ಶುಕ್ರವಾರ, ಫೆಬ್ರವರಿ 28, 2025
ವಿಜ್ಞಾನದಿಂದ ವೈಯಕ್ತಿಕ ಅಭಿವೃದ್ಧಿ ಜೊತೆಗೆ ದೇಶದ ಅಭಿವೃದ್ಧಿ: ಜಿಲ್ಲಾ ಪಂಚಾಯತ್ ಸಿಇಒ ಮಹಮ್ಮದ್ ಹಾರಿಸ್ ಸುಮೇರ್
ಬಳ್ಳಾರಿ,ಫೆ.28(ಕರ್ನಾಟಕ ವಾರ್ತೆ):
ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಜೀವನದಲ್ಲಿ ಬಹಳ ಪ್ರಮುಖವಾದದ್ದು, ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ದೇಶದ ಅಭಿವೃದ್ಧಿಯು ಹೊಂದುತ್ತದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್ ಅವರು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮೋಕಾದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2025 ಕಾರ್ಯಕ್ರಮವನ್ನು ಸಿ.ವಿ.ರಾಮನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದಿನನಿತ್ಯ ಜೀವನದಲ್ಲಿ ವಿಜ್ಞಾನದ ಮಹತ್ವವನ್ನು ಅರಿತು ಅನೇಕ ಮಹಾನ್ ವಿಜ್ಞಾನಿಗಳು ಸಾಧನೆಗೈದಿದ್ದಾರೆ. ನಾವು ಸಹ ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನದ ಮಹತ್ವ ಅಳವಡಿಸಿಕೊಳ್ಳಬೇಕು ಎಂದರು.
ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್, ಇನ್‌ಸ್ಟಾಗ್ರಾಮ್‌ನಲ್ಲಿ ಸಿಗುವಂತಹ ವಿಜ್ಞಾನದ ಮಹತ್ವದ ಮಾಹಿತಿಗಳನ್ನು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ವಿಜ್ಞಾನದಿಂದ ವೈಯುಕ್ತಿಕ ಅಭಿವೃದ್ಧಿ ಅಲ್ಲದೆ ದೇಶದ ಅಭಿವೃದ್ಧಿಯು ಸಹ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸರ್ಕಾರದ ಆದೇಶದಂತೆ ವಿಜ್ಞಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಬಿ.ಉಮಾದೇವಿ ಅವರು ಮಾತನಾಡಿ, ಪ್ರೌಢ ಹಂತದಿAದಲೇ ವಿಜ್ಞಾನದ ಕಡೆಗೆ ಆಸಕ್ತಿ ತೋರಿಸಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವಿದ್ಯಾಭ್ಯಾಸದ ಬಗ್ಗೆ ಹೆಚ್ಚಾಗಿ ಗಮನ ನೀಡಬೇಕು ಎಂದರು.
ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಜೆ.ಭಾರತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರಲು ಹಾಗೂ ಆಸಕ್ತಿಕರ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗುತ್ತವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಎಚ್ ಪೀರ್ ಭಾಷಾ ಅವರು ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಬದುಕನ್ನು ಹಸನಗೊಳಿಸುತ್ತದೆ. ತಂತ್ರಜ್ಞಾನವು ಕೃಷಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಸಹಾಯಕವಾಗಿದೆ. ವಿಜ್ಞಾನ ನಮ್ಮೆಲ್ಲರ ಜೀವನದಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ ಹಾಗೂ ಸಿ.ವಿ.ರಾಮನ್ ಅವರ ಜೀವನ ಅವರ ಬಾಲ್ಯ ವಿದ್ಯಾಭ್ಯಾಸದ ಬಗ್ಗೆ ವಿವರವಾಗಿ ಪಿಪಿಟಿ ಮುಖಾಂತರ ತಿಳಿಸಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಂ.ಹಿರೇಮಠ್ ಮಾತನಾಡಿ, ಸಿ.ವಿ ರಾಮನ್ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅವರ ಆದರ್ಶ ಹಾಗೂ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗಣಿತ ವಿಷಯದ ಪರಿವೀಕ್ಷಕರಾದ ಬಸವರಾಜ್, ನೋಡಲ್ ಅಧಿಕಾರಿಗಳಾದ ರಾಮಚಂದ್ರರೆಡ್ಡಿ.ಜಿ ಸೇರಿದಂತೆ ಶಾಲಾ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದ್ದರು.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ