ಬುಧವಾರ, ಜುಲೈ 24, 2024
ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು: ಎಡಿಸಿ ಮೊಹಮ್ಮದ್ ಜುಬೇರ್
ಬಳ್ಳಾರಿ,ಜು.23(ಕರ್ನಾಟಕ ವಾರ್ತೆ):
ಸಾರ್ವಜನಿಕರು ಸುಸ್ಥಿರ ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯ ಸಂಸ್ಥೆಗಳು ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕೆಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್ ಝುಬೇರ್ ಅವರು ಹೇಳಿದರು.
ನಗರದ ಎಫ್‍ಪಿಎಐ ವತಿಯಿಂದ 75 ನೇ ಸಂಸ್ಥಾಪನಾ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯ ಸಂಸ್ಥೆಗಳು ಆರೋಗ್ಯ ಸೇವೆಗಳನ್ನು ಸಾರ್ವಜನಿಕರ ಕೈಗೆಟಕುವ ಬೆಲೆಯಲ್ಲಿ ಒದಗಿಸಿ, ಸ್ವಚ್ಛತೆ ಹಾಗೂ ಆರೋಗ್ಯಕರವಾದ ವಾತಾವರಣವನ್ನು ಸೃಷ್ಟಿ ಮಾಡಬೇಕು ಎಂದು ತಿಳಿಸಿದರು.
ಬಳ್ಳಾರಿಯ ವೃತ್ತ ನಿರೀಕ್ಷಕರಾದ ಅಯ್ಯನ್ ಗೌಡ ಪಾಟೀಲ್ ಅವರು ಮಾತನಾಡಿ, ಆರೋಗ್ಯ ಸೇವೆಯು ನೈತಿಕತೆಯನ್ನು ಒಳಗೊಂಡಿರಬೇಕಾಗಿದ್ದು, ಆರೋಗ್ಯ ಸಂಸ್ಥೆಗಳು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಅವರು ಮಾತನಾಡಿ, ಆರೋಗ್ಯ ಸಂಸ್ಥೆಯು ಶಿಕ್ಷಣ, ಲೈಂಗಿಕತೆ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ, ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಹಾಗೂ ಲಸಿಕೆ, ಸ್ತನ ಕ್ಯಾನ್ಸರ್ ತಪಾಸಣೆ, ಗರ್ಭಿಣಿ ಮತ್ತು ಬಾಣಂತಿಯರ ತಪಾಸಣೆ, ಪುರುಷ ಹಾಗೂ ಮಹಿಳೆಯರಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಇನ್ನೂ ಹಲವಾರು ರೀತಿಯ ವೈದ್ಯಕೀಯ ಸೇವೆಗಳನ್ನು ಒದಗಿಸುವುದು ಆರೋಗ್ಯ ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಎಫ್‍ಪಿಎಐನ ಅಧ್ಯಕ್ಷರಾದ ಟಿ.ಜಿ.ವಿಠ್ಠಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್‍ಪಿವಿ ಲಸಿಕೆಯನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ ಹಾಗೂ ಆಧುನಿಕ ತಂತ್ರಜ್ಞಾನವಾದ ಸ್ಮಾರ್ಟ್ ಸ್ಕೋಪ್‍ಅನ್ನು ಬಳಸಿ ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ವೈದ್ಯಕೀಯ ಸೌಲಭ್ಯವು ಎಫ್‍ಪಿಎಐನಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಇದೇ ವೇಳೆ ಸ್ತ್ರೀರೋಗ ತಜ್ಞರಾದ ಡಾ.ರುಕ್ಸಾರ್ ಭಾನು ಅವರು ಸುಮಾರು 75 ಕ್ಕೂ ಹೆಚ್ಚಿನ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಮಾಡಿದರು. ಅಮೃತ ಮಹೋತ್ಸವದ ಕಾರ್ಯಕ್ರಮ ಅಂಗವಾಗಿ ಸಸಿಗಳನ್ನು ಸಂಸ್ಥೆಯ ಆವರಣದ ಮುಂಭಾಗದ ರಸ್ತೆಯಲ್ಲಿ ನೆಡಲಾಯಿತು.
ಈ ಸಂದರ್ಭದಲ್ಲಿ ಎಫ್‍ಪಿಎಐನ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ವಿ.ಜಯಸಿಂಹ, ಬಳ್ಳಾರಿ ಶಾಖೆಯ ಉಪಾಧ್ಯಕ್ಷ ಡಾ.ಚಂದನ, ಸಂಸ್ಥೆಯ ಆರ್ಥಿಕ ಸಲಹೆಗಾರ ಡಾ.ಭಾಗ್ಯ, ಸದಸ್ಯರಾದ ವಿಷ್ಣು, ಅಹಿರಾಜ್, ಪ್ರಶಾಂತ್ ಕೇಣಿ, ಗಿರೀಶ್.ಡಿ, ಶ್ರೀ ಚೈತನ್ಯ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀಮತಿ ಚೆನ್ನಾರೆಡ್ಡಿ ಸ್ಮಾರಕ ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ