ಸೋಮವಾರ, ಡಿಸೆಂಬರ್ 11, 2023
ಬಳ್ಳಾರಿ ಮಹಾನಗರ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು ತಮ್ಮ ಜಾಹೀರಾತು, ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ
ಬಳ್ಳಾರಿ,ಡಿ.11(ಕರ್ನಾಟಕ ವಾರ್ತೆ):
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಅಂಗಡಿ, ಹೋಟೆಲ್ ರೆಸ್ಟೋರೆಂಟ್ ಹಾಗೂ ಇತರೆ ಉದ್ದಿಮೆದಾರರು ತಮ್ಮ ಉದ್ದಿಮೆಗಳ ಜಾಹೀರಾತು ಅಥವಾ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್‍ಸಾಬ್ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ದೇಶನಾನುಸಾರ ರಾಜ್ಯದೆಲ್ಲೆಡೆ ಕನ್ನಡ ಭಾಷೆಗೆ ಆದ್ಯತೆ ನೀಡಲು ಹಾಗೂ ಕನ್ನಡ ಭಾಷೆಯನ್ನು ಆದ್ಯತೆ ಮೇರೆಗೆ ಬಳಸಲು ಕಡ್ಡಾಯವಾಗಿದ್ದು, ರಾಜ್ಯ ಸರ್ಕಾರ ಅಂಗಡಿ ಮತ್ತು ಕಮರ್ಷಿಯಲ್ ಎಸ್ಟಬ್ಲಿಸ್‍ಮೆಂಟ್ ನಿಯಮ 1963 ರ ಸೆಕ್ಷನ್ 24ಎ ಪ್ರಕಾರ ತಮ್ಮ ಉದ್ದಿಮೆಗಳ ಜಾಹೀರಾತು ಅಥವಾ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಮುಖ ಭಾಷೆಯಾಗಿ ಬಳಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ನಾಮಫಲಕಗಳಲ್ಲಿ ಕನಿಷ್ಟ ಶೇ.60ಕ್ಕಿಂತ ಹೆಚ್ಚಿನ ಸ್ಥಳ ಮೀಸಲಿಟ್ಟು ದೊಡ್ಡ ಅಕ್ಷರಗಳಲ್ಲಿ ನಮೂದಿಸಬೇಕು ಹಾಗೂ ಉಳಿದ ಶೇ.40ರಷ್ಟು ಸ್ಥಳದಲ್ಲಿ ಬೇರೆ ಭಾಷೆಗೆ ಮೀಸಲಿಡಬೇಕು. ಹೋಟೇಲ್, ರೆಸ್ಟೋರೆಂಟ್ ಅಥವಾ ಆಹಾರ ಸರಬರಾಜು ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಮೆನುಕಾರ್ಡ್ ಬಳಸಬೇಕು.
ಉಲ್ಲಂಘಿಸಿದ್ದಲ್ಲಿ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ನಿಯಮ 1963ರ ಸೆಕ್ಷನ್ 8, 9, 9-ಎ, 9-ಬಿ, 9-ಸಿ, 17, 18, 19, 20, 22, 24 ಹಾಗೂ 24ಬಿ ಪ್ರಕಾರ ರೂ.500 ರಿಂದ ರೂ.1000 ವರೆಗೆ ಮತ್ತು 24-ಎ ಪ್ರಕಾರ ರೂ.10,000 ವರೆಗೆ ರವರೆಗೆ ದಂಡ ವಿಧಿಸಲಾಗುವುದು.
ಆದ್ದರಿಂದ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆದಾರರು ಡಿ.31 ರೊಳಗಾಗಿ ತಮ್ಮ ಉದ್ದಿಮೆಗಳ ಜಾಹೀರಾತು ಅಥವಾ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಮತ್ತು ಹೋಟೇಲ್, ರೆಸ್ಟೋರೆಂಟ್ ಅಥವಾ ಆಹಾರ ಸರಬರಾಜು ಮಳಿಗೆಗಳ ಮೆನುಕಾರ್ಡ್‍ಗಳಲ್ಲಿಯೂ ಕನ್ನಡ ಭಾಷೆ ಅನುಷ್ಠಾನಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ