ಮಂಗಳವಾರ, ಫೆಬ್ರವರಿ 10, 2026
ಬಳ್ಳಾರಿ: ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಕೆ.ಇ.ಚಿದಾನಂದಪ್ಪ ಅಭಿಮತ | ಸಮಸಮಾಜ ಕಟ್ಟುವಲ್ಲಿ ಶರಣರ ಕೊಡುಗೆ ಅಪಾರ
ಬಳ್ಳಾರಿ,ಫೆ.04(ಕರ್ನಾಟಕ ವಾರ್ತೆ):
ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಜಾತೀಯತೆ, ಅಸಮಾನತೆ, ಸ್ವಜನಪಕ್ಷ ಪಾತಗಳು ತಾಂಡವವಾಡುತ್ತಿದ್ದವು. ವಚನ ಚಳುವಳಿಯ ಸಂದರ್ಭದಲ್ಲಿ ಕಾಯಕದ ಮಹತ್ವವನ್ನು ಸಾರಿದ ಶರಣರ ತ್ಯಾಗ ಮತ್ತು ಸೇವೆಯನ್ನು ನಾವೆಲ್ಲರೂ ಇಂದು ಅರಿತುಕೊಳ್ಳಬೇಕಿದೆ ಎಂದರು.
ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ ಮತ್ತು ಉರಿಲಿಂಗ ಪೆದ್ದಿಯಂತಹ ಮಹಾನ್ ಶರಣರ ಕಾಯಕ ನಿಷ್ಠೆ ಮತ್ತು ಸಮಾನತೆಯ ತತ್ವಗಳನ್ನು ಸ್ಮರಿಸಲು ರಾಜ್ಯ ಸರ್ಕಾರ ಈ ಜಯಂತ್ಯುತ್ಸವವನ್ನು ಆಚರಿಸಲಾಗುತ್ತದೆ ಎಂದರು.
ಬಸವಾದಿ ಶರಣರ ತತ್ವಗಳನ್ನು ನಮ್ಮ ಸರ್ಕಾರವೂ ಪಾಲಿಸಿಕೊಂಡು ನಡೆಯುತ್ತಿದೆ. ಶೋಷಿತ ವರ್ಗಗಳ ಧ್ವನಿಯಾಗಿ, ಅಸಮಾನತೆ ಹೋಗಲಾಡಿಸಲು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸಲು, ಅವರ ಸಬಲಿಕರಣಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು.
ಸಾಹಿತಿ ಎನ್.ಡಿ.ವೆಂಕಮ್ಮ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, 12ನೇ ಶತಮಾನವು ಕರ್ನಾಟಕದ ಇತಿಹಾಸದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ರಾಂತಿಯ ‘ಸುವರ್ಣ ಯುಗ’ವಾಗಿತ್ತು. ಬಸವಣ್ಣ ಮತ್ತು ಶರಣರು ವಚನಗಳ ಮೂಲಕ ಜಾತಿ, ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಎತ್ತಿಹಿಡಿದ್ದರು ಎಂದು ಹೇಳಿದರು.
ಅನುಭವ ಮಂಟಪದಲ್ಲಿದ್ದ ಶರಣರು ತಮ್ಮ ವಚನಗಳ ಮೂಲಕ ಜಾತಿ, ಧರ್ಮ, ಮತಕ್ಕಿಂತ ಮನುಷ್ಯತ್ವ ಮುಖ್ಯ ಎಂದು ಪ್ರತಿಪಾದಿಸಿದ್ದವರು. ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನೋರ್ವ ಉಪನ್ಯಾಸಕರಾಗಿ ನಿವೃತ್ತ ಉಪನ್ಯಾಸಕರಾದ ಸುಶೀಲಾ ಶಿರೂರ್ ಡಿ.ಎನ್ ಅವರು ಮಾತನಾಡಿ, 12ನೇ ಶತಮಾನದಲ್ಲಿ ಕೇವಲ ಶರಣರು ಮಾತ್ರವಲ್ಲದೇ, ಶರಣೆಯರು ಕೂಡ ಇದ್ದರು. ಅವರು ಜೀವಂತವಾಗಿದ್ದ ಸಾಮಾಜಿಕ ಅಸಮಾನತೆ, ಜಾತೀಯತೆ ನಿರ್ಮೂಲನೆ ಮಾಡಲು ಅನೇಕ ಕೊಡುಗೆ ಪರಂಪರೆ ನೀಡಿದ್ದಾರೆ ಎಂದು ತಿಳಿಸಿದರು.
ಕಾಯಕ ಶರಣರು ಕಾಯಕದ ಮೂಲಕ ಆತ್ಮಶುದ್ಧಿ ಮತ್ತು ಸಮಾಜಶುದ್ಧಿ ಎರಡನ್ನೂ ಸಾಧಿಸಿ, ಮಾನವತಾವಾದಕ್ಕೆ ಅಡಿಪಾಯ ಹಾಕಿದವರು. ಶ್ರಮಿಕ ವರ್ಗದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಮಾನತೆಯ ಪ್ರತಿಪಾದಕರು ಎಂದು ಕಾಯಕ ಶರಣರ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಇದಕ್ಕೂ ಮುನ್ನ ಕಂಪ್ಲಿ ತಾಲ್ಲೂಕಿನ ಎಂ.ರಾಜು ಎಮ್ಮಿಗನೂರು ತಂಡ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಸೇರಿದಂತೆ ಶಿಕ್ಷಕರು-ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)







ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ