ಶುಕ್ರವಾರ, ಡಿಸೆಂಬರ್ 1, 2023

ಹೆಚ್.ಐ.ವಿ ಏಡ್ಸ್‍ನಿಂದ ಸಂಭವಿಸುವ ಸಾವು ಪ್ರಕರಣ ಸೊನ್ನೆಗೆ ತರಲು ಪ್ರತಿಯೊಬ್ಬರು ಕೈ ಜೋಡಿಸಿ: ನ್ಯಾ.ರಾಜೇಶ್ ಎನ್.ಹೊಸಮನೆ

ಬಳ್ಳಾರಿ,ಡಿ.01(ಕರ್ನಾಟಕ ವಾರ್ತೆ): ಹೆಚ್.ಐ.ವಿ ಸೋಂಕಿನಿಂದ ಹರಡುವ ಏಡ್ಸ್ ಕಾಯಿಲೆಯ ಬಗ್ಗೆ ಜನರಲ್ಲಿ ಇರುವ ಭಯವನ್ನು ದೂರ ಮಾಡುವುದರ ಜೊತೆಗೆ ಹೆಚ್.ಐ.ವಿ ಏಡ್ಸ್‍ನಿಂದ ಉಂಟಾಗುವ ಕಳಂಕ ಮತ್ತು ತಾರತಮ್ಯ, ಹೊಸ ಪ್ರಕರಣ ಹಾಗೂ ಸಾವುಗಳನ್ನು ಸೊನ್ನೆಗೆ ತರಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ರಾಜೇಶ್ ಎನ್. ಹೊಸಮನೆ ಅವರು ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಕಾಲೇಜ್, ನಿತ್ಯಜೀವನ, ಸೌಖ್ಯಬೆಳಕು, ವಿಮುಕ್ತಿ, ಎಫ್.ಪಿ.ಎ.ಐ, ವಲ್ರ್ಡ್ ವಿಸನ್ ಇವರ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1980 ರ ದಶಕದಲ್ಲಿ ಕಂಡುಬಂದ ಹೆಚ್.ಐ.ವಿ ಸೋಂಕಿನಿಂದ ಹರಡುವ ಏಡ್ಸ್ ಕಾಯಿಲೆಯು, ಇಂದು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ತನ್ನ ಪ್ರಭಾವವನ್ನು ಬೀರಿದೆ. ಹೆಚ್.ಐ.ವಿ ಸೋಂಕಿತರನ್ನು ಮಾನವಿಯ ದೃಷ್ಟಿಯಿಂದ ನೋಡುವುದರ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಈ ದಿಶೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಜಾಗೃತಿ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 1980 ರಲ್ಲಿ ಮೊದಲ ಬಾರಿಗೆ ಡಿ.01 ರಂದು ಹೆಚ್.ಐ.ವಿ ಸೋಂಕಿನ ತಡೆಗಾಗಿ ಜಾಗತಿಕ ಒಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ ಎಂಬ ಘೋಷ ವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಆರಂಭಿಸಿ, ಸಮುದಾಯದ ಪ್ರತಿಯೊಬ್ಬರಿಗೂ ಸೋಂಕು ಹರಡುವ ವಿಧಾನ ಹಾಗೂ ಮುಂಜಾಗೃತೆಗಳ ಕುರಿತು ವ್ಯಾಪಕ ಪ್ರಚಾರ ಕಾರ್ಯವನ್ನು ಕೈಗೊಳ್ಳುವ ಮೂಲಕ ಪ್ರಸ್ತುತ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಲಾಗಿದೆ ಎಂದು ತಿಳಿಸಿದರು. ಕಳೆದ 6 ವರ್ಷಗಳಲ್ಲಿ 682567 ಜನರ ಪರೀಕ್ಷೆ ಮಾಡಲಾಗಿದೆ. ಬಹುಮುಖ್ಯವಾಗಿ ಹೆಚ್.ಐ.ವಿ ಸೋಂಕಿತ ಮಹಿಳೆ ಗರ್ಭಿಣಿಯಾದರೂ ಸಹ ಜನನವಾಗುವ ಮಗು ಹೆಚ್.ಐ.ವಿ ಸೋಂಕಿಲ್ಲದೇ ಜನಿಸಲು ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಇವೆಲ್ಲವುಗಳನ್ನು ನಿರ್ವಹಿಸಲು 2 ಎ.ಆರ್.ಟಿ ಕೇಂದ್ರಗಳು, 7 ಲಿಂಕ್ ಎ.ಆರ್.ಟಿ ಕೇಂದ್ರಗಳು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. ಹೆಚ್.ಐ.ವಿ ಭಾದಿತರಿಗೋಸ್ಕರ ಕಾರ್ಯನಿರ್ವಹಿಸುವ ವಿಮುಕ್ತಿ, ನಿತ್ಯ ಜೀವನ, ಸೌಖ್ಯ ಬೆಳಕು ಮೂಲಕ ಲೈಂಗಿಕ ಅಲ್ಪ ಸಂಖ್ಯಾತರನ್ನು ಸಹ ಸೋಂಕಿಗೆ ಬಾಧಿತರಾಗದಂತೆ ನಿರಂತರ ತಪಾಸಣೆ ಹಾಗೂ ಜಾಗೃತಿಯನ್ನು ನೀಡಲಾಗುತ್ತಿದೆ. ಯುವ ಜನತೆಗೆ ಜಾಗೃತಿ ನೀಡಲು 16 ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ಆರಂಭಿಸಲಾಗಿದ್ದು, ಪ್ರತಿಯೊಬ್ಬರೂ ಹೆಚ್.ಐ.ವಿಯನ್ನು ಸಾಮಾನ್ಯ ಕಾಯಿಲೆ ಎಂದು ಪರಿಗಣಿಸುವ ಮೂಲಕ ಚಿಕಿತ್ಸೆ ವಂಚಿತರನ್ನು ಚಿಕಿತ್ಸೆ ಕೊಡಿಸಿ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಎಲ್ಲರೂ ಮಾಡುವಂತೆ ವಿನಂತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಏಡ್ಸ್ ನಿರ್ಮೂಲನಾಧಿಕಾರಿ ಹಾಗೂ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾನಸಿಕ ತಜ್ಞರಾದ ಡಾ.ರೋಹನ್ ಮಾನಸಿಕ ಕಾಯಿಲೆಗೆ ಆಪ್ತ ಸಮಾಲೋಚನೆಗಾಗಿ 14416 ಉಚಿತ ಸಹಾಯವಾಣಿಯ ಮಾಹಿತಿ ನೀಡಿದರು. ವೇದಿಕೆ ಮೇಲೆ ವಿಮ್ಸ್ ಐಟಿಸಿಟಿ ನೋಡಲ್ ಅಧಿಕಾರಿ ಡಾ.ಮರಿಗೌಡ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಆರ್.ಅನಿಲ್ ಕುಮಾರ್, ನಿತ್ಯ ಜೀವನ ಸಂಸ್ಥೆಯ ಹೇಮಲತ ಇದ್ದರು. ಕಾರ್ಯಕ್ರಮದಲ್ಲಿ ಎ.ಆರ್.ಟಿ ವೈದ್ಯಾಧಿಕಾರಿ ಡಾ.ದಿನೇಶ್‍ಗುಡಿ, ಎಫ್.ಪಿ.ಎ.ಐ ವ್ಯವಸ್ಥಾಪಕಿ ವಿಜಯಲಕ್ಷ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಗಿರೀಶ್, ಸರಳಾದೇವಿ ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಲಕ್ಕಣ್ಣ, ಡಾ.ಪಲ್ಲವಿ, ರಮಾಭಾಯಿ, ಹೊನ್ನೂರಪ್ಪ, ಮಂಜುನಾಥ ಸೇರಿದಂತೆ ಸಂಘಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸನ್ಮಾನ: ಹೆಚ್.ಐ.ವಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಂಘ ಸಂಸ್ಥೆಗಳು, ವೈದ್ಯಾಧಿಕಾರಿಗಳು, ಆಪ್ತಸಮಾಲೋಚಕರು ಸೇರಿದಂತೆ 14 ಜನರಿಗೆ ಸನ್ಮಾನಿಸಲಾಯಿತು ಹಾಗೂ ಸಂದೀಪ್ ಅವರಿಂದ ಜಾದು ಪ್ರದರ್ಶನ ನಡೆಸಿಕೊಟ್ಟರು. ಜಾಗೃತಿ ಜಾಥಾ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಬೆಳಿಗ್ಗೆ ಜಾಗೃತಿ ಜಾಥಾ ಹಮ್ಮಿಕೊಂಡು ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ