ಶುಕ್ರವಾರ, ಆಗಸ್ಟ್ 30, 2024

ಬಳ್ಳಾರಿ: ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ

ಬಳ್ಳಾರಿ,ಆ.30(ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು 2024-25 ನೇ ಸಾಲಿನ ಅಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಬಳ್ಳಾರಿ ಜಿಲ್ಲೆಯ ಉಪನೋಂದಣಿ ಕಚೇರಿಗಳಿಗೂ ವಿಸ್ತರಿಸಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಪ್ರಸ್ತುತ ಸಾರ್ವಜನಿಕರು ಸ್ಥಿರಾಸ್ತಿ ಇರುವ ವ್ಯಾಪ್ತಿಗೆ ಉಪನೋಂದಣಿ ಕಚೇರಿಯಲ್ಲಿ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲು ಅವಕಾಶವಿದ್ದು, ಎನಿವೇರ್ ನೋಂದಣಿಯಲ್ಲಿ ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಎನಿವೇರ್ ನೋಂದಣಿ ವ್ಯವಸ್ಥೆಯು ಸಾರ್ವಜನಿಕರಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದ್ದು, ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ನೋಂದಣಿಯಲ್ಲಿ ವಿಳಂಬವನ್ನು ತಡೆಗಟ್ಟುತ್ತದೆ. ಸಾರ್ವಜನಿಕರು ಸಮೀಪದಲ್ಲಿರುವ ಉಪನೋಂದಣಿ ಕಚೇರಿಯಲ್ಲಿ ದಸ್ತಾವೇಜನ್ನು ನೋಂದಾಯಿಸಬಹುದು ಎಂದು ಅವರು ತಿಳಿಸಿದ್ದಾರೆ. ಸ್ಲಾಟ್ ಲಭ್ಯವಿರುವಂತಹ ಕಚೇರಿಯನ್ನು ನೋಂದಣಿಗೆ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನೋಂದಣಿ ಪ್ರಕ್ರಿಯೆ ಸುಲಭವಾಗುವುದಲ್ಲದೆ ಸಮಯವು ಸಹ ಉಳಿಯುತ್ತದೆ. ಉಪ ನೋಂದಣಿ ಕಚೇರಿಗಳಲ್ಲಿ ಜನದಟ್ಟಣೆ ಕಡಿಮೆಯಾಗುತ್ತದೆ. ಕಚೇರಿ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಕಚೇರಿಗಳಲ್ಲಿ ನೋಂದಣಿ ಕೆಲಸ ಸಮಾನವಾಗಿ ಹಂಚಿಕೆಯಾಗುತ್ತದೆ. ಹಾಗಾಗಿ ಸಾರ್ವಜನಿಕರು ಎನಿವೇರ್ ನೋಂದಣಿ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ