ಇತರ ಸಾಮಾನ್ಯ ಆರೋಗ್ಯ ಸೇವೆಗಳನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಅಗತ್ಯ ಚಿಕಿತ್ಸೆ ಇರುವಂತಹ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್‍ಗೆ ಕಳಿಸಿಕೊಡಲಾಗುವುದು. ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್, ಮೊಬೈಲ್ ಹಾಗೂ ಈ ಹಿಂದೆ ಅಸ್ಪತ್ರೆಗೆ ಭೇಟಿ ನೀಡಿ ತೋರಿಸಿದ ಚೀಟಿಗಳನ್ನು ತಂದು ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್ ಬಾಬು ಅವರು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ