ಮಂಗಳವಾರ, ಫೆಬ್ರವರಿ 10, 2026

ಮೇಯರ್ ಪಿ.ಗಾದೆಪ್ಪ ಕರೆ | ‘ಸ್ವಚ್ಛ ಬಳ್ಳಾರಿ-ಸ್ವಸ್ಥ ಬಳ್ಳಾರಿ’ಗೆ ಸಾರ್ವಜನಿಕರ ಸಹಕಾರ ಅಗತ್ಯ

ಬಳ್ಳಾರಿ,ಫೆ.10(ಕರ್ನಾಟಕ ವಾರ್ತೆ): ಸ್ವಚ್ಛ ಬಳ್ಳಾರಿ-ಸ್ವಸ್ಥ ಬಳ್ಳಾರಿಯನ್ನಾಗಿಸಲು ಮಹಾನಗರ ಪಾಲಿಕೆಯ ಪ್ರಯತ್ನದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಪಿ.ಗಾದೆಪ್ಪ ಅವರು ಹೇಳಿದರು. ನಗರಾಭಿವೃದ್ಧಿ ಇಲಾಖೆ, ಸ್ವಚ್ಛ ಭಾರತ್ ಮಿಷನ್ (ನಗರ) ಹಾಗೂ ಮಹಾನಗರ ಪಾಲಿಕೆ ವತಿಯಿಂದ 2025-26ನೇ ಸಾಲಿನ ಸ್ವಚ್ಛ-ಸರ್ವೇಕ್ಷಣ ಕಾರ್ಯಕ್ರಮದಡಿ ನಗರದ ನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಮಕ್ಕಳ ಚಿತ್ರಕಲೆ ಸ್ವರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಡೀ ನಗರವನ್ನು ಬರೀ ಪಾಲಿಕೆಯಿಂದಲೇ ಸ್ವಚ್ಛವಾಗಿಡಲು ಸಾಧ್ಯವಾಗುವುದಿಲ್ಲ. ನಗರದ 39 ವಾರ್ಡ್ಗಳ ಜನರು ಸಹಕರಿಸಿದಾಗ ಮಾತ್ರ ಪೂರ್ಣ ಪ್ರಮಾಣದ ಸ್ವಚ್ಛತೆ ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಹಸಿ ಕಸ, ಒಣ ಕಸ ಹಾಗೂ ತ್ಯಾಜ್ಯವನ್ನು ಬೇರ್ಪಡಿಸಿ ಪಾಲಿಕೆಯ ಕಸದ ವಾಹನಗಳಿಗೆ ನೀಡಬೇಕು ಎಂದು ಮನವಿ ಮಾಡಿದರು. ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್ ಅವರು ಮಾತನಾಡಿ, ಸ್ವಚ್ಛತೆಯೇ ಸೇವೆ ಎಂದು ಮಹಾತ್ಮ ಗಾಂಧೀಜಿಯವರು ಕರೆ ನೀಡಿದ್ದರು. ನಮ್ಮ ಮನೆ, ಬೀದಿ ಹಾಗೂ ವಾರ್ಡ್ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಮಕ್ಕಳಲ್ಲಿ ಬಾಲ್ಯದಿಂದಲೇ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಅದಕ್ಕಾಗಿ ಪಾಲಿಕೆ ವತಿಯಿಂದ ಚಿತ್ರಕಲೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ತಿಳಿಸಿದರು. ಮಹಾನಗರ ಪಾಲಿಕೆಯ ಪರಿಸರ ಕಾರ್ಯಪಾಲಕ ಅಭಿಯಂತರ ಮುನಾಫ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಚಿತ್ರಕಲೆ ಸ್ಪರ್ಧೆಯಲ್ಲಿ ಸುಮಾರು 76 ಶಾಲೆಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಸಾಮಾಜಿಕ ಕಾಳಜಿ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರೂ ಸ್ವಚ್ಛತಾ ಸಮೀಕ್ಷೆಯಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ 1ರಿಂದ 3ನೇ ತರಗತಿ, 4ರಿಂದ 7ನೇ ತರಗತಿ ಮತ್ತು 8ರಿಂದ 10 ನೇ ತರಗತಿ ಒಳಗೊಂಡು ಮೂರು ವಿಭಾಗಗಳಲ್ಲಿ ಸ್ವಚ್ಛತೆಯ ವಿಷಯ ಕುರಿತು ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಫೆ.14 ರಂದು ಸ್ವಚ್ಛತೆ ಕುರಿತಾಗಿ ಹಮ್ಮಿಕೊಂಡಿರುವ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದು ತಿಳಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಡ್ರಾಯಿಂಗ್ ಹಾಳೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕುಬೇರಾ, ರಾಜೇಶ್ವರಿ, ಬಿ.ಜಾನಕಿ ಸೇರಿದಂತೆ ಪಾಲಿಕೆ ಸಿಬ್ಬಂದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ