ಸೋಮವಾರ, ಡಿಸೆಂಬರ್ 11, 2023
ಮಾನಸಿಕ ಖಿನ್ನತೆ ನಿರ್ವಹಣೆಗೆ ಟೆಲಿಮನಸ್ ಸಹಾಯವಾಣಿ 14416ಗೆ ಕರೆ ಮಾಡಿ: ಡಾ.ವೈ.ರಮೇಶಬಾಬು
ಬಳ್ಳಾರಿ,ಡಿ.11(ಕರ್ನಾಟಕ ವಾರ್ತೆ):
ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಯಾವುದಾದಾರೂ ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಕಂಡುಬರುವ ಸಾಧ್ಯತೆ ಇದ್ದು, ಅಂತಹ ಸಂದರ್ಭದಲ್ಲಿ ಇನ್ನೊಬ್ಬರ ಜೊತೆ ವಿಷಯ ಹಂಚಿಕೊಳ್ಳುವ ಅಥವಾ ಸಮಸ್ಯೆಯ ತೀವ್ರತೆ ಹೆಚ್ಚಾದಾಗ ಮಾನಸಿಕ ತಜ್ಞರೊಂದಿಗೆ ತಪ್ಪದೇ ಸಮಾಲೋಚಿಸಿ ಅಥವಾ ಟೆಲಿಮನಸ್ ಸಹಾಯವಾಣಿ 14416 ಗೆ ಕರೆ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶಬಾಬು ಅವರು ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಕಾರ್ಯಕ್ರಮ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕ್ಷೇತ್ರ ಮಟ್ಟದ ಸಿಬ್ಬಂದಿಯವರಿಗೆ ಮಾನಸಿಕ ಆರೋಗ್ಯದ ನಿರ್ವಹಣೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಟೆಲಿ ಮೆನಸ್ ಎಂಬ 14416 ಉಚಿತ ಸಹಾಯವಾಣಿ ಆರಂಭಿಸಿದ್ದು, ಯಾರಾದರೂ ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕೊಳ್ಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆ ಮಾಡುವರು, ಮಾದಕ ವಸ್ತು ವ್ಯಸನಿಗಳು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕ ಶಕ್ತಿ ತೊಂದರೆ ಉಳ್ಳವರು, ಆರ್ಥಿಕ ಒತ್ತಡದಲ್ಲಿ ಇರುವವರು ಅಥವಾ ಇತರೆ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ಸೌಲಭ್ಯ ಪಡೆಯಬಹುದು. ಕರೆ ಮಾಡಿದವರ ವಿವರ ಗೌಪ್ಯವಾಗಿ ಇಡಲಾಗುವುದು. ಧ್ವನಿಮುದ್ರಣ ಮಾಡುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುμÁ್ಠನಾಧಿಕಾರಿ ಡಾ.ವಿರೇಂದ್ರ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ನೀಡಲು ಜಿಲ್ಲಾ ಮಟ್ಟದಿಂದ ಮನೋರೋಗ ತಜ್ಞ ಡಾ.ರೋಹನ್ ವನಗುಂದಿ ಅವರ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರ ಸಿರುಗುಪ್ಪ, ಎರಡನೇ ಮಂಗಳವಾರ ಸಂಡೂರು, ಮೂರನೇ ಮಂಗಳವಾರ ಕಂಪ್ಲಿ, ನಾಲ್ಕನೇ ಮಂಗಳವಾರ ಕುರುಗೋಡು ಹಾಗೂ ಪ್ರತಿ ತಿಂಗಳ 16ನೇ ತಾರೀಖಿನಂದು ಮೋಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಪ್ತ ಸಮಾಲೋಚನೆ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಕಾರ್ಯಾಗಾರದಲ್ಲಿ ಮನೋ ತಜ್ಞ ಡಾ.ರೋಹನ್ ವನಗುಂದಿ ಅವರು ಮಾನಸಿಕ ಆರೋಗ್ಯ ನಿರ್ವಹಣೆ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಮನೋ ಸಾಮಾಜಿಕ ಸಮಾಲೋಚಕ ಶಾಂತಕುಮಾರ್, ಮನೋಶಾಸ್ತ್ರಜ್ಞೆ ಡಾ.ಕಾವ್ಯ, ಮನೋ ಶುಶ್ರೂಷಣಾಧಿಕಾರಿ ರಂಜೀತಾ, ಈ-ಹಾಸ್ಪಿಟಲ್ ವ್ಯವಸ್ಥಾಪಕ ವೀರಭದ್ರಪ್ಪ ಸೇರಿದಂತೆ ಜಿಲ್ಲೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಆಶಾ ಮೇಲ್ವಿಚಾರಕರು, ಕ್ಷಯರೋಗ ವಿಭಾಗದ ಎಲ್ಲ ಸಿಬ್ಬಂದಿ ವರ್ಗದವರು, ಆರ್‍ಎಮ್‍ಎನ್‍ಸಿಹೆಚ್ ಆಪ್ತಸಮಾಲೋಚಕರು ಉಪಸ್ಥಿತರಿದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ