ಶುಕ್ರವಾರ, ಡಿಸೆಂಬರ್ 8, 2023

ಪಿಸಿ, ಪಿಎನ್‍ಡಿಟಿ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಡಿ.08(ಕರ್ನಾಟಕ ವಾರ್ತೆ): ಹೆಣ್ಣು ಮಗುವಿನ ಬದುಕುಳಿಯುವಿಕೆ ಮತ್ತು ರಕ್ಷಣೆಗಾಗಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ 1994ರ (ಪಿಸಿ ಮತ್ತು ಪಿಎನ್‍ಡಿಟಿ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ (ಲಿಂಗಾಯ್ಕೆ ನಿಷೇಧ) ಪಿ.ಸಿ ಮತ್ತು ಪಿ.ಎನ್.ಡಿ.ಟಿ 1994 ಕಾಯ್ದೆಯ ಚಟುವಟಿಕೆಗಳನ್ನು ಚುರುಕುಗೊಳಿಸಲು ಅಂತರಾಜ್ಯದ ಗಡಿ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಜೊತೆ ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲ್ಲಿ ಹಮ್ಮಿಕೊಂಡಿದ್ದ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು. ಗರ್ಭಿಣಿಯ ಸ್ಕ್ಯಾನಿಂಗ್ ಮಾಡಿದ ಸಂದರ್ಭದಲ್ಲಿ ಭ್ರೂಣದ ಆರೋಗ್ಯದ ವಿಷಯ ಭ್ರೂಣದ ಬೆಳವಣಿಗೆ, ನ್ಯೂನ್ಯತೆಗಳ ಮಾಹಿತಿಯನ್ನು ಮಾತ್ರ ನೀಡುವ ಕಾರ್ಯ ಜರುಗಬೇಕು. ಭ್ರೂಣ ಲಿಂಗದ ಕುರಿತು ಮಾಹಿತಿ ನೀಡುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಪಿ.ಸಿ ಮತ್ತು ಪಿ.ಎನ್.ಡಿ.ಟಿ. 1994 ಕಾಯ್ದೆ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ, ಆ ಕೇಂದ್ರಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಶಿಫಾರಸ್ಸು ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಕ್ಲಿನಿಕ್ ಮತ್ತು ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಜನನಪೂರ್ವ ಪತ್ತೆ ಪ್ರಕ್ರಿಯೆಗಳಿಗೆ ಅಥವಾ ಜನನಪೂರ್ವ ಪತ್ತೆ ಪರೀಕ್ಷೆಗಳಿಗೆ ಒಳಪಟ್ಟ ಪುರುಷರ ಅಥವಾ ಮಹಿಳೆಯರ ಹೆಸರು ಮತ್ತು ವಿಳಾಸ ಹಾಗೂ ತಪಾಸಣೆ ಕೈಗೊಂಡ ಮಾಹಿತಿಯ ಪುಸ್ತಕ ವಹಿ ಇಡಬೇಕು ಎಂದರು. ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳನ್ನು ಸ್ತ್ರೀ-ರೋಗ ತಜ್ಞರೂ ಅನುಸರಿಸಬೇಕು. ಸ್ಕ್ಯಾನಿಂಗ್ ಒಳಪಟ್ಟ ಮಹಿಳೆಯರ ಎಲ್ಲಾ ವಿವರಗಳನ್ನು ನೋಂದಣಿ ಮಾಡಿಕೊಳ್ಳಬೇಕು. ಈ ಕುರಿತು ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ನೋಂದಣಿ ಪಡೆಯದೇ ಇರುವ ಸೆಂಟರ್‍ಗಳು ಸ್ಕ್ಯಾನಿಂಗ್ ಯಂತ್ರಗಳ ಮಾಹಿತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು ಮತ್ತು ಪ್ರತಿ ತಿಂಗಳು 5ನೇ ತಾರೀಖಿನೊಳಗಾಗಿ “ಎಫ್-ಫಾರಂ” ಕೂಡ ಸಲ್ಲಿಸಬೇಕು ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ನಡೆದ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ಪ್ರಕರಣದಂತೆ ಅಹಿತಕರ ಘಟನೆಗಳು ಕಂಡುಬಂದಲ್ಲಿ ಅಂತಹ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಶಿಸ್ತು ಕ್ರಮವಹಿಸಲಾಗುತ್ತದೆ ಎಂದರು. ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಕಾ ಪ್ರಸಾದ್, ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ, ಅನಂತಪುರ ಜಿಲ್ಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇ.ಬಿ.ದೇವಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಬಸರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ