ಮಂಗಳವಾರ, ಮೇ 7, 2024

ವೀಲ್‌ಚ್ಹೇರ್ ನಲ್ಲಿ ಬಂದು ಮತ ಚಲಾವಣೆ | ಗಮನಸೆಳೆದ ಸಾಂಪ್ರದಾಯಿಕ ಮತಗಟ್ಟೆಗಳು

ಬಳ್ಳಾರಿ,ಮೇ 07(ಕರ್ನಾಟಕ ವಾರ್ತೆ): ಬಳ್ಳಾರಿ ಲೋಕಸಭೆ ಚುನಾವಣೆ ಅಂಗವಾಗಿ ಮತದಾನ ದಿನವಾದ ಮೇ 07 ರ ಮಂಗಳವಾರದಂದು ಬೆಳಿಗ್ಗೆ 07 ರಿಂದಲೇ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರವಾಗಿ ಆರಂಭಗೊಂಡಿತು. ವಯೋವೃದ್ಧರು ವೀಲ್ ಚ್ಹೇರ್‍ನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದರೆ, ಇದೇ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ಪಡೆದ ಯುವ ಮತದಾರರು ಮತ ಚಲಾಯಿಸಿ ಖುಷಿಪಟ್ಟರು. ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಗನಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರಗಳಲ್ಲಿ ಮಹಿಳಾ ಮತದಾರರು ಮತಗಟ್ಟೆಗಳಲ್ಲಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಅದೇರೀತಿ ಕೊಳಗಲ್ಲು ಗ್ರಾಮದಲ್ಲಿ ವಯೋವೃದ್ಧರು, ವಿಶೇಷಚೇತನರು ಹಾಗೂ ವಯೋವೃದ್ಧ ಮತದಾರರು ಮತದಾನ ಮಾಡಿ ಸಂಭ್ರಮಿಸುವ ಮೂಲಕ ಮತದ ಶಾಹಿ ಹಾಕಿಸಿಕೊಂಡ ಎಡಗೈ ತೋರುಬೆರಳು ತೋರಿಸಿ ನಗೆ ಬೀರಿದರು. *ಯುವಮತದಾರರು ಹಾಗೂ ವಯೋವೃದ್ಧರಿಂದ ಮತದಾನ:* ಬಳ್ಳಾರಿ ತಾಲ್ಲೂಕು ಸಂಗನಕಲ್ಲು ಗ್ರಾಮದಲ್ಲಿ ಶಿರೀಶಾ, ಕುರುಗೋಡು ತಾಲ್ಲೂಕು ಯರಂಗಳಿಗಿ ಗ್ರಾಮದ ಸ್ವಪ್ನಾ ಮತ್ತು ಮೌನಿಕಾ, ಕುರುಗೋಡಿನ ರೇವತಿ ಅವರು ಇದೇ ಮೊದಲ ಬಾರಿಗೆ ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ್ದು, ಪ್ರಥಮ ಬಾರಿಗೆ ಮತ ಚಲಾಯಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು. ಕುರುಗೋಡು ತಾಲ್ಲೂಕು ಬಾದನಹಟ್ಟಿಯ 82 ವರ್ಷದ ನೀಲಮ್ಮ ಉತ್ಸಾಹದಿಂದ ವೀಲ್ ಚೇರ್‍ನಲ್ಲಿ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದ್ದು ಕಂಡುಬಂದಿತು. ಬಳ್ಳಾರಿ ತಾಲ್ಲೂಕು ಕೊಳಗಲ್ಲು ಗ್ರಾಮದ ಕೃಷ್ಣಾ ನಗರ ಕ್ಯಾಂಪ್‍ನ ನಿವಾಸಿಗಳು ವಿವಿಧ ಬೇಡಿಕೆಗಳನ್ನಿರಿಸಿ ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ಆದರೆ ವಿವಿಧ ಅಧಿಕಾರಿಗಳ ನೇತೃತ್ವದ ತಂಡ ಗ್ರಾಮಕ್ಕೆ ತೆರಳಿ, ಗ್ರಾಮದ ಮುಖಂಡರ ಮನವೊಲಿಸಿದ ಪರಿಣಾಮವಾಗಿ ಕೃಷ್ಣಾ ನಗರ ಕ್ಯಾಂಪ್‍ನ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು ಕಂಡುಬಂದಿತು. ಬಿರು ಬಿಸಿಲಿನ ಶಾಖಾಘಾತದಿಂದ ಮತದಾರರಿಗೆ ಅಥವಾ ಮತಗಟ್ಟೆ ಸಿಬ್ಬಂದಿಗಳಿಗೆ ಆರೋಗ್ಯ ಸಮಸ್ಯೆ ಕಾಡುವ ಸಂಭವನೀಯತೆಯನ್ನು ಎದುರಿಸುವ ಸಲುವಾಗಿ ಈ ಬಾರಿ ಆರೋಗ್ಯ ಇಲಾಖೆಯು ಪ್ರತಿ ಮತಗಟ್ಟೆಯಲ್ಲಿಯೂ ಸ್ಯಾನಿಟೈಸರ್, ಪ್ರಥಮ ಚಿಕಿತ್ಸಾ ಕಿಟ್, ಓಆರ್‍ಎಸ್ ಪೌಡರ್ ಅಲ್ಲದೆ, ಸಿಪಿಎಂ, ಪ್ಯಾರಾಸಿಟಮಾಲ್, ಡೈಕ್ಲೋಫಿನಾಕ್, ಡಾಂಪರಿಡಿನ್, ರ್ಯಾನಿಟಿಡಿನ್ ಮಾತ್ರೆಗಳು ಸೇರಿದಂತೆ ವಿವಿಧ ಅಗತ್ಯದ ಔಷಧಿಗಳೊಂದಿಗೆ ಮೆಡಿಕಲ್ ಕಿಟ್ ಜೊತೆಗೆ ಆಶಾ, ಅಂಗನವಾಡಿ, ಎಎನ್‍ಎಂ ಕಾರ್ಯಕರ್ತರೊಂದಿಗೆ ಸಜ್ಜಾಗಿರಿಸಿದ್ದು ವಿಶೇಷವಾಗಿತ್ತು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ