ಮಂಗಳವಾರ, ಮೇ 7, 2024

ಬಳ್ಳಾರಿ ಲೋಕಸಭಾ ಚುನಾವಣೆ | ಅಸ್ವಸ್ಥಗೊಂಡ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯಿಂದ ತ್ವರಿತ ಚಿಕಿತ್ಸೆ, ಗುಣಮುಖ

ಬಳ್ಳಾರಿ ಮೇ. 07 (ಕರ್ನಾಟಕ ವಾರ್ತೆ) : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮಂಗಳವಾರದಂದು ಜರುಗಿದ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಅಸ್ವಸ್ಥಗೊಂಡ ಮತಗಟ್ಟೆ ಸಿಬ್ಬಂದಿಗೆ ಆರೋಗ್ಯ ಇಲಾಖೆ ತ್ವರಿತವಾಗಿ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣಾ ಕಾವು ಒಂದೆಡೆಯಾದರೆ, ಬಿರು ಬೇಸಿಗೆಯ ಬಿಸಿಲು ಜನರನ್ನು ಹೈರಾಣಾಗಿಸಿದೆ. ಇದಕ್ಕೆ ಚುನಾವಣಾ ಕರ್ತವ್ಯಕ್ಕೆಂದು ವಿವಿಧೆಡೆ ಮತಗಟೆಗಳಿಗೆ ತೆರಳಿದ್ದ ಅಧಿಕಾರಿ, ಸಿಬ್ಬಂದಿ ಕೂಡ ಹೊರತಾಗಲಿಲ್ಲ. ಜಿಲ್ಲೆಯ ಕುಡಿತಿನಿ ಗ್ರಾಮದ ಮತದಾನ ಕೇಂದ್ರವೊಂದರ ಸಿಬ್ಬಂದಿ ರವಿಚಂದ್ರ ಎನ್ನುವವರು ರಕ್ತದೊತ್ತಡ ಸಮಸ್ಯೆಯಿಂದ ಅಸ್ವಸ್ಥಗೊಂಡರು. ಆರೋಗ್ಯ ಇಲಾಖೆಗೆ ಮಾಹಿತಿ ದೊರೆತಾಕ್ಷಣ ಆಂಬುಲೆನ್ಸ್ ಮೂಲಕ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಇಲ್ಲಿನ ವೈದ್ಯ ಡಾ. ಗೋಪಾಲರಾವ್ ನೇತೃತ್ವದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು, ಸಿಬ್ಬಂದಿ ರವಿಚಂದ್ರ ಅವರು ಗುಣಮುಖರಾಗಿದ್ದಾರೆ. ಬಳ್ಳಾರಿ ತಾಲ್ಲೂಕು ಕೊಳಗಲ್ ಗ್ರಾಮದ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀದೇವಿ ಅವರು ರಕ್ತದೊತ್ತಡ ಪ್ರಮಾಣ ಕಡಿಮೆಯಾದ ಕಾರಣದಿಂದ ಪ್ರಜ್ಞಾಹೀನರಾದರು. ತಕ್ಷಣವೇ ಎಚ್ಚೆತ್ತ ಇಲ್ಲಿನ ಸಿಬ್ಬಂದಿ ತಕ್ಷಣವೇ ಆಂಬುಲೆನ್ಸ್ ಮೂಲಕ ವಿಮ್ಸ್‍ಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ಲಾ, ಸಿದ್ದಮ್ಮನಹಳ್ಳಿ ವೈದ್ಯಾಧಿಕಾರಿ ಡಾ. ದಿವ್ಯಾ ಅವರು ನಿಗಾ ವಹಿಸಿ, ಉತ್ತಮ ಚಿಕಿತ್ಸೆ ನೀಡಿದ್ದು, ಲಕ್ಷ್ಮೀದೇವಿ ಅವರು ಗುಣಮುಖರಾಗಿದ್ದಾರೆ. ಬಂಡಿಹಟ್ಟಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗೋಡೆವಾಲ) ನಲ್ಲಿನ ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿ ಶೋಭಾರಾಣಿ ಅವರು ಅಸ್ವಸ್ಥಗೊಂಡು ಪ್ರಜ್ಞಾಹೀನರಾಗಿ ಕುಸಿದು ಬಿದ್ದರು. ಕೂಡಲೆ ಬಂಡಿಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಹಿತ ವೈದ್ಯಕೀಯ ತಂಡದೊಂದಿಗೆ ಆಂಬುಲೆನ್ಸ್‍ನಲ್ಲಿ ವಿಮ್ಸ್‍ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಶೋಭಾರಾಣಿ ಅವರು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿ, ಮನೆಗೆ ತೆರಳಿದರು. ಚುನಾವಣೆ ಸಂಬಂಧ ಮತದಾನ ಪ್ರಕ್ರಿಯೆಗಾಗಿ ಮತಗಟ್ಟೆ ಕೇಂದ್ರದ ಕರ್ತವ್ಯಕ್ಕೆ ನಿಯೋಜಿತಗೊಂಡು, ವಿವಿಧ ಕಾರಣಗಳಿಗಾಗಿ ಅಸ್ವಸ್ಥಗೊಂಡ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯ ತಕ್ಷಣದ ಸ್ಪಂದನೆ ಹಾಗೂ ತ್ವರಿತ ಚಿಕಿತ್ಸೆಯಿಂದಾಗಿ ಗುಣಮುಖರಾಗಿದ್ದಾರೆ. ಬಿರು ಬಿಸಿಲಿನ ಕಾರಣದಿಂದಾಗಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಸಹಾಯಕರು ಹಾಗೂ ನರ್ಸ್‍ಗಳನ್ನು ಯಾವುದೇ ಪರಿಸ್ಥಿತಿ ನಿಭಾಯಿಸಲು ಅನುವಾಗುವಂತೆ ಸಜ್ಜಾಗಿ ಇರಿಸಿದ್ದು, ಇದೀಗ ಆರೋಗ್ಯ ಇಲಾಖೆಯ ತ್ವರಿತ ಸ್ಪಂದನೆ ಪ್ರಶಂಸೆಗೆ ಪಾತ್ರವಾಗಿದೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ