ಮಂಗಳವಾರ, ಡಿಸೆಂಬರ್ 5, 2023
ಬಳ್ಳಾರಿ ತಾಲ್ಲೂಕಿನಲ್ಲಿ ವಿವಿಧೆಡೆ ಸಂಚರಿಸಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ
ಬಳ್ಳಾರಿ,ಡಿ.05(ಕರ್ನಾಟಕ ವಾರ್ತೆ):
ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಮತ್ತು ಅವುಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸೋಮವಾರ ಬಳ್ಳಾರಿ ತಾಲ್ಲೂಕಿನ ಹಗರಿ, ಪರಮದೇವನಹಳ್ಳಿ ಮತ್ತು ಅಮರಾಪುರ ಗ್ರಾಮಗಳಲ್ಲಿ ಸಂಚರಿಸಿತು.
ಕೃಷಿ ಮತ್ತು ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‍ಗಳ ಮೂಲಕ ಸಾಲ ಪಡೆದುಕೊಳ್ಳಿ, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ಕೇಂದ್ರ ಸರ್ಕಾರವು ಶೇ.4ರಷ್ಟು ಬಡ್ಡಿ ಮರುಪಾವತಿ ಮಾಡಲಿದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೋಮನಗೌಡ ಐನಾಪುರ ಅವರು, ಕೆನರಾ ಬ್ಯಾಂಕ್ ಹಗರಿ ಶಾಖೆಯ ವತಿಯಿಂದ ಹಗರಿ ಗ್ರಾಮ ಪಂಚಾಯಿತಿ ಮುಂಭಾಗ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ರೈತರು ಮತ್ತು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಸಾಮಾಜಿಕ ಭದ್ರತಾ ಯೋಜನೆಗಳಡಿ ನಿರ್ದಿಷ್ಟ ಉದ್ದೇಶಗಳಿಗಾಗಿ ಪಡೆಯುವ ಸಾಲವನ್ನು ಮತ್ತು ಪಡೆದ ಸಾಲವನ್ನು ಮರುಪಾವತಿ ಮಾಡುವ ಮೂಲಕ ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಆಯುಷ್ಮಾನ್ ಭವ ಆರೋಗ್ಯ ಯೋಜನೆಯಡಿ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದರು. ಹಗರಿಯ ಕೃಷಿ ಸಂಶೋಧನೆ ಕೇಂದ್ರದ ಅಧಿಕಾರಿಗಳು ಸುಧಾರಿತ ತಳಿ ಬೆಳೆಗಳ ಬಗ್ಗೆ ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಲಕ್ಷ್ಮೀದೇವಿ, ಹಗರಿ ಕೆನರಾ ಬ್ಯಾಂಕ್ ಶಾಖಾಧಿಕಾರಿ ರವಿ ರಾಥೋಡ್, ಕೆವಿಕೆ ವಿಜ್ಞಾನಿಗಳಾದ ಗೋವಿಂದಪ್ಪ, ಹನುಮಂತಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಎಫ್‍ಎಲ್‍ಸಿ ದಿನೇಶ್.ಜಿ ಅವರು ಪ್ರತಿಜ್ಞೆ ಬೋಧಿಸಿದರು. ಆರ್‍ಸಿಎಫ್‍ನಿಂದ ಡೋನ್ ಪ್ರದರ್ಶನವನ್ನು ಕೈಗೊಳ್ಳಲಾಯಿತು. ಕೇಂದ್ರ ಸರ್ಕಾರದ ಮತ್ತು ಕೈಗೊಂಡ ಕಾರ್ಯಕ್ರಮ, ಯೋಜನೆಗಳ ಕುರಿತು ಡಿಜಿಟಲ್ ಪರದೆ ಮೂಲಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲ ಮತ್ತು ಪರಿಕರಗಳನ್ನು ವಿತರಿಸಲಾಯಿತು.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ