ಶನಿವಾರ, ಡಿಸೆಂಬರ್ 2, 2023
ಕ್ಷಯಮುಕ್ತ ಗ್ರಾಮಪಂಚಾಯತ್‍ಗೆ ಶ್ರಮಿಸೋಣ: ಡಿಹೆಚ್‍ಓ ಡಾ.ವೈ ರಮೇಶ ಬಾಬು
ಬಳ್ಳಾರಿ,ಡಿ.02(ಕರ್ನಾಟಕ ವಾರ್ತೆ):
ಗ್ರಾಮೀಣ ಪ್ರದೇಶಗಳಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಜಾಗೃತಿ ಮತ್ತು ಸಮುದಾಯಕ್ಕೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ದಿ ಯುನಿಯನ್ ಸೌತ್ ಈಸ್ಟ್ ಏಷ್ಯಾ ದೆಹಲಿ ಹಾಗೂ ಜೆಎಸ್‍ಡಬ್ಲ್ಯೂ ಫೌಂಡೆಷನ್ ತೋರಣಗಲ್ಲು ರವರ ಬೆಂಬಲದೊಂದಿಗೆ ಕ್ಷಯರೋಗ ಪತ್ತೆ, ಚಿಕಿತ್ಸೆ, ಮೇಲ್ವಿಚಾರಣೆ, ತಡೆಗಟ್ಟುವಿಕೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶನಿವಾರದಂದು ನಗರದ ನಕ್ಷತ್ರ ಹೋಟೆಲ್ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ, ರೋಗದ ಪ್ರಮುಖ ಲಕ್ಷಣಗಳಿದ್ದಲ್ಲಿ ಸಾರ್ವಜನಿಕರಿಗೆ ಪರೀಕ್ಷೆ ಮಾಡಿಸಲು ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕ್ಷಯರೋಗ ಕುರಿತು ಜಾಗೃತಿ ನೀಡುವ ದಿಶೆಯಲ್ಲಿ ಸಮುದಾಯ ಮಟ್ಟದಲ್ಲೇ ಕ್ಷಯರೋಗ ಮುಕ್ತ ಗ್ರಾಮ ಪಂಚಾಯತ್‍ಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ತಿಳಿಸಿದರು.
ಒಮ್ಮೆ ರೋಗ ಪತ್ತೆಯಾದರೆ ಅವರ ಚಿಕಿತ್ಸಾ ಅವಧಿಯು ಮುಗಿಯುವವರೆಗೆ ಮೇಲ್ವಿಚಾರಣೆ, ರೋಗಿಗೆ ಬೆಂಬಲ ಹಾಗೂ ದಾನಿಗಳಿಂದ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಅವರ ಆರ್ಥಿಕ ನೆರವಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ಮಕ್ಕಳಿಗೆ ಕ್ಷಯರೋಗ ಇದ್ದಲ್ಲಿ ಅವರ ಪಾಲಕರ, ಸುತ್ತಲಿನ ಮನೆಗಳ ಮತ್ತು ಮಗುವಿಗೆ ಒಡನಾಟವಿರುವವರನ್ನು ತಪ್ಪದೆ ಪರೀಕ್ಷೆ ಮಾಡಲು ಕ್ರಮ ವಹಿಸಬೇಕು. ಯಾರಾದರೂ ಚಿಕಿತ್ಸೆ ಪಡೆಯಲು ನಿರಾಕರಿಸಿದರೆ ಸ್ಥಳೀಯ ಗ್ರಾಮ ಪಂಚಾಯತ ಸಹಕಾರದೊಂದಿಗೆ ಚಿಕಿತ್ಸೆ ಪೂರ್ಣಗೊಳಿಸಬೇಕು. ಮುಖ್ಯವಾಗಿ ಕ್ಷಯರೋಗವನ್ನು ಸಾಮಾನ್ಯ ಖಾಯಿಲೆ ಎಂಬ ರೀತಿಯಲ್ಲಿ ಕಾಣುವ ಮೂಲಕ ಕಳಂಕ- ತಾರತಮ್ಯವನ್ನು ತೊಲಗಿಸುವ ಪ್ರಯತ್ನ ಮಾಡುವಂತೆ ಅವರು ಸೂಚಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಮಾತನಾಡಿ, ಕ್ಷಯರೋಗದ ಚಿಕಿತ್ಸೆ ಪಡೆಯುವವರು ಚಿಕಿತ್ಸೆ ಮಧ್ಯದಲ್ಲಿ ಬಿಟ್ಟಲ್ಲಿ, ಸರಿಯಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ಅಂತವರಿಗೆ ಬಹು ಔಷಧಿ ರೋಗ ನಿರೋಧಕ (ಎಂಡಿಆರ್ ಟಿಬಿ) ಕ್ಷಯರೋಗವು ಬರುವ ಸಾಧ್ಯತೆ ಇದೆ, ಇದು ತುಂಬಾ ಗಂಭೀರವಾದದ್ದು ಅಂತವರಿಗೆ 18 ತಿಂಗಳಿನಿಂದ 24 ತಿಂಗಳ ಕಾಲ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಕಾರಣ ಸಾಮಾನ್ಯವಾಗಿ ಕ್ಷಯರೋಗಕ್ಕೆ ನೀಡುವ 06 ತಿಂಗಳ ಚಿಕಿತ್ಸೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಎಲ್ಲರೂ ಕಾರ್ಯನಿರ್ವಹಿಸಿ ಇದಕ್ಕಾಗಿ ಗ್ರಾಮಪಂಚಾಯತಗಳ ಸಹಕಾರ ಪಡೆಯಲು ತಿಳಿಸಿದರು.
ವಿಶೇಷವಾಗಿ ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವರಿಗೆ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದರಿಂದ ಜೊತೆಗೆ ಕುಟುಂಬದ ಆಧಾರ ಸ್ತಂಭವಾಗಿರುವ ವ್ಯಕ್ತಿಯು ದುಡಿಮೆ ಇಲ್ಲದೆ ಕುಟುಂಬ ಆರ್ಥಿಕ ತೊಂದರೆ ಈಡಾಗುವ ಜೊತೆಗೆ ಸಂಪೂರ್ಣ ಕುಟುಂಬವೂ ಬಡತನಕ್ಕೆ ಬಂದು ನಿಲ್ಲುವ ಪರಿಸ್ಥಿತಿ ಬರುತ್ತದೆ. ಇಂಥ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು ದಾನಿಗಳಾಗಿ ಮುಂದೆ ಬಂದು ಕ್ಷಯರೋಗಿಗಳನ್ನು ಉಳಿಸುವ ಮತ್ತು ನಿರ್ದಿಷ್ಟ ಅವಧಿಯೊಳಗೆ ರೋಗವನ್ನು ಗುಣಪಡಿಸುವ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ಕ್ಷಯ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡುವ ದೆಶೆಯಲ್ಲಿ ಕೈಜೋಡಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕ್ಷಯರೋಗ ಸಲಹೆಗಾರರಾದ ಡಾ.ಹಂಸವೇಣಿ, ಯುಎಸ್‍ಇಎ ರಾಜ್ಯ ನಿರ್ವಾಹಕ ರಾಜೇಶ ಭರಾಲೀಯಾ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನೀಲ್‍ಕುಮಾರ, ಜಿಲ್ಲಾ ಕುಷ್ಠರೋಗ ನಿರ್ಮುಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಯುಎಸ್‍ಇಎ ಜಿಲ್ಲಾ ನಿರ್ವಾಹಕ ಸಣ್ಣಕೇಶವ, ಡಿಪಿಸಿ ಅರ್ಚನಾ ಸೇರಿದಂತೆ ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಖ್ಯ ಆಡಳಿತ ವೈದ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಕ್ಷಯರೋಗ ಕಾರ್ಯಕ್ರಮದ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)








ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ